IndiGo Flights: ಏಳನೇ ದಿನಕ್ಕೆ ಕಾಲಿಟ್ಟ ವಿಮಾನ ಹಾರಾಟ ವ್ಯತ್ಯಯ; 100ಕ್ಕೂ ಹೆಚ್ಚು ವಿಮಾನ ರದ್ದು

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಅವ್ಯವಸ್ಥೆ 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಸಹಸ್ರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಿದ್ದು, ಪ್ರವೇಶಕ್ಕೆ ಕಿಲೋಮೀಟರ್‌ಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

IndiGo Flights: ಏಳನೇ ದಿನಕ್ಕೆ ಕಾಲಿಟ್ಟ ವಿಮಾನ ಹಾರಾಟ ವ್ಯತ್ಯಯ; 100ಕ್ಕೂ ಹೆಚ್ಚು ವಿಮಾನ ರದ್ದು
ಏಳನೇ ದಿನಕ್ಕೆ ಕಾಲಿಟ್ಟ ವಿಮಾನ ಹಾರಾಟ ವ್ಯತ್ಯಯ

Updated on: Dec 08, 2025 | 11:33 AM

ಬೆಂಗಳೂರು, ಡಿಸೆಂಬರ್ 08: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 6 ದಿನಗಳಿಂದ ಇಂಡಿಗೋ ವಿಮಾನಗಳ (IndiGo Flight) ಹಾರಾಟದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಇಂದಿಗೆ ಈ ಸಮಸ್ಯೆ ಏಳನೇ ದಿನಕ್ಕೆ ತಲುಪಿದೆ. ಡಿ. 5 ರ ಒಂದೇ ದಿನದಂದು 1,000 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ಇದುವರೆಗೆ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸಿದ್ದಾರೆ. ಇಂದೂ ಸಹ ಕೆಂಪೇಗೌಡ ಏರ್ಪೋಟ್ನಲ್ಲಿ 100 ಕ್ಕೂ  ಅಧಿಕ ವಿಮಾನಗಳ ಹಾರಾಟ ರದ್ದಾಗಿವೆ. ಬೆಂಗಳೂರು ಮಾತ್ರವಲ್ಲದೇ ದೇಶಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ವ್ಯಾಪಕ ರದ್ದತಿಯಿಂದಾಗಿ ಭಾರತದಾದ್ಯಂತ ವಿಮಾನ ಪ್ರಯಾಣ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

7ನೇ ದಿನ 126 ವಿಮಾನ ರದ್ದತಿ

ಬೆಳಗ್ಗೆಯಿಂದ ಮಧ್ಯರಾತ್ರಿಯ ಒಳಗಾಗಿ ಬೆಂಗಳೂರು ಏರ್ಪೋಟ್ನಿಂದ ನಿರ್ಗಮಿಸಬೇಕಿದ್ದ 64 ಮತ್ತು ಆಗಮಿಸಬೇಕಿದ್ದ 62 ವಿಮಾನಗಳು ಸೇರಿ ಒಟ್ಟೂ 126 ವಿಮಾನಗಳು ರದ್ದಾಗಿವೆ. ರದ್ದತಿ ಕುರಿತು ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರಿಗೆ 5 ಗಂಟೆ ಮುಂಚಿತವಾಗಿ ಸಂದೇಶ ಕಳುಹಿಸಿದ್ದ ಕಾರಣ ಪ್ರಯಾಣಿಕರು ಏರ್​ಪೋರ್ಟ್​​ಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇಂದು ಒಟ್ಟು 77 ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯವಾಗಿದ್ದು, ಏರ್ಪೋಟ್ ನಿಂದ ನಿರ್ಗಮಿಸಬೇಕಿದ್ದ39 ಮತ್ತು ಆಗಮಿಸಬೇಕಿದ್ದ 38 ವಿಮಾನಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮಂಜು ಕವಿದ ಕಾರಣಕ್ಕೆ ವಿಮಾನ ಹಾರಾಟ ವ್ಯತ್ಯಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳ್ಳಂ ಬೆಳಗ್ಗೆ ದಟ್ಟವಾದ ಮಂಜು ಮುಸುಕಿದ ವಾತಾವರಣ ಇದ್ದು, ವಿಮಾನ ಹಾರಾಟದಲ್ಲಿ ವ್ಯತ್ಯ ಉಂಟಾಗಿದೆ. ದಟ್ಟ ಮಂಜು ಕವಿದ ಹಿನ್ನೆಲೆ ಸ್ವಷ್ಟವಾಗಿ ರನ್ ವೇ ಕಾಣಿಸದಿರುವ ಕಾರಣಕ್ಕೆ 20 ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.

ಇದನ್ನೂ ಓದಿ ಮುಂದುವರಿದ ವಿಮಾನಗಳ ಹಾರಾಟ ವ್ಯತ್ಯಯ: KIABಯಿಂದ 61 ಇಂಡಿಗೋ ಫ್ಲೈಟ್​ಗಳು ರದ್ದು

ಏರ್ಪೋಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯ ಸ್ವಲ್ಪ ಸುಧಾರಿಸಿದ ನಂತರ, ವಾರಾಂತ್ಯದ ಬಳಿಕ ಕೆಲಸಕ್ಕೆ ಮತ್ತು ಅಂತರರಾಜ್ಯಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಟರ್ಮಿನಲ್ ಒಂದರ ಮುಂಭಾಗದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಡಿಜಿ ಯಾತ್ರಾ ಮೂಲಕ ಸಾಗುವವರ ಸಾಲುಗಳಲ್ಲೂ ಭಾರೀ ದಟ್ಟಣೆ ಕಂಡುಬರುತ್ತಿದೆ.

ಡಿಪಾರ್ಚರ್ ಗೇಟ್‌ನಿಂದ ಅರೈವಲ್ ಗೇಟ್‌ವರೆಗೂ ಸಾಲುಗಳು ವಿಸ್ತರಿಸಿದ್ದು, ಪ್ರಯಾಣಿಕರು ಕಿಲೋಮೀಟರ್‌ಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ಎರಡು ಗಂಟೆ ಮುಂಚಿತವಾಗಿ ಮಾತ್ರ ಪ್ರವೇಶಿಸಲು ಅವಕಾಶ ನೀಡುತ್ತಿದ್ದು, ಲಗೇಜ್ ಸಮೇತ ಪ್ರಯಾಣಿಕರು ದೀರ್ಘ ಕ್ಯೂನಲ್ಲಿ ನಿಂತು ಪರದಾಟ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಇರುವ ಸಂಖ್ಯೆಗಿಂತ ದುಪ್ಪಟ್ಟು ಪ್ರಯಾಣಿಕರು ಇಂದು ವಿಮಾನ ನಿಲ್ದಾಣದಲ್ಲಿ ಕಂಡುಬರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:31 am, Mon, 8 December 25