ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​

ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದು ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ JMFC ಕೋರ್ಟ್ ಜಡ್ಜ್ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​
ಕರವೇ ಕಾರ್ಯಕರ್ತರು
Follow us
Jagadisha B
| Updated By: ಆಯೇಷಾ ಬಾನು

Updated on: Dec 28, 2023 | 8:19 AM

ಬೆಂಗಳೂರು, ಡಿ.28: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ ಕಡೆಗಣನೆ ವಿರುದ್ಧ ಸಿಡಿದೆದ್ದ ಕರವೇ (Karnataka Rakshana Vedike) ಸಂಘಟನೆ ಇಂಗ್ಲಿಷ್ ಬೋರ್ಡ್ ಹರಿದು ಆಕ್ರೋಶ ಹೊರಹಾಕಿತ್ತು. ಪ್ರತಿಭಟನೆ ಅತಿರೇಕಕ್ಕೆ ತಿರುಗಿ ಕಲ್ಲು ತೂರಟ ಕೂಡ ನಡೆದಿತ್ತು. ಕಾನೂನು ಕೈ ಗೆ ತೆದುಕೊಂಡ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಸದ್ಯ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Central Jail) ಶಿಫ್ಟ್​ ಮಾಡಲಾಗುತ್ತಿದೆ.

ಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರವೇ ನಡೆಸಿದ ಪ್ರತಿಭಟನೆ ವೇಳೆ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದು ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ JMFC ಕೋರ್ಟ್ ಜಡ್ಜ್ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನ ಹಿನ್ನೆಲೆ ಬಂಧಿತ ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​ ಮಾಡಲಾಗುತ್ತಿದೆ.

ಕರವೇ ಕಾರ್ಯಕರ್ತ ಸೂರಿ ಆರೋಗ್ಯದಲ್ಲಿ ಏರುಪೇರು

ಇನ್ನು ಮತ್ತೊಂದೆಡೆ ಬಂಧಿತ ಕರವೇ ಕಾರ್ಯಕರ್ತ ಸೂರಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಪೊಲೀಸರ ವಶದಲ್ಲಿದ್ದ ವೇಳೆ ಸೂರಿ ಬಸ್​​ನಲ್ಲಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.​​

ಸರ್ಕಾರದ ವಿರುದ್ಧ ನಾರಾಯಣಗೌಡ ವಾಗ್ದಾಳಿ

ಇನ್ನೂ ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರಲ್ಲ ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇನ್ನೂ 100 ಕೇಸ್​ ಹಾಕಿದರೂ ಹೋರಾಟ ಹತ್ತಿಕ್ಕಲು ಆಗಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾನು ಪ್ರವಾಸ ಮಾಡುತ್ತೇನೆ. ಕನ್ನಡ ಇಲ್ಲದ ನಾಮಫಲಕ ಕಿತ್ತೊಗೆಯುತ್ತೇವೆ. ನಮ್ಮ ನಾಡಿನ ಇತಿಹಾಸಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪೊಲೀಸರ ಮೇಲೆ ನಾವು ಹಲ್ಲೆ ಮಾಡಿದ್ದೇವೆ ಅನ್ನೋದು ಸುಳ್ಳು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದನ್ನು ತೋರಿಸಿ. ನಮ್ಮ ಪೊಲೀಸರ ಮೇಲೆ ನಮಗೆ ಗೌರವ ಹಾಗೂ ಕಳಕಳಿ ಇದೆ. ಸಿದ್ದರಾಮಯ್ಯ ಕನ್ನಡಪ್ರೇಮಿ ಎಂದು ಅವರಿಗೆ ಬೆಂಬಲ ನೀಡಿದ್ದೆವು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೋರ್ಡ್​ಗಳಲ್ಲಿ ಕನ್ನಡ ಬಳಕೆ ಕಡ್ಡಾಯಕ್ಕೆ ಆಗ್ರಹಿಸಿ ಧರಣಿ: 15 ಕರವೇ ಕಾರ್ಯಕರ್ತರ ವಿರುದ್ಧ FIR ದಾಖಲು

