ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಕ್ಕೆ ಶಿವಸೇನೆ ಬೆಂಬಲ
ಬೆಳಗಾವಿಯಲ್ಲಿ ನಡೆಯಲಿರುವ 2024ರ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳ ಆಯೋಜಿಸಲು ಯೋಜಿಸಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ಈ ಮೇಳಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಗಡಿ ವಿವಾದ ಹಿನ್ನೆಲೆಯಲ್ಲಿ ಈ ಘಟನೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.
ಬೆಳಗಾವಿ, ಡಿಸೆಂಬರ್ 04: ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಡಿಸೆಂಬರ್ 9 ರಿಂದ 20ವರೆಗೆ 2024ನೇ ಸಾಲಿನ ಚಳಿಗಾಲದ ಅಧಿವೇಶನ (Winter session) ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಬೆಳಗಾವಿಯಲ್ಲಿ ಮಹಾಮೇಳ ನಡೆಸಲು ಮುಂದಾಗಿದೆ. ಎಂಇಎಸ್ನ ಮಹಾಮೇಳಕ್ಕೆ ಉದ್ಧವ ಠಾಕ್ರೆ ಬಣದ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಅಧಿವೇಶನ ಮೊದಲ ದಿನವೇ ಅನುಮತಿ ಇಲ್ಲದೆ ಮಹಾಮೇಳ ನಡೆಸಲು ಎಂಇಎಸ್ ಸಿದ್ಧತೆ ನಡೆಸಿದೆ.
ಈ ಮಹಾಮೇಳ ನಡೆಸಲು ಅನುಮತಿ ನೀಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಕೊಲ್ಲಾಪುರ ಜಿಲ್ಲಾಧಿಕಾರಿಗೆ ಉದ್ಧವ ಠಾಕ್ರೆ ಬಣದ ಶಿವಸೇನೆ ಮನವಿ ಸಲ್ಲಿಸಿದೆ. ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಆದರೆ, ಬೆಳಗಾವಿಯಲ್ಲಿ ಮಹಾಮೇಳ ಮಾಡಲು ಎಂಇಎಸ್ಗೆ ಮೂರು ವರ್ಷದಿಂದ ಅಲ್ಲಿನ ಜಿಲ್ಲಾಡಳಿತ ಅನಮತಿ ನೀಡುತ್ತಿಲ್ಲ. ಮಹಾರಾಷ್ಟ್ರದ ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸುತ್ತಿದ್ದಾರೆ. ಈ ಬಾರಿ ಎಂಇಎಸ್ ಮಹಾಮೇಳಕ್ಕೆ ಮತ್ತು ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಕ್ಕೆ ಅನುಮತಿ ಕೊಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಸಜ್ಜು: 2 ವಾರಕ್ಕಿಂತ ಹೆಚ್ಚು ದಿನ ಅಧಿವೇಶನ ನಡೆಸಲು ಮನವಿ
ಈ ಬಾರಿಯೂ ಎಂಇಎಸ್ ಮಹಾಮೇಳಗೆ ಅನುಮತಿ ಕೊಡದಿದ್ದರೇ, ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಬರುವ ಕರ್ನಾಟಕದ ಸಚಿವರು ಮತ್ತು ಶಾಸಕರಿಗೆ ನಾವು ಅಡ್ಡಿ ಪಡಿಸುತ್ತೇವೆ. ಡಿಸೆಂಬರ್ 9 ರಂದು ಎರಡೂ ರಾಜ್ಯಗಳ ಮಧ್ಯದ ರಸ್ತೆ ಬಂದ್ ಮಾಡುತ್ತೇವೆ. ಕರ್ನಾಟಕದ ರಾಜಕಾರಣಿಗಳು ಮಹಾರಾಷ್ಟ್ರ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ. ಈ ಮೂಲಕ ಉದ್ಧವ ಠಾಕ್ರೆ ಬಣದ ಶಿವಸೇನೆ ಪರೋಕ್ಷವಾಗಿ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕಿದೆ.
ಗಡಿ ವಿಚಾರವಾಗಿ ಎಂಇಎಸ್ ಕರ್ನಾಟಕದ ಜೊತೆ ಕ್ಯಾತೆ ತೆಗೆಯುತ್ತಾ ಬಂದಿದೆ. ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಮುಂದಾಗುತ್ತದೆ. ಆದರೆ, ಬೆಳಗಾವಿ ಜಿಲ್ಲಾಧಿಕಾರಿಯವರು ಇದಕ್ಕೆ ಅನುಮತಿ ನೀಡುವುದಿಲ್ಲ. ಅನುಮತಿ ಇಲ್ಲದಿದ್ದರೂ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತದೆ.
1,500 ಮಂದಿ ವಿರುದ್ಧ ದೂರು
ಈ ಬಾರಿ ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಜಿ ಶಾಸಕ ಮನೋಹರ ಕಿಣೇಕರ, ಎಮ್ಇಡಿ ಮುಖಂಡ ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ, ವಿಕಾಸ ಕಲಘಟಗಿ ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 am, Wed, 4 December 24