Organ Donation: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

|

Updated on: Aug 01, 2024 | 10:21 AM

ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ಅಂಗಾಂಗ ದಾನ ಮಾಡುವಲ್ಲಿ 2ನೇ ಸ್ಥಾನ ಪಡೆದಿದೆ. ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿರುವ ಜಿಲ್ಲೆಯಾಗಿದೆ. ಹಾಗೂ ‘ಆಯುಷ್ಮಾನ್ ಭವ’ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಪಡೆಯುವಲ್ಲಿ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

Organ Donation: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ
ಅಂಗಾಂಗ ದಾನ
Follow us on

ಬೆಂಗಳೂರು, ಆಗಸ್ಟ್.01: ನಟ ಸಂಚಾರಿ ವಿಜಯ್, ಡಾ.ಪುನೀತ್ ರಾಜ್​ಕುಮಾರ್ ಅವರ ನಿಧನದ ಬಳಿಕ ರಾಜ್ಯದಲ್ಲಿ ಕಣ್ಣು ದಾನ, ಅಂಗಾಂಗ ದಾನದ ಬಗ್ಗೆ ಜನರು ಜಾಗೃಕರಾದರು. ಇದೀಗ ರಾಜ್ಯದಲ್ಲಿ ಅಂಗಾಂಗ ದಾನ (Organ Donation) ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ದಾನ ಪಡೆಯುವವರ ಸಂಖ್ಯೆ ಕೂಡ ಬೆಳೆಯುತ್ತಿದೆ. ಸದ್ಯ ಈಗ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ಅಂಗಾಂಗ ದಾನ ಮಾಡುವಲ್ಲಿ 2ನೇ ಸ್ಥಾನ ಪಡೆದಿದೆ.

2023ರಲ್ಲಿ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದ್ದು ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಿಸಿತ್ತು. ರಾಜ್ಯದಲ್ಲಿ 178 ಜನ ಅಂಗಾಂಗ ದಾನ ಮಾಡಿದ್ದಾರೆ. ಅಂಗಾಂಗ ದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿರುವ ಜಿಲ್ಲೆಯಾಗಿದೆ.

ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ‘ಆಯುಷ್ಮಾನ್ ಭವ’ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಪ್ರತಿಜ್ಞೆ ಪಡೆಯುವಲ್ಲಿ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಂಗಾಂಗ ದಾನವನ್ನು ಮತ್ತಷ್ಟು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರನ್ನು ಗೌರವಿಸಲು ಆದೇಶ ಹೊರಡಿಸಿದೆ. ಜೊತೆಗೆ ಹೊಸ ನಿರ್ದೇಶನದ ಪ್ರಕಾರ, ಈ ವರ್ಷ ಜನವರಿ 26 ರಿಂದ ಆಗಸ್ಟ್ 14 ರವರೆಗೆ ಅಂಗಾಂಗ ದಾನ ಮಾಡಿದವರಿಗೆ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರು; ಅಂಗಾಂಗ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದ ವ್ಯಕ್ತಿ

ಅಂಗಾಂಗ ದಾನದಲ್ಲಿ ಮಹಿಳೆಯರೇ ಮೊದಲು

ಇನ್ನು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಿದವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದೆ. ವ್ಯಕ್ತಿಯ ಸಾವಿನ ನಂತರ ಅಂಗಾಂಗ ದಾನ ಮಾಡಲಾಗುತ್ತೆ. ಒಬ್ಬ ವ್ಯಕ್ತಿ ಕನಿಷ್ಠ ಎಂಟು ಮಂದಿಯ ಜೀವ ಉಳಿಸಬಹುದು. ನೇತ್ರ ದಾನ, ದೇಹ ದಾನಕ್ಕೆ ಬದುಕಿದ್ದಾಗಲೇ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದು. ಮಕ್ಕಳು, ವೃದ್ಧರು ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