AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಾಪ್ ಸಿಂಹಗೆ ಮತ್ತೆ ಸಂಕಷ್ಟ: ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು

ಕರ್ನಾಟಕ ಜೆಡಿಎಸ್ ನಾಯಕರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ, ಮೈಸೂರು-ಕೊಡಗು ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರತಾಪ್ ಸಿಂಹಗೆ ಮತ್ತೆ ಸಂಕಷ್ಟ: ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು
ಪ್ರತಾಪ್ ಸಿಂಹ
Follow us
Ganapathi Sharma
|

Updated on:Dec 28, 2023 | 7:13 AM

ಬೆಂಗಳೂರು, ಡಿಸೆಂಬರ್ 28: ಲೋಕಸಭೆ ಭದ್ರತಾ ಲೋಪ ಪ್ರಕರಣದ ಬಳಿಕ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಎಫ್ಐಆರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಅವರು ಪ್ರತಿನಿಧಿಸುವ ಮೈಸೂರು ಲೋಕಸಭಾ ಕ್ಷೇತ್ರವನ್ನು (Mysuru Lok Sabha Constituency) ಜೆಡಿಎಸ್ ಸೆಳೆಯುವ ಅಪಾಯ ಎದುರಾಗಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಸೀಟು ಹಂಚಿಕೆ ಒಪ್ಪಂದದ ಮಾತುಕತೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಪ್ರತಾಪ್ ಸಿಂಹ ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದಾರೆ. ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಪುಸ್ತಕ ಬರೆಯುವುದರೊಂದಿಗೆ ಬಿಜೆಪಿ ನಾಯಕತ್ವಕ್ಕೆ ಹತ್ತಿರವಾದ ಮಾಜಿ ಪತ್ರಕರ್ತ, 2014 ಮತ್ತು 2019 ರಲ್ಲಿ ಎರಡು ಬಾರಿ ಬಿಜೆಪಿ ಟಿಕೆಟ್ ಪಡೆದಿದ್ದು, ಎರಡೂ ಬಾರಿ ಗೆದ್ದವರು. ಎರಡನೇ ಬಾರಿಗೆ ತಮ್ಮ ಗೆಲುವಿನ ಅಂತರವನ್ನು ಸುಮಾರು ಒಂದು ಲಕ್ಷ ಮತಗಳಿಂದ ಹೆಚ್ಚಿಸಿಕೊಂಡಿದ್ದಾರೆ.

ಕರ್ನಾಟಕ ಜೆಡಿಎಸ್ ನಾಯಕರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ, ಮೈಸೂರು-ಕೊಡಗು ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

ರೇವಣ್ಣ ಅವರ ಪುತ್ರ ಪ್ರಜ್ವಲ್ ಹಿಡಿತದಲ್ಲಿರುವ ಹಾಸನ, 2019ರಲ್ಲಿ ಎಚ್‌ಡಿ ದೇವೇಗೌಡರು ಸೋತಿದ್ದ ತುಮಕೂರು, ಕುಮಾರಸ್ವಾಮಿ ಪುತ್ರ ನಿಖಿಲ್ ಅವರು ಸ್ಪರ್ಧಿಸಿದ್ದ ಮಂಡ್ಯ ಹಾಗೂ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್‌ಗೆ ಬೇಕು ಎಂದು ಆ ಪಕ್ಷದ ನಾಯಕರು ಪಟ್ಟುಹಿಡಿದಿದ್ದಾರೆ. ಆದರೆ, ಬಿಜೆಪಿ ಐದಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆಗಳು ಕಡಿಮೆಯಾಗಿವೆ.

ಆದಾಗ್ಯೂ, ಬಿಜೆಪಿಯೊಂದಿಗೆ ಜೆಡಿಎಸ್ ಚೌಕಾಶಿ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮೈಸೂರು ಕ್ಷೇತ್ರಕ್ಕೆ ಪ್ರಬಲವಾಗಿ ಬೇಡಿಕೆ ಇಟ್ಟಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ನ್ಯೂಸ್ 9’ ವರದಿ ಮಾಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯರಿಗೆ ಸೋಮಾರಿ ಸಿದ್ದ ಪದ ಬಳಸಿಲ್ಲ: ಸಂಸದ ಪ್ರತಾಪ್​ ಸಿಂಹ​ ಸ್ಪಷ್ಟನೆ

ಈ ಮಧ್ಯೆ, ಸಂಸತ್ತಿನ ಒಳನುಗ್ಗಿದವರಲ್ಲಿ ಒಬ್ಬ ಆರೋಪಿಗೆ ಪಾಸ್ ನೀಡಿದ ವಿಚಾರ ಚರ್ಚೆಯಾದ ನಂತರ ಸ್ಥಳೀಯ ಬಿಜೆಪಿ ನಾಯಕರು ಯಾರೂ ಸಾರ್ವಜನಿಕವಾಗಿ ಪ್ರತಾಪ್ ಸಿಂಹ ಅವರ ಬೆಂಬಲಕ್ಕೆ ನಿಂತಿಲ್ಲ. ಮೇ ತಿಂಗಳ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ರಾಮದಾಸ್ ಅವರು ಪಕ್ಷಕ್ಕೆ ಹಿಂದಿನ ಸೇವೆಯನ್ನು ಪರಿಗಣಿಸಿ ಲೋಕಸಭೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಅರಣ್ಯ ಇಲಾಖೆಯು ಪ್ರತಾಪ್ ಸಿಂಹ ಸಹೋದರನ ವಿರುದ್ಧ ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ 120 ಮರಗಳನ್ನು ಕಡಿದು, ಮರವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ. ಈ ವಿಚಾರದಲ್ಲೂ ಸಂಸದರಿಗೆ ಅವರ ಪಕ್ಷದೊಳಗಿಂದ ಯಾವುದೇ ಬೆಂಬಲ ದೊರೆತಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಮೈಸೂರು ಸ್ಥಾನಕ್ಕೆ ಜೆಡಿಎಸ್ ಬೇಡಿಕೆಗೆ ಸ್ಥಳೀಯ ಬಿಜೆಪಿ ನಾಯಕರೂ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಜೆಡಿಎಸ್ ಜೊತೆಗಿನ ಮೈತ್ರಿಗೆ ಬೆಲೆಕೊಡುವ ಬಿಜೆಪಿ ಹೈಕಮಾಂಡ್ ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಯೋಚಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ. ಆದರೆ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಸಾಮೀಪ್ಯ ಇರುವುದರಿಂದ ಪ್ರತಾಪ್ ಸಿಂಹ ಅವರನ್ನು ಪರಿಗಣಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 am, Thu, 28 December 23