Breaking News Today Live Updates: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಚುನಾವಣಾ ಸಿದ್ಧತೆ ಚುರುಕುಗೊಂಡಿದೆ. ಕರ್ನಾಟಕದ ವಿದ್ಯಮಾನಗಳು ದಿನದಿಂದ ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಜ್ಯ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ ತಾಜಾ ಅಪ್ಡೇಟ್ಗಳು ಇಲ್ಲಿ ಲಭ್ಯ. ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಿವೆ. ಬಿಜೆಪಿಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಇಲ್ಲಿ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯ ನಂತರ ಕಾಂಗ್ರೆಸ್ನಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸಂಘಟನಾ ಪ್ರಕ್ರಿಯೆಗೆ ಹೊಸ ವೇಗ ಸಿಕ್ಕಿದೆ. ಪಂಚರತ್ನ ಯಾತ್ರೆಯ ಮೂಲಕ ರಾಜ್ಯದ ಉದ್ದಗಲಕ್ಕೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸಂಚರಿಸುತ್ತಿದ್ದಾರೆ. ಕರ್ನಾಟಕದ ವಿದ್ಯಮಾನಗಳು ದಿನದಿಂದ ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಜ್ಯ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ ತಾಜಾ ಅಪ್ಡೇಟ್ಗಳು ಇಲ್ಲಿ ಲಭ್ಯ.
ಈಶ್ವರಪ್ಪ ಒಬ್ಬ ಮಹಾನ್ ಪೆದ್ದ. ನಾನು ಅನೇಕ ಸಾರಿ ಹೇಳಿದ್ದೀನಿ ನಾಲಗೆಗೂ ಬ್ರೈನ್ಗೂ ಲಿಂಕ್ ತಪ್ಪೋಗಿ ಬಿಟ್ಟಿದೆ. ಏನೇನು ಮಾತಾಡುತ್ತಾರೆ. ಹಾಗಾದ್ರೆ ಈ ದೇಶದ ಬಗ್ಗೆ ಯಾರು ಮಾತನಾಡಲೇಬಾರದ. ಯೋಗ್ಯತೆ ಎಂದರೆ ಏನು ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ನಮ್ಮಲ್ಲಿ 562 ಜನ ರಾಜರುಗಳು ಇರ್ತಾರೆ. ಒಬ್ಬರನ್ನ ಕಂಡ್ರೆ, ಒಬ್ಬರಿಗೆ ಆಗಲ್ಲ. ಒಬ್ಬರು ಕಾಲು ಇಡ್ಕಂಡು, ಇಬ್ಬರು ಎಳೆಯೋದು. ಈಗ ನೋಡಿ ನನ್ನ ಮೇಲೆ ಎಲ್ಲಾ ಬಿದ್ಬಿಟ್ಟಿದ್ದಾರೆ. ಆದ್ರೆ ನನ್ನನ್ನು ಇವರ್ಯಾರು ಕೂಡ ಏನು ಮಾಡಲಿಕ್ಕೆ ಸಾಧ್ಯವಿಲ್ಲ. ಇದೆನ್ನೆಲ್ಲಾ ಮಾಡವ್ರು ಬಿಜೆಪಿಯವರು, ಆರ್‌ಎಸ್‌ಎಸ್‌ನವರು.
ಯಾಕೆಂದರೆ ನನ್ನ ಕಂಡ್ರೆ ಭಯ ಅವರಿಗೆ ಎಂದು ಹೇಳಿದರು.
ರಾಮನಗರ: ಸಿದ್ದರಾಮಯ್ಯ 2 ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ದೈವವಾಣಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಬಳಿ ಚರ್ಚೆ ಆಗಿಲ್ಲ, ಅವರ ಅಭಿಪ್ರಾಯ ಹೇಳಿರಬಹುದು. ದೇವರು, ಶಾಸ್ತ್ರದವರು, ಹಾಗೂ ಕಾರ್ಯಕರ್ತರನ್ನು ಕೇಳಬಹುದು. ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಡಿ.ಕೆ.ಶಿವಕುಮಾರ್
ಹೇಳಿದರು.
ಹಾಸನ: H.D.ಕುಮಾರಸ್ವಾಮಿ ನಮ್ಮ ಪಕ್ಷದವರಲ್ಲ, ಜೆಡಿಎಸ್ ಪಕ್ಷದವರು. ಯಾರೂ ನನ್ನನ್ನು ಹರಕೆ ಕುರಿ ಮಾಡಲು ಆಗಲ್ಲ. ಯಾರಿಗೆ ಮತ ಹಾಕಬೇಕೆಂದು ಜನ ಅಂತಿಮವಾಗಿ ನಿರ್ಧರಿಸುತ್ತಾರೆ. ಮತದಾರರು ಯಾರ ಜೇಬಿನಲ್ಲೂ ಇಲ್ಲ. H.D.ಕುಮಾರಸ್ವಾಮಿ ಜೇಬಿನಲ್ಲೂ ಇಲ್ಲ, ಮತ್ತೊಬ್ಬರ ಜೇಬಿನಲ್ಲೂ ಇಲ್ಲ. ಹೀಗಾಗಿ ನಾನು H.D.ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಾವೇರಿ: ನನಗೆ ಟಿಕೆಟ್ ನೀಡುವುದು ಸಿಎಂ ಬೊಮ್ಮಾಯಿ ಕೈಯಲ್ಲಿಲ್ಲ. ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ವಿಶ್ವಾಸ ಇದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದರು. ನಾನು ಮತ್ತೆ ಶಾಸಕನಾಗಿ ವಿಧಾನಸೌಧಕ್ಕೆ ಹೋಗೇ ಹೋಗುತ್ತೇನೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಮಗೆ ನಂಬಿಕೆ ಇಲ್ಲ. ಎಲ್ಲಾ ವಿಚಾರಗಳನ್ನು ಪ್ರಧಾನಿ ಮೋದಿಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.
ಉಡುಪಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಲ್ಲಾ ಎಸ್ಕಾಂ ದಿವಾಳಿ ಮಾಡಿದ್ದರು. ಬೊಮ್ಮಾಯಿ ಸಿಎಂ ಆದ ನಂತರ 9 ಸಾವಿರ ಕೋಟಿ ರೂ. ನೀಡಿದ್ದೇವೆ. ಎಸ್ಕಾಂ ದಿವಾಳಿ ಮಾಡಿದ ಸಿದ್ದರಾಮಯ್ಯ ಸುಳ್ಳು ಭರವಸೆ ನೀಡ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತಿದ್ದಾರೆ. ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಈಗಾಗಲೇ ಸಬ್ಸಿಡಿ ರೂಪದಲ್ಲಿ ಸರ್ಕಾರ 16,000 ಕೋಟಿ ರೂ. ನೀಡ್ತಿದೆ. ನಮ್ಮ ಸರಕಾರ ಈ ಆರ್ಥಿಕ ನಷ್ಟವನ್ನು ಸರಿದೂಗಿಸುವ ಕೆಲಸ ಮಾಡಿದೆ ಎಂದು ಇಂಧನ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.
ಹಾಸನ: ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ಮಾತ್ರ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳಗೂಲಿ ಗ್ರಾಮದಲ್ಲಿ ಹೇಳಿದರು. ದೇವರಾಜ ಅರಸು ಬಿಟ್ಟರೆ 5 ವರ್ಷ ಮುಖ್ಯಮಂತ್ರಿ ಆಗಿದ್ದು ನಾನೇ. 165 ಭರವಸೆ ಕೊಟ್ಟಿದ್ದೆ, ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. ಬಿಜೆಪಿಯವರು 600 ಭರವಸೆ ನೀಡಿದ್ದರು, 10% ಕೂಡ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಕೋಲಾರ: ಸಿದ್ದರಾಮಯ್ಯ 2 ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ದೇವರವಾಣಿ ವಿಚಾರವಾಗಿ ನಗರದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಟಾಂಗ್ ನೀಡಿದ್ದು, ಡಿಕೆಶಿ ಮನೆದೇವರು ಹೇಳಿದಂತೆ ಒಂದು ಕಡೆ ಸಿದ್ದರಾಮಯ್ಯ ಸ್ಪರ್ಧಿಸಲಿ. ಸಿದ್ದರಾಮಯ್ಯ ಮನೆದೇವರು ಹೇಳಿದಂತೆ 2 ಕಡೆ ನಿಂತರೆ ಎಡವಟ್ಟಾಗುತ್ತೆ. ಡಿ.ಕೆ. ಶಿವಕುಮಾರ್ ಹೇಳಿದಂತೆ ಕೋಲಾರ ಜಿಲ್ಲೆಯನ್ನು ಸಿದ್ದರಾಮಯ್ಯ ಬಿಡಲಿ. ಕೋಲಾರದಲ್ಲಿ ಬಿಜೆಪಿಗೆ ಜೆಡಿಎಸ್ ಎದುರಾಳಿ, ಇಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ. ಸಿದ್ದರಾಮಯ್ಯರನ್ನು ಯಾಮಾರಿಸಿ ಕೋಲಾರಕ್ಕೆ ಕರೆತರಲಾಗ್ತಿದೆ ಎಂದು ಮುನಿರತ್ನ ಕಿಡಿಕಾರಿದರು.
ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಸಾಪುರ ಕೆರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಾಗಿನ ಅರ್ಪಿಸಿದರು. ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸಾಪುರ ಗ್ರಾಮದ ಕೆರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಭೈರತಿ ಬಸವರಾಜ್ ಉಪಸ್ಥಿತರಿದ್ದರು.
ಹಾವೇರಿ: ನಿಮ್ಮ ಅಪ್ಪನಿಗೆ ಹುಟ್ಟಿದರೆ ನನ್ನನ್ನು ಪಕ್ಷದಿಂದ ಹೊರಹಾಕು ಎಂದು ಸಚಿವ ಮುರುಗೇಶ್ ನಿರಾಣಿಗೆ ಬಿಜೆಪಿ ಶಾಸಕ ಯತ್ನಾಳ್ ಸವಾಲು ಹಾಕಿದರು. ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿ, ನನ್ನನ್ನು ಚುನಾವಣೆಯಲ್ಲಿ ಸೋಲಿಸ್ತೇನೆ ಅಂತಾ ಪ್ರಮಾಣ ಮಾಡ್ತಾನೆ. ಅದಕ್ಕೆಲ್ಲ ನಾನು ಹೇದರುವ ಮಗ ಅಲ್ಲ. ಬೊಮ್ಮಾಯಿ ಅವರೇ ಹೆಚ್ಚು ಕಡಿಮೆಯಾದ್ರೆ ಟಿಕೆಟ್ ಕೊಡದಿರಬಹುದು ಎಂದು ಹೇಳಿದರು.
ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಸೇಫ್ ಅಲ್ಲ ಎಂದು ಕಲಬುರಗಿ ಜಿಲ್ಲೆ ಕಡಣಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಸ್ಪರ್ಧಿಸುವಂತೆ ಯಾರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ದೇವರೇ ಕಾಪಾಡಬೇಕು. ಕಾಂಗ್ರೆಸ್ ಪಕ್ಷದವರೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ. ನಾನು ಕೋಲಾರದಲ್ಲಿ ಸುತ್ತಾಡಿ ಜನರ ಭಾವನೆ ತಿಳಿದುಕೊಂಡಿದ್ದೇನೆ. ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಮತ ಪಡೆಯುವ ಶಕ್ತಿ ಇಲ್ಲ. ಅದಕ್ಕಾಗಿ ಸಿದ್ದರಾಮಯ್ಯರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದ್ರೆ ಹರಕೆಯ ಕುರಿ ಆಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಹಸ್ತಲಾಘವ ಮಾಡಲು ಮಕ್ಕಳು ಮುಗಿಬಿದ್ದ ಘಟನೆ ನಡೆದಿದೆ. ಸಿದ್ದರಾಮಯ್ಯ ಹೆಲಿಕಾಪ್ಟರ್ ನಿಂದ ಇಳಿದು ಕಾರಿನತ್ತ ಬರುತ್ತಲೇ ಮಕ್ಕಳು ಸಿದ್ದರಾಮಯ್ಯರನ್ನು ಮುತ್ತಿಕೊಂಡಿದ್ದಾರೆ. ಸಾರ್ ಥ್ಯಾಂಕ್ಸ್ ಕೊಡಿ, ಥ್ಯಾಂಕ್ಸ್ ಕೊಡಿ ಎಂದು ಕೂಗಿದ್ದಾರೆ. ಮಕ್ಕಳ ಕೋರಿಕೆಯಂತೆ ಮಕ್ಕಳಿಗೆ ಥ್ಯಾಂಕ್ಸ್ ಕೊಟ್ಟು ಸಿದ್ದರಾಮಯ್ಯ ಕಾರು ಏರಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಅಲೆದಾಡುವ ಅಲೆಮಾರಿನೆ ಅಲೆಮಾರಿ ತರಹ ಏನು ಬಂತು. ಚಾಮುಂಡೇಶ್ವರಿ ಬೇಡ ಬಾದಾಮಿ ಹೋಗು. ಬಾದಾಮಿ ಬೇಡ ಕೋಲಾರಕ್ಕೆ ಹೋಗು. ಕೋಲಾರ ಬೇಡ ಅಂದ್ರೆ ನಾಳೆ ಅವರ ಗತಿ ಚಾಮರಾಜಪೇಟೆನೆ. ಆ ಸಾಬಣ್ಣ ಜಮೀರ್ ಅಹ್ಮದ್ ಹತ್ತಿರ ಕೂತುಕೊಂಡು ಅಲ್ಲಾ ಹು ಅಕ್ಬರ್ ಅನ್ನೋದು ಬಿಟ್ರೆ ಸಿದ್ದರಾಮಯ್ಯಗೆ ಬೇರೆ ದಾರಿಯಿಲ್ಲ. ಕೋಲಾರಲ್ಲಿ ಸಿದ್ದರಾಮಯ್ಯ ನಿಲ್ಲೋದು ಈಗಲೂ ನನಗೆ ಡೌಟೆ ಅಂತ ಹೇಳ್ತಿನಿ. ಯಾಕೆ ಅಂತ ಅವರು ಅಲ್ಲಿ ನಿಂತ ಮೇಲೆ ಹೇಳ್ತಿನಿ. ಹೇಗೆ ಅಲ್ಲಿಯ ಜನ ಸೋಲಿಸ್ತಾರೆ ಅಂತ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಅರಕಲಗೂಡು ತಾಲ್ಲೂಕಿಗೆ ಸಿದ್ದರಾಮಯ್ಯ ಆಗಮನ ಹಿನ್ನಲೆ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ಅರಕಲಗೂಡು ತಾ. ಬಿಳಗೂಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಬರುವ ಮುನ್ನವೇ ಘೋಷಣೆ ಕೂಗುತ್ತಿದ್ದಾರೆ. ಬರಬೇಕಣ್ಣ ಬರಬೇಕು ಸಿದ್ರಾಮಣ್ಣ ಬರಬೇಕು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂದು ಗ್ರಾಮಸ್ಥರು ಜೈ ಕಾರ ಹಾಕುತ್ತಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನವರ ಪ್ರಜಾಧ್ವನಿ ಯಾತ್ರೆ ಹಾಸ್ಯಾಸ್ಪದ ವಾಗಿದೆ. ಪ್ರಜೆಗಳನ್ನ ಮರೆತು ಸಂಸತ್ತಿನಲ್ಲಿ 40 ಸೀಟ್ ಗೆ ಬಂದವರಿಗೆ ಈಗ ಪ್ರಜೆಗಳು ನೆನಪಾಗಿದೆ. ಕಾಂಗ್ರೆಸ್ ತ್ರೀಬಲ್ ಇಂಜಿನ್ ಸರ್ಕಾರ ಇದ್ದಾಗ ಗಡಿಯಲ್ಲಿ ಕಿಡಿ ಹಚ್ಚಿದ್ದರು. ಮಹದಾಯಿ ಯೋಜನೆ ಅನುಷ್ಠಾನವನ್ನ ಬಿಜೆಪಿ ಸರ್ಕಾರ ಮಾಡಿದೆ. ಡಿಕೆ ಶಿವಕುಮಾರ್ ಅವರೇ ಈಗ 200 ಯೂನಿಟ್ ವಿದ್ಯುತ್ ಉಚಿತ ಕೊಡ್ತೀವಿ ಅಂತಾ ಹೇಳ್ತಿದ್ದಿರಿ. ನೀವು ಇಂಧನ ಸಚಿವರಾಗಿದ್ದಾಗ ಎನೂ ಮಾಡಿದ್ರೀ. ಚುನಾವಣೆ ಗಿಮಿಕ್ ಮಾಡಲು ಈಗ ಹೊರಟಿದ್ದೀರಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ನವರು ಯಾರು ಈಗ ಉಳಿದಿಲ್ಲ ಎಂದರು.
