ಬೆಂಗಳೂರು: ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ 2022ನೇ ಸಾಲಿನ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಗುರುವಾರ (ಫೆ. 23) ವಿಧಾನಸಭೆಯಲ್ಲಿ (Karnataka Legislative Assembly) ಅಂಗೀಕರಿಸಲಾಗಿದೆ. ಕನ್ನಡ ಭಾಷೆ ಕಡ್ಡಾಯವನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಕ್ರಮ ಕೈಗೊಳ್ಳುವ ಅಧಿಕಾರ ನೀಡುವ ವಿಧೇಯಕ ಇದಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಪರ್ಯಾಲೋಚನೆ ವೇಳೆ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ತಾಲೂಕು ಸಮಿತಿಗೆ ಅಧಿಕಾರಿಗಳ ಬದಲು ಶಾಸಕರನ್ನೇ ಅಧ್ಯಕ್ಷರನ್ನಾಗಿಸಿ, ಯಾಕೆ ಅಧಿಕಾರಿಗಳನ್ನು ಹಾಕುತ್ತೀರಿ? ಈಗ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ರೀತಿ ಸಾಲದಾ? ಅಧಿಕಾರಿಗಳನ್ನು ತೆಗೆದು ಶಾಸಕರನ್ನು ಹಾಕಿ ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ, ಕನ್ನಡ ಭಾಷೆಯ ಪ್ರಸಾರ ಮತ್ತು ಪ್ರಚಾರಕ್ಕಾಗಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವಲ್ಲಿ ಸೂಕ್ತ ಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಸಂಯೋಜಿಸಲು ಸಮರ್ಪಕವಾದ ಕಾನೂನಿನ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸೇರಿ ವಿಧಾನಸಭೆಯಲ್ಲಿ ವಿವಿಧ ವಿಧೇಯಕಗಳು ಅಂಗೀಕಾರ
ಇದನ್ನೂ ಓದಿ: ವಿಧಾನಸಭೆಯಲ್ಲಿ ಕಿಷ್ಕಿಂದ, ಸಪ್ತಗಿರಿ ಸೇರಿ ಆರು ಖಾಸಗಿ ವಿವಿಗಳ ವಿಧೇಯಕ ಅಂಗೀಕಾರ
ವಕೀಲರ ಮೇಲಿನ ಹಿಂಸಾಚಾರ ನಿಷೇಧಕ್ಕೆ ಕಾನೂನು ಜಾರಿ ಮಾಡುವಂತೆ ವಕೀಲರ ಸಂಘ ಭಾರೀ ಪ್ರತಿಭಟನೆ ನಡೆಸಿದ್ದರು. ಇದೀಗ ವಿಧಾನಸಭೆಯಲ್ಲಿ ವೃತ್ತಿಗಳ, ಕಸುಬುಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ (ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ. ಯಾವುದೇ ವ್ಯಕ್ತಿ ವಕೀಲರ ಮೇಲೆ ಹಲ್ಲೆ ನಡೆಸುವಂತಿಲ್ಲ. ಹಲ್ಲೆ ಮಾಡಿದರೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡಕ್ಕೆ ಅವಕಾಶ ನೀಡುವ ವಿಧೇಯಕ ಇದಾಗಿದೆ. ಅಪರಾಧ ಸಂಬಂಧ ವಕೀಲರನ್ನು ಪೊಲೀಸರು ಬಂಧಿಸಿದ್ದಲ್ಲಿ ಲಾಯರ್ ಅಸೋಸಿಯೇಷನ್ಗೆ ಪೊಲೀಸರು ಮಾಹಿತಿ ನೀಡಬೇಕು ಎಂಬುದು ಇದರಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 pm, Sat, 25 February 23