ಬೆಂಗಳೂರು: ಇಂಟರ್ನೆಟ್ ಯುಗದಲ್ಲಿ ಅನ್ಲೈನ್ ಮೂಲಕ ಎಂತಹ ವಿದ್ಯೆಯನ್ನಾದರೂ ಕಲಿಯಬಹುದೆಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ತರಬೇತಿ ಪಡೆದು ಕಸುಬಿಗೆ ಇಳಿದಿದ್ದ ಮೂವರು ಈಗ ಕಂಬಿ ಎಣಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತರಬೇತಿ ಪಡೆದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಿಲಾಡಿಗಳನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹೇಂದ್ರ, ಸ್ಯಾಮ್ ಸನ್, ನೀಲಕಂಠ ಬಂಧಿತ ಆರೋಪಿಗಳು.
ಮಹಾಮಾರಿ ಕೊರೊನಾ ಅದೆಷ್ಟೋ ಜನರ ಜೀವನದ ಹಾದಿಯನ್ನೇ ಬದಲಾಯಿಸಿದೆ. ಕೊರೊನಾ ಸಮಯದಲ್ಲಿ ಹೋಟೆಲ್ ತೆರೆದು ಹಣ ಮಾಡಬೇಕೆಂದು ಹೊರಟಿದ್ದವರಿಗೆ ಬಿಸಿನೆಸ್ನಲ್ಲಿ ಲಾಸ್ ಆಗಿ ಸಾಲದ ಸುಳಿಗೆ ಸಿಕ್ಕಿದ್ರು. ಈ ವೇಳೆ ಸಾಲ ತೀರಿಸಲು ಇವರು ಮಾಡಿದ ಯೋಜನೆ ಇವತ್ತು ಇವರನ್ನು ಜೈಲಿಗೆ ನೂಕಿದೆ. ಹೌದು ಮೂವರು ಯುವಕರು ಕೊರೊನಾ ಸಮಯದಲ್ಲಿ ಹೋಟೆಲ್ ತೆರೆದು ಅದರಲ್ಲಿ ನಷ್ಟ ಸಂಭವಿಸಿ ಸಾಲ ತೀರಿಸಲು ಸೋಷಿಯಲ್ ಮೀಡಿಯಾದಲ್ಲಿ ಕಳ್ಳತನಕ್ಕೆ ತರಬೇತಿ ಪಡೆದು ಕಳವಿಗಾಗಿ ಕಟರ್ ಖರೀದಿಸಿ 1 ವಾರ ಸ್ಕೆಚ್ ಹಾಕಿ ಕಳ್ಳತನ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಳ್ಳತನಕ್ಕೆ ಟ್ರೈನಿಂಗ್ ಪಡೆದು ಮೊದಲ ಬಾರಿಗೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಎಂಹೆಚ್ ರಸ್ತೆಯ ಮೀನಾ ಜ್ಯುವೆಲರಿ ಶಾಪ್ಗೆ ಕನ್ನ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಾಕ್ ಹೊಡೆಯೋದು ಹೇಗೆ ಅನ್ನೋದನ್ನು ಜಾಲಾಡಿ 1.3 ಕೆ.ಜಿ ಚಿನ್ನಾಭರಣ ಕದ್ದು ಗೋವಾಗೆ ಹೋಗಿದ್ದಾರೆ. ಗೋವಾಗೆ ಹೋಗಿ ಮುಂದಿನ ದಾರಿ ಕಾಣದೆ ಮತ್ತೆ ಬೆಂಗಳೂರಿಗೆ ವಾಪಾಸ್ ಆಗಿದ್ದು ಖದೀಮರನ್ನು ಇಂದಿರಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೇಗಿತ್ತು ಗೊತ್ತಾ ಕಳ್ಳತನದ ಪ್ಲಾನ್
ಆರೋಪಿಗಳೊಬಬ್ಬರು ಆನ್ ಲೈನ್ ಆ್ಯಪ್ ಸೇರಿದಂತೆ 20 ರಿಂದ 30 ಲಕ್ಷದವರೆಗೆ ಕೈಸಾಲ ಪಡೆದಿದ್ರು. ಇದರಿಂದ ಸಾಲಗಾರರ ಕಾಟ ಹೆಚ್ಚಾಗಿತ್ತು. ಯಾವುದೇ ಕೆಲಸಕ್ಕೆ ಸೇರಿದ್ರು 15 ರಿಂದ 20 ಸಾವಿರ ಸಂಬಳ ಅಷ್ಟೇ ಬರುತ್ತೆ. ಕೆಲಸಕ್ಕೆ ಸೇರಿ ಸಾಲ ತೀರಿಸಲು ಆಗೋದೆ ಇಲ್ಲ ಎಂದು ಈ ರೀತಿ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮೂವರು ಸೇರಿ ಜ್ಯುವೆಲ್ಲರಿ ಅಂಗಡಿ ದೋಚಲು ಮೂಂದಾಗಿದ್ದು ಅದಕ್ಕಾಗಿ ಬೀಗ ಕಟ್ ಮಾಡಲು ಕಟರ್ ಖರೀದಿಸಿದ್ದರು. ದೊಡ್ಡ ದೊಡ್ಡ ಅಂಗಡಿಗಳನ್ನು ದೋಚೋದು ಕಷ್ಟ ಅಲ್ಲಿ ಅಲಾರಾಮ್, ಉತ್ತಮ ಲಾಕ್ ಸಿಸ್ಟಂ ಎಲ್ಲವೂ ಇರುತ್ತೆ. ಹಾಗಾಗಿ ಅದನ್ನ ದೋಚೋದು ಕಷ್ಟ ಎಂದು ಲಾಕ್ ಒಡೆಯಬಹುದಾದ ಸಣ್ಣ ಅಂಗಡಿ ಟಾರ್ಗೆಟ್ ಮಾಡಿದ್ದಾರೆ. ಮನೆಯಿಂದ ಹೊರಡುವ ಮುಂಚೆ ಸಖತ್ ಪ್ಲಾನ್ ಮಾಡಿಕೊಂಡು ಮಾಸ್ಕ್, ಗ್ಲೌಸ್ ಹಾಕಿಕೊಂಡು ಜನ ಜಾಸ್ತಿ ಬರದ ಸಮಯಕ್ಕಾಗಿ ಕಾದು ಕಳ್ಳತನ ಮಾಡಿದ್ದಾರೆ.