ನಾನೇ ಮುಂದಿನ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ 65ರ ವಯಸ್ಸಿನಲ್ಲಿ ಅವರೇ ಹೇಳಿಕೊಂಡಿದ್ರು ಇದು ಕೊನೆ ಚುನಾವಣೆ ಎಂದು. ಆದ್ರೆ ಈಗಲೂ ಚುನಾವಣೆಗೆ ನಿಲ್ಲಲು ಮುಂದಾಗ್ತಿದ್ದಾರೆ. ಅದಕ್ಕೆ ಅವರನ್ನು ಸ್ಟೇ ಸಿದ್ದರಾಮಯ್ಯ ಅಂದೆ. ಸ್ಟೇ ಅಂದ್ರೆ ಅಲ್ಲಿಯೇ ಇರ್ತೀನಿ, ಅಧಿಕಾರ ಬೇಕು ಎಂಬ ದಾಹ ಅವರಲ್ಲಿದೆ. ಅಧಿಕಾರದ ಹಪಹಪಿತನ ಅವರಲ್ಲಿದೆ. ಯುವಕರಿಗೆ ತಗೋಳ್ರಪ್ಪಾ, ಕೆಲಸ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಅವರೇ ಯಾಕೆ ಅಧಿಕಾರ ಅನುಭವಿಸಬೇಕು? ಅವರ ಪಕ್ಷದಲ್ಲೇ ನೋಡ್ತಿದ್ದೀವಲ್ಲಾ, ಒಬ್ಬರು ಕಂಡರೆ ಒಬ್ಬರಿಗೆ ಆಗುತ್ತಿಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಕರೆಂಟ್ ಇಲ್ಲದೇ ಬಜೆಟ್ ಮಂಡಿಸಿದ್ದಾರೆ. ಈಗ 200 ವ್ಯಾಟ್ ಕರೆಂಟ್ ಫ್ರೀ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದು. ಅವರು ಮಹಾನ್ ದೊಡ್ಡವರು, ಕಾನೂನು ತಜ್ಞರು. ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೂ ಮುನ್ನವೇ ಸಿದ್ದರಾಮಯ್ಯ ಸ್ಟೇ ತಂದರು. ಸ್ಟೇ ಸಿದ್ದರಾಮಯ್ಯ ಅವರು ಪುಸ್ತಕದಲ್ಲಿ ಏನೇನಿದೆ ಅಂತ ಕಾದು ನೋಡಬೇಕಾಗಿತ್ತು. ತಪ್ಪಿದರೆ ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತು. ವಯಸ್ಸಾಗಿದೆ, ಸೆಲ್ಫ್ ರಿಟೈರ್‌ಮೆಂಟ್ ತೆಗೆದುಕೊಳ್ಳದೇ ಸ್ಟೇ ಸಿದ್ದರಾಮಯ್ಯ ಎನ್ನುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಮಳವಳ್ಳಿ ಕ್ಷೇತ್ರದಲ್ಲಿ ನರೇಂದ್ರಸ್ವಾಮಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ನರೇಂದ್ರಸ್ವಾಮಿಗೆ ಟಿಕೆಟ್ ನೀಡದಂತೆ ಕುರುಬ ಸಮುದಾಯದ ಮುಖಂಡರು ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. ಹೊಸ ಮುಖಕ್ಕೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಗೆಲ್ಲಬಹುದು. ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಕ್ಷೇತ್ರದಲ್ಲಿ ದೌರ್ಜನ್ಯವೆಸಗುತ್ತಿದ್ದಾರೆ. ನರೇಂದ್ರಸ್ವಾಮಿಗೆ ಟಿಕೆಟ್ ನೀಡಿದರೆ ಕುರುಬ ಸಮುದಾಯ ಮತ ಹಾಕಲ್ಲ. ಬೇರೆಯವರಿಗೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್‌ಗೆ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯಗೆ ಮಳವಳ್ಳಿ ಕುರುಬ ಸಮುದಾಯ ಮುಖಂಡರು ಮನವಿ ಮಾಡಿದ್ದಾರೆ.
ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಕೋಲಾರ ಜಿಲ್ಲಾ JDS ಘಟಕದ ಪ್ರಮುಖ ನಾಯಕರ ಜೊತೆ ಜೆಡಿಎಸ್ ನಾಯಕರು ರಹಸ್ಯ ಚರ್ಚೆ ನಡೆಸುತ್ತಿದ್ದಾರೆ. ಕಳೆದ 2 ದಿನಗಳಿಂದ ಜೆಡಿಎಸ್ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ್, ಬಿಜೆಪಿ ಮುಖ್ಯ ವಕ್ತಾರ ಎಂ.ಜಿ ಮಹೇಶ್, ಶಾಸಕ ಪಿ. ರಾಜೀವ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಜಾ ಧ್ವನಿ ಯಾತ್ರೆ ಕಾಂಗ್ರೆಸ್ ಶೋಕ ಯಾತ್ರೆ. ಅಕ್ಷಮ್ಯ ಅಪರಾಧಕ್ಕಾಗಿ ಯಾತ್ರೆ ಮಾಡುತ್ತಿದ್ದಾರೆ. ಇದು ಪ್ರಜಾ ಧ್ವನಿ ಅಲ್ಲ, ಪ್ರಜಾ ಶೋಕ ಯಾತ್ರೆ. ಕಾಂಗ್ರೆಸ್ ಓಡುವ ಬಸ್ ಅಲ್ಲ, ದೂಡುವ ಬಸ್. ಸಿದ್ದರಾಮಯ್ಯ ಕೈಯಲ್ಲಿ ಸ್ಟೇರಿಂಗ್ ಇದ್ರೆ, ಡಿ.ಕೆ. ಶಿವಕುಮಾರ್ ಕಾಲಲ್ಲಿ ಬ್ರೇಕ್ ಇದೆ. ಕಾಂಗ್ರೆಸ್ ಪಕ್ಷ ಪ್ರಜೆಗಳ ಧ್ವನಿ ಆಲಿಸಿದ್ದಿದ್ದರೆ ಭಗತ್ ಸಿಂಗ್ ನೇಣಿಗೆ ಏರುವುದು ತಪ್ಪಿಸಬಹುದಿತ್ತು. ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಿರಲಿಲ್ಲ. ಭಾರತ ವಿಭಜನೆ ಆಗುತ್ತಿರಲಿಲ್ಲ ಎಂದು ಶಾಸಕ ಪಿ. ರಾಜೀವ್ ಹೇಳಿದ್ರು.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ದೇವರ ಸೂಚನೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಶನಿವಾರ ಪೂಜಾ ಕಾರ್ಯಕ್ರಮಕ್ಕೆ ಮಳವಳ್ಳಿಗೆ ಹೋಗಿದ್ದೆ. ದೇವಸ್ಥಾನ ಸ್ಥಾಪನೆ ಮಾಡಿದವರ ಮೈ ಮೇಲೆ ದೇವರು ಬಂದಂಗಾಗಿ ಈ ರೀತಿ ಹೇಳಿದ್ರು. ಈ ಬಗ್ಗೆ ನಾನು ಯಾರ ಬಳಿಯು ಚರ್ಚೆ ಮಾಡಿಲ್ಲ. ತಂದೆಯವರಿಗು ಈ ವಿಚಾರ ಹೇಳಿಲ್ಲ. ದೇವರು ಹೇಳಿದ್ರು ಅಂತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ಪ್ರಾಕ್ಟಿಕಲ್ ಆಗಿ ಸಾಧ್ಯವಿಲ್ಲ. ಕೋಲಾರದಲ್ಲಿ ನಿಲ್ಲಬೇಕು ಎಂಬುದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ತೀರ್ಮಾನವಾಗಿತ್ತು. ಕ್ಷೇತ್ರದ ಸ್ಪರ್ಧೆ ವಿಚಾರವಾಗಿ ಆಪ್ತ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಸಿದೆ. ಎರಡು ಕ್ಷೇತ್ರದಲ್ಲಿ ನಿಲ್ಲಬೇಕು ಎಂಬುದು ಹಿಂದಿನಿಂದಲು ಚರ್ಚೆ ನಡೆಯುತ್ತಿದೆ ಎಂದರು.
