ಮತ್ತೆ ಶುರುವಾದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ವಿಜಯಪುರದಲ್ಲಿ ಮೊಳಗಿದ ಕಹಳೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ನಡೆದಿದ್ದ ಹೋರಾಟ ತುಸು ತಣ್ಣಗಾಗಿತ್ತು. ಇದೀಗ, ಮತ್ತೆ ಈ ಹೋರಾಟ ಆರಂಭವಾಗಿದೆ. ವಿಜಯಪುರ ನಗರದಲ್ಲಿ ಪಂಚಮಸಾಲಿ ವಕೀಲರ ಪರಿಷತ್ ಸಭೆ ನಡೆದಿದ್ದು ಮುಂದಿನ ಹೋರಾಟದ ರೂಪುರೇಷಗಳ ಬಗ್ಗೆ ಚರ್ಚೆಯಾಗಿದೆ. ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದರು.

ಬೆಳಗಾವಿ, ಜುಲೈ 13: ಪಂಚಮಸಾಲಿ 2ಎ ಮೀಸಲಾತಿ (Panchamasali 2A Reservation) ಹೋರಾಟಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಬೆಳಗಾವಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಲಾಠಿ ಚಾರ್ಜ್ ನಂತರ ಹೋರಾಟದ ಕಿಚ್ಚು ಕಡಿಮೆಯಾಗಿತ್ತು. ಇದೀಗ, ಪಂಚಮಸಾಲಿ ಸಮುದಾಯ (Panchamasali Community) ಮತ್ತೆ ಹೋರಾಟ ನಡೆಸಲು ಮುಂದಾಗಿದೆ. ವಿಜಯಪುರ ನಗರದ ಶಿವಾನುಭವ ಮಂಟಪದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ವಕೀಲರ ಪರಿಷತ್ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ವಕೀಲರ ಪರಿಷತ್ ಪದಾಧಿಕಾರಿಗಳು ಭಾಗಿಯಾಗಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಕೀಲರ ಪರಿಷತ್ನ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮೀಸಲಾತಿಗಾಗಿ ಮುಂದಿನ ಹೋರಾಟದ ರೂಪುರೇಷೆ ಸ್ವರೂಪಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಹೋರಾಟ ನಡೆದು ಬಂದ ದಾರಿ ಬಗ್ಗೆ ಹೇಳಿದರು. ಹಾಲಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವತ್ತ ಗಮನ ಹರಿಸುತ್ತಿಲ್ಲ ಎಂದು ಆರೋಪ ಮಾಡಿದರು. ನ್ಯಾಯಾಂಗ ವಿಭಾಗದಲ್ಲಿ ಹೋರಾಟ ಮಾಡಲು ಪಂಚಮಸಾಲಿ ವಕೀಲರ ಪರಿಷತ್ ರಚನೆ ಮಾಡಲಾಗಿದೆ ಎಂದು ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರ ಗಮನ ಹರಿಸಲಿಲ್ಲ. ಇಡೀ ಲಿಂಗಾಯತ ಸಮಾಜಕ್ಕಾದರೂ ಮೀಸಲಾತಿ ನೀಡಬೇಕೆಂದು ಒತ್ತಾಯ ಮಾಡಿದರು ಉಪಯೋಗವಾಗಲಿಲ್ಲ. ಬೆಳಗಾವಿಯ ಅಧಿವೇಶನದ ವೇಳೆ ನಮ್ಮ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಹಿಂದಿನ ಯಾವುದೇ ಸರ್ಕಾರ ಇಂತಹ ಕೃತ್ಯ ಮಾಡಿಲ್ಲ. ಇದನ್ನು ಹೈಕೋರ್ಟ್ನಲ್ಲಿ ದಾವೆ ಹೂಡಿದಾಗ ನ್ಯಾಯಾಂಗ ತನಿಖೆಗೆ ಆದೇಶವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಇದೇ ವೇಳೆ ಸಾಮಾಜಿಕ ಆರ್ಥಿಕ ಔದ್ಯೋಗಿಕ ಸಮೀಕ್ಷೆಯ ವರದಿ ವಿರುದ್ಧವೂ ಸ್ವಾಮೀಜಿ ಕಿಡಿಕಾರಿದರು. ಮುಂದಿನ ಜಾತಿಗಣತಿ ವೇಳೆ ಎಲ್ಲರೂ ಸರಿಯಾಗಿ ಜಾತಿಯನ್ನು ನಮೂದು ಮಾಡಬೇಕು. 2028 ರ ಚುನಾವಣೆ ಪೂರ್ವದಲ್ಲೇ ಗ್ರಾಮ ಗ್ರಾಮಗಳಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ
ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ, ಮುಂದಿನ ರಾಷ್ಟ್ರಮಟ್ಟದ ಜನಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಏನು ಬರೆಸಬೇಕು ಹಾಗೂ ಇತರೆ ಹೋರಾಟದ ಕುರಿತು ಸಭೆ ಮಾಡಲಾಗಿದೆ. ವಕೀಲರ ಪರಿಷತ್ ಮೂಲಕ ಯಾವುದನ್ನು ಬರೆಸಬೇಕೆಂದು ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ 2 ಡಿ ಮೀಸಲಾತಿ ನೀಡಲಾಗಿದೆ. 2ಡಿ ಹೋರಾಟ ಪಂಚಮಸಾಲಿ ಅಷ್ಟೇಯಲ್ಲ ಇತರೆ ಸಮಾಜಗಳನ್ನು ಒಳಗೊಂಡಿದೆ. ಹಾಗಾಗಿ 2ಡಿ ಮೀಸಲಾತಿ ಸಿಗಬೇಕಾದರೆ ಏನೆಲ್ಲಾ ಹೋರಾಟ ಮಾಡಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಬಹಳ ಅಪಮಾನ ಮಾಡಿದ್ದಾರೆ. ನಮ್ಮ ಮೀಸಲಾತಿ ಬೇಡಿಕೆ ಅಸಂವಿಧಾನ ಎಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯದವರಿಗೆ ಶೇಕಡಾ 4 ರಷ್ಟು ಮೀಸಲಾತಿ ಕೊಟ್ಟಿದ್ದು ಅಸಂವಿಧಾನ. ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಕೊಟ್ಟಿರುವುದೆ ಅಸಂವಿಧಾನವೆಂದು ಹೇಳಿದರು.
ಸಿಎಂ ಹಾಗೂ ನಮ್ಮ ಸಮುದಾಯದ ಕೆಲ ನಾಯಕರು ಷಡ್ಯಂತರ ಮಾಡಿ ನಮ್ಮ ಒಗ್ಗಟ್ಟು ಒಡೆಯಲು ಬೆಳೆಗಾವಿಯಲ್ಲಿ ನಮ್ಮ ಮೇಲೆ ಹಿಂಸೆ ಮಾಡಿದ್ದಾರೆ. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಮುಂದೆ ಮೀಸಲಾತಿಯನ್ನು ನಾವು ಕೇಳಲ್ಲ ಎಂದು ಯತ್ನಾಳ ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ವಕೀಲರ ಪರಿಷತ್ ವಿಜಯಪುರ ಜಿಲ್ಲಾದ್ಯಕ್ಷ, ವಿಜಯಪುರ ಸಭೆಯ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸಭೆ ಮಾಡುವ ಮೂಲಕ ಹೋರಾಟದ ಜಾಹೃತಿ ಮಾಡುತ್ತೇವೆ ಎಂದರು.
ಇಂದಿನ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪಂಚಮಸಾಲಿ ಸಮಾಜದ 400 ಕ್ಕೂ ಆಧಿಕ ನ್ಯಾಯವಾದಿಗಳು ಭಾಗಿಯಾಗಿದ್ದರು. ಸಭೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು ಕಂಡುಬಂತು. ಈ ನಿಟ್ಟಿನಲ್ಲಿ ಮುಂದಿನ ಹೋರಾಟ ನಡೆಸುವುದರ ಬಗ್ಗೆ ಚರ್ಚೆಗಳಾದವು. ಈ ಮೂಲಕ ಮತ್ತೆ 2ಎ ಮೀಸಲಾತಿ ಹೋರಾಟಕ್ಕೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಹೋರಾಟದ ತೀವ್ರತೆ ಹೆಚ್ಚಾಗಲಿದೆ.







