ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ಆಪ್ತನ ಮನೆ ಮೇಲೆ ಐಟಿ ದಾಳಿ, ಕೋಟ್ಯಾಂತರ ರೂ. ಹಣ ಪತ್ತೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಆಪ್ತನ ಮೇಲೆ ಐಟಿ ದಾಳಿಯಾಗಿದ್ದು, ಮನೆಯಲ್ಲಿ ಕೋಟ್ಯಾಂತರ ರೂಪಾಯಿ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಎಷ್ಟು ನಗದು ಹಣ ಸಿಕ್ತು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಏಪ್ರಿಲ್ 25): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್(Dr K Sudhakar) ಆಪ್ತ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ದಾಳಿಯಾಗಿದೆ (IT Raid). ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಇಂದು(ಏಪ್ರಿಲ್ 25) ದಾಳಿ ಮಾಡಿದ್ದಾರೆ. 10ಜನ ಐಟಿ ಅಧಿಕಾರಿಗಳು ಮನೆಯ ಇಂಚಿಂಚು ಪರಿಶೀಲನೆ ಮಾಡಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆಯೇ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀನಲೆ ನಡೆಸಿದರು. ಈ ವೇಳೆ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣೆ ಪತ್ತೆಯಾಗಿದೆ. ಕೂಡಲೇ ಐಟಿ ಸಿಬ್ಬಂದಿ ಹಣ ಎಣಿಕೆ ಮೆಷಿನ್ ಹಾಗೂ ಚಿನ್ನಭರಣ ತೂಕದ ಮೆಷಿನ್ ತಗೆದುಕೊಂಡು ಬಂದು ಎಣಿಕೆ ಮಾಡಿದ್ದು, ಮನೆಯಲ್ಲಿ ದಾಖಲೆ ಇಲ್ಲದೆ ಪತ್ತೆಯಾದ ಬರೋಬ್ಬರಿ 4 ಕೋಟಿ 80ಲಕ್ಷ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ದೊಡ್ಡ ಮೊತ್ತದ ಹಣ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ದೌಡಾಯಿಸಿ ಮಾಹಿತಿ ಪಡೆದುಕೊಂಡರು. ಅಲ್ಲದೇ ಭದ್ರತೆ ಪರಿಶೀಲಿಸಿ ತೆರಳಿದ್ದಾರೆ. ಇನ್ನು ಹಣ ಎಣಿಕೆ ಮುಗಿದಿರುವ ಹಿನ್ನೆಲೆಯಲ್ಲಿ ಇದೀಗ ಚಿನ್ನಭರಣ ತೂಕದ ಕಾರ್ಯ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