ಉಚಿತವಾಗಿ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬೇಜವಾಬ್ದಾರಿಯುತ ಪಾರ್ಟಿ, ಅಸಾಧ್ಯವಾದದ್ದನ್ನು ಹೇಳ್ತಾರೆ. ಅಷ್ಟು ವಿದ್ಯುತ್ ಕೊಡಲು ಪ್ರತಿ ವರ್ಷ 23 ಸಾವಿರ ಕೋಟಿ ರೂ. ಬೇಕು. ಆದರೆ ಜನರು ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ಬಯಸುತ್ತಾರೆ. ಯಾರೂ ಸಹ ಉಚಿತವಾಗಿ ವಿದ್ಯುತ್ ಬಯಸುವುದಿಲ್ಲ. ಯೋಗ್ಯ ದರದಲ್ಲಿ ಒಳ್ಳೆ ವಿದ್ಯುತ್ ಜನರಿಗೆ ಬೇಕು. ಕಾಂಗ್ರೆಸ್ ನಾಯಕರು ಉಚಿತವಾಗಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಅಕ್ಕಿ ಕೊಡುತ್ತಿರುವುದು ನಾವು ಎಂದು ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ತಾಯಿ ಮೇಲೆ ಪ್ರಮಾಣ ಮಾಡಿ ಕೊಟ್ಟ ಮಾತಿನಂತೆ ಸಿಎಂ ನಡೆದುಕೊಂಡಿಲ್ಲ. 2c, 2D ಮೂಲಕ ನಮ್ಮ ಹೋರಾಟವನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಸಿಎಂ ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯ ಖಂಡಿಸಿ ಇಂದು ಅವರ ನಿವಾಸ ಮುತ್ತಿಗೆ ಹಾಕುತ್ತಿದ್ದೇವೆ. ಇವತ್ತಿನ ಪ್ರತಿಭಟನಾ ಸಮಾವೇಶದಲ್ಲಿ ಮುಂದಿನ ಹೋರಾಟದ ನಿರ್ಣಯ ಮಾಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಶ್ರೀಶೈಲದಲ್ಲಿ ನಡೆಯಲಿರುವ ರಾಷ್ಟ್ರೀಯ ಜನ ಜಾಗೃತಿ ಸಮ್ಮೇಳನದಲ್ಲಿ ಭಾಗಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶ್ರೀಶೈಲಕ್ಕೆ ತೆರಳಿದ್ದಾರೆ. ಸಿಎಂ ಜೊತೆ ಕಾರಜೋಳ ನಿರಾಣಿ ಹಾಗೂ ಸಿ.ಟಿ.ರವಿ ಸಹ ಪ್ರಯಾಣ ಬೆಳೆದಿದ್ದಾರೆ.
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಸ್ವಂತ ಜಿಲ್ಲೆ ಮೈಸೂರಿನಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಅವರಿಗಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ಬಾದಾಮಿಯಲ್ಲಿ ಮತ್ತೆ ಗೆದ್ದು ಬರುವ ವಿಶ್ವಾಸ ಸಿದ್ದರಾಮಯ್ಯಗೆ ಇಲ್ಲ. ವಿಶ್ವಾಸವಿದ್ರೆ ಬಾದಾಮಿ ಅಥವಾ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುತ್ತಿದ್ದರು. ಸೋಲಿನ ಭೀತಿಯಿಂದ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ ಎಂದು ಸಿ.ಟಿ. ರವಿ ಟಂಗ್ ಕೊಟ್ಟರು.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಯುವ ಕೃತಿ ಪ್ರದರ್ಶನ ಉದ್ಘಾಟನೆ ಮಾಡಲಾಗಿದೆ. ಪ್ರದರ್ಶನ ಮಳಿಗೆಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಧಾರವಾಡದ ಕೆಸಿಡಿ ಫುಟ್‌ಬಾಲ್ ಮೈದಾನದಲ್ಲಿ ದೇಶದ ವಿವಿಧೆಡೆಯ ಯುವ ಆವಿಷ್ಕಾರಗಳನ್ನೊಳಗೊಂಡ ಪ್ರದರ್ಶನ ಮಾಡಲಾಗುತ್ತಿದೆ.
