ಮುಂದುವರಿದ ವಿಮಾನಗಳ ಹಾರಾಟ ವ್ಯತ್ಯಯ: KIABಯಿಂದ 61 ಇಂಡಿಗೋ ಫ್ಲೈಟ್ಗಳು ರದ್ದು
ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯ ಇವತ್ತೂ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಚಾರ ನಡೆಸಬೇಕಿದ್ದ ಹಲವು ವಿಮಾನಗಳು ರದ್ದುಗೊಂಡಿವೆ. ಈ ಬಗ್ಗೆ ಪ್ರಯಾಣಿಕರಿಗೆ ಏರ್ಲೈನ್ಸ್ ಸಿಬ್ಬಂದಿ ಸಂದೇಶ ಕಳುಹಿಸಿದ್ದಾರೆ. ಮತ್ತೊಂದೆಡೆ ಕಳೆದ 5 ದಿನಗಳಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಐಎಬಿ ಸಹಜ ಸ್ಥಿತಿಗೆ ಮರಳುತ್ತಿದೆ.

ಬೆಂಗಳೂರು, ಡಿಸೆಂಬರ್ 07: ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯಕ್ಕೆ ಸದ್ಯ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರಿನ ಕೇಂಪೇಗೌಡ ಏರ್ಪೋರ್ಟ್ನಿಂದ ಇಂದು ಹಾರಾಟ ನಡೆಸಬೇಕಿದ್ದ 61 ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಏರ್ಲೈನ್ಸ್ ಸಿಬ್ಬಂದಿ ಸಂದೇಶ ಕಳುಹಿಸಿದ್ದು, ವಿಮಾನಗಳ ಪ್ರಯಾಣಕ್ಕೆ ಬಾರದಂತೆ ಸೂಚಿಸಲಾಗಿದೆ. ದೆಹಲಿ, ಹೈದರಾಬಾದ್, ಇಂದೋರ್, ರಾಯಪುರ್ ,ಕೊಲ್ಕತ್ತಾ, ಮಂಗಳೂರು ಕೊಚ್ಚಿ, ಶ್ರೀನಗರ, ಭೂಪಾಲ್ ಸೇರಿದಂತೆ ಹಲವಡೆ ತೆರಳಬೇಕಿದ್ದ ಇಂಡಿಗೋ ಸಂಸ್ಥೆಯ ಕೆಲ ವಿಮಾನಗಳು ಕ್ಯಾನ್ಸಲ್ ಆಗಿವೆ.
ಸಹಜ ಸ್ಥಿತಿಯತ್ತ KIAB
ಹಾರಾಟ ರದ್ದಾಗಿರುವ ವಿಮಾನಗಳ ಮಾಹಿತಿಯನ್ನು ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ನೀಡುತ್ತಿರುವ ಹಿನ್ನಲೆ ಬೆಂಗಳೂರು ಏರ್ಪೋರ್ಟ್ನ ಇಂಡಿಗೋ ಕೌಂಟರ್ ಮುಂದೆ ಜಮಾಯಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಏರ್ಪೋಟ್ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮದಿಂದ ಜನದಟ್ಟಣೆ ಕಡಿಮೆಯಾಗಿದ್ದು, ಕಳೆದ ಐದು ದಿನಗಳಿಂದ ಪ್ರಯಾಣಿಕರಿಂದ ತುಂಬಿ ತುಳುಕಿದ್ದ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಕೆಲ ಇಂಡಿಗೋ ವಿಮಾನಗಳ ವಿಳಂಬ ಮುಂದುವರಿದಿರುವ ಹಿನ್ನಲೆ, ಪ್ರಯಾನಣಿಕರು ಏರ್ಪೋರ್ಟ್ನಲ್ಲಿ ಕಾದು ಕುಳಿತಿರುವ ದೃಶ್ಯಗಳು ಕಂಡುಬಂದಿವೆ. ಏರ್ಪೋರ್ಟ್ ಆಡಳಿತ ಮಂಡಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಪ್ರಯಾಣಿಕರಿಗೆ ಪ್ಲೈಟ್ಗಳ ಮಾಹಿತಿ ನೀಡುವ ಕೆಲಸಕ್ಕೆ ಮುಂದಾಗಿರುವ ಕಾರಣ, ಪ್ರಯಾಣಿಕರಲ್ಲಿ ಉಂಟಾಗುತ್ತಿದ್ದ ಗೊಂದಲಗಳಿಗೆ ಬಹುತೇಕ ತೆರೆ ಬಿದ್ದಿದೆ.
ಇದನ್ನೂ ಓದಿ: ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ
ಕಳೆದ ಕೆಲ ದಿನಗಳಿಂದ ಇಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಮಧ್ಯ ಪ್ರವೇಶಿಸಿದೆ. ವಿಮಾನಗಳ ಹಾರಾಟ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಬಾಕಿ ಹಣ ಪಾವತಿಸದ ಇಂಡಿಗೋ ಏರ್ಲೈನ್ಸ್ಗೆ ಕೇಂದ್ರ ವಿಮಾನಯಾನ ಸಚಿವಾಲಯ ಖಡಕ್ ಸಂದೇಶ ರವಾನಿಸಿದೆ. ಇಂದು ರಾತ್ರಿ 8 ಗಂಟೆಯೊಳಗೆ ಬಾಕಿ ಹಣವನ್ನು ಮರುಪಾವತಿಸುವಂತೆ ಸೂಚಿಸಿದ್ದು, ಒಂದು ವೇಳೆ ಮರುಪಾವತಿ ಮಾಡದಿದ್ದರೆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಜೊತೆಗೆ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವುದನ್ನೇ ಇತರ ವಿಮಾನಯಾನ ಸಂಸ್ಥೆಗಳು ಬಂಡವಾಳ ಮಾಡಿಕೊಂಡಿವೆ. ಹೀಗಾಗಿ ಈ ಬಿಕ್ಕಟ್ಟು ಪರಿಹಾರ ಆಗುವವರೆಗೆ ಎಲ್ಲ ಏರ್‌ಲೈನ್ಸ್‌ಗಳಿಗೆ ಅನ್ವಯವಾಗುವಂತೆ ವಿಮಾನಯಾನ ಸಚಿವಾಲಯ ಏಕರೂಪ ದರ ನಿಗದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



