Latest Breaking Karnataka News Highlights: ಹೊಸ ಸರ್ಕಾರ ರಚನೆಯಾಗಿದ್ದು ಹೊಸ, ಹೊಸ ಯೋಜನೆಗಳು ಜಾರಿಯಾಗಿವೆ. ಇದರ ನಡುವೆ ಈ ಹಿಂದೆ ಬಿಜೆಪಿ ಸರ್ಕಾರ(BJP Government) ಜಾರಿ ಮಾಡಿದ್ದ ಕೆಲ ಯೋಜನೆ, ಆದೇಶ, ಕಾನೂನುಗಳಿಗೆ ಕತ್ತರಿ ಹಾಕಲು ನೂತನ ಕಾಂಗ್ರೆಸ್ ಸರ್ಕಾರ(Congress Government) ಸಜ್ಜಾಗ್ತಿದೆ. ಅಲ್ಲದೆ ಗೋಹತ್ಯೆ ನಿಷೇಧ ಕಾಯ್ದೆ(Cattle slaughter) ರದ್ದು ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್(Minister Venkatesh) ಹೇಳಿದ್ದಾರೆ. ಅಷ್ಟೇ ಅಲ್ಲ ಕೋಣ, ಎಮ್ಮೆ ಕಡಿದ್ರೆ, ಆಕಳನ್ನ ಯಾಕೆ ಕಡಿಯಬಾರ್ದು ಅಂತಾ ಪ್ರಶ್ನಿಸಿದ್ದಾರೆ. ಸಚಿವರ ಇದೇ ಮಾತು ಕೇಸರಿ ಪಡೆ ಕೆಂಡವಾಗುವಂತೆ ಮಾಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಕೆಲ ನಾಯಕರು, ಮುಖಂಡರು, ಮಾಜಿ ಶಾಸಕರು ಮಾತಿನಲ್ಲೇ ಸಿಡಿದೆದ್ದಿದ್ದಾರೆ. ಇನ್ನು ಮತ್ತೊಂದೆಡೆ ಜೂನ್ 9 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯದ ರಾಜಕೀಯ ಬೆಳವಣಿಗೆ ಹಾಗೂ ರಾಜ್ಯದ ಮಳೆ ಅವಾಂತರದ ಕ್ಷಣ ಕ್ಷಣದ ಸುದ್ದಿಯನ್ನು ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಚಿತ್ರದುರ್ಗ: ಒಳ ಮೀಸಲಾತಿ ಜಾರಿಯಿಂದ ಬಿಜೆಪಿಗೆ ಸೋಲು ಎಂದು ಹೇಳಿಕೆ ಖಂಡಿಸಿ ಹೊಳಲ್ಕೆರೆ ಪಟ್ಟಣದಲ್ಲಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ತಾಲೂಕು ಮಾದಿಗ ಸಮುದಾಯದಿಂದ ಪ್ರತಿಭಟನೆ ನಡೆಯಿತು. ಬಿಜೆಪಿ ಶಾಸಕ ಎಂ.ಚಂದ್ರಪ್ಪ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ, ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಲಾಯಿತು. ಕೇಂದ್ರ ಸಚಿವ ನಾರಾಯಣಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ ಒತ್ತಡ ಹಾಕಿ ಒಳಮೀಸಲಾತಿ ಜಾರಿಗೆ ತಂದಿದ್ದೇ ಬಿಜೆಪಿ ಸೋಲಿಗೆ ಕಾರಣವೆಂದು ಶಾಸಕರು ಹೇಳಿಕೆ ನೀಡಿದ್ದರು.
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಾಂಗ್ರೆಸ್ ಸಂಸದರು, ಶಾಸಕರ ಸಭೆ ನಡೆಯುತ್ತಿದೆ. ಕೆಪಿಸಿಸಿಯ ಇಂದಿರಾಗಾಂಧಿ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಭರೇಗೌಡ, ಸಂಸದ ಡಿ.ಕೆ ಸುರೇಶ್, ಶಾಸಕರಾದ ಎನ್‌ಎ ಹ್ಯಾರಿಸ್, ಎಸಿ ಶ್ರೀನಿವಾಸ್, ಜಮೀರ್ ಅಹ್ಮದ್, ಪಿ.ಆರ್ ರಮೇಶ್, ಸಲೀ ಅಹ್ಮದ್, ಯುಬಿ ವೆಂಕಟೇಶ್ ಸೇರಿದಂತೆ ಕೈ ನಾಯಕರು ಉಪಸ್ಥಿತರಿದ್ದಾರೆ. ಸಚಿವ ಕೆಜೆ ಜಾರ್ಜ್, ಬೈರತಿ ಸುರೇಶ್, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಸಭೆಗೆ ಗೈರಾಗಿದ್ದಾರೆ.
ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಹೊಣೆ ಸ್ಥಳೀಯರಿಗೆ ಸಿಗಲಿದೆ ಎಂದು ಹೇಳುವ ಮೂಲಕ ಸಚಿವ ಡಿ.ಸುಧಾಕರ್ ಅವರು ಪರೋಕ್ಷವಾಗಿ ನಾನೇ ಜಿಲ್ಲಾ ಉಸ್ತುವಾರಿ ಸಚಿವ ಎಂದರು. ನಗರದಲ್ಲಿ ಮಾತನಾಡಿದರು. ಖಾತೆ ಹಂಚಿಕೆ ವಿಚಾರದಲ್ಲಿ ಕೆಲ ಸಚಿವರಿಂದ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇವೆಲ್ಲಾ ಸಹಜ, ಎಲ್ಲವೂ ಸರಿ ಹೋಗುತ್ತದೆ ಎಂದರು. ಹಿಟ್ಲರ್ ಸರ್ಕಾರವೆಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ ಸರಿಯಾಗಿ ಪಾಠ ಕಲಿಸಿದ್ದಾರೆ, ಸೂಲಿಬೆಲೆಗೆ ಪೆಟ್ಟು ನೀಡಿದ್ದಾರೆ. ಸೋತು ಮನೆಯಲ್ಲಿ ಮಲಗಿದ್ದಾರೆ, ಈಗೇನು ಮಾತನಾಡುತ್ತಾರೆ ಎಂದರು.
ಗದಗ: ಬಿರುಗಾಳಿಗೆ ಆಲದ ಮರ ಹಾಗೂ ವಿದ್ಯುತ್ ಕಂಬ ಧರೆಗುರುಳಿದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ 2 ಬೈಕ್, ಟಂಟಂ ವಾಹನ ಜಖಂಗೊಂಡಿದೆ.
ಬೆಂಗಳೂರು: ವಿದ್ಯುತ್ ಉಚಿತ ಯೋಜನೆ ಜಾರಿ ವಿಚಾರವಾಗಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಇಂಧನ ಸಚಿವ ಕೆಜೆ ಜಾರ್ಜ್ ಸಭೆ ನಡೆಸುತ್ತಿದ್ದಾರೆ. ಕೆಆರ್ ಸರ್ಕಲ್ ಬಳಿಯ ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಸಭೆ ನಡೆಯುತ್ತಿರುವ ಸಭೆಯಲ್ಲಿ ಸಚಿವರು ನಿಬಂಧನೆಗಳಿಗೆ ಸಂಬಂಧಿಸಿ ಚರ್ಚೆ ನಡೆಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಷರತ್ತು ಹಾಕಬಾರದು ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಜಾರಿ ಮಾಡಲು ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಒಂದು ಕಡೆ ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು ಕೊಡುತ್ತಿದ್ದಾರೆ. ಬಿಜೆಪಿ ಕಾದು ನೋಡುತ್ತಿದೆ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ ಎಂದರು. ಚುನಾವಣಾ ಸಂಧರ್ಭದಲ್ಲಿ ಏನೇನು ಆಶ್ವಾಸನೆ ಕೊಟ್ಟಿದ್ದರು ಜನರು ಸಾಕಷ್ಟ ನೀರಿಕ್ಷೆಯಲ್ಲಿದ್ದಾರೆ. ಸಿಎಂ ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ ಎಂದರು.
ಹಾಸನ: ರಾಜ್ಯ ಸರ್ಕಾರದಿಂದ ಗೋ ಹತ್ಯೆ ನಿಷೆಧ ಕಾಯಿದೆ ರದ್ದು ಅಥವಾ ತಿದ್ದುಪಡಿ ಮಾಡಲು ನಿರ್ಧರಿಸಿರುವುದನ್ನು ಖಂಡಿಸಿ ಹಾಸನದಲ್ಲಿ ಬಿಜೆಪಿ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಾಸನದ ಡಿಸಿ ಕಛೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗು ಕಾಂಗ್ರೇಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಗೋಹತ್ಯೆ ನಿಷೇಧ ರದ್ದು ಮೂಲಕ ಬಹುಜನರ ಭಾವನೆಗೆ ದಕ್ಕೆ ತರಲಾಗುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆ ರದ್ದು ಮಾಡೋ ನಿರ್ದಾರ ಕೈಬಿಡುವಂತೆ ಅಗ್ರಹ ಮಾಡಿದರು. ಈ ಬಗ್ಗೆ ಬಿಜೆಪಿ ಮುಖಂಡರು ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಹಿಂದೆ ಮುಂದೆ ವಿಚಾರ ಮಾಡದೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದರು. ಅಧಿಕಾರ ಹಿಡಿತದ ನಂತರ ಕರ್ನಾಟಕದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ರಾಜೀವ್ ಟೋಪಣ್ಣವರ್ ಹೇಳಿದರು. ಆಮ್ ಆದ್ಮಿ ಪಕ್ಷ ಸರ್ಕಾರ ದೆಹಲಿಯಲ್ಲಿ ಸತತ 10 ವರ್ಷಗಳಿಂದ 200 ಯೂನಿಟ್ ಫ್ರೀ ಕೊಡುತ್ತಿದೆ. ಪಂಜಾಬ್‌ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. 200 ಯೂನಿಟ್‌ಗಿಂತ ಒಂದೇ ಯೂನಿಟ್ ಜಾಸ್ತಿ ಆದರೂ ಪೂರ್ತಿ ಬಿಲ್ ಕಟ್ಟಬೇಕಾದ ವ್ಯವಸ್ಥೆ ಇದೆ. ದೆಹಲಿಯಲ್ಲಿ ಪವರ್ ಪ್ಲಾಂಟ್ಸ್ ಇಲ್ಲ, ಹೊರಗಿಂದ ವಿದ್ಯುತ್ ಖರೀದಿಸಿ ಪೂರೈಕೆ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತದೆ, ದೇಶದಲ್ಲೇ ಎರಡನೇ ಸ್ಥಾನ ಇದೆ. ದೆಹಲಿ ಮಾದರಿಯಲ್ಲಿ ಉಚಿತ ವಿದ್ಯುತ್ ನೀಡಿದರೆ ಯೋಜನೆ ಸಫಲವಾಗುತ್ತದೆ. ಈ ಯೋಜನೆ ಜಾರಿ ಮಾಡುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗುತ್ತಿದೆ. ಸರಾಸರಿ ನೋಡುತ್ತೇವೆ ಅಂತೆಲ್ಲಾ ಮಾತನಾಡುವುದನ್ನ ಬಂದ್ ಮಾಡಬೇಕು ಎಂದರು.