ಜ.12 ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನಕ್ಕೆ ವಾಹನದಲ್ಲಿ ಹೋಗವ ವೇಳೆ ಪ್ರಧಾನಿಗೆ ಬಾಲಕನೋರ್ವ ಹಾರ ಹಾಕಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಬಾಲಕ ಕುನಾಲ್ ಟಿವಿ9ನೊಂದಿಗೆ ಮಾತನಾಡಿ ನನಗೆ (ಕುನಾಲ್) ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಹೀಗಾಗಿ ಪ್ರಧಾನಿ ಮೋದಿ ನೋಡಲು ನನ್ನ ಅಜ್ಜ, ಮಾವ, ಎರಡುವರೆ ವರ್ಷದ ಮಗು ಜೊತೆ ಹೋಗಿದ್ವಿ. ಮಗುಗೆ RSS ಡ್ರೆಸ್ ಹಾಕಿಸಿದ್ವಿ, ಮಗು ಕಡೆಯಿಂದ ಪ್ರಧಾನಿಗಳಿಗೆ ಹಾರ ಕೊಡಿಸಬೇಕು ಅಂತ ಅಂದುಕೊಂಡಿದ್ವಿ. ಆದರೆ ಸಾಧ್ಯವಾಗಲಿಲ್ಲ ಹೀಗಾಗಿ ನಾನೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್ ಹ್ಯಾಂಡ್ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ.
ಈ ಸುದ್ದಿಗೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿಯು ಬೆಂಗಳೂರಿನ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಇದನ್ನು 22ಕ್ಕೆ ಏರಿಸಬೇಕೆಂಬ ರಣತಂತ್ರವನ್ನು ಬಿಜೆಪಿ ಸಿದ್ಧಪಡಿಸಿದೆ.
ಬೆಂಗಳೂರಿನ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂದು ಬಿಜೆಪಿ ರಣತಂತ್ರವನ್ನು ಸಿದ್ಧಪಡಿಸಿದೆ.
Link: https://t.co/WTRdna6v4b#BJP #KarnatakaPolitics #KarnatakaAssemblyElections #PoliticalNews
ತಾಜಾ ಸುದ್ದಿಗಾಗಿ ಟಿವಿ9 ಕನ್ನಡ ವಾಟ್ಸಾಪ್ ಗ್ರೂಪ್ ಸೇರಿ?https://t.co/xepk1Mqm11
— TV9 Kannada (@tv9kannada) January 13, 2023
ನಾನು ಹಿಂದೂ, ಆದರೆ ನನಗೆ ಹಿಂದುತ್ವ ಬೇಕಿಲ್ಲ ಅಂತಾರೆ ಕೆಲವರು ಎಂದು ಸಿದ್ದರಾಮಯ್ಯ ಹೇಳಿಕೆಗೆ ಅನಂತಕುಮಾರ ಹೆಗಡೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಹೆಗಡೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ದೇಶದಲ್ಲಿ ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ಹಿಂದೂ ಆದರೆ ನನಗೆ ಹಿಂದುತ್ವ ಬೇಕಿಲ್ಲ ಅಂತಾರೆ, ಅಬ್ಬಬ್ಬಾ. ಆ ಮನುಷ್ಯನಿಗೆ ಅವನ ರಕ್ತಾನೇ ಗೊತ್ತಿಲ್ಲ, ಅಂಥವರಿಗೆಲ್ಲ ಹಿಂದುತ್ವ ಎನ್ನುವುದು ನಿನಗೆ ಬೇಕೋ ಬೇಡವೋ, ಯಾರಿಗೆ ಬೇಕು? ನಿನಗೆ ಹಿಂದುತ್ವ ಬೇಡ ಎಂದು ನಾವು ಪರಿಗಣನೆ ಮಾಡಿ ಆಗಿದೆ. ಅವನು ಹಿಂದೂ ಅಲ್ಲವೆಂದು ನಾವೇ ತೆಗೆದಿಟ್ಟಾಗಿದೆ. ಹಿಂದೂ ಎಂದು ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕು ಒಪ್ಪದಿರುವುರುದು, ಸತ್ಯದ ಬದುಕು ಹಿಂದುತ್ವ. ಹಿಂದುತ್ವದ ಬಗ್ಗೆ ಇಂತಹ ಕಮಂಗಿಗಳಿಗೆ ಏನ್ರೀ ಅರ್ಥವಾಗಬೇಕು. ಜಾತಿ ಗೂಡು ಬಿಟ್ಟು ಹೊರಬರದವರು ಹಿಂದುತ್ವದ ಬಗ್ಗೆ ಮಾತಾಡ್ತಾರೆ. ಪುಸ್ತಕ ಓದಲು ಯೋಗ್ಯತೆ ಇಲ್ಲದವರೆಲ್ಲ ಹಿಂದುತ್ವದ ಬಗ್ಗೆ ಮಾತಾಡ್ತಾರೆ. ದೇವಸ್ಥಾನಕ್ಕೆ ಹೇಗೆ ಹೋಗಬೇಕೆಂದು ಗೊತ್ತಿಲ್ಲದವರು ಚರ್ಚೆ ಮಾಡ್ತಾರೆ. ಕುತ್ತಿಗೆಗೆ ಹಾಕುವ ಶಾಲು, ಹಣೆಯ ತಿಲಕದಲ್ಲಿ ಹಿಂದುತ್ವ ಕಾಣಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಮಲತಾ ಅಂಬರೀಶ್ ಜೆಡಿಎಸ್ ನ ಅಸೋಸಿಯೇಟ್ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸುಮಲತಾ ಅಂಬರೀಶ್ ಆಪ್ತ ಇಂಡುವಾಳ ಸಚ್ಚಿದಾನಂದ ತಿರುಗೇಟು ನೀಡಿದ್ದಾರೆ. ಸುಮಲತಾ ಮೇಡಂ ಸ್ಪರ್ಧೆ ಮಾಡುವಾಗ, ನಾನೇ ಮೇಡಂನ ಕರೆದುಕೊಂಡು ಹೋಗಿ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೆ. ಅವಾಗ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡದಂತೆ ಡಿಕೆಶಿ ಮನವೊಲಿಕೆ ಮಾಡಿದ್ರು. ರಾತ್ರಿ 12 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯ ವರೆಗೂ ಮನವೊಲಿಸುವ ಕೆಲಸ ಮಾಡಿದ್ರು. ನಿಜವಾಗಿಯೂ ಯಾರು ಯಾರ, ಅಸೋಸಿಯೇಟ್ ಅಂತಾ ಗೊತ್ತಿಲ್ಲ. ನಿಜವಾಗಿಯೂ ಯಾರು ಯಾರ ಕೈ ಹಿಡಿದುಕೊಂಡು ವಿಧಾನಸೌಧದ ಸುತ್ತಾ ಸುತ್ತಾಡಿದ್ರು? ಡಿಕೆ ಅಣ್ಣನ ಅಥವಾ ಸುಮಲತಾ ಮೇಡಂ ಸುತ್ತಾಡ್ತಿದ್ರಾ? ಮೇಡಂ ಅವ್ರು ಬಹಳ ಸ್ಪಷ್ಟತೆ ಮತ್ತೆ ನಿಖರತೆಯಿಂದ ಇದ್ದಾರೆ. ಬಿಜೆಪಿ ನಾಯಕರು ಸುಮಲತಾ ಜೊತೆ ಮಾತಾಡಿದ್ದಾರೆ. ಅವರು ಮುಂದೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರ್ವ ಸ್ವತಂತ್ರರಾಗಿದ್ದಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಕಡೆಗಣನೆ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಟ್ವೀಟ್ ಆರೋಪ ವಿಚಾರಕ್ಕೆ ಸಂಬಂಧಿಸಿ ಜಗದೀಶ್ ಶೆಟ್ಟರ್ ನಮ್ಮ ಪಕ್ಷದ ಹಿರಿಯ ನಾಯಕ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬೇರೆ ಬೇರೆ ಕಾರಣಕ್ಕೆ ಆ ತರ ಆಗಿರಬಹುದು ಎಂದು ಬೆಂಗಳೂರಲ್ಲಿ ಬಿಜೆಪಿ ರಾ.ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಎದುರು ತೆಂಗಿನಕಾಯಿ ಒಡೆದು ಪ್ರತಿಭಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಆಕಾಂಕ್ಷಿ ಧನಂಜಯ ಜಾಧವ್ ಪ್ರತಿಕ್ರಿಯೆ ನೀಡಿದ್ದಾರೆ. ಹೊನ್ನಿಹಾಳ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ನಿಮಿತ್ತ ಮಿಕ್ಸರ್, ಪಾತ್ರೆ ಹಂಚುವ ತಂತ್ರಗಾರಿಕೆಗೆ ಹೊರಟಿದ್ರು. ಊರಲ್ಲಿ ಇದ್ದ ಸ್ವಾಭಿಮಾನಿ ಜನ ಇದನ್ನ ವಿರೋಧಿಸಿದ್ದಾರೆ. ಜನರಿಗೆ ಅಭಿವೃದ್ಧಿ, ನೌಕರಿ, ನೀರು, ಚರಂಡಿ ವ್ಯವಸ್ಥೆ ಮಾಡೋದು ರಾಜಕೀಯ ಪ್ರತಿನಿಧಿಗಳ ಕರ್ತವ್ಯ. ಇದರಲ್ಲಿ ವಿಫಲ ಇದ್ದ ಕಾರಣ ಮಿಕ್ಸರ್, ಪಾತ್ರೆ ಕೊಡುತ್ತೇವೆ ತೆಂಗಿನಕಾಯಿ ಮೇಲೆ ಆಣೆ ಮಾಡಬೇಕು ಎಂಬ ತಂತ್ರಗಾರಿಕೆಗೆ ಜನರು ಧಿಕ್ಕಾರ ಮಾಡಿದ್ದಾರೆ. ಹೊನ್ನಿಹಾಳದ ಸ್ವಾಭಿಮಾನ ಗ್ರಾಮಸ್ಥರು ತೆಂಗಿನಕಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಹೊಲಸು ರಾಜಕೀಯಕ್ಕೆ ಯಾರೂ ಅವಕಾಶ ಕೊಡಬಾರದು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಪುತ್ಥಳಿ ಅನಾವರಣ ಬಹು ದಿನಗಳ ಕನಸು. ಕಳೆದ 75 ವರ್ಷಗಳಿಂದ ಪುತ್ಥಳಿ ಅನಾವರಣ ಸಾಧ್ಯವಾಗಿರಲಿಲ್ಲ. ಒಂದೂವರೆ ತಿಂಗಳಲ್ಲಿ ಪುತ್ಥಳಿಗಳ ಅನಾವರಣ ಮಾಡುತ್ತೇವೆ ಎಂದರು.
ಜನರ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಮುಂದೆ ಕನ್ನಡ ನಾಡಿನಲ್ಲಿ ಹುಟ್ಟಿ ಕ್ರಾಂತಿ ಮಾಡಿದ ಇಬ್ಬರು ಮಹಾನ್ ನಾಯಕ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮಹಾನ್ ಪುರುಷರಾದ ಬಸವಣ್ಣನವರು ಸಾಮಾಜಿಕ, ಆರ್ಥಕ, ಶೈಕ್ಷಣಿಕ, ವೈಚಾರಿಕ ಪ್ರಗತಿಯನ್ನ ಮಾಡಿ ಒಂದು ದರ್ಶನ ಕೊಟ್ಟಿರುವ ನಾಡು ಕೊಟ್ಟಿರುವಂತಹ ನಾಯಕರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ಬಳಿಕ ಮಾತನಾಡಿದರು.
ಊರು ಕೇರಿಗಳನ್ನ ಕಟ್ಟಿ ಮಾದರಿಯಾದ ಮಹಾನ್ ನಾಡು ಕಟ್ಟಿರುವ ಮಹಾಪ್ರಭು ಎರಡು ಮೂರ್ತಿಗಳನ್ನ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿದ್ದು ಅದರಂತೆ ಇಂದು ಸ್ಪೀಕರ್ ಕಾಗೇರಿ, ಬಸವರಾಜ್ ಹೊರಟ್ಟಿ ಜೊತೆ ಚರ್ಚಿಸಿ ಅಶೋಕ್ ಗೆ ಕೊಟ್ಟಂತಹ ಜವಾಬ್ದಾರಿಯನ್ನ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ಜನವರಿ 14ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ನಾಗೇಶ್ ತಿಳಿಸಿದ್ದಾರೆ. ಜ.9ರಂದೇ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದ್ರೆ ರಾಜೀನಾಮೆ ನೀಡಿರುವ ವಿಚಾರವನ್ನು ಯಾರ ಜತೆಗೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ವರಿಷ್ಠರು ಯಾವುದೇ ಕ್ಷೇತ್ರ ಹೇಳಿದರೂ ಸ್ಪರ್ಧೆ ಮಾಡ್ತೇನೆ. ಸದ್ಯಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಏನೂ ಮಾತಾಡಲ್ಲ ಎಂದರು. ಹಾಗೂ ಇದೇ ವೇಳೆ ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ನಾಗೇಶ್, ಹೈಕಮಾಂಡ್ ಹೇಳುವವರೆಗೂ ಯಾವುದೂ ಅಂತಿಮವಿಲ್ಲ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಲ್ಲರಿಗೂ ಅನ್ವಯ ಆಗುತ್ತೆ ಎಂದರು.
