ಸ್ವಪಕ್ಷದ ಕಾರ್ಯಕರ್ತರಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ: ಕರವೇ ನಾಯರಾಣಗೌಡ ಬಂಧನಕ್ಕೆ ಬೇಸರ
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಸರ್ಕಾರದ ವಿರುದ್ಧ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು, ಡಿಸೆಂಬರ್ 29: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿ ಮಾಲ್ ಮತ್ತು ಹೋಟೆಲ್ಗಳ ಮೇಲೆ ಕಲ್ಲುತೂರಾಟ ನಡೆಸಿದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshna Vedike) ಅಧ್ಯಕ್ಷ ನಾರಾಯಣಗೌಡ (Narayangowda) ಸೇರಿದಂತೆ 29 ಜನ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಸರ್ಕಾರದ ವಿರುದ್ಧ ಸ್ವತಃ ಕಾಂಗ್ರೆಸ್ (Congress) ಪಕ್ಷದ ಕಾರ್ಯಕರ್ತರೇ ಅಸಮಾಧಾನ ಹೊರ ಹಾಕಿದ್ದಾರೆ.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡಬಾರದೆಂದು ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಕೋಮುದ್ವೇಷ ಹರಡಿ ಸಮಾಜದ ಶಾಂತಿ ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಕಾಣಲಿಲ್ಲವೇ? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕರವೇ ನಾರಾಯಣಗೌಡ ಬಂಧನಕ್ಕೆ ಕಾರಣ
ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಕ್ಕೆ ಸರ್ಕಾರ ಸೂಚನೆ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಡಿಸೆಂಬರ್ 27 ರಂದು ನಾಮಫಲಕ ಮಹಾ ಅಭಿಯಾನ ಕೈಗೊಂಡಿತ್ತು. ಡಿಸೆಂಬರ್ 27ರ ಒಳಗೆ ಬೆಂಗಳೂರಿನ ಎಲ್ಲ ವ್ಯಾಪಾರ, ಉದ್ಯಮಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಡುವನ್ನು ವಿಧಿಸಿತ್ತು. ಆದರೆ, ಕೆಲವು ಮಾಲೀಕರು ಕರವೇಯ ಈ ಅಂತಿಮ ಗಡುವಿಗೆ ಸವಾಲು ಹಾಕಿದ್ದರಿಂದ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ: ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡಬಾರದೆಂದು ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಕೋಮುದ್ವೇಷ ಹರಡಿ ಸಮಾಜದ ಶಾಂತಿ ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಕಾಣಲಿಲ್ಲವೇ?
ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? pic.twitter.com/0YELrLWjy7
— B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) December 28, 2023
ಕರ್ನಾಟಕ ರಕ್ಷಣಾ ವೇದಿಕೆಯು ತಾನು ನೀಡಿದ ಅಂತಿಮ ಗಡುವಿನ ದಿನವಾದ ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ಕನ್ನಡ ಇಲ್ಲದ ಅಂಗಡಿ, ಹೋಟೆಲ್ ಮತ್ತು ಮಾಲ್ಗಳ ನಾಮಫಲಕಗಳನ್ನು ಧ್ವಂಸಗೊಳಿಸಿತ್ತು. ಅಲ್ಲದೇ ಮಾಲ್ ಹಾಗೂ ಹೋಟೆಲ್ಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಈ ಸಂಪೂರ್ಣ ಪ್ರತಿಭಟನೆಯು ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನಡೆದಿದೆ. ಪ್ರತಿಭಟನೆ ವೇಳೆ ಶಾಂತಿ ಕದಡುವ ಯತ್ನ ನಡೆದಿದೆ ಎಂದು ಬಂಧಿಸಲಾಗಿದೆ.
ಕಲ್ಲಡ್ಕ ಪ್ರಭಾಕರ್ ಬಂಧನಕ್ಕೆ ಆಗ್ರಹ ಏಕೆ?
ಡಿಸೆಂಬರ್ 24ರಂದು ಶ್ರೀರಂಗಪಟ್ಟಣದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡಂದಿರು. ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದೇ ಮೋದಿ ಸರ್ಕಾರ’ ಎಂದು ಭಟ್ ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ದೂರು ನೀಡಿದ್ದರು. ದೂರಿನ ಮೇರೆಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾಕರ್ ಭಟ್ ವಿರುದ್ಧ IPC ಸೆಕ್ಷನ್ 354, 294, 509, 506, 153A, 295 295A, 298ರ ಅಡಿ ಎಫ್‌ಐಆರ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