Karnataka Elections: ಕರ್ನಾಟಕದಲ್ಲಿ ಪಕ್ಷಕ್ಕೆ ಬಲ ತುಂಬಲು ಆಪ್ ಸಂಕಲ್ಪ: ಹಳ್ಳಿಗಳಿಗೆ ಕಾರ್ಯಕರ್ತರ ಪಡೆ ವಿಸ್ತರಣೆ

ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ಚುರುಕುಗೊಳಿಸಲು ಆಪ್ ನಾಯಕರು ಮುಂದಾಗಿದ್ದಾರೆ.

Karnataka Elections: ಕರ್ನಾಟಕದಲ್ಲಿ ಪಕ್ಷಕ್ಕೆ ಬಲ ತುಂಬಲು ಆಪ್ ಸಂಕಲ್ಪ: ಹಳ್ಳಿಗಳಿಗೆ ಕಾರ್ಯಕರ್ತರ ಪಡೆ ವಿಸ್ತರಣೆ
ಆಮ್ ಆದ್ಮಿ ಪಕ್ಷದ ಚಿಹ್ನೆ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 13, 2023 | 8:25 AM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದು ಆಮ್ ಆದ್ಮಿ ಪಕ್ಷವು (Aam Aadmi Party – AAP) ಸಂಘಟನೆಯನ್ನು ಚುರುಕುಗೊಳಿಸಲು ಮುಂದಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಈಗಾಗಲೇ ಚಟುವಟಿಕೆ ಆರಂಭಿಸಿದ್ದ ಆಪ್, ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಯತ್ನಿಸುತ್ತಿತ್ತು. ಇದೀಗ ಪಕ್ಷದ ಕರ್ನಾಟಕ ಘಟಕವನ್ನೇ ವಿಸರ್ಜಿಸಿದ್ದು, ಹೊಸದಾಗಿ ಕಾರ್ಯಕಾರಿ ಸಮಿತಿ ರೂಪಿಸುವ ಪ್ರಯತ್ನಗಳನ್ನು ಶುರು ಮಾಡಿದೆ. ಪಕ್ಷದ ಕರ್ನಾಟಕದ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹೊಸ ಘಟಕ ರಚನೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಆಪ್ ಆದ್ಮಿ ಪಕ್ಷವು ಶೀಘ್ರದಲ್ಲಿಯೇ ಸಕ್ರಿಯ ನಾಯಕರು ಮತ್ತು ಕಾರ್ಯಕರ್ತರ ತಂಡವನ್ನು ಘೋಷಿಸಲಿದ್ದು, ಕರ್ನಾಟಕದಲ್ಲಿ ಪಕ್ಷವು ಪುಟಿದೇಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಕರ್ನಾಟಕದಲ್ಲಿ ಈ ಬಾರಿ ನಾವು ಅಧಿಕಾರ ಹಿಡಿಯಲೇಬೇಕೆಂಬ ಉದ್ದೇಶದೊಂದಿಗೆ ಸಂಘಟನೆ ಚುರುಕುಗೊಳಿಸಲಿದ್ದೇವೆ. ರಾಜ್ಯದಲ್ಲಿ ಈವರೆಗೆ ಅಸ್ತಿತ್ವದಲ್ಲಿದ್ದ ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳನ್ನು ಸ್ಥಾನಚ್ಯುತಿಗೊಳಿಸಲಾಗಿದೆ. ಕಳೆದ ತಿಂಗಳುಗಳಿಂದ ಕರ್ನಾಟಕದಲ್ಲಿ ಗ್ರಾಮ ಸಂಪರ್ಕ ಅಭಿಯಾನ ನಡೆಯುತ್ತಿದ್ದು, ಸಂಘಟನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಚುರುಕುಗೊಳಿಸಲು ಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ಈ ಅಭಿಯಾನದಲ್ಲಿ ಸಾವಿರಾರು ಯುವಕರು ಆಪ್​ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ. ಇವರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಘಟಕ ರೂಪಿಸಲಾಗುವುದು. ಕರ್ನಾಟಕದ ಭವಿಷ್ಯ ಉತ್ತಮವಾಗಬೇಕೆಂಬ ಆಕಾಂಕ್ಷೆಯಿರುವ ಸಾಮಾನ್ಯ ಜನರೊಂದಿಗೆ ಕೈಜೋಡಿಸುವ ಮೂಲಕ ಪಕ್ಷವು ಎಲ್ಲರಿಗೂ ಬಲತುಂಬಲು ಪ್ರಯತ್ನಿಸಲಿದೆ ಎಂದು ಹೇಳಿದರು. ವಿಧಾನಸಭೆ ಚುನಾವಣೆಯನ್ನು ಪಕ್ಷವು ಪರಿಣಾಮಕಾರಿಯಾಗಿ ಎದುರಿಸಲಿದೆ ಎಂದು ತಿಳಿಸಿದರು.

‘ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅಭಿವೃದ್ಧಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಸಕ್ರಿಯರಾಗಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಕರ್ನಾಟಕದಲ್ಲಿ ಕಾರ್ಯತಂತ್ರ ರೂಪಿಸಲು ನೆರವಾಗಲಿದ್ದಾರೆ’ ಎಂದು ಅವರು ನುಡಿದರು. ಕರ್ನಾಟಕದಲ್ಲಿ ಜನರು ಆಪ್​ ಕಡೆಗೆ ಆಸೆಯಿಂದ ನೋಡುತ್ತಿದ್ದಾರೆ.

‘ಇದೀಗ ಆಪ್ ರಾಷ್ಟ್ರೀಯ ಪಕ್ಷವಾಗಿದೆ. ಆಪ್ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕವನ್ನು ಭಾರತದ ನಂಬರ್ 1 ರಾಜ್ಯ ಮಾಡಬೇಕೆಂಬ ಆಶಯ ನಮಗಿದೆ. ರಾಜ್ಯದ ಹಿತಚಿಂತಕರಾಗಿರುವ ರಾಜಕಾರಿಣಿಗಳು, ತಜ್ಞರು, ಹೋರಾಟಗಾರರು ಪಕ್ಷದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳು ಹಲವು ದಶಕಗಳಿಂದ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವೆ. ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ಒದಗಿಸಿಕೊಡಲು ನಾವು ಬದ್ಧರಾಗಿದ್ದೇವೆ’ ಎಂದು ಅವರು ತಿಳಿಸಿದರು.

ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್​ ಅಸ್ತಿತ್ವ ಕಂಡುಕೊಂಡಿದೆ. ಸಂಘಟನೆಗೆ ತಳಮಟ್ಟದಲ್ಲಿ ಬಲ ತುಂಬುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: Hubballi: ಪ್ರಧಾನಿ ಮೋದಿ ಭೇಟಿಯನ್ನೇ ಉತ್ತರ ಕರ್ನಾಟಕಕ್ಕೆ ಬೂಸ್ಟ್ ಆಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್

ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Fri, 13 January 23