ಕನ್ನಡ ಹೋರಾಟಗಾರರ ಖಂಡನಾ ಸಭೆಯಲ್ಲಿ ಪ್ರಮುಖ 2 ನಿರ್ಣಯ: ಬೆಂಗಳೂರು ಬಂದ್​ ಆಗುತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2023 | 3:15 PM

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿ ನಗರದಲ್ಲಿ ಇಂದು ಕನ್ನಡ ಹೋರಾಟಗಾರರ ಖಂಡನಾ ಸಭೆ ಮಾಡಲಾಗಿದೆ. ಈ ವೇಳೆ ಬಂಧನದಲ್ಲಿರುವ ಕನ್ನಡಿಗರನ್ನು ಬೇಷರತ್​ ಆಗಿ ಎಲ್ಲರನ್ನೂ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಕೇಸ್​ ಹಿಂಪಡೆಯಬೇಕು ಎಂದು ಖಂಡನಾ ಸಭೆಯಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕನ್ನಡ ಹೋರಾಟಗಾರರ ಖಂಡನಾ ಸಭೆಯಲ್ಲಿ ಪ್ರಮುಖ 2 ನಿರ್ಣಯ: ಬೆಂಗಳೂರು ಬಂದ್​ ಆಗುತ್ತಾ?
ಕರವೇ ಕಾರ್ಯಕರ್ತರ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಡಿಸೆಂಬರ್​ 29: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike)  ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿ ನಗರದಲ್ಲಿ ಇಂದು ಕನ್ನಡ ಹೋರಾಟಗಾರರ ಖಂಡನಾ ಸಭೆ ಮಾಡಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯಗಳನ್ನು ತಗೆದುಕೊಳ್ಳಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಬಂದ್​ ಮಾಡುವ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.

ಬಂಧನದಲ್ಲಿರುವ ಕನ್ನಡಿಗರನ್ನು ಬೇಷರತ್​ ಆಗಿ ಎಲ್ಲರನ್ನೂ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಕೇಸ್​ ಹಿಂಪಡೆಯಬೇಕು ಎಂದು ಖಂಡನಾ ಸಭೆಯಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಬಿಡುಗಡೆ ಮಾಡದಿದ್ರೆ ಬೆಂಗಳೂರು ನಗರ ಬಂದ್​ ಕರೆಗೆ ಮತ್ತೊಂದು ಸುತ್ತಿನ ಸಭೆ ಮಾಡಲಾಗುವುದು ಎನ್ನಲಾಗಿದೆ. ಫೆ.28ಕ್ಕೆ ಕನ್ನಡ ನಾಮಫಲಕ ಕಡ್ಡಾಯ ಆಗಬೇಕು. ಇಲ್ಲದಿದ್ರೆ ಮತ್ತೆ ನಾಮಫಲಕಗಳ ವಿರುದ್ಧ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಕರವೇ ನಾರಾಯಾಣಗೌಡ ಬಂಧನ: ಸರ್ಕಾರದ ಧೋರಣೆಯನ್ನ ನಾವು ಖಂಡಿಸುತ್ತೇವೆ; ಸಾಹಿತಿ ದೊಡ್ಡರಂಗೇಗೌಡ

ನಿನ್ನೆ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರರು ಅಕ್ಷರಶಃ ಕೆರಳಿ ಕೆಂಡವಾಗಿದ್ದರು. ನಾಮಫಲಕಗಳಲ್ಲಿ ಕನ್ನಡ ಕಡೆಗಣಿಸಿದ್ದ ಉದ್ಯಮಿಗಳು, ವರ್ತಕರಿಗೆ ಬಿಸಿ ಮುಟ್ಟಿಸಿದ್ದರು. ಇಂಗ್ಲಿಷ್ ಬೋರ್ಡ್​ಗಳನ್ನ ಪುಡಿಗಟ್ಟಿದ್ದರು. ಹೀಗಾಗಿ ಕರವೇ ಕಾರ್ಯಕರ್ತರ ವಿರುದ್ಧ ಪೊಲೀಸ್​ ಕೇಸ್​ ದಾಖಲಿಸಿಕೊಂಡಿದ್ದರು. 10 ಠಾಣೆಗಳಲ್ಲಿ ಎಫ್​ಐಆರ್ ದಾಖಲಾಗಿದೆ. ಕರವೇ ನಾರಾಯಣಗೌಡ ಸೇರಿದಂತೆ 53 ಕಾರ್ಯಕರ್ತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಿನ್ನೆಯೇ ಹೋರಾಟಗಾರರನ್ನ ಬಂಧಿಸಿದ್ದ ಪೊಲೀಸ್​​ ಇವತ್ತು ನಸುಕಿನ ಜಾವ ನಾರಾಯಣಗೌಡ ಸೇರಿ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ ಪರಪ್ಪನ ಅಗ್ರಹಾರದ ಕಾರಗೃಹಕ್ಕೆ ಶಿಫ್ಟ್ ಮಾಡಿದ್ದರು.

ಇದನ್ನೂ ಓದಿ: ಕರವೇ ಪ್ರತಿಭಟನೆ ಸಂಬಂಧ 10 FIR ದಾಖಲು, 53 ಜನರು ಅರೆಸ್ಟ್: ಕಮಿಷನರ್​​ ಬಿ ದಯಾನಂದ್

ಅತ್ತ ನಾರಾಯಣಗೌಡ ಅರೆಸ್ಟ್ ಆಗ್ತಿದ್ದಂತೆ ಇತ್ತ ಕಾರ್ಯಕರ್ತರು ಬೀದಿಗೆ ಇಳಿದಿದ್ದರು. ಮೆಡಿಕಲ್ ಟೆಸ್ಟ್​ಗೆ ಕರೆದೊಯ್ಯುವಾಗ ಕೋಗಿಲು ಕ್ರಾಸ್ ಬಳಿ ಹೈಡ್ರಾಮವೇ ನಡೆದಿತ್ತು. ನಾರಾಯಣಗೌಡರನ್ನ ಕರೆದೊಯ್ಯುತ್ತಿದ್ದ ಬಸ್​​​ಗೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಪೊಲೀಸ್​ ಅರೆಸ್ಟ್ ಮಾಡಲು ಮುಂದಾಗ್ತಿದ್ದಂತೆ ಕೆಲವರು ಓಡಿ ಹೋಗಿದ್ದಾರೆ.

ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಬೋರ್ಡ್​ಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ. ಜಾಹಿರಾತು ಫಲಕಗಳಲ್ಲೂ ಇದು ಜಾರಿಗೆ ಬರಬೇಕು. ಈ ಬಗ್ಗೆ ಶಾಂತಿಯುತ ಹೋರಾಟ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಕಾನೂನು ಕೈಗೆತ್ತಿಕೊಂಡರೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಎಚ್ಚರಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.