ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನಾನಾ ಕಸರತ್ತಿಗೆ ಇಳಿದಿವೆ. ಭರ್ಜರಿ ಪ್ರಚಾರಕ್ಕೆ ವೇದಿಕೆ ಸಿದ್ದಪಡಿಸುತ್ತಿವೆ. ಸದ್ಯ ಬೆಂಗಳೂರಿನ ರಸ್ತೆಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಇಂದು ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನಾ ನಾಯಕಿ (Na Nayaki) ಎಂಬ ಮಹಿಳಾ ಸಮಾವೇಶವನ್ನು (Women’s Convention) ಉದ್ಘಾಟಿಸಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ ನೀಡಲಿದ್ದಾರೆ. ಹಾಗೂ ಇಂದಿನಿಂದ 2 ದಿನಗಳ ಕಾಲ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಮಧ್ಯಾಹ್ನ ನವದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಚುನಾವಣೆ ಹೊತ್ತಿನಲ್ಲಿ ರೈತ ಸಮುದಾಯ ಒಗ್ಗೂಡಿಸಲು ಹೆಚ್ಡಿ ಕುಮಾರಸ್ವಾಮಿ(HD Kumaraswamy) ರಾಜ್ಯದ ರೈತರಿಗೆ ರೈತ ಸಂಕ್ರಾಂತಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ರೈತರೊಂದಿಗೆ ಕುಮಾರಸ್ವಾಮಿ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ಬನ್ನಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ರಾಜಕೀಯ ಪಕ್ಷಗಳು ಯಾವ ರೀತಿ ತಂತ್ರ ಹೆಣೆಯುತ್ತಿವೆ. ಯಾವ ಯಾವ ಕಾರ್ಯಕ್ರಮಗಳ ಮೂಲಕ ಮತದಾರರ ಮನ ಗೆಲ್ಲುತ್ತಿವೆ. ರಾಜ್ಯದಲ್ಲಿ ಏನೆಲ್ಲ ಆಗುತ್ತಿದೆ ಎಂಬ ಸಂಪೂರ್ಣ ಅಪ್ಡೇಟ್ಸ್ ಇಲ್ಲಿ ಸಿಗಲಿದೆ.
ಒಳ್ಳೆಯ ಚರ್ಚೆ ನಡೆದಿದೆ. ಎಲ್ಲ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಅವಲೋಕನ ನಡೆದಿದೆ. ಕರ್ನಾಟಕದ ವಿಶೇಷವಾಗಿ ಚರ್ಚೆ ಆಗಿಲ್ಲ. ನಮ್ಮ ರಾಜ್ಯದ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣೆ ರಾಜ್ಯಗಳ ಬಗ್ಗೆ ವರದಿ ಮಂಡಿಸಲಾಯಿತು. ಬೂತ್ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು ಸಂಘಟನೆ ಬಗ್ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇವೆ. ನಕಾರಾತ್ಮಕ ಪ್ರಚಾರದ ಪ್ರಯತ್ನಗಳು ನಡೆದರು ಅವರು ಪರಿಣಾಮ ಬಿರಿಲ್ಲ. ಜನ ಸಂಕಲ್ಪ ಯಾತ್ರೆಯೇ ಉತ್ತರ ನೀಡಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ಮಾಡಿಕೊಂಡ ಬಗ್ಗೆ, ಪಕ್ಷ ಸಂಘಟನೆ, ಬೂತ್ ನಿರ್ವಹಣೆ, ಸಮಾವೇಶ, ಮುಂದಿನ ದಿನಗಳಲ್ಲಿ ಆಯೋಜಿಸಿರುವ ರ್‍ಯಾಲಿ, ವಿಜಯ ಸಂಕಲ್ಪ ಯಾತ್ರೆ ಹಾಗೂ ಅದರ ಲಾಭಗಳ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸ್ತಾಪಿಸಿದ್ದಾರೆ.
ದಾವಣಗೆರೆ: ಬರುವ ಚುನಾವಣೆಯಲ್ಲಿ ನಾನು 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಬರುವ ಫೆಬ್ರವರಿಯಲ್ಲಿ ಇನ್ನೊಂದು ದೊಡ್ಡ ಕಾರ್ಯಕ್ರಮ ಮಾಡುವೆ ಒಂದು ಸಾವಿರ ಕೋಟಿಗೂ ಹೆಚ್ಚ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ರಾಮನಗರ: ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಣೆ ವಿಚಾರಕ್ಕೆ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಟಾಂಗ್ ನೀಡಿದ್ದು, ನಾನು ಕಾಂಗ್ರೆಸ್ನವರ ಘೋಷಣೆ ಬಗ್ಗೆ ಮಾತನಾಡಲ್ಲ. ದುಡಿಯುವವರ ಕೈಬಲಪಡಿಸಲು ಕೆಲಸ ಮಾಡಬೇಕು ಎಂದು ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಸಮಾವೇಶಕ್ಕೆ ಬರುವವರಿಗೆ ಹಣ ಹಂಚಿಕೆ ಆರೋಪ ಮಾಡಿದ್ದು, ಹಣ ಹಂಚುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ ಎಂದು ಪ್ರಶ್ನಿಸಿದೆ. ‘ನಾ ನಾಯಕಿ’ ಕಾರ್ಯಕ್ರಮಕ್ಕೂ ₹2000 ಕೊಟ್ಟೇ ಕರೆತರಲಾಗಿತ್ತು. ಪ್ರಿಯಾಂಕಾ ಗಾಂಧಿ ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ. ಕಾಂಗ್ರೆಸ್ಸಿಗರ ಗೃಹಲಕ್ಷ್ಮೀ ಯೋಜನೆ ಇರಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕೋಲಾರ: ಜಿಲ್ಲೆಗೂ ನಮ್ಮ ಕುಟುಂಬಕ್ಕೂ ನೆಂಟಸ್ತನ ಇದೆ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಹೆಚ್ಡಿ ಕುಮಾರ್ಸ್ವಾಮಿ ಈ ಹಿಂದೆ ಈ ಭಾಗದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಜೆಡಿಎಸ್ ಪಕ್ಷದ ಮೇಲೆ ಕೋಲಾರ ಜನತೆಗೆ ಅಭಿಮಾನವಿದೆ. ಮಂಡ್ಯಕ್ಕೆ ಅಮಿತ್ ಶಾ 10 ಬಾರಿ ಬಂದ್ರೂ ಅದು HDD ಕ್ಷೇತ್ರ ಎಂದು ಹೇಳಿದರು.