ಕೆಂಪೇಗೌಡ ಹಾಗೂ ಬಸವಣ್ಣನವರ ಪ್ರತಿಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಪ್ರತಿಮೆ ಭೂಮಿಪೂಜೆ ಕಾರ್ಯಕ್ರಮಕ್ಕೆ ವಿಪಕ್ಷಗಳ ನಾಯಕರು ಗೈರಾಗಿದ್ದಾರೆ. ಆಹ್ವಾನ ಇದ್ರೂ ಸಿದ್ದರಾಮಯ್ಯ, ಕುಮಾರಸ್ವಾಮಿ, ಹರಿಪ್ರಸಾದ್ ಸೇರಿದಂತೆ ವಿಪಕ್ಷಗಳ ನಾಯಕರು ಗೈರಾಗಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.
ಜನವರಿ 19ರಂದು ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ಕಲಬುರಗಿ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಕಂದಾಯ ಸಚಿವ ಆರ್.ಅಶೋಕ್ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಮಳಖೇಡ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದ ಸ್ಥಳ ಪರಿಶೀಲಿಸಲಿದ್ದಾರೆ.
ಹಿಂದೂಗಳು ಮನೆಯಲ್ಲಿ ಕಾಣೋ ರೀತಿಯಲ್ಲೇ ತಲ್ವಾರ್ ಇಡಬೇಕು ಎಂದು ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೊದಲು ನಾವೆಲ್ಲರೂ ಆಯುಧಗಳನ್ನು ಪೂಜೆ ಮಾಡುತ್ತಿದ್ದೆವು. ಇದೀಗ ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು. ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂದೂಕಿಗೆ ಪೂಜೆ ಮಾಡಲ್ವಾ? ಮನೆಯಲ್ಲಿ ಒಂದು ತಲ್ವಾರ್ ಇಡುವುದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕುತ್ತೇವೆ ಎಂದು ಹೆದರಿಸಿದರೆ ಹೇಳಿ. ಶಸ್ತ್ರ ಹಿಡಿದ ಕಾಳಿ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಎಂದು. ತಲ್ವಾರ್ ಇಟ್ಟರೆ ಯಾರೂ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವುದಿಲ್ಲ. ತಲ್ವಾರ್ ಇಡೋದು ಹೊಡೆಯೋಕೆ ಅಲ್ಲ, ಧರ್ಮ, ದೇಶದ ರಕ್ಷಣೆಗೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಎರಡು ಕಡೆ ಸಂಗೊಳ್ಳಿರಾಯಣ್ಣ ಹಾಗೂ ಒಂದು ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 11.15 ಕ್ಕೆ ಅರಕಲಗೂಡು ತಾಲ್ಲೂಕಿನ, ರಾಮನಾಥಪುರಕ್ಕೆ ಹೆಲಿಕಾಪ್ಟರ್ ಮೂಲಕ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಿಳಗೂಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಕಾಂಗ್ರೆಸ್ ಮುಖಂಡ ಅರಕಲಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೃಷ್ಣೇಗೌಡರ ಮನೆಗೆ ಔತಣಕೂಟಕ್ಕೆ ಹೆಲಿಕಾಪ್ಟರ್‌ನಲ್ಲಿ ಮುದಗನೂರು ಗ್ರಾಮಕ್ಕೆ ತೆರಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಆಕ್ಟಿವ್ ಆಗುತ್ತಿವೆ. ಸದ್ಯ ಬಿಜೆಪಿ ಪ್ರಚಾರ ಗರಿಗೆದರಿದ್ದು ಜ.19ರಂದು ಮತ್ತೆ ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜನವರಿ 19ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರೋ ಕಂದಾಯ ಗ್ರಾಮದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಬೆಂಗಳೂರಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಟಾರ್ಗೆಟ್ ಮಾಡಿದೆ. 28 ವಿಧಾನಸಭಾ ಪೈಕಿ 23ರಲ್ಲಿ ಗೆಲ್ಲುತ್ತದೆ. ಅದಕ್ಕೆ ಎಲ್ಲ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಎಂದು ಸಚಿವ ಅಶ್ವತ್ಥ್ ನಾಯರಾಣ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಮೋದಿ ಸರ್ಕಾರ, ಬಿಜೆಪಿ ಸರ್ಕಾರವನ್ನ ಜನ ಒಪ್ಪಿಕೊಂಡಿದ್ದಾರೆ. ಜನರ ಪರ ಕೆಲಸವನ್ನು ರಾಜ್ಯದಲ್ಲಿ ಸರ್ಕಾರ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳೇ ಇಲ್ಲದಂತೆ ಆಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ. ಬೆಂಗಳೂರಲ್ಲಿ ಜನಸಂಕಲ್ಪ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಮನೆ ಮನೆಯ ಮತದಾರನ್ನ ತಲುಪುತ್ತಿದ್ದೇವೆ. ಹೀಗಾಗಿ ಬೆಂಗಳೂರಲ್ಲಿ 23 ಸ್ಥಾನ ಗೆಲ್ಲುತ್ತೇವೆ ಎಂದರು.
Published On - 9:16 am, Fri, 13 January 23