ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ದೇಶದ ಮೊದಲ ಭೂಗತ ವಿದ್ಯುತ್ ಪರಿವರ್ತಕ (Transformer) ಕೇಂದ್ರವನ್ನು ಮಂಗಳವಾರ ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಉದ್ಘಾಟಿಸಿದರು. ಮಲ್ಲೇಶ್ವರಂನ 15ನೇ ಅಡ್ಡರಸ್ತೆಯಲ್ಲಿ ಬೆಸ್ಕಾಂ (BESCOM) ಹಾಗೂ ಬಿಬಿಎಂಪಿ (BBMP) ಸಹಭಾಗಿತ್ವದಲ್ಲಿ 1.98 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇದು 500 ಕೆ.ವಿ.ಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮ ಇದಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ವಿದ್ಯುತ್ ಪರಿವರ್ತಕ ಭೂಗತ ಕೇಂದ್ರಗಳಿವೆ. ಅಲ್ಲಿನ ಸರ್ಕಾರಗಳು ಸಾರ್ವಜನಿಕರ ಅನುಕೂಲತೆ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ಕೇಂದ್ರಗಳನ್ನು ನಿರ್ಮಾಣ ಮಾಡಿವೆ. ಇದೀಗ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ದೇಶದಲ್ಲಿ ಮೊದಲ ಬಾರಿಗೆ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರ ಸ್ಥಾಪಿಸಲಾಗಿದೆ.
ಜನರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಭೂಮಿಯ ಕೆಳಭಾಗದಲ್ಲಿ ಕೊಠಡಿಯನ್ನು ನಿರ್ಮಿಸಿ ಅದರಲ್ಲಿ, 30 ಎಂಎಂನ ಸಿಮೆಂಟ್ ಕಟ್ಟೆ ನಿರ್ಮಿಸಿ ಅದರ ಮೇಲೆ ವಿದ್ಯುತ್ ಟ್ರಾನ್ಸ್ ಫಾರ್ಮ‌್ರಗಳನ್ನು ಅಳವಡಿಸಲಾಗುತ್ತದೆ. ಸದ್ಯ ಮಲ್ಲೇಶ್ವರಂನಲ್ಲಿ ಸ್ಥಾಪಿಸಿರುವ ಈ ಕೇಂದ್ರದಲ್ಲಿ ರಸ್ತೆಯ ಮೇಲೈನಿಂದ 10 ಅಡಿ ಆಳದಲ್ಲಿ ಪರಿವರ್ತಕ ಅಳವಡಿಸಲಾಗಿದೆ. ಬೆಸ್ಕಾಂನಿಂದ ವಿದ್ಯುತ್ ಸಂಬಂಧಿತ ಕಾಮಗಾರಿ ಹಾಗೂ ಬಿಬಿಎಂಪಿಯಿಂದ ಸಿವಿಲ್ ಕಾಮಗಾರಿಗಳನ್ನು ಮಾಡಲಾಗಿದೆ. ಈ ಕೇಂದ್ರವು 500 ಕೆವಿಎ ಸಾಮರ್ಥ್ಯದ ತೈಲರಹಿತ ಟ್ರಾನ್ಸ್‌ಫಾರ್ಮರ್, 8 ವೇ ಸಾಲಿಡ್ ಸೈಟ್ ರಿಂಗ್ ಮೇನ್ ಯೂನಿಟ್, 5-ವೇ ಎಲ್.ಟಿ ವಿತರಣಾ ಪೆಟ್ಟಿಗೆ, ಯುಪಿಎಸ್, ವಾಟರ್ ಪಂಪ್ ಮತ್ತು ಹವಾ ನಿಯಂತ್ರಣ ವ್ಯವಸ್ಥೆ ಇದೆ. ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ನೀಡಿದೆ. 365 ದಿನಗಳಲ್ಲಿ ಯೋಜನೆ ಪೂರ್ಣಗೊಂಡಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುರಸ್ತಿ ವೇಳೆ ಒಳ ಹೋಗಲು ವ್ಯವಸ್ಥೆ ಇದೆ. ಈ ಚೇಂಬರ್ ನೀರಿನ ಸಂಪ್ ರೀತಿ ಇದ್ದು, ನಾಲ್ಕೂ ಕಡೆ ಕಾಂಕ್ರೀಟ್ ಗೋಡೆಯಿಂದ ಮುಚ್ಚಲಾಗಿದೆ. ಇದರಿಂದ ಈ ಕೇಂದ್ರದ ಮೇಲೆ ಪಾದಚಾರಿಗಳು ಸಂಚರಿಸುವುದರಿಂದ ಸಮಸ್ಯೆ ಆಗಲ್ಲ, ಒಂದು ವೇಳೆ ಟ್ರಾನ್ಸ್ ಫಾರ್ಮರ್ ಸ್ಫೋಟದಂತಹ ಘಟನೆ ನಡೆದರೂ ಕೇಂದ್ರದ ಮೇಲ್ಬಾಗದಲ್ಲಿ ಯಾವುದೇ ಅವಘಡ ಆಗುವುದಿಲ್ಲ. ವಿದ್ಯುತ್ ಅವಘಡ, ವಿದ್ಯುತ್ ವ್ಯತ್ಯಯ ತಡೆಯಲು ಸಹಕಾರಿಯಾಗಲಿದೆ.
ಮುಂದಿನ ದಿನಗಳಲ್ಲಿ ನಗರದ ಪಾದಚಾರಿ ಮಾರ್ಗದಲ್ಲಿರುವ ಅಂದಾಜು 300 ಟ್ರಾನ್ಸ್ಫಾರ್ಮರ್ಗಳನ್ನು ಈ ರೀತಿ ಭೂಗತ ಕೇಂದ್ರಕ್ಕೆ ವರ್ಗಾಯಿಸಲು ಯೋಜಿಸಲಾಗಿದೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 am, Wed, 6 September 23