ಹಾಸನ: ರಾಜ್ಯದಲ್ಲಿ ಉಚಿತ ಕರೆಂಟ್ ಘೋಷಣೆ ಮಾಡಿ ದರ ಏರಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಭೈರತಿ ಸುರೇಶ್, ವಿದ್ಯುತ್ ದರ ಏರಿಕೆ ವಿಚಾರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ನಾವು ಬಂದು ಕೇವಲ ಹದಿನೈದು ದಿನ ಆಗಿದೆ ದರ ಏರಿಕೆಗೆ ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಹಳೆ ಸರ್ಕಾರ ಮಾಡಿರುವುದು, ಅದನ್ನ ಪರಿಶೀಲನೆ ಮಾಡಬಹುದು ಅನ್ನಿಸುತ್ತದೆ. ಉಚಿತ ಕೊಡುಗೆಯಿಂದ ಅಭಿವೃದ್ಧಿಗೆ ಹಿನ್ನಡೆ ಆಗುವುದಿಲ್ಲ.. ದೇಶದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದರೆ ಅದು ಕಾಂಗ್ರೇಸ್ ಸರ್ಕಾರ ಮಾತ್ರ ಎಂದರು. ಉಚಿತ ಕೊಡುಗೆಯಿಂದ ರಾಜ್ಯ ದಿವಾಳಿ ಆಗಲಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಆರೋಪ ಮಾಡುವವರು ಹಿಂದೆ ಯಾಕೆ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿ ಅಂತಾ ಪ್ರಶ್ನಿಸಿದರು.
ಹಾಸನದ ಡಿಸಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಹಾಸನ ನಗರ ವ್ಯಾಪ್ತಿಯಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಸಂಬಂದ ಮಾಹಿತಿ ಪಡೆದಿದ್ದೇನೆ. ಹಾಸನದಲ್ಲಿ 900 ಕೋಟಿ ವೆಚ್ಚದ ಹೊಸ ಬಡಾವಣೆ ನಿರ್ಮಾಣ ಯೋಜನೆ ನಡೆಯುತ್ತಿದೆ. ಸಾವಿರ ಎಕರೆ ಪ್ರದೇಶದ ಯೋಜನೆಯಲ್ಲಿ 15. ಸಾವಿರ ನಿವೇಶನ ಇದೆ 26 ಸಾವಿರ ಅರ್ಜಿ ಇದೆ. ಇನ್ನೂ 11.ಸಾವಿರ ಜನರಿಗೆ ನಿವೇಶನ ಕೊಡಬೇಕಿದೆ. ಇದುವರೆಗೆ ಶೇಕಡಾ 25 ರಷ್ಡು ಕೆಲಸ ಆಗಿದೆ ಎಂದರು.
ಉಡುಪಿ: ಮುದಿ ಹಸುಗಳನ್ನ ಕೊಲ್ಲಬಾರದೇಕೆ? ಪಶುಸಂಗೋಪನ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪಶುಸಂಗೋಪನಾ ಸಚಿವರು ಗೋವುಗಳನ್ನ ಕಡಿದರೆ ಏನಾಗುತ್ತೆ ಅಂತ ಅಬ್ಬರದ ಮಾತನ್ನಾಡಿದ್ದಾರೆ. ಬಿಜೆಪಿ ಸರ್ಕಾರ ಎರಡೂ ಮನೆಗಳಲ್ಲಿ ಗೋ ಹತ್ಯೆ ನಿಷೇದ ಕಾನೂನು ಜಾರಿ ಮಾಡಿದೆ. ರೈತರು, ಸಾಧುಸಂತರು, ಮಹಾತ್ಮಗಾಂಧೀಜಿ ಅಭಿಪ್ರಾಯ ಗಮನದಲ್ಲಿಟ್ಟು ಈ ಕಾನೂನು ಜಾರಿ ಮಾಡಲಾಗಿದೆ. ಹಿಂದೂ ಧರ್ಮಕ್ಕೆ ಗೋವು ಪೂಜನೀಯ ಹಿನ್ನಲೆಯಲ್ಲಿ ಗೋ ಹತ್ಯೆ ನಿಷೇದ ಜಾರಿ ಮಾಡಲಾಗಿದೆ. ಪಶುಸಂಗೋಪನಾ ಮಂತ್ರಿಗಳಾಗಿ ಯಾವುದೇ ಸರ್ಕಾರ ಇದ್ರೂ ಗೋ ಶಾಲೆ ತೆರೆದು ಗೋ ರಕ್ಷಣೆ ಮಾಡುವ ಕ್ರಮ ಇದೆ. ಗೋವಿನ ರಕ್ಷಣೆ, ಹಾಲಿನ ಗುಣಮಟ್ಟ ಉತ್ತೇಜನ, ಕ್ಷೀರಾಭಿವೃದ್ದಿ , ಗೋತಳಿಗಳ ಬಗ್ಗೆ ಯೋಚನೆ ಮಾಡಬೇಕು. ಇವೆಲ್ಲವನ್ನ ಬಿಟ್ಟು ಗೋವು ಕಡಿಯುತ್ತೇವೆ ಎಂಬ ಧ್ರಾಷ್ಟ್ಯದ ಮಾತು ಆಡಿರುವುದು ಆಶ್ಚರ್ಯ. ಸಿದ್ದರಾಮಯ್ಯನವರೇ ನಿಮ್ಮ ಮಂತ್ರಿಗಳಿಗೆ ಗೋ ಸಂರಕ್ಷಣೆ ಕಾಯಿದೆ ಹಾಗೂ ಜನಸಾಮಾನ್ಯರ ಭಾವನೆ ಅರ್ಥಮಾಡಿಸಿ. ಗೋ ಹತ್ಯೆ ನಿಷೇದ ತಿದ್ದಯಪಡಿ ಮಾಡಿ ಗೋವುಗಳ ಮಾರಣ ಹೋಮ ಆದರೆ ಬಿಜೆಪಿ ಸುಮ್ಮನಿರಲ್ಲ. ಸದನದ ಹೊರಗೂ ಹಾಗೂ ಒಳಗೂ ಪ್ರತಿಪಕ್ಷವಾಗಿ ಬಿಜೆಪಿ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಬಿಜೆಪಿಯವರು ಕೂಡ ಅವರ ಕಾಲದ ಬಗ್ಗೆ ಚರ್ಚೆ ಮಾಡಿದ್ದಾರೆ. ಇಲಾಖೆಗಳ ನಡುವೆ ಕೋಆರ್ಡಿನೇಷನ್ ಇಲ್ಲದಿರುವುದು ಗೊತ್ತಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು ಆಗಬೇಕು. ಕುಡಿಯುವ ನೀರು, ಕಸ ನಿರ್ವಹಣೆ, ಟ್ರಾಫಿಕ್ ವಿಚಾರ ಬಗ್ಗೆ ಮಾಸ್ಟರ್ ಪ್ಲಾನ್ ಕೇಳಲಾಗಿದೆ. ಸ್ಟ್ರಾಮ್ ವಾಟರ್ ಡ್ರೈನ್ ಬಗ್ಗೆ, ಶಿಲ್ಟ್ ತೆಗೆಯುವ ಬಗ್ಗೆ ಮಾಹಿತಿ ಕೇಳಿದ್ದೇನೆ. ಶಿಲ್ಟ್ ಎಲ್ಲಿಗೆ ಹಾಕಲಾಗುತ್ತಿದೆ ಅಂತ ಫೋಟೋ ದಾಖಲೆ ಕೇಳಿದ್ದೇನೆ. ಕೃಷ್ಣಾ ಅವರ ಕಾಲದಲ್ಲಿ ತಂಡ ಮಾಡಲಾಗಿತ್ತು. ನಂದನ್ ನೀಲೇಕಣಿ ಸೇರಿದಂತೆ ಹಲವರ ನೇಮಕ ಮಾಡಲಾಗಿತ್ತು. ಗ್ಲೋಬಲ್ ಬೆಂಗಳೂರು ವಿಷನ್ ಬೆಂಗಳೂರು ಮಾಡಲು ಒಂದು ಅಡ್ವೈಸರಿ ಕಮಿಟಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಬೆಳಗಾವಿ: ವಿದ್ಯುತ್ ದರ ಏರಿಕೆ ಬಗ್ಗೆ ಆಕ್ರೋಶ ಹೊರಹಾಕಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆಯೂ ಕಾಂಗ್ರೆಸ್ನವರು ಹೆಸ್ಕಾಂ ಮೇಲೆ ದೊಡ್ಡ ಹೊರೆ ಹಾಕಿದ್ದರು. ಒಟ್ಟು ಬಿಲ್ನಲ್ಲಿ 50 ಪರ್ಸೆಮಟ್ ಬಿಲ್ ಸರ್ಕಾರದಿಂದ ಬರುತ್ತದೆ. ಹಳೇ ಬಾಕಿ ಅಂತಾ ಪುಕ್ಕಟೆ ಹೊರಯನ್ನು ಜನರ ಮೇಲೆ ಹಾಕಿದ್ದರು ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 1964ರ ಕಾಯ್ದೆಯಂತೆ 12 ವರ್ಷ ಮೇಲ್ಪಟ್ಟ ರಾಸುಗಳ ವಧೆ ಮಾಡಿ ಎಂದಿದೆ. ಕೃಷಿ ಕೆಲಸದ ಉಪಯೋಗಕ್ಕೆ ಬಾರದ, ಅನುಪಯುಕ್ತ ರಾಸುಗಳ ವಧೆ ಮಾಡುವಂತೆ 1964ರ ಕಾಯ್ದೆಯಂತೆ ರಾಸುಗಳ ವಧೆ ಮಾಡಲು ಅವಕಾಶವಿದೆ. ಆದರೆ ನಮ್ಮ ಪಶುಸಂಗೋಪನಾ ಸಚಿವರು ಹಾಗೆ ಹೇಳಿದ್ದಾರೆಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಸಚಿವ ಕೆ.ವೆಂಕಟೇಶ್ 1964ರ ಕಾಯ್ದೆ ಬಗ್ಗೆ ಹೇಳಬೇಕಿತ್ತು, ಹೇಳಿಲ್ಲ ಎಂದರು.
