ಬೆಂಗಳೂರು: ಜೈನ್ ವಿಶ್ವವಿದ್ಯಾಲಯದಲ್ಲಿ ಬಿ.ಆರ್ ಅಂಬೇಡ್ಕರ್ರಿಗೆ ಅವಮಾನ: 7 ವಿದ್ಯಾರ್ಥಿಗಳ ಬಂಧನ
ಜೈನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನ ವಿದ್ಯಾರ್ಥಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಸಿದ್ದಾರೆ.
ಬೆಂಗಳೂರು: ಜೈನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನ ವಿದ್ಯಾರ್ಥಿಗಳನ್ನು ಸಿದ್ದಾಪುರ ಪೊಲೀಸರು ಬಂಧಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತರು ಸುಜಲ್, ಗೌರವ್ ಪವಾರ್, ನೈಮಾ ನಾಗ್ರಿಯಾ, ಪ್ರಣವ್ ಪಲ್ಲಿಯಿಲ್, ರಿಷಬ್ ಜೈನ್, ಸ್ಮೃತಿ ಆರ್.ಬಿ, ಆಸಿಶ್ ಅಗರ್ವಾಲ್ ಬಂಧಿತ ವಿದ್ಯಾರ್ಥಿಗಳು. ಈ ಎಲ್ಲರು ಬಿಬಿಎ 5 ನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದಾರೆ.
ಘಟನೆ ಹಿನ್ನೆಲೆ
ಫೆಬ್ರವರಿ 8ರಂದು ಕಾಲೇಜ್ ಫೆಸ್ಟ್ ಒಂದರ ಮ್ಯಾಡ್ ಆ್ಯಡ್ ಸ್ಪರ್ಧೆಯಲ್ಲಿ ಜಾತಿ ವ್ಯವಸ್ಥೆಯನ್ನ ಖಂಡಿಸುವ ಸಂದೇಶ ನೀಡುವ ಭರದಲ್ಲಿ ವಿದ್ಯಾರ್ಥಿಗಳು ಬಿ. ಆರ್ ಅಂಬೇಡ್ಕರ್ ಅಲ್ಲ, ಬಿಯರ್ ಅಂಬೇಡ್ಕರ್. ಡೋಂಟ್ ಟಚ್ ಮಿ, ಟಚ್ ಮಿ ಅಂತ ಹಾಡು ಹಾಕಿ ಅವಮಾನ ಮಾಡಿದ್ದಾರೆಂದು ಆರೋಪಿಸಲಾಗುತ್ತಿದೆ. ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು ಎಂದು ವಿವಾದಾತ್ಮಕ ಸ್ಕಿಟ್ ಪ್ರದರ್ಶನ ಮಾಡಲಾಗಿದೆ.
ಜೈನ್ ವಿಶ್ವವಿದ್ಯಾಲಯದ ವಿರುದ್ಧ ಸಿಡಿದೆದ್ದ ದಲಿತ ಹಾಗೂ ವಿವಿಧ ಸಂಘಟನೆಗಳು
ಘಟನೆ ಹಿನ್ನೆಲೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಮೇಲೆ ದಲಿತ ಹಾಗೂ ವಿವಿಧ ಸಂಘಟನೆಗಳು ಸಿಡಿದೆದ್ದಿದ್ದಾರೆ. ದಲಿತ ಸಂಘಟನೆಗಳು, ಎನ್ಎಸ್ಯೂಐ (NSUI)ಯಿಂದ ಯೂನಿವರ್ಸಿಟಿ ಮುಂದೆ ಪ್ರತಿಭಟನೆ ಮಾಡಲಾಯಿತು. ಅಂಬೇಡ್ಕರ್, ದಲಿತರ ಮೇಲೆ ಆಕ್ಷೇಪಾರ್ಹ ಹೇಳಿಕೆ ಆರೋಪ ಹಿನ್ನಲೆ ರಾಜ್ಯಾದ್ಯಂತ ಪ್ರತಿಭಟನೆಗೆ ದಲಿತ ಸಂಘಟನೆಗಳು ನಿರ್ಧರಿಸಿದ್ದವು.
FIR (CR No 0032/2023) has been registered under the SC & ST (Prevention of Atrocities) Act, 1989 at Siddapura PS.
Further investigation is underway. https://t.co/KWyFgmyuob
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) February 11, 2023
ಪ್ರಿನ್ಸಿಪಾಲ್ ಸೇರಿದಂತೆ 6 ಜನರ ವಿರುದ್ಧ FIR
ಇನ್ನು ಈ ವಿಚಾರವಾಗಿ ಪ್ರಿನ್ಸಿಪಾಲ್ ಸೇರಿದಂತೆ 6 ಜನರ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಫೆ.11 ರಂದು ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣಾಧಿಕಾರಿ ದೂರು ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ಕಾರ್ಯಕ್ರಮ ಒಂದರಲ್ಲಿ ಅಂಬೇಡ್ಕರ್ರ ಮೀಸಲಾತಿ ಬಗ್ಗೆ ಅವಹೇಳನ ಮಾಡಲಾಗಿದೆ ಎನ್ನಲಾಗಿದೆ. ಖಾಸಗಿ ಕಾಲೇಜು ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು, ಸ್ಕಿಟ್ ಬರಹಗಾರರ ವಿರುದ್ಧ ಎಫ್ಐಆರ್ ಹಾಕಲಾಗಿದೆ.
ಘಟನೆ ವಿವರ ಕೇಳಿದ ಅಶ್ವತ್ಥ ನಾರಾಯಣ
ಘಟನೆ ಸಂಬಂಧ ವರದಿ ನೀಡಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಸೂಚನೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಜೈನ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆ ದುರದೃಷ್ಟಕರ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿಗಳಾಗಿದ್ದಾರೆ. ಅವರನ್ನು ಇಡೀ ಜಗತ್ತೇ ಗೌರವಿಸುತ್ತಿದೆ. ಅಂಥವರನ್ನು ಅಪಮಾನಿಸಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಜೈನ್ ಕಾಲೇಜಿನ ಸ್ವಾಯತ್ತತೆಯನ್ನು ಸರ್ಕಾರ ರದ್ದು ಮಾಡಬೇಕು
ಮೈಸೂರು: ಜೈನ್ ಕಾಲೇಜಿನ ಸ್ವಾಯತ್ತತೆಯನ್ನು ಸರ್ಕಾರ ರದ್ದು ಮಾಡಬೇಕು. ನಾಟಕ ಮಾಡಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಅಂಬೇಡ್ಕರ್ಗೆ ಅವಮಾನವಾದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ರಾಜ್ಯ ಸರ್ಕಾರ ಜೀವಂತವಾಗಿದ್ದರೆ ಎಲ್ಲರನ್ನೂ ಜೈಲಿಗೆ ಕಳಿಸಬೇಕಿತ್ತು. ಜೈನ್ ಕಾಲೇಜಿನ ಆಡಳಿತ ಮಂಡಳಿಯನ್ನು ಜೈಲಿಗೆ ಕಳಿಸಬೇಕಿತ್ತು ಎಂದು ಪರಿಷತ್ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಸೂಲಿಬೆಲೆ, ರೋಹಿತ್ ಚಕ್ರತೀರ್ಥರಂಥವರ ಮಾತು ಕೇಳುತ್ತೆ.ಭಾರತ ಮಾತೆ ದೇವಸ್ಥಾನ ಕಟ್ಟುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾರಿಂದ ರಾಷ್ಟ್ರೀಯತೆ ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Mon, 13 February 23