ಬೆಳಗಾವಿ ಅಧಿವೇಶನ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟಕ್ಕೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 9 ಮತ್ತು 10ರಂದು ಹೋರಾಟದ ವಾಹನಗಳ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳಗಾವಿ, ಡಿಸೆಂಬರ್ 08: ಸುವರ್ಣಸೌಧದಲ್ಲಿ ನಾಳೆಯಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ. 2ಎ ಮೀಸಲಾತಿಗಾಗಿ ಆಗ್ರಹಿಸಿ ಡಿಸೆಂಬರ್ 10 ರಂದು ಶಕ್ತಿಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಪಂಚಮಸಾಲಿ (Panchmasali) ಸಮುದಾಯ ಕರೆ ನೀಡಿತ್ತು. ಆದರೆ ಇದೀಗ ಡಿ.9, 10ರಂದು ಹೋರಾಟದ ವಾಹನ ಬೆಳಗಾವಿ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಆ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರ್ಕಾರ ಶಾಕ್ ಕೊಟ್ಟಿದೆ.
ಬಸವ ಜಯಮೃತ್ಯುಂಜಯಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ. ಡಿ.10ರಂದು ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆಗೆ ನಿರ್ಧರಿಸಿದ್ದರು. ಆದರೆ ಹೋರಾಟಕ್ಕೆ ಬರುವ ಟ್ರ್ಯಾಕ್ಟರ್, ಕ್ರೂಸರ್ ವಾಹನಗಳಿಗೆ ನಿರ್ಬಂಧ ಹೇರಿ ಡಿಸಿ ಮೊಹಮ್ಮದ್ ರೋಷನ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ಬೆಳಗಾವಿ ಚಳಿಗಾಲ ಅಧಿವೇಶನ: ವಿಪಕ್ಷ ಬಿಜೆಪಿಗೆ ಮಗ್ಗಲು ಮುಳ್ಳಾದ ಯತ್ನಾಳ್..ಅಶೋಕ್ ಹೊಸ ಪ್ಲ್ಯಾನ್
ಇನ್ನು ಅಧಿವೇಶನ ಹಿನ್ನೆಲೆ ಸಿಎಂ, ಡಿಸಿಎಂ, ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಜೊತೆಗೆ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಆಗಮಿಸಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿಎನ್ಎಸ್ಎಸ್ ಕಾಯ್ದೆಯ ಕಲಂ 163ರ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹೋರಾಟದಲ್ಲಿ ಮುಂದುವರೆದ ಬಿರುಕು: ಅಂತರ ಕಾಯ್ದುಕೊಂಡ ಕಾಂಗ್ರೆಸ್ ನಾಯಕರು
ಅಧಿವೇಶನ ಹೊತ್ತಲ್ಲಿ 2ಎ ಮೀಸಲಾತಿಗಾಗಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹೋರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಕೊನೆ ಹಂತದ ತಯಾರಿ ಆದರೂ ಹೋರಾಟದಲ್ಲಿ ಬಿರುಕು ಮುಂದುವರೆದಿದೆ. ಹೌದು. ಸಚಿವ ಶಿವಾನಂದ ಪಾಟೀಲ್, ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿ ಕಾಂಗ್ರೆಸ್ ಶಾಸಕರು ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮುಂಚೂಣಿಯಲ್ಲಿದ್ದವರು ಇದೀಗ ಹೋರಾಟದಿಂದ ದೂರ ಉಳಿದಿದ್ದಾರೆ. ನಿನ್ನೆಯಷ್ಟೇ ಖಾಸಗಿ ಹೋಟೆಲ್ನಲ್ಲಿ ನಡೆದ ಮಹತ್ವದ ಸಭೆಗೂ ಕಾಂಗ್ರೆಸ್ ಶಾಸಕರು ಗೈರಾಗಿದ್ದರು. ಹೀಗಾಗಿ ಬಿಜೆಪಿ ಪಂಚಮಸಾಲಿ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದಾರೆ.
ಸರ್ಕಾರದ ವಿರುದ್ಧ ಸ್ವಾಮೀಜಿ ಕಿಡಿ
ಎರಡರಿಂದ ಮೂರು ಲಕ್ಷ ಜನರು, 5 ಸಾವಿರ ಟ್ರ್ಯಾಕ್ಟರ್ದೊಂದಿಗೆ ಮುತ್ತಿಗೆ ಪ್ಲ್ಯಾನ್ ಮಾಡಲಾಗಿದೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಸಿ ಪಾಟೀಲ್, ಈರಣ್ಣಾ ಕಡಾಡಿ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜು ಮಾಡಲಾಗಿದೆ. ಸರ್ಕಾರ, ಸಚಿವರು, ಕಾಂಗ್ರೆಸ್ ಶಾಸಕರ ವಿರುದ್ಧ ಸ್ವಾಮೀಜಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಮ್ಮ ಹೋರಾಟ ತಡೆಯಲು ಬೆದರಿಕೆ ಹಾಕುತ್ತಿದ್ದಾರೆ, ಮುಖ್ಯಮಂತ್ರಿಗಳೇ ಇದು ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು: ಮೃತ್ಯುಂಜಯ ಶ್ರೀ
ಹೋರಾಟ ಹತ್ತಿಕ್ಕಲು ಯತ್ನಿಸಿದರೆ ಅಲ್ಲಲ್ಲೇ ರಸ್ತೆ ಬಂದ್ ಮಾಡಿ ಹೋರಾಡಲು ಯತ್ನಾಳ್ ಕರೆ ನೀಡಿದ್ದು, ಸಂಪುಟ ಪುನರ್ ರಚನೆ ಸಿಎಂಗೆ ಬಹುಪರಾಕ್ ಎನ್ನಲು ಕೆಲವರು ಸೈಲೆಂಟ್ ಆಗಿದ್ದಾರೆ. ಯಾರೋ ಒಬ್ಬರಿಂದ ಹೋರಾಟ ನಿಲ್ಲಲ್ಲ ಎಂದು ಸಿಸಿ ಪಾಟೀಲ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.