IPL 2023: ಬೆಂಗಳೂರಿನಲ್ಲಿ ಪಂದ್ಯಾವಳಿ ವೇಳೆ ಹೆಚ್ಚುವರಿ ಬಸ್ ಸೇವೆ ಘೋಷಿಸಿದ ಬಿಎಂಟಿಸಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯುವ ದಿನಗಳಂದು ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ನಗರದ ಹಲವು ಭಾಗಗಳಿಗೆ ಹೆಚ್ಚುವರಿ ವಿಶೇಷ ಬಸ್​ ಸೌಲಭ್ಯವನ್ನು ಬಿಎಂಟಿಸಿ ಘೋಷಿಸಿದೆ.

IPL 2023: ಬೆಂಗಳೂರಿನಲ್ಲಿ ಪಂದ್ಯಾವಳಿ ವೇಳೆ ಹೆಚ್ಚುವರಿ ಬಸ್ ಸೇವೆ ಘೋಷಿಸಿದ ಬಿಎಂಟಿಸಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 01, 2023 | 7:27 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ (IPL 2023)​​ ಪಂದ್ಯಾವಳಿ ನಡೆಯುವ ದಿನಗಳಂದು ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ನಗರದ ಹಲವು ಭಾಗಗಳಿಗೆ ಹೆಚ್ಚುವರಿ ವಿಶೇಷ ಬಸ್​ ಸೌಲಭ್ಯವನ್ನು ಬಿಎಂಟಿಸಿ ಘೋಷಿಸಿದೆ. 2023ರ ಐಪಿಎಲ್ ಆವೃತ್ತಿಯ ಐದು ಲೀಗ್ ಪಂದ್ಯಾವಳಿಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈನಲ್ಲಿ ಆಡಲಿದೆ. ಉಳಿದ ಪಂದ್ಯಗಳು ಏಪ್ರಿಲ್ 10, 17, 26 ಮತ್ತು ಮೇ 21 ರಂದು ಬೆಂಗಳೂರಿನಲ್ಲಿ ನಡೆಯಲಿವೆ. ಈ ಹಿನ್ನೆಲೆ ರಾತ್ರಿ 11 ಗಂಟೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚುವರಿ ಬಸ್ ಸೌಲಭ್ಯವಿದ್ದು, ಈ ಕೆಳಗಿನ ಸ್ಥಳಗಳಿಗೆ ಸೇವೆ ಲಭ್ಯವಿದೆ.

ಎಲ್ಲೆಲ್ಲಿಗೆ ಬಸ್​ ಸೌಲಭ್ಯ

ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕೆಂಗೇರಿ ಕೆಎಚ್​ಬಿ ಕ್ವಾರ್ಟರ್ಸ್, ನೆಲಮಂಗಲ, ಯಲಹಂಕ 5ನೇ ಹಂತ, ಆರ್.ಕೆ.ಹೆಗಡೆ ನಗರ, ಬಾಗಲೂರು, ಹೊಸಕೋಟೆ. ಈ ಬಸ್ಸುಗಳು ಎಚ್ಎಎಲ್ ರಸ್ತೆ, ಹೂಡಿ, ಅಗರ ದೊಮ್ಮಸಂದ್ರ, ಹೊಸೂರು ರಸ್ತೆ, ಜಯದೇವ ಆಸ್ಪತ್ರೆ, ಎಂಸಿಟಿಸಿ- ನಾಯಂಡನಹಳ್ಳಿ, ಮಾಗಡಿ ರಸ್ತೆ, ಯಶವಂತಪುರ, ಹೆಬ್ಬಾಳ, ನಾಗವಾರ, ಟ್ಯಾನರಿ ರಸ್ತೆ, ಹೆಣ್ಣೂರು ರಸ್ತೆ, ಟಿನ್ ಫ್ಯಾಕ್ಟರಿ ಮಾರ್ಗವಾಗಿ ಸಂಚರಿಸಲಿವೆ.

ಇದನ್ನೂ ಓದಿ: IPL 2023: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ

ಮಧ್ಯರಾತ್ರಿ 1 ಗಂಟೆಯ ತನಕ ನಮ್ಮ ಮೆಟ್ರೋ ಸೇವೆ ಲಭ್ಯ

ಇದೇ ರೀತಿಯಾಗಿ ನಿನ್ನೆ ನಮ್ಮ ಮೆಟ್ರೋ ಕೂಡ ಮಧ್ಯರಾತ್ರಿ 1 ಗಂಟೆಯ ತನಕ ಸೇವೆ ಇರಲಿದೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ. ಐಪಿಎಲ್​ ಪಂದ್ಯ ನಡೆಯುವ ದಿನ ರಾತ್ರಿ 1ರವರೆಗೆ ಮೆಟ್ರೋ ವಿಸ್ತರಣೆ ಮಾಡಿ ಬಿಎಂಆರ್​ಸಿಎಲ್​ ಪ್ರಕಟಣೆ ಹೊರಡಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯಗಳು ನಡೆಯಲಿದ್ದು, ಈ ಹಿನ್ನೆಲೆ ಮೆಟ್ರೋ ರೈಲುಗಳಲ್ಲಿ ಭಾರೀ ಜನಸಂದಣಿ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ರಾತ್ರಿ ಮ್ಯಾಚ್ ಹಿನ್ನೆಲೆ ಬೈಯ್ಯಪ್ಪನಹಳ್ಳಿ, ಕೆಂಗೇರಿ ಮತ್ತು ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್​ಗಳಲ್ಲಿ ರೈಲು ಸೇವೆಗಳನ್ನು ರಾತ್ರಿ 1 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಿಸಲಾಗುತ್ತಿದ್ದು, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು 1:30ಕ್ಕೆ ಹೊರಡಲಿದೆ ತಿಳಿಸಲಾಗಿದೆ.

ಒಟ್ಟು 70 ಲೀಗ್ ಪಂದ್ಯಗಳು

ಈ ಬಾರಿಯ ಐಪಿಎಲ್, ಅಹಮದಾಬಾದ್, ಮೊಹಾಲಿ, ಲಕ್ನೋ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾ ಸೇರಿದಂತೆ ಒಟ್ಟು 12 ನಗರಗಳಲ್ಲಿ ನಡೆಯಲಿದೆ. ಟೂರ್ನಿಯ ಮೊದಲ ಹಾಗೂ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೇ 21ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, 18 ಡಬಲ್ ಹೆಡರ್ ಸೇರಿದಂತೆ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ತಲಾ 7 ಪಂದ್ಯಗಳನ್ನು ತವರು ನೆಲದಲ್ಲಿ ಮತ್ತು 7 ಪಂದ್ಯಗಳನ್ನು ಬೇರೆ ನೆಲದಲ್ಲಿ ಆಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:27 pm, Sat, 1 April 23