‘ಶಾಂತಿಯುತ ಕರ್ನಾಟಕ’ ಹೆಲ್ಪ್ಲೈನ್ ಆರಂಭಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ. ಯಾವುದೇ ದ್ವೇಷ ಹರಡುವುದನ್ನು ತಡೆಯಲು ಹೆಲ್ಪ್ಲೈನ್ ಆರಂಭಿಸಿ, ಅಭಿವೃದ್ಧಿ, ಬ್ರ್ಯಾಂಡ್ ಕರ್ನಾಟಕ ಕಾಪಾಡಲು ಸಹಾಯವಾಣಿ ಆರಂಭಿಸಿ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್ಗೆ ಮನವಿ ಮಾಡಿದರು.
Requesting @DrParameshwara @PriyankKharge @DKShivakumar @CMofKarnataka to consider setting up a new helpline called “Peaceful Karnataka”
To ensure there is no hatred being spread in Karnataka, and keep track of any such incidents.
Our agenda is only Development & Progress,… https://t.co/mBYdwHVC6m
— M B Patil (@MBPatil) June 5, 2023
ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ತಿರುಗೇಟು ಕೊಟ್ಟಿದ್ದಾರೆ. ಪಶುಸಂಗೋಪನೆ ಸಚಿವರು ಅಂದ್ರೆ ಪಶುಗಳನ್ನು ಕಾಪಾಡುವುದು. ಪಶುಸಂಗೋಪನೆ ಸಚಿವರೇ ಹಸು ಕಡಿಯಬೇಕು ಅಂತಾ ಹೇಳ್ತಾರೆ. ಸಚಿವರು ಹಸು ಕಡಿಯುವುದಕ್ಕೆ ಬೇರೆ ಬೇರೆ ಕಾರಣ ಕೊಡ್ತಿದ್ದಾರೆ. ಇದನ್ನೆಲ್ಲ ಬಿಟ್ಟು ಮೊದಲು 200 ಯೂನಿಟ್ ಕರೆಂಟ್ ಕೊಡಲಿ. ಯಾವುದೇ ಷರತ್ತು ಇಲ್ಲದೆ ಕರೆಂಟ್ ಕೊಡುವ ಕೆಲಸ ಮಾಡಲಿ. ಮುಸ್ಲಿಮರಿಂದ ಶೇ.80ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನರು ಸರ್ಕಾರದ ನಡೆಯನ್ನು ಸೂಕ್ಷ್ಯವಾಗಿ ಗಮನಿಸ್ತಿದ್ದಾರೆ. ಸರ್ಕಾರ ತನ್ನ ಅಸ್ತ್ರವನ್ನು ಹಿಟ್ಲರ್ ರೀತಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡಲೇಬೇಕು ಎಂದು ಕೊಪ್ಪಳದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಬಿಜೆಪಿಯವರು ಈ ರಾಜ್ಯವನ್ನು ಹರಾಜು ಹಾಕಿದ್ದಾರೆ. 40% ಸರ್ಕಾರ ಹೆಸರು ಪಡೆದು ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ IPS ಅಧಿಕಾರಿ ಬಂಧನ ಆಗಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಇದ್ದವರನ್ನು ಅರೆಸ್ಟ್ ಮಾಡಿಲ್ಲ. ತನಿಖೆ ಮಾಡದಿದ್ರೆ ಯುವ ಜನತೆಗೆ ಅನ್ಯಾಯ ಮಾಡಿದಂತೆ ಆಗುತ್ತೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಮುನ್ನೆಲೆಗೆ ಬರ್ತಿದೆ ಗೊತ್ತಿಲ್ಲ ಎಂದು ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ತಿಳಿಸಿದರು. ಅವರಿಗೆ ಅನಿಸಿದ್ದನ್ನು ಪಶುಸಂಗೋಪನಾ ಸಚಿವರು ಹೇಳಿದ್ದಾರೆ. ಕಾಯ್ದೆ ಬಗ್ಗೆ ಅಧಿವೇಶನ ಪ್ರಾರಂಭಕ್ಕೂ ಮುನ್ನ ಚರ್ಚೆ ಆಗಲಿದೆ. ಯಾವ ಬಿಲ್ ತರಬೇಕು, ಯಾವ್ಯಾವ ಬಿಲ್ ತರಬಾರದೆಂಬ ಚರ್ಚೆ ನಡೆಯುತ್ತೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಹೂಂ ಎನ್ನಬೇಕು ಎಂದರು.
