ಕೊರೊನಾವೈರಸ್ ಜೆಎನ್1 ಸೋಶಿಯೋ ಎಕಾನಮಿಕ್ ವೈರಸ್ ಎಂದ ತಜ್ಞರು: ತ್ಯಾಜ್ಯ ನೀರಿನ ಮೇಲೂ ನಿಗಾ!
ರಾಜ್ಯ ಆರೋಗ್ಯ ಇಲಾಖೆ, ಮುನ್ಸಿಪಾಲಿಟಿಗಳು, ಬಯೋ ಟೆಕ್ನಾಲಜಿ ವಿಭಾಗಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಯಂತಹ ಸಂಸ್ಥೆಗಳ ಸಹಯೋಗದಲ್ಲಿ ತ್ಯಾಜ್ಯ ನೀರಿನ ಮಾದರಿಯ ಮೇಲೆ ಕಣ್ಗಾವಲು, ಕ್ಲಿನಿಕಲ್ ಮಾನಿಟರಿಂಗ್ ಮತ್ತು ಜಿನೋಮಿಕ್ ಸರ್ವೈಲೆನ್ಸ್ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 29: ಕರ್ನಾಟಕದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೋವಿಡ್ 19 (Covid 19) ಪ್ರಕರಣಗಳಲ್ಲಿ ಹೆಚ್ಚಿನವುಗಳು ಒಮಿಕ್ರಾನ್ ರೂಪಾಂತರ ಜೆಎನ್ 1 (JN.1) ಎಂಬುದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಜೆಎನ್ 1 ಎಂಬುದು ಒಂದು ಸೋಶಿಯೋ ಎಕಾನಮಿಕ್ ವೈರಸ್ (ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಮರ್ಥ್ಯವುಳ್ಳದ್ದು) ಎಂದು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಜೆಎನ್ 1 ಹರಡುವಿಕೆ ಮತ್ತು ಆ ವೈರಸ್ನ ನಮೂನೆಯ ಬಗ್ಗೆ ತಿಳಿದುಕೊಳ್ಳಲು ವಿವಿಧ ರೀತಿಯಲ್ಲಿ ನಿಗಾವಹಿಸಲಾಗಿದೆ. ಜೊತೆಗೆ ತ್ಯಾಜ್ಯ ನೀರಿನ ಮಾದರಿಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ, ವ್ಯವಸ್ಥೆಯನ್ನು ಸನ್ನದ್ಧವಾಗಿಡುವ ನಿಟ್ಟಿನಲ್ಲಿ ನಮ್ಮ ನಡೆ ಕೂಡ ಕೇಂದ್ರ ಸರ್ಕಾರದ ‘ವನ್ ಹೆಲ್ತ್’ ಪರಿಕಲ್ಪನೆಯ ರೀತಿಯಲ್ಲೇ ಇದೆ ಎಂದು ಹಿರಿಯ ಆನ್ಕೋಲಜಿಸ್ಟ್ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಇವರು ಕರ್ನಾಟಕ ಸರ್ಕಾರದ ಕೋವಿಡ್ ಜಿನೋಮಿಕ್ ಸರ್ವೈಲೆನ್ಸ್ ಕಮಿಟಿಯ ಸದಸ್ಯರೂ ಆಗಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ, ಮುನ್ಸಿಪಾಲಿಟಿಗಳು, ಬಯೋ ಟೆಕ್ನಾಲಜಿ ವಿಭಾಗಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಯಂತಹ ಸಂಸ್ಥೆಗಳ ಸಹಯೋಗದಲ್ಲಿ ತ್ಯಾಜ್ಯ ನೀರಿನ ಮಾದರಿಯ ಮೇಲೆ ಕಣ್ಗಾವಲು, ಕ್ಲಿನಿಕಲ್ ಮಾನಿಟರಿಂಗ್ ಮತ್ತು ಜಿನೋಮಿಕ್ ಸರ್ವೈಲೆನ್ಸ್ ಮಾಡಲಾಗುತ್ತಿದೆ ಎಂದು ವಿಶಾಲ್ ರಾವ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಜೆಎನ್ 1 ಎಂಬುದೊಂದು ಸೋಶಿಯೋ ಎಕಾನಮಿಕ್ ವೈರಸ್. ಇದು ವೇಗವಾಗಿ ಮತ್ತು ಹೆಚ್ಚು ಹರಡಬಲ್ಲಂತಹದ್ದಾಗಿದೆ. ಚಳಿಗಾಲದ ಈ ಸಂದರ್ಭದಲ್ಲಿ ಈ ವೈರಸ್ ಹೆಚ್ಚು ಹರಡುವ ಆತಂಕವಿದೆ. ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಉಂಟುಮಾಡುವ ಇತರ ವೈರಸ್ಗಳ ಜೊತೆ ಇದಕ್ಕೆ ಸಾಮ್ಯತೆ ಇದೆ. ಕ್ರಿಸ್ಮಸ್, ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ವೈರಸ್ ಹರಡುವ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡು ಬರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಪತ್ತೆಯಾದ ಕೋವಿಡ್ ಪೈಕಿ JN.1 ಒಮಿಕ್ರಾನ್ ರೂಪಾಂತರಿಯೇ ಹೆಚ್ಚು
ವೈರಸ್ ಸೋಂಕು ಹೊರಡುವುದರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ್ದು ಅತೀ ಅಗತ್ಯ. ಜೆಎನ್ 1 ಬಹಳ ಗಂಭೀರವಾದ ವೈರಸ್ ಅಲ್ಲದಿದ್ದರೂ ಬಹಳ ವೇಗವಾಗಿ ಹರಡಬಲ್ಲಂಥದ್ದಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಟ್ಟೆಚ್ಚರವಹಿಸಬೇಕಾದದ್ದು ಅಗತ್ಯ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