ಬೆಂಗಳೂರು: ನಾಳೆಯಿಂದ ಮತ್ತೆ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಆರಂಭವಾಗಲಿದ್ದು, ಹೊಸಪೇಟೆ, ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ನಡೆಸಲಿದ್ದಾರೆ. ಇಂದು ಜಿಂದಾಲ್ನಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಮತ್ತಷ್ಟು ಯೋಜನೆ ಘೋಷಿಸಿ ಬಿಜೆಪಿಗೆ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಲಾಗುತ್ತಿದೆ.
ಬೆಂಗಳೂರು: ಪ್ರಿಯಾಂಕಾ ಸ್ವಯಂಪ್ರೇರಿತವಾಗಿ ನಾಯಕಿ ಎಂದು ಘೋಷಿಸಿಕೊಂಡಿಲ್ಲ. ಪ್ರತಿಯೊಬ್ಬರೂ ಮಹಿಳಾ ನಾಯಕಿ ಎಂದು ಪ್ರಿಯಾಂಕಾ ಹೇಳಿದ್ದಾರೆ. ಬಿಜೆಪಿ ಶಾಸಕ G.H.ತಿಪ್ಪಾರೆಡ್ಡಿ ವಿರುದ್ಧ 25% ಕಮಿಷನ್ ಆರೋಪ ಮಾಡಲಾಗಿದೆ. ಕಮಿಷನ್ ಬಗ್ಗೆ ಗುತ್ತಿಗೆದಾರ ಮಂಜುನಾಥ ದಾಖಲೆ ಬಿಡುಗಡೆ ಹಿನ್ನೆಲೆ ಬಿಜೆಪಿ ಸಚಿವರು, ಶಾಸಕರು ಕಮಿಷನ್ ಪಡೆಯೋದು ಜಗತ್ತಿಗೆ ಗೊತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ತಂದಿದೆ. ಉದ್ಯೋಗದಲ್ಲಿ ಮಹಿಳೆಯರಿಗೆ 30ರಿಂದ 33% ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮ ಸರ್ಕಾರ 33% ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮಹಿಳೆಯರಿಗೆ ರಾಜಕೀಯದಲ್ಲಿ 33% ಮೀಸಲಾತಿ ನೀಡುತ್ತೇವೆ. ವಿಧಾನಸಭೆ, ಪರಿಷತ್, ಲೋಕಸಭೆಯಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ಜನವರಿ 20ರಂದು ಸಿಎಂ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ 2023 ಮೊದಲ ಸಂಪುಟ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ, PSI ನೇಮಕಾತಿ ಹಗರಣ ಸೇರಿ ಹಲವು ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕೊವಿಡ್ ವೇಳೆ ಜನರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಉದ್ಯೋಗ ನೀಡುವಲ್ಲಿ ವಿಫಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ಬಡವರ ಸಮಸ್ಯೆಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲಾಗುತ್ತೆ. ಶ್ರೀಮಂತರ ಪರ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬೆಂಗಳೂರು: ದೇಶಕ್ಕೆ ಇಂದಿರಾ ಗಾಂಧಿ ಕೊಡುಗೆ ಅಪಾರ. ಬಡವರು, ಮಹಿಳೆಯರು, ರೈತರಿಗೆ ಸಾಕಷ್ಟು ಯೋಜನೆ ನೀಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಲಾಗಿತ್ತು. ಕೇಂದ್ರದಲ್ಲಿ ಈಗ ಬಿಜೆಪಿ ಸರ್ಕಾರ ಇದೆ. ಬೆಲೆ ಏರಿಕೆಯಿಂದ ಇಂದು ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ₹2000 ಹಣ ವಿತರಣೆ ಮಾಡಲಾಗುವುದು ಎಂದು ಬೆಂಗಳೂರು ನಗರದಲ್ಲಿ ಕಾಂಗ್ರೆಸ್ನಿಂದ ‘ನಾ ನಾಯಕಿ’ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಯೋಜನೆ ಜಾರಿ ಮಾಡಲಾಗುವುದು ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ದೆಹಲಿ: ರಾಷ್ಟ್ರೀಯ ಕಾರ್ಯಕಾಣಿ ಸಭೆ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಆಗಮಿಸಿದ್ದರು. ಸಭೆಗೂ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ದೃಷ್ಟಿ ಹಿನ್ನೆಲೆ ಪ್ರಮುಖ ನಾಯಕರ ಸಭೆ ಕರೆಯಲಾಗಿದೆ. ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ. ಈಗಾಗಲೇ ಕರ್ನಾಟಕ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ. ಕರ್ನಾಟಕದಲ್ಲಿ 140 ಸ್ಥಾನಗಳನ್ನ ಗೆಲ್ಲಲಿದ್ದೇವೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಜನಪ್ರಿಯ ಬಜೆಟ್ ಮಂಡಿಸಲು ಸಹ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಸಮಾವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ 70 ವರ್ಷ ಆಡಳಿತದಲ್ಲಿ ಇತ್ತು. ಆಗ ಏನು ಮಾಡದವರು, ಈಗ ಏನು ಮಾಡ್ತಾರೆ ಎಂದು ಹೇಳಿದರು.
