ಲೋಕಸಭೆ ಚುನಾವಣೆ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್
ಲೋಕಸಭೆ ಚುನಾವಣೆಗಾಗಿ ಗುತ್ತಿಗೆದಾರರಿಂದ ಫಂಡಿಂಗ್ ಆಗುವ ಗುಮಾನಿ ಎದ್ದಿದ್ದು ಇದರ ನಡುವೆ ಗುತ್ತಿಗೆದಾರರ ಮಾಹಿತಿ ಕೇಳಿ ಆದಾಯ ತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ನೋಟಿಸ್ ನೀಡಿದೆ. ಗುತ್ತಿಗೆದಾರರು, ಬಿಲ್ಡರ್‌ಗಳ ಸಂಪೂರ್ಣ ಮಾಹಿತಿ ನೀಡಲು ಸೂಚನೆ ನೀಡಿದೆ.

ಬೆಂಗಳೂರು, ಜ.04: ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳುಗಳು ಮಾತ್ರ ಬಾಕಿ ಇದೆ. ಎಲ್ಲಾ ರೀತಿಯ ಸಿದ್ಧತೆಗಳು, ತಂತ್ರ-ಪ್ರತಿತಂತ್ರಗಳು ನಡೆಯುತ್ತಿವೆ. ಮತ್ತೊಂದೆಡೆ ಲೋಕಸಭಾ ಚುನಾವಣೆ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ (Income Tax Department) ಅಖಾಡಕ್ಕಿಳಿದಿದ್ದು ಲೋಕೋಪಯೋಗಿ ಇಲಾಖೆಯ ಮೇಲೆ ಹದ್ದಿನಕಣ್ಣಿಟ್ಟಿದೆ. ಆದಾಯ ತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ (Public Works Department) ಕೆಲವು ಮಾಹಿತಿಗಳನ್ನು ಕೊಡುವಂತೆ ನೋಟಿಸ್ ಕಳಿಸಿದೆ. ಆದರೆ ಐಟಿ ಕೇಳುತ್ತಿರುವ ಮಾಹಿತಿ ಕೊಡಲು ಲೋಕೋಪಯೋಗಿ ಇಲಾಖೆ ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಇತ್ತ ಚುನಾವಣೆಗಾಗಿ ಗುತ್ತಿಗೆದಾರರಿಂದ ಫಂಡಿಂಗ್ ಆಗುವ ಗುಮಾನಿ ಎದ್ದಿದ್ದು ಇದರ ನಡುವೆ ಗುತ್ತಿಗೆದಾರರ ಮಾಹಿತಿ ಕೇಳಿ ಆದಾಯ ತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ನೋಟಿಸ್ ನೀಡಿದೆ. ಗುತ್ತಿಗೆದಾರರು, ಬಿಲ್ಡರ್‌ಗಳ ಸಂಪೂರ್ಣ ಮಾಹಿತಿ ನೀಡಲು ಸೂಚನೆ ನೀಡಿದೆ. ಆದಾಯ ತೆರಿಗೆ ಅಧಿಕಾರಿಗಳು ಈಗ ಗುತ್ತಿಗೆದಾರರು, ಬಿಲ್ಡರ್‌ಗಳ ಬೆನ್ನುಬಿದ್ದಿದ್ದಾರೆ. ಐಟಿ ಇಲಾಖೆಯ ಇಂಜೆಲಿಜೆನ್ಸ್ ಅಂಡ್ ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗದ ಹೆಚ್ಚುವರಿ ನಿರ್ದೇಶಕರು ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೀಡಲಾಗಿರುವ ಮೂರನೇ ಬಾರಿಯ ನೋಟಿಸ್ ಇದಾಗಿದೆ. ಸೆಪ್ಟೆಂಬರ್, ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ನೋಟಿಸ್ ನೀಡಲಾಗಿತ್ತು. ಐಟಿ ಇಲಾಖೆಯ ನೋಟಿಸ್ ಬಳಿಕ ಲೋಕೋಪಯೋಗಿ ಇಲಾಖೆಯ ಎಲ್ಲಾ ವಿಭಾಗೀಯ ಮುಖ್ಯ ಇಂಜಿನಿಯರ್ಗೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಪತ್ರ ರವಾನೆಯಾಗಿದೆ. ಐಟಿ ಕೇಳುತ್ತಿರುವ ಮಾಹಿತಿ ಒದಗಿಸುವಂತೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ ವೇಳೆ ಮೋದಿ ಭಾವಚಿತ್ರವಿದ್ದ ಪೋಸ್ಟರ್ ಹಿಡಿಯಲು ನಿರಾಕರಿಸಿದ ಗ್ರಾ.ಪಂ. ಅಧ್ಯಕ್ಷೆ; ಬಿಜೆಪಿ ಗರಂ
ಆದಾಯ ತೆರಿಗೆ ಇಲಾಖೆ ಕೇಳುತ್ತಿರುವ ಮಾಹಿತಿ ಏನೇನು?
- ಗುತ್ತಿಗೆದಾರರು/ಬಿಲ್ಡರ್ ಗಳ ಹೆಸರು ಮತ್ತು ವಿಳಾಸ
- ಗುತ್ತಿಗೆದಾರ/ಬಿಲ್ಡರ್ ಗಳ ಗುರುತಿನ ಚೀಟಿ
- ಯಾವ ರೀತಿಯ ಬ್ಯುಸಿನೆಸ್ ನಡೆಸ್ತಿದ್ದಾರೆ
- ಪಾನ್ ಕಾರ್ಡ್ ನಂಬರ್ ಹಾಗೂ ಜಿಎಸ್‌ಟಿ ನಂಬರ್
- ಇಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್
- ಅಧಿಕೃತ ಗುತ್ತಿಗೆದಾರ/ಸಂಸ್ಥೆಯ ಮಾಲೀಕ/ಬಿಸಿನೆಸ್ ವ್ಯವಸ್ಥಾಪಕರ ಹೆಸರು ಮತ್ತು ಮೊಬೈಲ್ ನಂಬರ್
- ಇಮೇಲ್ ಮೂಲಕ ತಕ್ಷಣ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