ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ: ಸಿಎಂ ವಿರುದ್ಧ ಆ ಹೇಳಿಕೆಯೇ ಮುಳುವಾಯ್ತು ಎಂದ ಸ್ವಾಮೀಜಿ
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಪೀಠಕ್ಕೆ ಬೀಗ ಹಾಕಿಸಿದ್ದೇ ನಾನು ಎಂದು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್ ಹೇಳಿದ್ದರು. ಪೀಠಕ್ಕೆ ಬೀಗ ಹಾಕಿದ ವಿಚಾರವಾಗಿ ಇಂದು ಸ್ವಾಮೀಜಿ, ಮಠದ ಟ್ರಸ್ಟ್ ಸದಸ್ಯರು ಮತ್ತು ಭಕ್ತರ ಸಭೆ ನಡೆಯಿತು. ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು? ಇಲ್ಲಿದೆ ವಿವರ.

ಬಾಗಲಕೋಟೆ, ಜುಲೈ 15: ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ (Kudalasangama Panchamasali Peetha) ಬೀಗ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ (ಜು.15) ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji) ಹಾಗೂ ಮಠದ ಟ್ರಸ್ಟ್ ಸದಸ್ಯರು ಮತ್ತು ಮುಖಂಡರ ನಡುವೆ ಹುನಗುಂದದಲ್ಲಿ ನಡೆದ ಸಭೆ ಸುಖಾಂತ್ಯ ಕಂಡಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತೆ ಪೀಠಕ್ಕೆ ತೆರಳಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು “ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ” ಅಂತ ಹೇಳಿದ್ದೆ. ಇದರಲ್ಲಿ ತಪ್ಪೇನಿದೆ. ಈ ಹೇಳಿಕೆಯೇ ಇಷ್ಟೆಲ್ಲ ಆಗಲು ಕಾರಣವಾಯಿತು. ಎಷ್ಟೋ ಮುಖ್ಯಮಂತ್ರಿಗಳ ಮನೆ ಎದುರು ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡಿದ್ದೇನೆ. ಯಾರೂ ಸಹ ನನ್ನನ್ನು ಈ ರೀತಿ ನಡೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂದೂ ಕೂಡ ನನ್ನ ಮಠಕ್ಕೆ ಬಾಗಿಲು ಬಂದ್ ಆಗಿರಲಿಲ್ಲ. ಕೆಲ ಭಕ್ತಾಧಿಗಳು ತಿಳಿಯದೆ ಶ್ರೀಮಠದ ಬಾಗಿಲು ಬಂದ್ ಮಾಡಿದರು. ಭಕ್ತಾಧಿಗಳು ಶಾಖಾ ಮಠ ಮಾಡುತ್ತೇವೆ ಅಂದರು. ಅವೆಲ್ಲ ಬೇಡ ಕೂಡಲಸಂಗಮ ಪೀಠ ಇದೆ ಎಂದು ಹೇಳಿದೆ. ಭಕ್ತರ ಒತ್ತಾಸೆಯಂತೆ ನಾನು ಶ್ರೀಪೀಠಕ್ಕೆ ತೆರಳುತ್ತಿದ್ದೇನೆ. ಪೀಠಕ್ಕೆ ಬೀಗ ಹಾಕಿದ ವಿಚಾರ ನನಗೆ ಬಹಳಷ್ಟು ನೋವುಂಟು ಮಾಡಿದೆ. ಸಮಾಜದ ಮುಖಂಡರ ಮೇಲೆ ದೂರು ದಾಖಲಾಗಿದ್ದು ನನಗೆ ಇನ್ನೂ ಹೆಚ್ಚು ದುಃಖ ಉಂಟುಮಾಡಿದೆ. ಅವರೆಲ್ಲರೂ ನಮ್ಮ ಮಠದ ರಕ್ಷಣೆಗಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದವರು. ಈ ಘಟನೆಯಿಂದಾಗಿ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ ಎಂದರು.
ನಾನು ಹೋರಾಟ ಮಾಡುವ ಸಂದರ್ಭದಲ್ಲಿ ಪ್ರಕರಣ ದಾಖಲಾಗುತ್ತಿದ್ದವು. ಆದರೆ, ಇದೀಗ ನನ್ನ ಸಲುವಾಗಿ, ಭಕ್ತರ ಮೇಲೆ ದೂರು ದಾಖಲಾಗಿದ್ದು ನನಗೆ ಬೇಸರ ತರಿಸಿದೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಹಿರಿಯರು ನೇತೃತ್ವ ವಹಿಸಿಕೊಂಡಿದ್ದಾರೆ. ನಾನು ಸಮಾಜ ಕಟ್ಟಲು ಬಂದಿದ್ದೇನೆ, ಇಟ್ಟಿಗೆ, ಸಿಮೆಂಟ್ ನಿಂದ ಕಟ್ಟಡ ಕಟ್ಟಲು ಬಂದಿಲ್ಲ. ನಾನು ಸಮಾಜಕ್ಕಾಗಿ ಬದುಕಿದ್ದೇನೆ, ಸಮಾಜದ ಜನರನ್ನು ಬದುಕಿಸುತ್ತೇನೆ. ನನ್ನ ಭಕ್ತರ ಮನೆಗಳೇ ನನಗೆ ಶ್ರೀ ಪೀಠ ಇದ್ದಂತೆ ಎಂದರು.
