ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ಏರ್​​ಪೋರ್ಟ್​, ಮಾಲ್​​ಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕರುವುದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ನಗರದ ಏಳು ಶಾಲೆಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದರು.ಇದರ ಬೆನ್ನಲ್ಲೇ ಇದೀಗ ಮತ್ತೆ ಏರ್​​ಪೋರ್ಟ್​, ಮಾಲ್​ಗಳಿಗೆ ಬಾಂಬ್ ಬೆದಕರಿಗೆ ಹಾಕಲಾಗಿದೆ.

ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ಏರ್​​ಪೋರ್ಟ್​, ಮಾಲ್​​ಗಳಿಗೆ ಬಾಂಬ್ ಬೆದರಿಕೆ
ಪ್ರಾತಿನಿಧಿಕ ಚಿತ್ರ

Updated on: Dec 02, 2025 | 7:15 PM

ಬೆಂಗಳೂರು (ಡಿಸೆಂಬರ್ 02): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda International Airport) ಹಾಗೂ ನಗರದ ಕೆಲವು ಮಾಲ್​ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಮೋಹಿತ್ ಕುಮಾರ್ ಎಂಬಾತ ‘ಜೈಷ್-ಇ-ಮೊಹಮ್ಮದ್’ (Jaish-e-Mohammed) ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ (Bengaluru City Police Commissioner) ಇ-ಮೇಲ್‌ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಾಗೂ ನಗರದ ಆಯ್ದ ಪ್ರಮುಖ ಶಾಪಿಂಗ್ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಮತ್ತೆ ಬಾಂಬ್ ಬೆದರಿಕೆ ಆತಂಕ ಸೃಷ್ಟಿಸಿದೆ.

ಹುಸಿ ಬಾಂಬ್ ಬೆದರಿಕೆ​ ಇ-ಮೇಲ್

ಕೆಂಪೇಗೌಡ ಏರ್​ಪೋರ್ಟ್​, ನಗರದ ಕೆಲವು ಮಾಲ್​ಗಳನ್ನ ಸ್ಫೋಟಿಸುವುದಾಗಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ನವೆಂಬರ್ 30ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ (COMPOL Bengaluru City) ಅಧಿಕೃತ ಇ-ಮೇಲ್‌ಗೆ ಕಳುಹಿಸಲಾಗಿದೆ. ಮೋಹಿತ್ ಕುಮಾರ್ ಎನ್ನುವಾತನೇ ಈ ಇ ಮೇಲ್ ಸಂದೇಶ ಕಳುಹಿಸಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು, ವಿಮಾನ ನಿಲ್ದಾಣ ಮತ್ತು ಹೆಸರಿಸಲಾದ ಮಾಲ್‌ಗಳ ಸುತ್ತಮುತ್ತ ತೀವ್ರ ಭದ್ರತಾ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳು ಸ್ಥಳಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.ಮೋಹಿತ್ ಕುಮಾರ್ ಎಂಬಾತನಿಂದ ಹುಸಿ ಬಾಂಬ್​ ಇ-ಮೇಲ್ ಬಂದಿದೆ ಎಂದು ಪೊಲಿಸರು ಖಚಿತಪಡಿಸಿದ್ದು, ಈ ಬಗ್ಗೆ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ mohitkumar.er989799@gmail.com ಎನ್ನುವ ಇ ಮೇಲ್​​ ಐಡಿ ಮೇಲೆ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಲವ್ ಒಲ್ಲೆ ಎಂದ ಯುವಕ: ಸಿಟ್ಟಿನಲ್ಲಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಅರೆಸ್ಟ್

ಬೆದರಿಕೆ ಇ-ಮೇಲ್​ ಸಂದೇಶದಲ್ಲೇನಿದೆ?

ಬೆದರಿಕೆದಾರನು ತನ್ನನ್ನು ‘ಜೈಷ್-ಇ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್’ (Jaish-e-Mohammed White collar terror team) ಎಂದು ಪರಿಚಯಿಸಿಕೊಂಡು, ಇಂಗ್ಲಿಷ್‌ನಲ್ಲಿ ಸಂದೇಶ ಬರೆದಿದ್ದಾನೆ. ಜೈಷ್-ಇ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್‌ನಿಂದ ಇದೊಂದು ಎಚ್ಚರಿಕೆ. ನಾವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಒರಿಯನ್ ಮಾಲ್ (Orion Mall), ಲುಲು ಮಾಲ್ (Lulu Mall), ಫೋರಂ ಸೌತ್ ಮಾಲ್ (Forum South mall), ಮಂತ್ರಿ ಸ್ಕ್ವೇರ್ ಮಾಲ್ (Mantri Square Mall) ಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಸಂಜೆ 7 ಗಂಟೆಯ ನಂತರ ಬಾಂಬ್ ಸ್ಫೋಟಗೊಳ್ಳಲಿದೆ. ನಮ್ಮ ಅಲ್ಲಾ ಮತ್ತು ನಮ್ಮ ಮಾಸ್ಟರ್ ಮೋಹಿತ್ ಅವರಿಗೆ ಧನ್ಯವಾದಗಳು. ಅಲ್ಲದೆ, ‘ಇದು ಸಂಭವಿಸದಿರಲು ಬಯಸಿದರೆ ನೀವು +91 936***8077 ಸಂಖ್ಯೆಗೆ ಕರೆ ಮಾಡಿ, ಹಣವನ್ನು ಪಾವತಿ ಮಾಡಿ ಎಂದು ಹಣಕ್ಕೆ ಬೇಡಿಕೆ ಇಡುವ ಪ್ರಯತ್ನವನ್ನೂ ಮಾಡಲಾಗಿದೆ.

ಈ ಸಂಬಂಧ ಬೆಂಗಳೂರಿನ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬಿಎನ್​ಎಸ್​​​ 173 ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದ್ದು, ಇ-ಮೇಲ್ ಐಡಿಯಲ್ಲಿ ಉಲ್ಲೇಖಿಸಲಾದ ‘ಮೋಹಿತ್ ಕುಮಾರ್’ ಎಂಬಾತನೇ ಆರೋಪಿ ಅಥವಾ ಬೇರೆ ಯಾರೋ ಈ ಐಡಿ ಬಳಸಿದ್ದಾರೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