ಬೆಂಗಳೂರು, ಜುಲೈ 17: ಬೆಂಗಳೂರಿನ ಲಾಲ್ ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನರು ಕಾತರದಿಂದ ಇರುತ್ತಾರೆ. ಪ್ರತಿ ವರ್ಷ ವಿಭಿನ್ನ ಥೀಮ್ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್ ಬಾಗ್‌ಗೆ ಅಸಂಖ್ಯಾತ ಜನರನ್ನು ಆಕರ್ಷಿಸಲಾಗುತ್ತದೆ. ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್ ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಆಗಸ್ಟ್ 8 ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫ್ಲವರ್ ಶೋ ಕಂಗೊಳಿಸಲಿದೆ.
ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಲಾಲ್ ಬಾಗ್ ಗಾರ್ಡನ್ನಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.
ಫ್ಲವರ್ ಶೋನಲ್ಲಿ ಆಂಥೋರಿಯಂ ಹೂಗಳು, ಗುಲಾಬಿ, ಜರ್ಬೆರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್‌ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ, ಕುಂಡಗಳಲ್ಲಿ ಅರಳಿದ ದೇಶ-ವಿದೇಶಗಳ ಹತ್ತಾರು ಬಗೆಯ ಹೂಗಳು, ಬೋಗನ್‌ವಿಲ್ಲಾದ ಹೂ ಗಿಡಗಳು, ಲಿಲ್ಲಿ, ಜರ್ ಬೆರಾ ಹೂಗಳು, ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಆಮದು ಮಾಡಿದ ಹೂಗಳು ಇರಲಿವೆ.
ಇದನ್ನೂ ಓದಿ: ಬೆಂಗಳೂರು: ಡೆಂಗ್ಯೂ ಜತೆಗೆ ಚಿಕುನ್ ಗುನ್ಯಾ ಪ್ರಕರಣಗಳೂ ಏರಿಕೆ
ಅಲ್ಲದೇ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ. ಸಧ್ಯ ಒಂದೊಂದೆ ವಿದೇಶಿಹೂಗಳನ್ನ ತರಿಸಿಕೊಳ್ಳಲಾಗುತ್ತಿದೆ ಎಂದು ಲಾಲ್ ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ 80 ರೂ. ಪ್ರವೇಶ ದರ ನಿಗದಿಯಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದು 214ನೇ ಫಲಪುಷ್ಪ ಪ್ರದರ್ಶನವಾಗಿರಲಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 am, Wed, 17 July 24