ಬೆಂಗಳೂರು: ಬಿಜೆಪಿ ಸರ್ಕಾರ ಇವತ್ತು ದೊಡ್ಡದಾಗಿ ಜಾಹೀರಾತು ನೀಡಿದ್ದಾರೆ. ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆದ್ರೂ ಮಹಿಳೆಯರಿಗೆ ಯಾವುದೇ ಯೋಜನೆಗಳನ್ನು ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಬೆಂಗಳೂರು ನಗರದಲ್ಲಿ ಕಾಂಗ್ರೆಸ್ನಿಂದ ‘ನಾ ನಾಯಕಿ’ ಸಮಾವೇಶದಲ್ಲಿ ಅವರು ಮಾತನಾಡಿ, ನಾವು ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡ್ತೇವೆ. ನಾವು ಭರವಸೆ ನೀಡಿದ ಬಳಿಕ ಬಿಜೆಪಿಯವರು ಈಗ ಎದ್ದಿದ್ದಾರೆ. ಬಿಜೆಪಿಯವರು ಕೇವಲ 50-60 ಭರವಸೆಗಳನ್ನು ಈಡೇರಿಸಿದ್ದಾರೆ. ಬಿಜೆಪಿಯವರು ಮಹಿಳೆಯರ ಪರವಾಗಿಲ್ಲ ಎಂದರು.
ನೆಲಮಂಗಲ: ಇನ್ನೆರಡು ದಿನದಲ್ಲಿ ರಮೇಶ್ ಜಾರಕಿಹೊಳಿ ಸಚಿವರಾಗುತ್ತಾರೆ ಎಂದು ರಮೇಶ್ ಜಾರಕಿಹೊಳಿ ಆಪ್ತ ಎಂ.ವಿ. ನಾಗರಾಜ್ ಹೇಳಿದರು. ಸಚಿವ ಸ್ಥಾನ ಸಿಗದಿದ್ರೆ ಜೆಡಿಎಸ್ಗೆ ಹೋಗ್ತಾರೆ ಅನ್ನೋದು ಸುಳ್ಳು. ರಮೇಶ್ ಜಾರಕಿಹೊಳಿ ಯಾವುದೇ ಪಕ್ಷಗಳಿಗೆ ಹೋಗುವುದಿಲ್ಲ. ಅವರು ಬಿಜೆಪಿಯಲ್ಲೇ ಇರುತ್ತಾರೆ. ಜ.20ರೊಳಗೆ ರಮೇಶ್ ಜಾರಕಿಹೊಳಿ ಸಚಿವರಾಗುತ್ತಾರೆ ಎಂದು ಹೇಳಿದರು.
ನೆಲಮಂಗಲ: ನೋಡಿ ಉತ್ತರ ಪ್ರದೇಶದಲ್ಲಿ 8-10 ಸೀಟ್ ಬರ್ತಾ ಇದ್ದು, ಮೇಡಂ ಪ್ರಿಯಾಂಕ ಗಾಂಧಿಯವರು ಹೋಗಿ ಒಂದು ಎರಡು ಸ್ಥಾನ ಬರುವ ಹಾಗೆ ಆಗಿದೆ. ನಮ್ಮಲ್ಲೂ ಅಷ್ಟೋ ಇಷ್ಟೋ ಕಾಂಗ್ರೆಸ್ ಬರೋದು. ಈಗಾಗ್ಲೆ ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನ ಜಾಹಿರಾತು ನೀಡಿದ್ದೇವೆ. ಕಾಂಗ್ರೆಸ್‌ನ ಪ್ರಣಾಳಿಕೆಗಳು ಘೋಷಣೆಯಾಗಿಯೇ ಉಳಿಯುತ್ತಾವೆ. ಆದ್ರೆ ಚುನಾವಣೆಗೂ ಮುನ್ನವೇ ನಾವು ಎಲ್ಲಾ ಕಾರ್ಯಕ್ರಮಗಳನ್ನ ಮಾಡಿ ಮುಗಿಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ನಾ ನಾಯಕಿ ಕಾರ್ಯಕ್ರಮ ವಿಚಾರವಾಗಿ ಡಾ. ಸುಧಾಕರ್ ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದಿಂದ ಡೇಟ್ ಫಿಕ್ಸ್ ಆಗಿದೆ. ಜ.18 ರಂದು ರಾಜ್ಯ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಪಿಡಬ್ಲ್ಯೂಡಿ ಗುತ್ತಿಗೆದಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕಾಮಗಾರಿ ಪೂರ್ಣಗೊಂಡರೂ ರಾಜ್ಯ ಸರ್ಕಾರ 25 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ. ಕಾಮಗಾರಿಯ ಬಾಕಿ ಹಣ ಬಿಡುಗಡೆ ಮಾಡುವಂತೆ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆ ಸಂಪೂರ್ಣ ಜಾತಕ ಬಿಚ್ಚಿಟ್ಟ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್#KarnatakaStateContractorsAssociation #Commission #Contractors
ತಾಜಾ ಸುದ್ದಿಗಾಗಿ ಟಿವಿ9 ಕನ್ನಡ ಕಮ್ಯುನಿಟಿ ಸೇರಿ?https://t.co/xepk1Mqm11https://t.co/tdNT3i3vfG
— TV9 Kannada (@tv9kannada) January 16, 2023
ಬೆಂಗಳೂರಿನಲ್ಲಿ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಕಾಂಗ್ರೆಸ್ನಿಂದ ‘ನಾ ನಾಯಕಿ’ ಸಮಾವೇಶ ನಡೆಯುತ್ತಿದೆ. ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮೋಟಮ್ಮ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದಾರೆ. ವೇದಿಕೆ ಮುಂಭಾಗ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ M.B.ಪಾಟೀಲ್ ಕುಳಿತಿದ್ದಾರೆ.
ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗುತ್ತಿಗೆದಾರರ ಸಂಘದಿಂದ ತಿಪ್ಪಾರೆಡ್ಡಿ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಶಾಸಕ ತಿಪ್ಪಾರೆಡ್ಡಿ ಬಗ್ಗೆ ನನಗೇನು ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಜಾರಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬೇಡ ಜಂಗಮ ಪ್ರತಿಭಟನೆ 201ನೇ ದಿನಕ್ಕೆ ಕಾಲಿಟ್ಟಿದೆ. ಬೇಡ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಗಮಿಸಿದ್ದಾರೆ.
ನಾಳೆ ಕೊಪ್ಪಳದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕಮಾನಿಗೆ ಫ್ಲೇಕ್ಸ್ ಕಟ್ಟಿದ್ದಾರೆ. ಸರಕಾರದ ಅನುದಾನದಡಿ ನಗರಸಭೆ ವತಿಯಿಂದ ನಿರ್ಮಾಣವಾಗಿರುವ ಸ್ವಾಗತ ಕಮಾನಿಗೆ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಕಟ್ಟಲಾಗಿದೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಅಧಿಕಾರದ ದುರುಪಯೋಗ ಆರೋಪ ಮಾಡಿದೆ. ಅನುಮತಿ ಪಡೆಯದೇ ನಗರದ ಹಲವೆಡೆ ಫ್ಲೆಕ್ಸ್ ಕಟ್ಟಿರುವ ಆರೋಪ ಬಿಜೆಪಿ ಮಾಡಿದೆ. ಜನರ ಮಾಹಿತಿಗಾಗಿ ಇರುವ ಸ್ವಾಗತ ಕಮಾನಿಗೆ ಕಾಂಗ್ರೆಸ್ ಫ್ಲೆಕ್ಸ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮಾಜಿ ಶಾಸಕ ಎಂ.ವಿ ನಾಗರಾಜು ನೂತನ ಗೃಹ ಕಚೇರಿ ಉದ್ಘಾಟಿಸಿದ್ದಾರೆ. ನೆಲಮಂಗಲದ ಮಾಜಿ ಬಿಜೆಪಿ ಶಾಸಕ ಎಂ.ವಿ ನಾಗರಾಜು ಗೃಹ ಕಚೇರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಉದ್ಘಾಟನೆ ಮಾಡಿದ್ರು.
ಬೆಳಗಾವಿ ಜಿಲ್ಲೆಯಲ್ಲೂ ಸಾಕಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ. ನಿನ್ನೆಯಿಂದ ಪಕ್ಷ ಸೇರ್ಪಡೆ ಪರ್ವ ಪ್ರಾರಂಭವಾಗಿದೆ. ವೈಎಸ್ವಿ ದತ್ತಾ, ಬಿ.ಸಿ.ನಾಗೇಶ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವವರೆಗೂ ಪಕ್ಷ ಸೇರ್ಪಡೆ ನಡೆಯುತ್ತೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ನಾವು ಸ್ವಾಗತ ಕೋರುತ್ತೇವೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕೋಲಾರದಲ್ಲಿ ಅಲ್ಪಸಂಖ್ಯಾತರ ಸಮೂಹಿಕ ವಿವಾಹ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲು ಕೋಲಾರಕ್ಕೆ ಸಿಎಂ ಇಬ್ರಾಹಿಂ ಭೇಟಿ ನೀಡಿದ್ದಾರೆ. ಅಲ್ಪಸಂಖ್ಯಾತರ ಮುಖಂಡ ಶಂಶೀರ್ ಅವರ ಮನೆಗೆ ಆಗಮಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಹಿನ್ನೆಲೆ ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡಲು ಜೆಡಿಎಸ್ ತಂತ್ರ ಹೆಣೆದಿದೆ.
ಉಚಿತ ವಿದ್ಯುತ್ ಘೋಷಣೆಗೆ ಬಿಜೆಪಿಯಿಂದ ಟೀಕೆ ವಿಚಾರಕ್ಕೆ ಸಂಬಂಧಿಸಿ ಕೆಳ ವರ್ಗದವರ ಅಭಿವೃದ್ಧಿಗಾಗಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದೇವೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ಯಾವಾಗಲೂ ಬಡವರು, ರೈತರ ವಿರುದ್ಧ ಇದೆ. ಬಿಜೆಪಿಯವರಿಗೂ ಅವಕಾಶ ಇದೆ ಅವರು ಘೋಷಣೆ ಮಾಡಲಿ. ನಾವು ನೀಡಿದ ಎಲ್ಲಾ ಭರವಸೆಗಳನ್ನೆಲ್ಲ ಈಡೇರಿಸುತ್ತೇವೆ ಎಂದರು.
ದೆಹಲಿಯ ನಿವಾಸದಲ್ಲಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಸಚಿವ ಗೋವಿಂದ ಕಾರಜೋಳ ಭೇಟಿ ಮಾಡಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೂ ಜನವರಿ 19ರಂದು ನಡೆಯುವ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
‘ನಾ ನಾಯಕಿ’ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ ವಿಚಾರಕ್ಕೆ ಬೆಂಗಳೂರಿನಲ್ಲಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ. ಯುಪಿ ಪ್ರವಾಸ ಮಾಡಿ ಒಂದಂಕಿ ಫಲಿತಾಂಶ ತಂದು ಕೊಟ್ಟರು. ಇನ್ನು ಪ್ರಿಯಾಂಕಾ ಇಲ್ಲಿಗೆ ಬಂದು ಏನು ಮಾಡಲು ಆಗುತ್ತದೆ? ನಾ ನಾಯಕಿ ಅಲ್ಲ, ನಾನು ನಾಲಾಯಕ್ ಅಂತಾ ಮಾಡುತ್ತಿದ್ದಾರೆ. ನಮ್ಮ ಸ್ನೇಹಿತರು ಕೂಡ ಅವರ ಜತೆ ಸೇರಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಕಾಂಗ್ರೆಸ್ ನಿಂದ ಮಹಿಳೆಯರಿಗೆ ಬಂಪರ್ ಘೋಷಣೆಗಳಾಗುವ ಸಾಧ್ಯತೆ ಇದೆ. ಪ್ರಿಯಾಂಕಾ ಗಾಂಧಿ ಬಂಪರ್ ಘೋಷಣೆ ಮಾಡಲಿದ್ದಾರೆ. ಇಂದು ವೇದಿಕೆ ಮೇಲೆ ಮಾದರಿ ಚೆಕ್ ವಿತರಣೆ ಮಾಡುವ ಮೂಲಕ ಅಧಿಕಾರಕ್ಕೆ ಬಂದ್ರೆ ಪಕ್ಕಾ ಕೊಡ್ತೇವೆ ಎಂದು ಪ್ರಿಯಾಂಕಾ ಗಾಂಧಿ ಸಾಕ್ಷಿ ನೀಡಲಿದ್ದಾರೆ. ಮಾದರಿ ಚೆಕ್ ಮೇಲೆ ಗೃಹಲಕ್ಷ್ಮಿ ಯೋಜನೆ ಎಂದು ನಮೂದು ಮಾಡಲಾಗಿದೆ. ಪ್ರತಿ ಮನೆಯ ಯಜಮಾನಿಗೆ, ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ
ಕಾಂಗ್ರೆಸ್ ಗ್ಯಾರಂಟಿ-2 ಎಂದು ಘೋಷಣೆ ಮಾಡಲಾಗುತ್ತೆ. ಚೆಕ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಫೋಟೋ ಅಳವಡಿಸಲಾಗಿದ್ದು ಜೊತೆಗೆ ಗ್ಯಾರಂಟಿ ಎಂಬುವ ರೀತಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಹಿ ಇದೆ.
ನಾ ನಾಯಕಿ ಮಹಿಳಾ ಸಮಾವೇಶದಲ್ಲಿ ಮಹಿಳೆಯರದ್ದೇ ದರ್ಬಾರ್. ವೇದಿಕೆ ಮೇಲೆ ಮಹಿಳಾ ನಾಯಕಿಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಶಾಸಕಿಯರಾದ ಸೌಮ್ಯ ರೆಡ್ಡಿ, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ, ಮಾಜಿ ಸಚಿವೆ ರಾಣಿ ಸತೀಶ್, ಮೋಟಮ್ಮ, ಜಲಜಾ ನಾಯಕ್, ಪುಷ್ಪಾ ಅಮರನಾಥ್, ಪದ್ಮಾವತಿ, ಗಂಗಾಬಿಕೆ ಮಲ್ಲಿಕಾರ್ಜುನ ಭಾಗಿಯಾಗಿದ್ದಾರೆ.
