ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಭೇಟಿ ವೇಳೆ ಮಹತ್ವದ ಮಾತುಕತೆ: ಇಲ್ಲಿದೆ ಇನ್‌ಸೈಡ್ ಮಾಹಿತಿ
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿಕೆ ಶಿವಕುಮಾರ್ ನಡುವೆ ನಡೆದಿರುವ ಮಹತ್ವದ ಭೇಟಿಯ ಇನ್‌ಸೈಡ್ ಮಾಹಿತಿ ಲಭ್ಯವಾಗಿದ್ದು, ಸ್ಟಿಂಗ್ ಆಪರೇಷನ್ ಪ್ರಕರಣ, ಪರಿಷತ್ ಚುನಾವಣೆ ಫಲಿತಾಂಶ ಮತ್ತು ಮೈಸೂರು ದಸರಾ ಉಸ್ತುವಾರಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇನ್ನು ಹಾಲಿ ಮತ್ತು ಮಾಜಿ ಸಿಎಂ ಭೇಟಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಆಸಕ್ತಿ ವಹಿಸಿತ್ತು. ಇಬ್ಬರೂ ನಾಯಕರನ್ನು ಒಟ್ಟಿಗೆ ಕೂರಿಸಿ ಮಾತುಕತೆಗೆ ಸೂಚಿಸಿತ್ತು ಎನ್ನಲಾಗಿದೆ.

ಬೆಂಗಳೂರು, ನವೆಂಬರ್ 10: ದೀಪಾವಳಿ ಶುಭಾಶಯ ಕೋರುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಸಿಎಂ ಡಿಕೆ ಶಿವಕುಮಾರ್ ನಿನ್ನೆ ಭೇಟಿ ನೀಡಿದ್ದರು. ಈ ವೇಳೆ ಸುದೀರ್ಘ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದು, ಎಂಎಲ್ಸಿ ಚುನಾವಣೆ ಫಲಿತಾಂಶ, ಸ್ಟಿಂಗ್ ಆಪರೇಷನ್ ಪ್ರಕರಣ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಇನ್ನು ಹಾಲಿ ಮತ್ತು ಮಾಜಿ ಸಿಎಂ ಭೇಟಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಆಸಕ್ತಿ ವಹಿಸಿತ್ತು. ಇಬ್ಬರೂ ನಾಯಕರನ್ನು ಒಟ್ಟಿಗೆ ಕೂರಿಸಿ ಮಾತುಕತೆಗೆ ಸೂಚಿಸಿತ್ತು. ಅಷ್ಟರಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಮಧ್ಯಸ್ಥಿಕೆ ವಹಿಸಿ ಡಿಕೆಶಿ ಬಳಿ ವಿಷಯ ಪ್ರಸ್ತಾಪಿಸಿದ್ದರು. ಪೊನ್ನಣ್ಣ ಮಾತಿಗೆ ಸಿಎಂ ಸಮ್ಮತಿಸಿದ ಕಾರಣ ಸಿದ್ದರಾಮಯ್ಯ ನಿವಾಸದಲ್ಲಿಯೇ ಭೇಟಿಗೆ ಮುಹೂರ್ತ ಫಿಕ್ಸ್ ಆಗಿತ್ತು ಎನ್ನಲಾಗಿದೆ.
ಡಿಕೆ ಶಿವಕುಮಾರ್-ಸಿದ್ದರಾಮಯ್ಯ ನಡುವೆ ಏನೆಲ್ಲ ವಿಚಾರ ಚರ್ಚೆ?
ಉಭಯ ನಾಯಕರ ಮಾತುಕತೆ ವೇಳೆ ಸ್ಟಿಂಗ್ ವಿಚಾರ ಪ್ರಸ್ತಾಪವಾಗಿದ್ದು, ತನಿಖೆ ಕುರಿತ ಸಂಪೂರ್ಣ ಮಾಹಿತಿಯನ್ನು ಸಿದ್ದರಾಮಯ್ಯಗೆ ಸಿಎಂ ಡಿಕೆಶಿ ನೀಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಕಲಿ ಸ್ಟಿಂಗ್ ವಿಚಾರಕ್ಕೆ ನಾನು ಏಕೆ ದೂರು ಕೊಟ್ಟಿದ್ದೇನೆ? ದೂರಿನ ಉದ್ದೇಶವೇನು? ಎಂಬುದನ್ನು ವಿವರಿಸಿದ್ದಾರೆ. ಯಾರು ನಕಲಿ ಸ್ಟಿಂಗ್ ಯತ್ನ ಮಾಡಿದ್ದರೋ ಅವರನ್ನ ವಶಕ್ಕೆ ಪಡೆಯ ಬೇಕಲ್ಲವೇ? ತನಿಖೆಯನ್ನ ಅನುಮಾನಕ್ಕೆ ಅವಕಾಶವಿಲ್ಲದಂತೆ ನಡೆಸಿದರೆ ನನಗೂ ಸಮಾಧಾನ ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ, ಕಾನೂನಾತ್ಮಕವಾಗಿ ತನಿಖೆ ನಡೆಯುತ್ತಿದೆ. ಯಾರು ಅಪ್ಲೋಡ್ ಮಾಡಿದ್ದರೋ ಅವರ ವಿರುದ್ಧವೂ ಕ್ರಮ ಆಗಬೇಕಲ್ಲ. ಉಳಿದವರನ್ನು ಕಾನೂನು ಪ್ರಕಾರ ಅಗತ್ಯದಂತೆ ವಶಕ್ಕೆ ಪಡೆಯಲಾಗುತ್ತೆ ಎಂಬ ಭರವಸೆ ನೀಡಿದ್ದಾರೆ. ಇದು ಜೆಡಿಎಸ್ನ ರಾಜಕೀಯ, ಇದಕ್ಕೆ ಬಲಿಯಾಗಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯರೊಂದಿಗೆ ಡಿಕೆ ಶಿವಕುಮಾರ್ ಗುಪ್ತ ಚರ್ಚೆ: ಕೆಲ ವಿಚಾರಗಳನ್ನ ತಿಳಿಸಿದ್ದೇನೆ ಎಂದ ಸಿಎಂ
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮ್ಮಯ್ಯ, ನಾನೇನು ಕುಮಾರಸ್ವಾಮಿ ಪರವಾಗಿಲ್ಲ. ಕುಮಾರಸ್ವಾಮಿ ಎಂದೂ ತನ್ನ ಪರವಾಗಿಲ್ಲ ಎಂಬುದೂ ಗೊತ್ತು. ಆದರೆ ತನಿಖೆಯಿಂದ ಸತ್ಯ ಹೊರಬರಬೇಕು ಎಂದಿದ್ದಾರೆ. ಪೊನ್ನಣ್ಣ ನನ್ನ ಕಾನೂನು ಸಲಹೆಗಾರರಾಗಿದ್ದರೂ ನಿಮಗೂ ಆತ್ಮೀಯರು. ಹೀಗಾಗಿ ತನಿಖೆಯ ಕಾನೂನಾತ್ಮಕ ವಿವರಣೆ ಅವರೇ ನೀಡಲಿ ಎಂದ ಸಿಎಂ, ನೀವು ನಮ್ಮ ನಾಯಕರು. ಎಂದಿಗೂ ನಿಮ್ಮ ನಾಯಕತ್ವ ನಮಗೆ ಬೇಕಿದೆ. ಯಾವುದೇ ಸಂಶಯವಿಲ್ಲದೆ ಒಟ್ಟಾಗಿ ಕೆಲಸ ಮಾಡೋಣ ಎಂದು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ.
ಇದೇ ವೇಳೆ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ಮಾತುಕತೆ ನಡೆದಿದ್ದು, ಫಲಿತಾಂಶ ಪಕ್ಷಕ್ಕೆ ಸಹಜವಾಗಿಯೇ ಮುಜುಗರ ತಂದಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಮೂಲ ಮತದಾರರನ್ನ ನಾವು ಕಾಪಾಡಿಕೊಳ್ಳ ಬೇಕು. ನಮ್ಮ ಸೈದ್ಧಾಂತಿಕ ಮತದಾರರನ್ನ ನಾವು ಬಿಡಬಾರದು ಎಂದು ತಿಳಿಸಿದ್ದಾರೆ. ಇದಕ್ಕೆ ಡಿಕೆಶಿ ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಮೈಸೂರು ದಸರಾಗೆ 22 ಮಂತ್ರಿಗಳನ್ನ ಉಸ್ತುವಾರಿ ಮಾಡಿದ್ದನ್ನು ಸಹ ಸಿಎಂ ಬಳಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅದಕ್ಕೆ ವಿವರವಾಗಿ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, ದಸರಾ ಚೆನ್ನಾಗಿ ಆಗಲೆಂದು ಹಾಗೆ ಮಾಡಿರೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