ಡಿಕೆ ಶಿವಕುಮಾರ್ ತಡವಾಗಿ ವಿಧಾನಸೌಧಕ್ಕೆ ಆಗಮಿಸಿದ್ದು ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರು, ಸಂಸದರು, ಪರಿಷತ್ ಸದಸ್ಯರ ಜೊತೆ ಸಭೆ ನಡೆಯುತ್ತಿದೆ. ಮಳೆ ನೀರು ಸಮಸ್ಯೆ, ಬಿಬಿಎಂಪಿ ಚುನಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಫೇಲ್ ಆಗಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಿಳಿಸಿದರು. ಯಾವುದೇ ಷರತ್ತು ಇಲ್ಲ ಅಂತೇಳಿ, ಈಗ ಷರತ್ತು ಹಾಕುತ್ತಿದ್ದಾರೆ. ಒಂದು ಕಡೆ ಕೊಟ್ಟು ಮತ್ತೊಂದು ಕಡೆ ವಾಪಸ್ ಪಡೆಯುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವುದು ಅಷ್ಟು ಸುಲಭವಲ್ಲ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಲು ನಾವು ಬಿಡುವುದಿಲ್ಲ. ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.
ಡಿಸಿಎಂ ಡಿಕೆ ಬಾರದಿದ್ದರಿಂದ ಸಮಯಕ್ಕೆ ಸರಿಯಾಗಿ ಸಭೆ ಆರಂಭಿಸಿಲ್ಲವೆಂದು ಶಾಸಕರ ಆಕ್ರೋಶ ಹೊರ ಹಾಕಿದ್ದು ಸಭೆ ಬಹಿಷ್ಕರಿಸಿದ್ದಾರೆ. ವಿಧಾನಸೌಧದಿಂದ ಸಮ್ಮೇಳನ ಸಭಾಂಗಣದಿಂದ ಬಿಜೆಪಿ ಶಾಸಕರು ಹೊರನಡೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭೆ ಕರೆದು 1 ತಾಸು ತಡವಾದರೂ ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಗೋಹತ್ಯೆ ನಿಷೇಧ ಆಗಬೇಕು ಅನ್ನೋದು ಎಲ್ಲರ ಆಶಯ. ಈ ಸರ್ಕಾರದಲ್ಲಿ ಉದ್ಧಟತನ ತೋರುತ್ತಿದ್ದಾರೆ. ಪೇಪರ್ ಹೇಳಿಕೆಗಳು ಬೇಕಾಗಿಲ್ಲ ಕೆಲಸ ಮಾಡುವುದಕ್ಕೆ ಶುರುಮಾಡಿ. 200 ಯೂನಿಟ್ ಫ್ರೀ ಅಂತಾ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಎಲ್ಲ ಕಡೆ ದರ ಕಡಿಮೆ ಮಾಡುತ್ತಿದ್ರೆ ಇವರೇಕೆ ಏರಿಕೆ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಗೊಂದಲ ಡೈವರ್ಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದೇ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ ಎಂದು ಮೈಸೂರಿನಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಆರೋಪ ಮಾಡಿದ್ದಾರೆ. ಒಂದು ಕೋಮಿನವರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ತಮಗೆ ಮತ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಪರ ನಿರ್ಣಯ ಮಂಡಿಸಿದೆ. ಈ ಮೂಲಕ ಕಾಂಗ್ರೆಸ್ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಮೈಸೂರಿನಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು. ಬಿಜೆಪಿಯವರು ರೈತರಿಗೆ ಅನಾನುಕೂಲ ಆಗುವ ರೀತಿ ಮಾಡಿದ್ರು. ಬಿಜೆಪಿಯವರ ಸಂಘಟನೆಗಳು ಈ ಕಾಯ್ದೆಯ ಮೂಲಕ ವಸೂಲಿ ದಂಧೆ ಮಾಡಿಕೊಂಡಿದ್ದರು. ನಾವು ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು.
ಪರಿಸರ ದಿನಾಚರಣೆ ಕಾರ್ಯಕ್ರಮ ಮುಗಿಸಿ ದಾವಣಗೆರೆ ಜಿಲ್ಲಾ ಪ್ರವಾಸಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿದ್ರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ತೆರಳಿದ ಸಿದ್ದರಾಮಯ್ಯ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾರೆ.
ಮೈಸೂರಿನ ಜಿ.ಪಂ ಕಚೇರಿ ಬಳಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ಸಿಎಂ, DCM ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ನಿರ್ಧಾರ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಸಚಿವರಾದ ಬಳಿಕ ಮೊದಲನೇ ಬಾರಿಗೆ ಕೊಪ್ಪಳದ ಗವಿಮಠಕ್ಕೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿದ್ದಾರೆ. ಕೊಪ್ಪಳ ನಗರದಲ್ಲಿರುವ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಚಿವ ಶಿವರಾಜ ತಂಗಡಗಿಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸಾಥ್ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಎರಡೂ ಪಕ್ಷಗಳಲ್ಲೂ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಒಲವು ತೋರಿಸಿದೆ. ಈಗಾಗಲೇ ಸಾಧಕ ಬಾಧಕಗಳ ಬಗ್ಗೆ ಎರಡೂ ಪಕ್ಷಗಳಲ್ಲಿ ಚರ್ಚೆ ನಡೆದಿದೆ. 20ರಿಂದ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಸಲು ಚಿಂತನೆ ನಡೆದಿದ್ದು 6ರಿಂದ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲು ಚಿಂತಿಸಿದೆ. ಮೈತ್ರಿಯಾದರೆ ಕಾಂಗ್ರೆಸ್ ಮಣಿಸಲು ಸುಲಭ ಎಂಬ ಲೆಕ್ಕಾಚಾರ ನಡೆದಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ ಕೇವಲ ಏಳು ದಿನಗಳು ಮಾತ್ರ ಬಾಕಿ ಇದೆ. ಸಿಎಂ ಸಿದ್ದರಾಮಯ್ಯ ಸಮಯ ಸಿಕ್ಕಿದ್ದೆ ಕಾರ್ಯಕ್ರಮದ ಸಮಯ ಘೋಷಣೆ ಮಾಡಲಿದ್ದಾರೆ. ಈಗಾಗಲೇ ನಾಲ್ಕು ನಿಗಮಗಳಲ್ಲೂ ‘0’ ದರದ ಟಿಕೆಟ್ ಪ್ರಿಂಟ್ ಮಾಡಿಸಲಾಗಿದೆ. ‘ಶಕ್ತಿ’ ಯೋಜನೆಗೆ ಚಾಲನೆ ಸಿಕ್ಕಿದೆ ರಾಜ್ಯಾದ್ಯಂತ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭವಾಗಲಿದೆ. ಇದೇ ತಿಂಗಳ 11ರ ಭಾನುವಾರ ಬೆಳಿಗ್ಗೆ ಹತ್ತು ಅಥವಾ ಹನ್ನೊಂದು ಗಂಟೆಗೆ ಶಕ್ತಿ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.
ಬೆಂಗಳೂರನ್ನು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಡಿ.ಕೆ.ಶಿವಕುಮಾರ್ ಗರಂ ಆದ್ರು. ನನ್ನ ಕೈಯಲ್ಲಿ ಗಿಡ ನೆಡಿಸಿದ್ದಾರೆ, ಅದು ಸಂಪೂರ್ಣ, ಅವೈಜ್ಞಾನಿಕ. ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಟ್ಟರೆ ಇಷ್ಟ ಇಲ್ಲ. ಮರ ಇರುವ ಕಡೆ ಗಿಡ ನೆಡುವುದಲ್ಲ, ಮರ ಇಲ್ಲದ ಕಡೆ ಗಿಡನೆಡಿ. ನನ್ನ ಊರಿನಲ್ಲಿ ನಾನು ಗಿಡಗಳನ್ನು ಬೆಳೆಸಿದ್ದೇನೆ ಎಂದರು.
ಬೆಂಗಳೂರಿನ ರಾಚೇನಹಳ್ಳಿ ಕೆರೆಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮ ಆಚರಿಸಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣ ಭೈರೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿ ಹಲವರು ಭಾಗಿಯಾಗಿದ್ದರು. ಡಿಸಿಎಂ ಡಿಕೆಶಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನ ಮಾಡಿದರು.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿ ಸರ್ಕಾರಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಶಾಲಾ ಕಾಲೇಜು ಸಮಯದಲ್ಲಿ ಹೆಚ್ಚು ಸರ್ಕಾರಿ ಬಸ್ ಗಳು ಬರುತ್ತಿಲ್ಲ. ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಶಾಲಾ ಮೇಲ್ಛಾವಣಿ ಕಿತ್ತು ಹೋಗಿದೆ. ಭಾರಿ ಗಾಳಿ ಸಹಿತ ಮಳೆಯಿಂದ ಪ್ರಾಥಮಿಕ ಶಾಲೆಯ ಕೊಠಡಿಗಳ ಮೇಲ್ವಿಚಾವಣಿ ಹಾನಿಯಾಗಿದೆ. ಕಟ್ಟಡ ದುರಸ್ತಿ ಮಾಡಿಸಿ ವರ್ಷಗಳು ಕಳೆದಿಲ್ಲ. ಕಳಪೆ ಕಾಮಗಾರಿಯಿಂದ ಮಳೆಗಾಳಿಗೆ ತಗಡುಗಳು ಹಾರಿಹೋಗಿವೆ ಅಂತ ಗ್ರಾಮಸ್ಥರ ಆರೋಪಿಸಿದ್ದಾರೆ. ನಾಲ್ಕು ಕೊಠಡಿಗಳ ಪೈಕಿ ಮೂರು ಕೊಠಡಿಗಳ ಮೇಲ್ಚಾವಣಿ ಹಾನಿಯಾಗಿದೆ.
ಬೆಳಗಾವಿ ತಾಲೂಕಿನ ಮಚ್ಚೆ ಪ.ಪಂ. ಕಚೇರಿ ಬಳಿ ರಾತ್ರೋರಾತ್ರಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಲಾಗಿದೆ. ಕನ್ನಡಪರ ಸಂಘಟನೆಗಳಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಲಾಗಿದೆ. ಹಾಲಿನ ಅಭಿಷೇಕ ಮಾಡಿ ಹಾರಹಾಕಿ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.