ನಾ ನಾಯಕಿ ಸಮಾವೇಶದಲ್ಲಿ ಮಾತನಾಡಿದ ಮೊಟ್ಟಮ್ಮ, ಜೂನಿಯರ್ ಇಂದಿರಾ ಗಾಂಧಿ ಅವರ ಮಾತುಗಳನ್ನು ಕೇಳಲು ಸೇರಿದ್ದೇವೆ. ಒಂದು ಕುಟುಂಬವನ್ನು ನಿರ್ವಹಿಸಲು ಸಮರ್ಥರಾಗಿದ್ದೇವೆ. ಅದೇ ರೀತಿ ಪಕ್ಷವನ್ನ ಅಧಿಕಾರಕ್ಕೆ ತರಲು ಸಮರ್ಥರಾಗಿದ್ದೇವೆ. ಇಂದಿರಾ ಗಾಂಧಿ ಅವರ ಮೊಮ್ಮಗಳು ,ಜೂನಿಯರ್ ಗಾಂಧಿ ಬಂದಾಗ ಏನು ಮಾರ್ಗದರ್ಶನ ಮಾಡ್ತಾರೆ. ಆ ರೀತಿ ಪಕ್ಷ ಕಟ್ಟಲು ಟೊಂಕ ಕಟ್ಟಿ ನಿಲ್ಲಬೇಕು. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನ್ ಮಾಡಿಲ್ಲ ಹೇಳಿ. ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಯೋಜನೆಗಳನ್ನು ಕೊಟ್ಟಿದ್ದಾರೆ. ಸಂವಿಧಾನದಿಂದ ಮತದಾನ ಹಕ್ಕು, ಆಸ್ತಿ ಹಕ್ಕು, ರಾಜಕೀಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿ ಕೊಟ್ಟಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಇದಕ್ಕಾಗಿ ಅಂದಿನ ಸಿಎಂ ಸ್ತ್ರೀ ಸಂಘಗಳನ್ನು ಮಾಡಿದ್ರು. 50% ಇರುವ ಮಹಿಳೆಯರು ಕಾಂಗ್ರೆಸ್ ಗೆ ಶಕ್ತಿ ತುಂಬಲು ಮುಂದಾಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಸಾಮೂಹಿಕ ಅತ್ಯಾಚಾರ ಹಾಕ್ತಾ ಇವೆ ಎಂದರು.
ಜ.21ರಿಂದ 29ರವರೆಗೆ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ಜ.21ರಂದು ಅಭಿಯಾನಕ್ಕೆ BJP ಅಧ್ಯಕ್ಷ ನಡ್ಡಾ ಚಾಲನೆ ನೀಡ್ತಾರೆ. 58 ಸಾವಿರ ಬೂತ್ಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನ ವೇಳೆ ಸರ್ಕಾರದ ಯೋಜನೆಗಳನ್ನು ತಿಳಿಸಲಾಗುವುದು ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ.
ಕೆಲವರು ಬಸ್ನಲ್ಲಿ ಯಾತ್ರೆ ಮಾಡಿ ಕೆಲವರ ಮನೆ ತಲುಪಬಹುದು. ಆದರೆ ನಾವು ಪ್ರತಿ ಮನೆಗೆ ತಲುಪುವ ಕೆಲಸ ಮಾಡ್ತಿದ್ದೇವೆ. ಸರ್ಕಾರದ ಯೋಜನೆಗಳನ್ನ ಪಡೆದ 1 ಕೋಟಿ ಫಲಾನುಭವಿಗಳಿದ್ದಾರೆ. ಅನೇಕ ಕಾರ್ಯಕ್ರಗಳ ಮೂಲಕ ನಾವು ಜನರ ಬಳಿ ತಲುಪಿದ್ದೇವೆ. ಜನರ ಬಳಿ ಹೋಗಿ ಮತ ಕೇಳುವ ಕೆಲಸ ಮಾಡ್ತೇವೆ. ಈ ಹಿಂದೆ ಇದ್ದ ಸಿಎಂರನ್ನು ನೆರೆ, ಬರ ಬಂದರೂ ಹುಡುಕಬೇಕಿತ್ತು ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮಾತ್ರ ಮಹಿಳೆಯರ ಹಕ್ಕು ರಕ್ಷಿಸುವ ಕೆಲಸ ಮಾಡ್ತಿದೆ. 19, 20ನೇ ಶತಮಾನದಲ್ಲಿ ಮಹಿಳೆಯರ ಮೇಲೆ ಶೋಷಣೆ ಆಗ್ತಿತ್ತು. ಬಾಲ್ಯವಿವಾಹ, ಸತಿ ಪದ್ಧತಿಗಳಿಗೆ ಅಂಕುಶ ಹಾಕಿದ್ದೇ ಕಾಂಗ್ರೆಸ್. ಮಹಿಳೆಯರಿಗೆ 50% ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಮನುಸ್ಮೃತಿಯಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿತ್ತು. ಶೂದ್ರ, ದಲಿತರನ್ನು ಅಕ್ಷರದಿಂದ ದೂರ ಇಟ್ಟಿದ್ರು. ಸ್ವಾತಂತ್ರ್ಯ ಬಂದಾಗ 8.86% ಮಹಿಳಾ ಸಾಕ್ಷರತೆ ಪ್ರಮಾಣವಿತ್ತು. ಈಗ 65.5% ಮಹಿಳಾ ಸಾಕ್ಷರತೆ ಪ್ರಮಾಣ ಇದೆ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೋದಿ, ಅಮಿತ್ ಶಾ ಎಷ್ಟು ಬೇಕಾದ್ರೂ ಱಲಿ, ಸಮಾವೇಶ ಮಾಡಲಿ. ಮೋದಿ, ಅಮಿತ್ ಶಾ ಎಷ್ಟು ಬಾರಿ ಭೇಟಿ ಕೊಟ್ರೂ ಏನೂ ಆಗಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಇದು ಜನವಿರೋಧಿ ಸರ್ಕಾರ, ಭ್ರಷ್ಟ ಸರ್ಕಾರ. ಈ ಸರ್ಕಾರ ತೊಲಗಿಸಬೇಕೆಂದು ಜನರೇ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. 