ಕರವೇ ನಾರಾಯಾಣಗೌಡ ಬಂಧನ: ಸರ್ಕಾರದ ಧೋರಣೆಯನ್ನ ನಾವು ಖಂಡಿಸುತ್ತೇವೆ; ಸಾಹಿತಿ ದೊಡ್ಡರಂಗೇಗೌಡ
ಅಧಿಕಾರದ ಖುರ್ಚಿ ಸಿಕ್ಕಿದೆ ಅಂಥ ಈ ರೀತಿ ಮಾಡಿದ್ದಾರೆ. ನಾವು ಇನ್ಮುಂದೆ ಸಹಿಸುವುದಿಲ್ಲ. ನಮಗೂ ಸ್ವಾಭಿಮಾನ ಇದೆ. ಅಕ್ಕರೆಯ ಸ್ವಾಭಿಮಾನವೇ ನಮ್ಮ ಅಸ್ತ್ರ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಾ. ದೊಡ್ಡರಂಗೇಗೌಡ ಅವರು ಹೇಳಿದರು.
ಬೆಂಗಳೂರು, ಡಿಸೆಂಬರ್ 29: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿ ಮಾಲ್ ಮತ್ತು ಹೋಟೆಲ್ಗಳ ಮೇಲೆ ಕಲ್ಲುತೂರಾಟ ನಡೆಸಿದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshna Vedike) ಅಧ್ಯಕ್ಷ ನಾರಾಯಣಗೌಡ (Narayangowda) ಸೇರಿದಂತೆ 29 ಜನ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಕರವೇ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ (Doddarangegowda) ಅವರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಥಹ ಪರಿಸ್ಥಿತಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಬಂದಿದ್ದರೇ ಅದರ ಕಥೆ ಬೇರೆಯಾಗುತ್ತಿತ್ತು. ಮುಖ್ಯಮಂತ್ರಿಗಳು ಈ ರೀತಿ ಮಾಡಿರುವುದು ಸರಿ ಅಲ್ಲ. ಅಧಿಕಾರದ ಖುರ್ಚಿ ಸಿಕ್ಕಿದೆ ಅಂಥ ಈ ರೀತಿ ಮಾಡಿದ್ದಾರೆ. ನಾವು ಇನ್ಮುಂದೆ ಸಹಿಸುವುದಿಲ್ಲ ನಮಗೂ ಸ್ವಾಭಿಮಾನ ಇದೆ. ಅಕ್ಕರೆಯ ಸ್ವಾಭಿಮಾನವೇ ನಮ್ಮ ಅಸ್ತ್ರ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಾ. ದೊಡ್ಡರಂಗೇಗೌಡ ಅವರು ಹೇಳಿದರು.
ಇದನ್ನೂ ಓದಿ: ಸ್ವಪಕ್ಷದ ಕಾರ್ಯಕರ್ತರಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ: ಕರವೇ ನಾಯರಾಣಗೌಡ ಬಂಧನಕ್ಕೆ ಬೇಸರ
ಕನ್ನಡದ ಎಲ್ಲಾ ಶಕ್ತಿಗಳು ಇದನ್ನು ಖಂಡಿಸಬೇಕಾಗಿದೆ. ಸ್ಫೋಟವಾಗುವ ಕಾಲ ಸಮೀಪವಿದೆ. ನಾವು ಸುಮ್ಮ ಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದಿಲ್ಲ. ಈ ರೀತಿ ನಮ್ಮನ್ನು ಶೋಷಣೆ ಮಾಡಿ ಹಿಂಸೆ ಕೊಟ್ಟರೇ ನಾವು ಏನು ಮಾಡುವುದು. ಅನ್ಯಾಯ ಆಗುತ್ತಿರುವಾಗ ಮಾತ್ರ ನಾವು ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಧೋರಣೆಯನ್ನ ನಾವು ಖಂಡಿಸುತ್ತೇವೆ ಎಂದರು.
ಎಲ್ಲಾ ಸಾಹಿತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ. ಎಲ್ಲಾ ಮನೆ ಮನಗಳಲ್ಲಿ ಕನ್ನಡ ರಾರಾಜಿಸಬೇಕು. ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವವರು ಕನ್ನಡ ಕಲಿಲೇಬೇಕು. ಅನ್ನ ಕೊಡುವ ತಾಯಿಯನ್ನು ಲೆಕ್ಕಿಸದೇ ನೀವು ಇಲ್ಲಿ ಬದುಕಿದ್ದೀರಿ. ನಿಮ್ಮ ಸಂಕಲ್ಪವನ್ನು ಬದಲಿಸುವ ಮಾರ್ಗ ನಮಗೆ ಗೊತ್ತು. ನಾರಾಯಣಗೌಡರೇ ನಾವು ಇದ್ದೇವೆ ನಿಮ್ಮ ಜೊತೆ. ನಿಮಗೆ ಯಾವುದೇ ತೊಂದರೆ ಆಗದಂತೆ ನಾವಿದ್ದೇವೆ ಎಂದು ಹೇಳಿದರು.
ಇನ್ನು ನಾರಾಯಣಗೌಡ ಅವರ ಬಂಧನ ಖಂಡಿಸಿ ಕೊಪ್ಪಳ, ಕೋಲಾರ, ಮಂಡ್ಯ, ಯಾದಗಿರಿ ಮತ್ತು ಹುಬ್ಬಳ್ಳಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:34 pm, Fri, 29 December 23