ಬೆಳಗಾವಿಗೆ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳಿಗೂ ಸಭೆಗೆ ಆಹ್ವಾನಿಸಲಾಗಿದೆ. ಸೋಲಿನ ಪರಾಮರ್ಶೆ ಜತೆ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ಸಂಘಟನೆ ಕುರಿತು ಮಾಜಿ ಸಿಎಂ ಬೊಮ್ಮಾಯಿ ಚರ್ಚಿಸಲಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮೊದಲ ಹೋರಾಟ ರೂಪಿಸಿದೆ. ಇಂದು ಮತ್ತು ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಇಂದು ಎಲ್ಲಾ ಜಿಲ್ಲಾ ಕೇಂದ್ರಗಳು, ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ. ಮಳೆಯಿಂದ ಮುಂಜಾಗ್ರತ ಕ್ರಮಗಳು, ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ಎಂಎಲ್ಸಿಗಳು ಭಾಗಿಯಾಗಲಿದ್ದಾರೆ. ಸರ್ವ ಪಕ್ಷದ ನಾಯಕರುಗಳಿಂದ ಸಲಹೆ ಮತ್ತು ಅಭಿಪ್ರಾಯಗಳನ್ನ ಸಂಗ್ರಹಿಸಲಾಗುತ್ತಿದೆ. ಸಭೆಯಲ್ಲಿ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿಯೂ ಚರ್ಚೆ ಸಾಧ್ಯತೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮಳೆಗೆ ಅಪಾರ ಹಾನಿಯಾಗಿದ್ದು ಹನಗೋಡು ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ, ಅಪಾರ ಬೆಳೆ ನಷ್ಟವಾಗಿದೆ. ಚಿಕ್ಕಹೆಜ್ಜೂರಿನ ಜಯಮ್ಮ ಎಂಬುವವರ ಮನೆ ಮೇಲೆ ಮರ ಬಿದ್ದಿದೆ. ಬಿರುಗಾಳಿ ಮಳೆಗೆ ರೈತ ದೇವರಾಜ್ಗೆ ಸೇರಿದ ಮನೆ ಕುಸಿದಿದೆ. ಮುದಗನೂರು, ಚಿಕ್ಕಹೆಜ್ಜೂರು, ದೊಡ್ಡ ಹೆಜ್ಜೂರು, ಶಿಂಡೇನಹಳ್ಳಿ, ಕೊಳವಿಗೆ ನೇಗತ್ತೂರು, ಹನಗೋಡಿನಲ್ಲಿ ಜಮೀನಿಗೆ ನೀರು ನುಗ್ಗಿದೆ. ಮುಸುಕಿನ ಜೋಳ, ತಂಬಾಕು, ಶುಂಠಿ ಸೇರಿ ಇತರೆ ಬೆಳೆಗಳಿಗೆ ಹಾನಿಯಾಗಿದೆ. ಮುರಳೀಧರ್ ಎಂಬುವವರಿಗೆ ಸೇರಿದ ಬೆಳೆ ಸಂಪೂರ್ಣ ನಾಶವಾಗಿದ್ದು ಬೆಳೆಹಾನಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಭೇಟಿ ನೀಡಿದ್ದಾರೆ. ಕಳೆದ ಒಂದು ವಾರಗಳಿಂದ ಮಳೆಯಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ. ನಗರದ ಎಲೆತೋಟ, ಜೆಪಿ ನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಚರಣೆಗೆ ಸೂಚಿಸಲಾಗಿದ್ದು ಮೇಯರ್ ಶಿವಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಶಾಸಕರು ಭೇಟಿ ನೀಡಿದ್ದಾರೆ. ಈ ವೇಳೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಸಮಾನ ಮನಸ್ಕರ ವೇದಿಕೆ ಸೇರಿದಂತೆ ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಬೇರೆ ಬೇರೆ ಸಂಘಟನೆಗಳಿಂದಲೂ ಕಾಯ್ದೆ ರದ್ದತಿಗೆ ತೆರೆಮರೆ ಒತ್ತಡವಿದ್ದು ಅದರಂತೆಯೇ ಕಾಂಗ್ರೆಸ್ ಸರ್ಕಾರ ಕಾಯ್ದೆ ವಾಪಸಾತಿಗೆ ಒಲವು ತೋರಿದೆ. ಕಾನೂನು ಇಲಾಖೆಯಿಂದ ಮಾಹಿತಿ ಪಡೆಯಲಿರುವ ಸರ್ಕಾರ, ಅಗತ್ಯವಿದ್ದರೆ ಸಂಪುಟ ಉಪಸಮಿತಿ ರಚಿಸಿ ವರದಿ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ಸಂಪುಟ ಸಭೆಯಲ್ಲಿಟ್ಟು ಅಂತಿಮ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಹೆಲಿಕಾಪ್ಟರ್ನಲ್ಲಿ ದಾವಣಗೆರೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ದಾವಣಗೆರೆ ಜಿ.ಪಂ ಸಭಾಂಗಣದಲ್ಲಿ ಸಿಎಂ ಸಭೆ ನಡೆಯಲಿದ್ದು ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಬಳಿಕ ವಿಶೇಷ ಅಧಿಕಾರಿ ವಿಜಯಕುಮಾರ್ ಪುತ್ರಿ ಮದುವೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 3.15ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
Published On - 7:24 am, Mon, 5 June 23