2013ರಿಂದ 18ರವರೆಗೆ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಆದ್ರೆ ಬಿಜೆಪಿಯವರು 10% ಭರವಸೆಯನ್ನೂ ಕೂಡ ಈಡೇರಿಸಿಲ್ಲ. ಸಿಎಂ ಬೊಮ್ಮಾಯಿ ಕೊಟ್ಟಿರುವ ಭರವಸೆಗಳನ್ನ ಈಡೇರಿಸಿದ್ದಾರಾ? ಈಗ ಘೋಷಣೆ ಮಾಡುತ್ತಿರುವುದು ಚುನಾವಣಾ ಪ್ರಣಾಳಿಕೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದಿನಿಂದ ಎರಡು ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಲಿದ್ದು ದೆಹಲಿಯ ಎನ್‌ಡಿಎಂಸಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ 35 ಸಚಿವರು, 12 ರಾಜ್ಯಗಳ ಸಿಎಂಗಳು, ಎಲ್ಲ ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಲೋಕಸಭೆ & ಮುಂದಿನ ವಿಧಾನಸಭೆ ಚುನಾವಣೆಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಗೂ ಮುನ್ನ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾವಚಿತ್ರಕ್ಕೆ ಮನ್ನಣೆ ನೀಡಲಾಗುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯ ಕಾಂಪೌಂಡ್ ಗೋಡೆಯಲ್ಲಿ ಯಡಿಯೂರಪ್ಪ ಭಾವಚಿತ್ರದ ಡಿಜಿಟಲ್ ಪೈಂಟಿಂಗ್ ಮಾಡಲಾಗಿದೆ.ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ನರೇಂದ್ರ ಮೋದಿ, ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿ ನಾಯಕರ ಫೋಟೋಗಳ ಡಿಜಿಟಲ್ ಪೈಂಟಿಂಗ್ ಮಾಡಿಸಲಾಗಿದೆ. ಬಿಜೆಪಿಯೇ ಭರವಸೆ ಎಂಬ ಘೋಷವಾಕ್ಯದ ಜೊತೆಗೆ ಯಡಿಯೂರಪ್ಪ ಭಾವಚಿತ್ರ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
ಕಾಂಗ್ರೆಸ್‌ನ ‘ನಾ ನಾಯಕಿ’ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಬರಲಿ, ಅದಕ್ಕೆ ನಮ್ಮ ತಕರಾರು ಇಲ್ಲ. ಕಾರ್ಯಕ್ರಮದ ಟೈಟಲ್ ನೋಡಿದೆ, ನಾ ನಾಯಕಿ ಅಂದ್ರೇನು? ಅವರ ಫೋಟೋ ನೋಡಿ ಅವರೇ ನಾ ನಾಯಕಿ ಅಂತಿದ್ದಾರೆ. ಮಹಿಳೆಯರು ಪ್ರಿಯಾಂಕಾರನ್ನು ನಾಯಕಿ ಮಾಡಲು ತಯಾರಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಏರ್ಪಡಿಸಿರುವ ನಾ ನಾಯಕಿ ಸಮಾವೇಶಕ್ಕೆ ಮಹಿಳಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಪ್ರಿಯಾಂಕ ಗಾಂಧಿ ಅಭಿಮಾನಿಗಳು ಆಗಮಿಸಿದ್ದಾರೆ. ಬೆಂಗಳೂರು ಅರಮನೆ ಬಳಿಯಲ್ಲಿ ಮಹಿಳಾ ಮಣಿಗಳು ಜಮಾಯಿಸಿದ್ದಾರೆ. ಸಮಾವೇಶ ಸ್ಥಳದಲ್ಲಿ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹಾಗೂ ಸುರ್ಜೆವಾಲಾ ಕಟೌಟ್ ಗಳು ಮಿಂಚುತ್ತಿವೆ.
ಇಂದು ಮತ್ತು ನಾಳೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎನ್ ಡಿಎಂಸಿ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಧಾರವಾಡದ ಕೃಷಿ ವಿವಿ ಆಡಿಟೋರಿಯಂನಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಸಮಾರೋಪದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡಕ್ಕೆ ತೆರಳಿದ್ದಾರೆ. HALನಿಂದ ವಿಶೇಷ ವಿಮಾನದಲ್ಲಿ ಸಿಎಂ ಬೊಮ್ಮಾಯಿ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ಮಧ್ಯಾಹ್ನ ಧಾರವಾಡದಿಂದ ದೆಹಲಿಗೆ ತೆರಳಲಿದ್ದಾರೆ.