ಗುಂಡಿಟ್ಟು ಕೊಂದ್ರೂ ಚಿಂತೆ ಇಲ್ಲ, ನಾವು ಹೆದರಲ್ಲ

ಪೊಲೀಸರು ಬಲವಂತವಾಗಿ ನನ್ನ ಮೊಬೈಲ್ ಕಿತ್ತುಕೊಂಡಿದ್ದಾರೆ. ಪೊಲೀಸರು ದೌರ್ಜನ್ಯ, ದಬ್ಬಾಳಿಕೆ ಮಾಡಿದ್ದಾರೆ. ನನಗೆ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲ, ಔಷಧ ಕೂಡ ತೆಗೆದುಕೊಂಡಿಲ್ಲ. ರಾಜ್ಯಾದ್ಯಂತ ಕನ್ನಡಿಗರು ಬೀದಿ ಬೀದಿಗಿಳಿದು ಹೋರಾಟ ನಡೆಸಬೇಕು. ಗುಂಡಿಟ್ಟು ಕೊಂದ್ರೂ ಚಿಂತೆ ಇಲ್ಲ, ನಾವು ಹೆದರಲ್ಲ. ಇಂದು ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೀದಿಗಿಳಿಯಬೇಕು ಎಂದು ಜಡ್ಜ್ ಮನೆಗೆ ಕರೆದೊಯ್ಯುವ ವೇಳೆ ಕರವೇ ನಾರಾಯಣಗೌಡ ಪೊಲೀಸರ ವಿರುದ್ಧ ಕಿಡಿಕಾರಿದ್ದರು.

ಕನ್ನಡದ ವಿಚಾರದಲ್ಲಿ ನಾವು ಯಾವುದಕ್ಕೂ ಹೆದರಲ್ಲ. ನಮಗೆ ಗುಂಡು ಹೊಡೆದು ಜೈಲಿಗೆ ಕಳಿಸಿದರೂ ನಾವು ಹೆದರುವುದಿಲ್ಲ. ಗುಂಡಿಗೆ ಎದೆಕೊಟ್ಟು‌ ನಿಲ್ತೇವೆ, ನಿಮ್ಮ ಬೆದರಿಕೆಗೆ ಪೊಲೀಸರಿಗೆ ಹೆದರಲ್ಲ. ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ನಿಮಗೆ ತಕ್ಕ ಪಾಠ ಕಲಿಸ್ತಾರೆ. ಸಿದ್ದರಾಮಯ್ಯಗೆ ಕನ್ನಡದ ಬಗ್ಗೆ ಕಳಕಳಿ ಇದ್ದರೇ ಕ್ರಮ ಕೈಗೊಳ್ಳಬೇಕು. ಡಿಸಿಪಿ ಲಕ್ಷ್ಮಿಪ್ರಸಾದ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿ. ಯಾವುದೇ ಮುಲಾಜಿಲ್ಲದೇ ಡಿಸಿಪಿಯನ್ನು ಸಸ್ಪೆಂಡ್ ಮಾಡಬೇಕು. ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ಹಲ್ಲೆ ಮಾಡ್ತಿದ್ದೀರಾ. ನಿಮ್ಮದು ಕನ್ನಡಪರ ಸರ್ಕಾರನಾ, ನೀವು ಬರೀ ಬುರಡೆ ಬಿಡ್ತೀರಾ ಹೋರಾಟಗಾರರನ್ನ ಬಳಸಿಕೊಂಡು ಅವರ ಮೇಲೆಯೇ ದಬ್ಬಾಳಿಕೆ ಮಾಡ್ತೀರ. 2003ರಲ್ಲಿ ಇದೇ ಕಾಂಗ್ರೆಸ್​ನ S.M.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಆಗ ನಮ್ಮನ್ನು ಬೆಂಗಳೂರು ಹಾಗೂ ಬಳ್ಳಾರಿ ಜೈಲಿಗೆ ಹಾಕಿದ್ದರು. ಕನ್ನಡದ ವಿಚಾರದಲ್ಲಿ ನಾವು ಯುದ್ಧದ ಟ್ಯಾಂಕರ್ ಇದ್ದ ಹಾಗೆ. ಅಡ್ಡ ಬರಬೇಡಿ ಅಪ್ಪಚ್ಚಿ ಆಗ್ಬಿಡ್ತೀರಿ ಎಂದು ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