ಬೇಳೂರು ರಾಘವೇಂದ್ರ ಶೆಟ್ಟಿ ಊರಲ್ಲೇ ಇದ್ದರೂ ವಾರಂಟ್ ಜಾರಿ ಮಾಡದ ಬೆಂಗಳೂರಿನ ಪೊಲೀಸರ ಕ್ರಮ ಪ್ರಶ್ನಿಸಿದ ರೂಪಾ ಮೌದ್ಗಿಲ್
ವಾರಂಟ್ ಜಾರಿಗೊಳಿಸುವಲ್ಲಿ ವಿಫಲರಾದ ಪೊಲೀಸರಿಗೆ ಐಪಿಸಿ 166, 166ಎ, 166ಬಿ ವಿಧಿಗಳ ಅನ್ವಯ ಶಿಕ್ಷೆ ವಿಧಿಸಬಹುದಾಗಿದೆ ಎಂದು ರೂಪಾ ಎಚ್ಚರಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ (Beluru Raghavendra Shetty) ಅವರ ವಿರುದ್ಧ ನ್ಯಾಯಾಲಯವು 2019ರಿಂದ ನೀಡಿದ್ದ ಹಲವು ವಾರಂಟ್ಗಳನ್ನು ಜಾರಿ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ರೂಪಾ ಮೌದ್ಗೀಲ್ (D Roopa Moudgil) ಅವರು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸರು ವರ್ತನೆ ಬಗ್ಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿರುವ ಅವರು, ‘ನ್ಯಾಯಾಲಯವು ಬೇಳೂರು ರಾಘವೇಂದ್ರ ಶೆಟ್ಟಿ ಅವರನ್ನು ಬಂಧಿಸುವಂತೆ, ಇನ್ಸ್ಪೆಕ್ಟರ್ ಮತ್ತು ಕಮಿಷನರ್ ಅವರಿಗೆ ಆದೇಶಿಸಿದೆ. ಆದರೆ ಪೊಲೀಸರು ರಾಘವೇಂದ್ರ ಶೆಟ್ಟಿ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಅವರು ನಿನ್ನೆಯವರೆಗೆ ನಿಗಮದ ಅಧ್ಯಕ್ಷರಾಗಿದ್ದರು. ದಯವಿಟ್ಟು ಗಮನಿಸಿ’ ಎಂದು ರೂಪಾ ಅವರು ವ್ಯಂಗ್ಯವಾಡಿದ್ದಾರೆ.
ವಾರಂಟ್ ಜಾರಿಗೊಳಿಸುವಲ್ಲಿ ವಿಫಲರಾದ ಪೊಲೀಸರಿಗೆ ಐಪಿಸಿ 166, 166ಎ, 166ಬಿ ವಿಧಿಗಳ ಅನ್ವಯ ಶಿಕ್ಷೆ ವಿಧಿಸಬಹುದಾಗಿದೆ. ಒಬ್ಬ ವ್ಯಕ್ತಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಆತನು ತಲೆಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಗಳಿಗೆ ಹೇಳುವುದು ಸರಿಯಲ್ಲ. ರಾಘವೇಂದ್ರ ಶೆಟ್ಟಿ ವಿರುದ್ಧ ದೂರು ನೀಡಿರುವ 65 ವರ್ಷದ ಹಿರಿಯ ನಾಗರಿಕನಿಗೆ ಇಂದಿಗೂ ಅವರು ತೊಂದರೆ ನೀಡುತ್ತಲೇ ಇದ್ದಾರೆ ಎಂದು ರೂಪಾ ಆರೋಪ ಮಾಡಿದ್ದಾರೆ.
Deriliction by cops in not executing warrant of arrest is punishable in section 166,166A,166B IPC. That too when a person held a public position as chairman,cops telling Court tht he is absconding. Complainant is senior citizen aged 65,still harassed by accused Raghavendra shetty https://t.co/3WA86HsBVj
— D Roopa IPS (@D_Roopa_IPS) July 15, 2022
ಬೇಳೂರು ರಾಘವೇಂದ್ರ ಶೆಟ್ಟಿಗೆ ರೂಪಾ ಮೌದ್ಗಿಲ್ ನೊಟೀಸ್
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ನಡುವೆ ಹಲವು ದಿನಗಳಿಂದ ಜಟಾಪಟಿ ನಡೆಯುತ್ತಿತ್ತು. ಈ ಹಿಂದೆ ರೂಪಾ ಮೌದ್ಗಿಲ್ ಅವರು ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಆರೋಪ ಮಾಡಿ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದರು. ಇದಾದ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ತಳ್ಳಿ ಹಾಕಿ ರೂಪ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು. ಇದರ ನಡುವೆ ಈಗ ನಿಗಮದ ಎಂಡಿ ರೂಪಾ ಮೌದ್ಗಿಲ್ ಅವರು ರಾಘವೇಂದ್ರ ಶೆಟ್ಟಿ ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ನಿಗಮದ ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ನೊಟೀಸ್ ನೀಡಿದ್ದರು.
ನಿಗಮದ ಮೇಲೆ ಹೇಳಿದ ಮೊತ್ತ ಅಷ್ಟೇ ಅಲ್ಲದೇ ನೀವು ನಿಗಮದ ಕರಕುಶಲ ಕರ್ಮಿಗಳು ಹಾಗೂ ನೋಂದಾಯಿತ ಮಾರಾಟಗಾರರಿ೦ದ ಕಲಾಕೃತಿಗಳನ್ನು ಪಾವತಿಸದೆ ಪಡೆದುಕೊಂಡಿರುತ್ತೀರಿ ಎಂಬ ಮಾಹಿತಿಯು ಇದ್ದು, ಮೇಲೆ ಹೇಳಿದ ಮಾರಾಟಗಾರರಿಗೆ ಹಣ ಮಾಡದೇ ಇರುವ ವಿಷಯ ನಿಗಮಕ್ಕೆ ನೇರ ಸಂಬಂಧ ಇಲ್ಲದಿದ್ದರೂ, ನಿಗಮದ ಅಧ್ಯಕ್ಷರ ಹುದ್ದೆಗೆ ಹಾಗೂ ನಿಗಮದ ಹೆಸರಿಗೆ ಕಳಂಕ ತರುವಂತಾಗಿದೆ. ಆದ್ದರಿಂದ ಮೇಲೆ ಹೇಳಿದ ಎಲ್ಲಾ ಪಾಪತಿಗಳನ್ನು ಕೂಡಲೇ ಮಾಡಬೇಕೆಂದು ತಿಳಿಸಿದೆ ಎಂದು ರೂಪಾ ನೋಟಿಸ್ ನೀಡಿದ್ದರು.
Published On - 3:30 pm, Fri, 15 July 22