ಯಾರು ಏನೇ ಮಾಡಿದರೂ ಅವರೆಲ್ಲ ನನ್ನವರು, ಅವರನ್ನು ಕರೆದುಕೊಂಡು ಮುನ್ನಡೆಯುತ್ತೇನೆ. ಕೂಡಲಸಂಗಮ ಕ್ಷೇತ್ರದಲ್ಲಿ ಇಂತಹ ಘಟನೆಗಳು ಆಗಬಾರದಾಗಿತ್ತು. ಈ ಘಟನೆಯಿಂದ ಸಮಾಜದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಕ್ಷಮೆಯಾಚಿಸಿದರು.
ಕಾಶಪ್ಪನವರ್ ಹಾಗೂ ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ
ಕಾಶಪ್ಪನವರ್ ಹಾಗೂ ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಅವರಿವರ ಹೇಳಿಕೆ ಕೇಳಿ ಭಿನ್ನಾಭಿಪ್ರಾಯ ಮೂಡಿವೆ. ಎಲ್ಲ ಗೊಂದಲಗಳನ್ನು ಪರಿಹರಿಸುತ್ತೇವೆ. ಕೂಡಲಸಂಗಮದ ಭಕ್ತರೊಂದಿಗೆ ಕಾಶಪ್ಪನವರ ಮಾತನಾಡಿದ್ದಾರೆ. ಅವರ ಮಾತಿನಂತೆ ಭಕ್ತರು ಬಂದಿದ್ದಾರೆ. ಕಾಶಪ್ಪನವರ ಹಾಗೂ ನನ್ನ ಮಧ್ಯೆ ಗುರು ಶಿಷ್ಯರ ಸಂಬಂಧವಿದೆ ಎಂದರು.
ಮೀಸಲಾತಿ ಹೋರಾಟ ನಿರಂತರ
ಮೀಸಲಾತಿ ಹೋರಾಟ ನಿರಂತರ, ಅದು ನನ್ನ ಉಸಿರು. ಹೋರಾಟವನ್ನು ಕೊನೆಗೊಳಿಸಲ್ಲ, ಮುಂದೆಯೂ ಹೋರಾಟ ಮಾಡುತ್ತೇನೆ. ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೂ ನಾನು ಹೋರಾಟ ಮಾಡುತ್ತೇನೆ. ಹೋರಾಟದಲ್ಲಿ ಭಾಗವಹಿಸಲು ಇಷ್ಟ ಇಲ್ಲದಿದ್ದರೇ ನೀವು ಬರಬೇಡಿ, ನಾವೇನು ತಪ್ಪು ತಿಳಿಯಲ್ಲ. ಕೂಡಲಸಂಗಮದ ಹಿರಿಯರು ನನ್ನನ್ನು ಪೀಠಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಹೋಗಿ ಪೀಠದಲ್ಲೇ ಇರುತ್ತೇನೆ ಎಂದರು.
ಇದನ್ನೂ ಓದಿ: ಪಂಚಮಸಾಲಿ ಪೀಠಕ್ಕೆ ಬೀಗ: ಶಾಲೆಗೆ ರಜೆ, ಮುಖಂಡರ ಎದುರು ಕಣ್ಣೀರಿಟ್ಟ ಮೃತ್ಯುಂಜಯ ಸ್ವಾಮೀಜಿ
ಕರ್ನಾಟಕದ ಎಲ್ಲ ಮಠಗಳ ಟ್ರಸ್ಟ್ಗೆ ಸ್ವಾಮೀಜಿಗಳು ಅಧ್ಯಕ್ಷರಾಗಿರುತ್ತಾರೆ. ಆದರೆ, ನನ್ನ ವಿಶಾಲವಾದ ಭಾವನೆಯಿಂದ ಭಕ್ತರು ಅಧ್ಯಕ್ಷರಾಗಿರಲಿ ಅಂತ ಬಿಟ್ಟಿದ್ದೇ ತಪ್ಪಾಗಿದೆ. ಮಠದ ಆಸ್ತಿ, ಟ್ರಸ್ಟ್ ಮೂಲಕ ಅವರು ಸಂಪೂರ್ಣವಾಗಿ ಬೆಳೆಯಲಿ. ಅವರ ಬೆಳವಣಿಗೆಯನ್ನು ನೋಡಿ ಖುಷಿಪಡುತ್ತೇನೆ. ಮಠದಲ್ಲೇ ಇರುತ್ತೇನೆ. ಮಠದ ಕಾರ್ಯಕ್ಷೇತ್ರ, ಪ್ರವಾಸ ನಿರಂತರ ತಿಳಿಸಿದರು.








