ಬೆಂಗಳೂರು: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಕರವೇ ನಾರಾಯಣ ಗೌಡ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ. ಎಂಇಎಸ್, ಶಿವಸೇನೆ ಗೂಂಡಾಗಳಿಗೆ ಕಡಿವಾಣ ಹಾಕಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ವಿವಾದವನ್ನ ಕೆಣಕಿ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಇದನ್ನ ಮತ್ತೆ ಮತ್ತೆ ಸಹಿಸಲು ಆಗಲ್ಲ. ಬೆಳಗಾವಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಬಾಕಿ ಇದೆ. ಈ ನೆಲದ ಕಾನೂನಿಗೆ ಗೌರವ ಕೊಡದೇ ಪುಂಡಾಟಿಕೆ ಮಾಡಲಾಗುತ್ತಿದೆ. ಕೂಡಲೇ ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮಾಡಿ. ಕನ್ನಡಿಗರ ಮೇಲೆ ಹಾಗೂ ಆಸ್ತಿಪಾಸ್ತಿ ಮೇಲೆ ಎಂಇಎಸ್ ದಾಳಿ ಮಾಡ್ತಿದೆ. ಕೂಡಲೇ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು. ಎಂಇಎಸ್ ನಿಷೇಧಿಸಿ, ಪುಂಡರ ವಿರುದ್ಧ ಕಾನೂನು ಕ್ರಮ ಜರುಗಿಸಿ. ಕನ್ನಡಿಗರ ರಕ್ಷಣೆಗೆ ಸಿಎಂ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ ಎಂದು ಸಿಎಂ ಬೊಮ್ಮಾಯಿಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಬಣ ಪತ್ರದ ಮೂಲಕ ಒತ್ತಾಯ ಮಾಡಿದೆ.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ
ಕರವೇ ನಾರಾಯಣ ಗೌಡರ ಪತ್ರ ಹೀಗಿದೆ
ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮಾನ್ಯರೆ,
ವಿಷಯ: ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇಂದು (ದಿನಾಂಕ: 8-12-2022ರ ಗುರುವಾರ) ಶ್ರೀ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ ನೀಡಿದ ಮನವಿ ಪತ್ರ.
ತಮಗೆ ತಿಳಿದಿರುವಂತೆ ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಕರ್ನಾಟಕ ಅನೇಕ ಕನ್ನಡದ ಪ್ರದೇಶಗಳನ್ನು ಕಳೆದುಕೊಂಡರೂ ರಾಷ್ಟ್ರೀಯ ಐಕ್ಯತೆಗೆ ಭಂಗ ಬಾರದೆಂದು ಆದ ಅನ್ಯಾಯವನ್ನು ಸಹಿಸಿಕೊಂಡು ಬಂದಿದೆ. ಆದರೆ ಅಪ್ಪಟ ಕನ್ನಡದ ನೆಲವಾದ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ದಶಕಗಳಿಂದ ತಗಾದೆ ತೆಗೆಯುತ್ತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಮಹಾರಾಷ್ಟ್ರದ ಒತ್ತಡದಿಂದಲೇ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಮೆಹರ್ ಚಂದ್ ಮಹಾಜನ್ ಅವರ ಏಕಸದಸ್ಯ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ತೀರ್ಪು ನೀಡಿದೆ. ಆದರೆ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷದ ವಾತಾವರಣವನ್ನು ನಿರ್ಮಿಸಲು ಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಭಾಷಾಂಧ ಗೂಂಡಾ ಸಂಘಟನೆಗೆ ಹಣಕಾಸಿನ ಬೆಂಬಲ ನೀಡಿ ಗಡಿಭಾಗದಲ್ಲಿ ದಾಂಧಲೆ ನಡೆಸಲು, ಕನ್ನಡಿಗರ ಮೇಲೆ ದಾಳಿ ನಡೆಸಲು ಕಾರಣರಾಗಿದ್ದಾರೆ.
ಬೆಳಗಾವಿ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಈ ನೆಲದ ಕಾನೂನಿಗೆ ಗೌರವ ನೀಡಿ, ತೀರ್ಪಿಗಾಗಿ ಕಾಯುವ ಬದಲು ಬೆಳಗಾವಿಯಲ್ಲಿ ಸಂಘರ್ಷ ಮೂಡಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಹೋರಾಡುತ್ತ ಬಂದಿದ್ದು, ಬೆಳಗಾವಿಯಲ್ಲಿ ಶಾಂತಿಸ್ಥಾಪನೆ ದೃಷ್ಟಿಯಿಂದ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂಬ ಒತ್ತಾಯವನ್ನು ಮಂಡಿಸುತ್ತ ಬಂದಿದೆ.
ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ವಿನಾಕಾರಣ ದೌರ್ಜನ್ಯವೆಸಗಲಾಗುತ್ತಿದೆ. ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿಗಳಾಗುತ್ತಿವೆ. ಕನ್ನಡಿಗರು ಕಟ್ಟಿದ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಕನ್ನಡಿಗರ ಮೇಲಿನ ದಾಳಿ-ದೌರ್ಜನ್ಯಗಳು ಭಯೋತ್ಪಾದನೆಗೆ ಸಮನಾದ ಹೇಯಕೃತ್ಯಗಳಾಗಿರುತ್ತವೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ.
ಮಹಾರಾಷ್ಟ್ರದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ. ಶಿವಸೇನೆಯ ಎರಡೂ ಬಣಗಳು ಮತ್ತು ಎನ್ ಸಿಪಿ, ಎಂ.ಎನ್.ಎಸ್ ಪಕ್ಷಗಳು ವಿಶೇಷವಾಗಿ ಈ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು, ಈ ಕುರಿತು ಪ್ರಧಾನ ಮಂತ್ರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಅದೇ ರೀತಿ ತಡಮಾಡದೇ ಬೆಳಗಾವಿಯಲ್ಲಿ ಶಾಂತಿ ಕದಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಿ, ಅದರ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು