AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ: ಕಾಶಪ್ಪನವರ್ ಸೂಚನೆ ಮೇರೆಗೆ ಕ್ರಮ! ಈವರೆಗೆ ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ

ಅದು ನಾಡಿನ ದೊಡ್ಡ ಸಮಾಜದ ಪೀಠ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ, ಪಂಚಮಸಾಲಿ ಗುರುಪೀಠದ ಹೆಡ್ ಆಫೀಸ್‌. ಆದರೆ ಅದೇ ಪೀಠಕ್ಕೆ ರಾತ್ರೋ ರಾತ್ರಿ ಬೀಗ ಬಿದ್ದಿದೆ! ಕೂಡಲಸಂಗಮ ಪೀಠಕ್ಕೆ ಬೀಗ ಬಿದ್ದಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ. ಏನಿದು ವಿವಾದ? ಬೀಗ ಹಾಕಿಸಿದ್ದು ಯಾರು? ಆಮೇಲೇನಾಯ್ತು? ಎಲ್ಲ ವಿವರಗಳು ಇಲ್ಲಿವೆ.

ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ: ಕಾಶಪ್ಪನವರ್ ಸೂಚನೆ ಮೇರೆಗೆ ಕ್ರಮ! ಈವರೆಗೆ ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ
ಕೂಡಲಸಂಗಮದ ಪಂಚಮಸಾಲಿ ಪೀಠ
ರವಿ ಹೆಚ್ ಮೂಕಿ, ಕಲಘಟಗಿ
| Updated By: Ganapathi Sharma|

Updated on: Jul 15, 2025 | 8:18 AM

Share

ಬಾಗಲಕೋಟೆ, ಜುಲೈ 15: ಪಂಚಮಸಾಲಿ ಶ್ರೀಗಳು, ಅದರಲ್ಲೂ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು (Basava Jaya Mruthyunjaya Swamiji), ಸಮಾಜದ ಏಳಿಗೆಗಿ ಹೋರಾಟ ನಡೆಸುತ್ತಿದ್ದಾರೆ. ಸಮಾಜಕ್ಕೆ ‘2 ಎ’ ಮೀಸಲಾತಿ (2 A Reservation) ಕೊಡಿಸುತ್ತೇನೆ ಎಂದು ಪಣ ತೊಟ್ಟಿರುವ ಶ್ರೀಗಳು ಜಿಲ್ಲೆ ಜಿಲ್ಲೆಗಳಲ್ಲಿ ಸಂಘಟನೆ ಮಾಡುತ್ತಿದ್ದರೆ, ಅತ್ತ ಕೂಡಲ ಸಂಗಮದಲ್ಲಿರುವ ಅವರ ಪೀಠಕ್ಕೆ ಬೀಗ ಬಿದ್ದಿದೆ. ಕಾಂಗ್ರೆಸ್ (Congress) ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar)ಸೂಚನೆ ಮೇರೆಗೆ ಪೀಠಕ್ಕೆ ಬೀಗ ಜಡಿಯಲಾಗಿದ್ದು, ನಂತರ ಪೀಠದ ಬೀಗ ಒಡೆದ ಆರೋಪದ ಮೇರೆಗೆ 5 ಜನರ ವಿರುದ್ಧ ಎಫ್​ಐಆರ್ ಕೂಡ ಆಗಿದೆ.

ವಿವಾದಕ್ಕೆ ಕಾರಣವೇನು?

ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ತೊಡೆತಟ್ಟಿ ನಿಂತಿದ್ದ ಕಾಂಗ್ರೆಸ್ ಪಂಚಮಸಾಲಿ ನಾಯಕರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ವಿಜಯಾನಂದ ಕಾಶಪ್ಪನರ್‌, ಹೆಬ್ಬಾಳ್ಕರ್‌, ಬಿಜೆಪಿ ನಾಯಕರಾದ ಯತ್ನಾಳ್‌ ಮುಂಚೂಣಿ ಹೋರಾಟ ನಡೆಸಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆ ಪಕ್ಷದ ನಾಯಕರು ಹೋರಾಟದಿಂದ ಪಲಾಯನ ಮಾಡಿದ್ದರು. ಆದರೆ, ಅಂದು ಬಿಜೆಪಿಯಲ್ಲಿದ್ದ ಪಂಚಮಸಾಲಿ ನಾಯಕ ಯತ್ನಾಳ್ ಹಾಗೂ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಒಗ್ಗಟ್ಟಿನ ಮಂತ್ರ ಸಾರಿದ್ದರು. ಇದು ವಿಜಯಾನಂದ ಕಾಶಪ್ಪನವರ ಹಾಗೂ ಪಂಚಮಸಾಲಿ ಶ್ರೀ ಮಧ್ಯೆ ಬಿರುಕು ಮೂಡಲು ಕಾರಣವಾಗಿತ್ತು. ಕೆಲ ತಿಂಗಳ ಹಿಂದೆ ಪಂಚಮಸಾಲಿ ಪೀಠಾಧಿಪತಿ ಸ್ಥಾನದಿಂದ ಸ್ವಾಮೀಜಿ ಕೆಳಗಿಳಿಸುವ ವಿಚಾರ ಕೂಡ ಚರ್ಚೆಗೆ ಬಂದಿತ್ತು. ಈಗ ಪಂಚಮಸಾಲಿ ಪೀಠಕ್ಕೆ ಕಾಶಪ್ಪನವರ ಬೆಂಬಲಿಗರು ರಾತ್ರೋರಾತ್ರಿ ಬೀಗ ಹಾಕಿದ್ದಾರೆ. ಇದು ಪಂಚಮಸಾಲಿ ಸಮುದಾಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಪೀಠಕ್ಕೆ ಬೀಗ ಜಡಿದಿದ್ದೇಕೆ?

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೋರಾಟ ತಣ್ಣಗಾಗಿತ್ತು. ಆ ಬಳಿಕ ಸ್ವಾಮೀಜಿ ಹಾಗೂ ಕಾಶಪ್ಪನವರ್‌ ನಡುವಿನ ಸಂಬಂಧವೂ ಹಳಸಿತ್ತು. ಇದರ ನಡುವೆ ಮಾತನಾಡಿದ್ದ ಕಾಶಪ್ಪನವರ್‌, ಅನಿವಾರ್ಯ ಬಂದರೆ ಪೀಠದಿಂದಲೇ ಅವರನ್ನು ಇಳಿಸುತ್ತೇವೆ ಎಂದಿದ್ದರು. ಈ ಮಾತಿನ ನಡುವೆ ಕೂಡಲ ಸಂಗಮದ ಪೀಠಕ್ಕೆ ಬೀಗ ಬಿದ್ದಿದೆ.

ಇದನ್ನೂ ಓದಿ
Image
ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 34 ಐಪಿಎಸ್ ಅಧಿಕಾರಿಗಳ ವರ್ಗ
Image
ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ
Image
ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಆಟೋ ಪ್ರಯಾಣದ ದರ ಹೆಚ್ಚಳ!
Image
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
Lingayat Panchamasali Peetha Lock

ಕೂಡಲಸಂಗಮದ ಪಂಚಮಸಾಲಿ ಪೀಠದ ಬಾಗಿಲುಗಳಿಗೆ ಬೀಗ ಹಾಕಿರುವುದು

ನಾಲ್ಕು ದಿನದ ಹಿಂದೆ ಹಾಕಿದ್ದ ಬೀಗವನ್ನು ಭಾನುವಾರ ತೆಗೆತಯುವ ಯತ್ನ ಆಗಿದೆ ಎಂದು ಕಾಶಪ್ಪನವರ್‌ ಬೆಂಬಲಿಗರು ಹುನಗುಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ . ಬೀಗ ಒಡೆದ ಆರೋಪದಲ್ಲಿ ಸ್ವಾಮೀಜಿ ಕಡೆಯ ಐವರ ಮೇಲೆ ಎಫ್‌ಐಆರ್‌ ದಾಖಲಾಗಿದೆ . ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಜಯಮೃತ್ಯಂಜಯ ಶ್ರೀಗಳು ಹೇಳಿದ್ದೇನು?

ಘಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಯಮೃತ್ಯಂಜಯ ಶ್ರೀಗಳು, ನಾನು ಸಮಾಜ ಸಂಘಟನೆ ಹಾಗೂ ಮೀಸಲಾತಿ ಹೋರಾಟಕ್ಕೆ ಸಮಾಜದ ಜನರನ್ನು ಸಿದ್ದತೆಗೊಳಿಸಲು ಜಿಲ್ಲೆ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ. ಈ ಹಿನ್ನೆಲೆ ಪೀಠದ ಕಡೆಗೆ ಹೋಗಲು ಆಗಿಲ್ಲ. ನಾನು ಹೊರಗಡೆ ಇದ್ದಾಗ ಅಲ್ಲಿ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಕೂಡಲಸಂಗಮದ ಪೀಠಕ್ಕೆ ಹೋದ ಮೇಲೆಯೇ ನೈಜ ಸ್ಥಿತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಅನೈತಿಕ ಚಟುವಟಿಕೆ ತಾಣವಾಗಿದ್ದಕ್ಕೆ ಬೀಗ: ಕಾಶಪ್ಪನವರ್

ಪೀಠಕ್ಕೆ ಬೀಗ ಹಾಕಿರುವ ಬಗ್ಗೆ ದೂರವಾಣಿ ಮೂಲಕ ‘ಟಿವಿ9’ ಜತೆ ಮಾತನಾಡಿ ಸ್ಪಷ್ಟನೆ ನೀಡಿರುವ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್‌, ನಾನು ಪೀಠದ ಟ್ರಸ್ಟ್ ಅದ್ಯಕ್ಷನಾಗಿದ್ದೇನೆ. ನನ್ನ ಟ್ರಸ್ಟ್ ಕಾಪಾಡಿಕೊಳ್ಳುವುದು ನನ್ನ ಕರ್ತವ್ಯ. ಸ್ವಾಮೀಜಿಗಳು ಅದನ್ನು ಟೂರಿಂಗ್ ಟಾಕೀಸ್ ತರಹ ಮಾಡಿದ್ದಾರೆ. ಪೀಠದಲ್ಲಿ ಅವರು ಇರುವುದು ಕಡಿಮೆ. ಹೀಗಾಗಿ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿತ್ತು. ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಬೀಗ ಹಾಕಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್

ಒಟ್ಟಿನಲ್ಲಿ, ಸಮಾಜಕ್ಕೆ ‘2ಎ’ ಮೀಸಲಾತಿ ಕೊಡಿಸುತ್ತೇನೆ ಎಂದು ಶ್ರೀಗಳು ಹೋರಾಟ ನಡೆಸುತ್ತಿದ್ದರೆ, ಇತ್ತ ಪೀಠಕ್ಕೆ ಕಾಶಪ್ಪನವರ್‌ ಬೀಗ ಹಾಕಿಸಿದ್ದಾರೆ. ಈ ವಿವಾದ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