ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಂಪಟುದ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಗೆ ರಾಜ್ಯದ ಕೇಂದ್ರ ಸಚಿವರು, ಸಂಸದರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದು, ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ.
ಹಲವು ಶಾಸಕರಿಗೆ ಮಂತ್ರಿ ಸ್ಥಾನದ ಮೇಲೆ ತೀವ್ರ ಇಚ್ಛೆ ಇರುವ ಕಾರಣ ಬಿಜೆಪಿ ವರಿಷ್ಠರ ಭೇಟಿಗೆ ದೆಹಲಿಗೆ ಪಯಣಿಸಿದ್ದಾರೆ. ಶಾಸಕಿ ಶಶಿಕಲಾ ಜೊಲ್ಲೆ, ಶಾಸಕ ಸಿ ಪಿ ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಸೇರಿ ಹಲವರು ದೆಹಲಿಗೆ ವರಿಷ್ಠರ ಭೇಟಿಗೆ ಪಯಣಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ನಷ್ಟವಾಗಿದೆ. ಅನೇಕ ಕಡೆ ಭೂಕುಸಿತ ಉಂಟಾಗಿದೆ. ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇಂಥ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 100 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅರಣ್ಯದಲ್ಲಿ ಮನೆ ಕಟ್ಟಿಕೊಂಡವರಿಗೆ ಪರಿಹಾರ ನೀಡಿದ್ದೇವೆ. ಈ ವರ್ಷವೂ ಮನೆ ಕಳೆದುಕೊಂಡವರಿಗೂ ಪರಿಹಾರ ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರವಾಹದಿಂದ ಹಾನಿಗೊಳಗಾಗಿದ್ದ ಶಿರೂರು ಗ್ರಾಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಂಗಾವಳಿ ನದಿಯಲ್ಲಿ ಉಕ್ಕಿಬಂದ ಪ್ರವಾಹದಿಂದ ಶಿರೂರು ಗ್ರಾಮ ತತ್ತರಿಸಿತ್ತು. ಸದ್ಯ ಸರ್ಕಾರದ ನೆರವಿಗಾಗಿ ಗ್ರಾಮಸ್ಥರು ಮೊರೆಯಿಟ್ಟಿದ್ದಾರೆ.
ಅಂಕೋಲಾ ಪಟ್ಟಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಕಾನ್ಫರೆನ್ಸ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ. ಅಂಕೋಲಾ ತಾಲೂಕು ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದು ಬಳಿಕ ಜನಪ್ರತಿನಿಧಿ, ಅಧಿಕಾರಿಗಳೊಂದಿಗೆ ನೆರೆ ವಿಕೋಪಕ್ಕೆ ಸಂಬಂಧಿಸಿ ಸಭೆ ನಡೆಸಲಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ನಾಳೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಬಿಎಸ್‌ವೈ ರಾಜೀನಾಮೆ ನೀಡಿದ್ದಕ್ಕೆ ಅವರ ಅಭಿಮಾನಿ ರವಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಯಡಿಯೂರಪ್ಪ
ಭೇಟಿ ನೀಡಲಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಈವೇಳೆ ಆರ್ಎಸ್ಎಸ್ ಮುಖಂಡ ಸಿ.ಆರ್.ಮುಕುಂದ್ ಜತೆಗೆ ಅವರು ಚರ್ಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭೂಕುಸಿತವಾದ ಕಳಚೆ ಗ್ರಾಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದ ವೇಳೆ ಶಾಲೆಗೆ ಹೋಗಲು ಆಗುತ್ತಿಲ್ಲ, ವಿದ್ಯುತ್ ಸಂಪರ್ಕ ಇಲ್ಲ. ವರ್ಚುವಲ್ ತರಗತಿಗಳನ್ನೂ ಕೇಳಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡು ಕಣ್ಣೀರು ಸುರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭೂಕುಸಿತ ವಲಯ ಅರಬೈಲು ಘಾಟ್ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಗುಡ್ಡ ಕುಸಿತದ ಪ್ರದೇಶವನ್ನು ಪರಿಶೀಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ, ಮಾಜಿ ಸಚಿವ ಶಿವರಾಮ ಹೆಬ್ಬಾರ್ ಸಾಥ್ ನೀಡಿದ್ದಾರೆ. ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿತ್ತು. ಜತೆಗೆ ಹತ್ತಿರದ ಡಬ್ಗುಳಿ ಗ್ರಾಮಕ್ಕೂ ಸಂಪರ್ಕ ಕಡಿತಗೊಂಡಿತ್ತು.