ಜನವರಿ 19ಕ್ಕೆ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ಅವರಿಗೆ ಉಡುಗರೆ ಕೊಡಲು ಶಿಲ್ಪ ಕಲಾವಿದ ವಿಟಿಎನ್ ಕ್ರಿಯೇಷನ್ಸ್ ಮಾಲೀಕ ವಿಶ್ವೇಶ್ವರಯ್ಯ ಪ್ರಧಾನಿ ಮೋದಿ ಅವರದೇ ಪ್ರತಿಮೆ ಮಾಡಿದ್ದಾರೆ. ಕಲಬುರಗಿ ನಗರದ ಹುಮ್ನಾಬಾದ್ ರಸ್ತೆಯಲ್ಲಿರೋ ವಿಟಿಎನ್ ಕ್ರಿಯೇಷನ್ಸ್ ಅವರು ಮೋದಿ ಅವರಿಗೆ ಅವರದೇ ಪ್ರತಿಮೆ ನೀಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಾಘೂ ಮೋದಿ ಅವರಿಗೂ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ತುಮಕೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ದೇವರ ಉತ್ಸವಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿದ್ದು ಜಿಲ್ಲಾಡಳಿತ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಿದೆ. ಇದರಿಂದ ದೇವರ ಉತ್ಸವಕ್ಕೆ ಬ್ರೇಕ್ ಬಿದ್ದಿದೆ. 3 ಪಿಎಸ್ಐ, 2 ಸಿಪಿಐ, 1 ಡಿವೈಎಸ್ಪಿ, ಒಂದು ಡಿಎಆರ್ ತುಕಡಿಯಿಂದ ಗ್ರಾಮದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜಕೀಯ ದ್ವೇಷಕ್ಕೆ ಒಂದೇ ಗ್ರಾಮದಲ್ಲಿ ಎರಡು ಪಾಂಡುರಂಗ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸೆಡ್ಡು ಹೊಡೆದು ಬಿಜೆಪಿ ಸದಸ್ಯರು ಮತ್ತೊಂದು ದೇವಸ್ಥಾನ ನಿರ್ಮಾಣ ಮಾಡಿರುವ ಆರೋಪವಿದ್ದು ಮಕರ ಸಂಕ್ರಾಂತಿ ಹಿನ್ನಲೆ ಗ್ರಾಮಸ್ಥರು ಮೂಲ ದೇವರ ಮೆರವಣಿಗೆ ಇಟ್ಟುಕೊಂಡಿದ್ದರು. ಈ ವೇಳೆ ಇನ್ನೊಂದು ಪಾಂಡುರಂಗ ದೇವಸ್ಥಾನ ಮಾಡಿಕೊಂಡಿರುವವರ ಗಲಾಟೆ ಮಾಡಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಕೋಲಾರದಲ್ಲಿ ಜೆಡಿಎಸ್ ಚುರುಕುಗೊಂಡಿದೆ. ಕೋಲಾರಕ್ಕಿಂದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭೇಟಿ ನೀಡಲಿದ್ದಾರೆ. ಅಲ್ಪಸಂಖ್ಯಾತರ ಸಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಮುಖ್ಯದ್ವಾರದ ಬಳಿ ಇಂದು ಕಾಂಗ್ರೆಸ್ನಿಂದ ‘ನಾ ನಾಯಕಿ’ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ಏರ್ಪೋರ್ಟ್ಗೆ ಪ್ರಿಯಾಂಕಾ ಆಗಮಿಸಲಿದ್ದು ಮಧ್ಯಾಹ್ನ 1.30ಕ್ಕೆ ಸಮಾವೇಶದ ವೇದಿಕೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ರವರೆಗೂ ಸಮಾವೇಶದಲ್ಲಿ ಇರಲಿದ್ದಾರೆ. ವೇದಿಕೆ ಮೇಲೆ ಕೇವಲ ಮಹಿಳಾ ನಾಯಕಿಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಕಾಂಗ್ರೆಸ್‌ನ ‘ನಾ ನಾಯಕಿ’ ಸಮಾವೇಶದಲ್ಲಿ ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗೂ ಕಾಂಗ್ರೆಸ್ ಈ ಸಮಾವೇಶದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದೆ.
ಚುನಾವಣೆ ಹೊತ್ತಿನಲ್ಲಿ ರೈತ ಸಮುದಾಯ ಒಗ್ಗೂಡಿಸಲು ಹೆಚ್ಡಿ ಕುಮಾರಸ್ವಾಮಿ ಹೊಸ ಪ್ಲಾನ್ ಮಾಡಿದ್ದಾರೆ. ಅನ್ನದಾತನ ಮನ ಗೆಲ್ಲಲು ಜೆಡಿಎಸ್ ರಾಜ್ಯದ ರೈತರಿಗೆ ರೈತ ಸಂಕ್ರಾಂತಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ರೈತರೊಂದಿಗೆ ಕುಮಾರಸ್ವಾಮಿ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ರೈತರು ಹಾಗೂ ಮುಖಂಡರ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂವಾದದ ಮೂಲಕ ರೈತರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆನ್ಲೈನ್ ಮೂಲಕ ಕಾರ್ಯಕ್ರಮ ಶುರುವಾಗಲಿದೆ.
ಇಂದಿನಿಂದ 2 ದಿನಗಳ ಕಾಲ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಮಧ್ಯಾಹ್ನ ನವದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣ ಬೆಳೆಸಲಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿ ಬಳಿಕ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಲಿದ್ದಾರೆ. ಜನವರಿ 17ರಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
Published On - 10:08 am, Mon, 16 January 23