ಬೆಂಗಳೂರು: ಭಷ್ಟ್ರಾಚಾರ ನಿಗ್ರಹ ದಳ (Anti Corruption Bureau – ACB) ಸಿಬ್ಬಂದಿ ಇತ್ತೀಚೆಗೆ ಹಲವು ದಾಳಿಗಳನ್ನು ನಡೆಸಿದ್ದಾರೆ. ಆದರೆ ಈ ಪೈಕಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಆರಗ ಜ್ಞಾನೇಂದ್ರ, ‘ಹಿಂದೆ ಎಸಿಬಿ ಕಾರ್ಯಾಚರಣೆಗಳು ಹೇಗೆ ನಡೆಯುತ್ತಿದ್ದವೋ ಗೊತ್ತಿಲ್ಲ. ಆದರೆ ಈಗ ದಾಳಿಗಳು ಮತ್ತು ಎಫ್ಐಆರ್ ದಾಖಲಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿದೆ’ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಇತ್ತೀಚೆಗೆ ಎಸಿಬಿ ದಾಳಿಗಳು ಹೆಚ್ಚಾಗಿವೆ. ಆದರೆ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ? ಎಷ್ಟು ಪ್ರಕರಣಗಳಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ? ಕೇವಲ ಎಸಿಬಿ ದಾಳಿ ಆದರೆ ಅದರಿಂದ ಏನೂ ಪರಿಣಾಮ ಆಗುವುದಿಲ್ಲ. ಕೇವಲ ತೋರ್ಪಡಿಕೆಗಾಗಿ ಎಸಿಬಿ ದಾಳಿಗಳು ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಬಿಡಿಎ ದಲ್ಲಾಳಿಗಳ ಮೇಲೆ ನಡೆದ ಎಸಿಬಿ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅವರು, ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ ಎಂದರು.
ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಹಿಂದೆ ಎಸಿಬಿ ದಾಳಿಗಳು ಹೇಗೆ ನಡೆದಿತ್ತು ಎಂಬುದು ಗೊತ್ತಿಲ್ಲ. ಆದರೆ ಈಗ ಮಾತ್ರ ಎಸಿಬಿ ದಾಳಿಗಳು ಪ್ರಾಮಾಣಿಕವಾಗಿ ನಡೆಯುತ್ತಿವೆ. ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಭ್ರಷ್ಟಾಚಾರ ನಿಗ್ರಹ ದಳವು ನೇರವಾಗಿ ಮುಖ್ಯಮಂತ್ರಿಗಳ ಅಧೀನಕ್ಕೆ ಬರುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದರು.
ಬಿಡಿಎ ದಲ್ಲಾಳಿಗಳು, ಏಜೆಂಟ್‌ಗಳ ಮೇಲೆ ದಾಳಿ
ಬೆಂಗಳೂರು ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ 9 ಕಡೆ ದಾಳಿ ಮಾಡಲಾಗಿದೆ. ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್ನ ಲಕ್ಷ್ಮಣ ಅವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ 9 ಕಡೆ ಎಸಿಬಿ ದಾಳಿ
ಇದನ್ನೂ ಓದಿ: ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿಯನ್ನು ನಿವೃತ್ತಿ ನಂತರವೂ ಹುದ್ದೆಯಲ್ಲಿ ಮುಂದುವರಿಸಿದ ಸರ್ಕಾರ!