15 ದಿನದ ಹಿಂದೆ ಮಹೇಂದ್ರ ತನ್ನ ಭಾವನ ಕಾರನ್ನು ತಂದಿದ್ದ. ಅದೇ ಕಾರಿನಲ್ಲಿ ತೆರಳಿ ಕಳ್ಳತನ ಮಾಡಿದ್ದಾರೆ. ಕಾರಿನ ನಂಬರ್ ಪ್ಲೇಟ್ ಗೆ ಕಪ್ಪು ಬಣ್ಣ ಬಳಿದು ಕೃತ್ಯ ಎಸಗಿದ್ದಾರೆ. ಇದರಿಂದ ನಂಬರ್ ಗೊತ್ತಾಗೋದಿಲ್ಲ ಎಂದು ಆರೋಪಿಗಳು ಯೋಚಿಸಿದ್ದರು. ಅಲ್ಲದೇ ಮಳೆ ಇರೋದರಿಂದ ಜನ ಜಾಸ್ತಿ ಬರಲ್ಲ ಕೆಲಸ ಸುಲಭ ಅಂದುಕೊಂಡಿದ್ರು. ಆದ್ರೆ ಅದೇ ಮಳೆ ಆ ಮೂವರಿಗೆ ಮುಳುವಾಯ್ತು. ಕಾರಿನ ನಂಬರ್ ಪ್ಲೇಟ್ ಗೆ ಹಾಕಿದ್ದ ಕಪ್ಪು ಬಣ್ಣ ಅಳಿಸಿ ಅರ್ಧಂಬರ್ಧ ನಂಬರ್ ಕಾಣಿಸಿತ್ತು. ಕೆಎ ೦3 ಎಮ್ ಝೆಡ್ ನಂಬರ್ ಪೊಲೀಸರಿಗೆ ಕಾಣಿಸಿದೆ. ಆ ಸೀರಿಸ್ ನ ನಂಬರ್ ಲಿಸ್ಟ್ ತೆಗೆಸಿಕೊಂಡ ಪೊಲೀಸರು ಅಂದಾಜಿನ ಮೇಲೆ ಕಾರಿನ ಮಾಲೀಕರ ಸಂಪರ್ಕ ಮಾಡಿ ಕಳ್ಳರನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.
ಆರೋಪಿಗಳು 1 ಕೋಟಿ ಮೌಲ್ಯದ 1 ಕೆಜಿ ಚಿನ್ನ ಹೊತ್ತು ಗೋವಾ ತೆರಳಿದ್ರು. ಪೊಲೀಸರು ಎಲ್ಲಾ ಟೋಲ್ ಗಳಿಗೂ ಕಾರಿನ ನಂಬರ್ ನೀಡಿ ಮಾಹಿತಿ ನೀಡುವಂತೆ ಕೇಳಿದ್ದಾರೆ. ದಾವಣಗೆರೆ ಟೋಲ್ ಬಳಿ ಗೋವಾದಿಂದ ಬೆಂಗಳೂರಿನತ್ತ ಪಾಸ್ ಆಗಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಇದೊಂದು ಪ್ರೊಫೆಶನಲ್ ಕಳ್ಳರ ಕೈಚಳಕ ಎಂದುಕೊಂಡಿದ್ದ ಪೊಲೀಸರು ದಾವಣಗೆರೆಯಿಂದ ಎಲ್ಲಾ ಟೋಲ್ ನಲ್ಲೂ ಪೊಲೀಸ್ ಸಿಬ್ಬಂದಿಗಳನ್ನ ಮಫ್ತಿಯಲ್ಲಿ ಇರಿಸಲಾಗಿತ್ತು. ಖಾಲಿ ರಸ್ತೆಯಲ್ಲಿ ಹಿಡಿಯೋದು ಕಷ್ಟ ಎಂದು ಟೋಲ್ ನಲ್ಲಿ ಟಾರ್ಗೆಟ್ ಮಾಡಲಾಗಿತ್ತು. ಅದರಂತೆ ಟೋಲ್ ನಲ್ಲಿದ್ದ ಸಿಬ್ಬಂದಿ ಟೋಲ್ ನಲ್ಲಿ ಜಾಮ್ ಮಾಡಿಸಿದ್ದಾರೆ. ಈ ವೇಳೆ ತುಮಕೂರು ಟೋಲ್ ಬಳಿ ಫುಲ್ ಜಾಮ್ ಮಾಡಿಸಿ ಆರೋಪಿಗಳ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬೈಕ್ ಸವಾರನ ಮೇಲೆ ಹರಿದ ಬಸ್! ದೇಹ ಛಿದ್ರ ಛಿದ್ರ
Published On - 11:13 am, Thu, 21 October 21