ರಾಯಭಾಗ ಶಾಸಕ ದುರ್ಯೋಧನ ಐಹೊಳೆಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಶಾಸಕ ದುರ್ಯೋಧನ ಐಹೊಳೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದಾರೆ. ಮಾದಿಗ ಮೀಸಲಾತಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ, ಸರ್ವ ಧರ್ಮ ಜನಪರ ವೇದಿಕೆ ಸೇರಿ ವಿವಿಧ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ರಾಯಭಾಗ ಕ್ಷೇತ್ರದಿಂದ ಸತತವಾಗಿ ಮೂರು ಸಲ ದುರ್ಯೋಧನ ಐಹೊಳೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮಾದಿಗ ಸಮುದಾಯಕ್ಕೆ ಸೇರಿರುವ ದುರ್ಯೋಧನ ಐಹೊಳೆಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ.
ಯಲ್ಲಾಪುರ ತಾಲೂಕಿನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಕಳಚೆ ಗ್ರಾಮದತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ಗ್ರಾಮದ ರಸ್ತೆ ಕಿರಿದಾದ ಕಾರಣ ಸಿಎಂ ಮತ್ತು ಬೆಂಗಾವಲು ವಾಹನ ಸೇರಿ ಕೇವಲ 3 ವಾಹನಗಳಿಗಷ್ಟೇ ಅವಕಾಶ ನೀಡಲಾಗಿದೆ. ಉಳಿದ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ. ಜಿಲ್ಲೆಯೊಂದರಲ್ಲೇ ವಿಕೋಪದಿಂದ 6 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಲ್ಲಾಪುರದಲ್ಲಿ ತಿಳಿಸಿದರು. ಪರಿಹಾರ ನೀಡುವುದಕ್ಕೆ ಸರ್ಕಾರದ ಬಳಿ ಹಣವಿದೆ. ಜತೆಗೆ ಜಿಲ್ಲಾಧಿಕಾರಿಗಳ ಬಳಿಯೂ ಹಣವಿದೆ. ಕೇಂದ್ರ ಸರ್ಕಾರವೂ ಹಣ ನೀಡಿದೆ. ಸಭೆಯ ಬಳಿಕ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯ 50 ಲಕ್ಷ ರೂಪಾಯಿ ವೆಚ್ಚದ ಡಯಾಲಿಸಿಸ್ ಘಟಕ ಉದ್ಘಾಟಿಸಿದ್ದಾರೆ.
ಸುರಪುರ ಶಾಸಕ ರಾಜುಗೌಡಗೆ ಸಚಿವ ಸ್ಥಾನ ನೀಡಲು ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಯಾದಗಿರಿ ಜಿಲ್ಲೆಯ ಅಭಿವೃದ್ಧಿಗಾಗಿ ಸಚಿವ ಸ್ಥಾನ ನೀಡಬೇಕು. ರಾಜುಗೌಡಗೆ ಸಚಿವ ಸ್ಥಾನ ನೀಡದಿದ್ದರೆ ಸಂಕಷ್ಟ ಎದುರಾಗಲಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸುತ್ತೆಂದು ಎಚ್ಚರಿಕೆ ನೀಡಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ ನೇತೃತ್ವದಲ್ಲಿ ಒತ್ತಾಯ ಕೇಳಿ ಬಂದಿದೆ.
ಶಾಸಕ ಗೂಳಿಹಟ್ಟಿ ಶೇಖರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಾಂಧಿ ವೃತ್ತದಿಂದ ತಾಲೂಕು ಕಚೇರಿವರೆಗೆ ಱಲಿ ಕೈಗೊಂಡಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಾಳೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. BSY ರಾಜೀನಾಮೆ ನೀಡಿದ್ದಕ್ಕೆ ರವಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ರವಿ ನಿವಾಸಕ್ಕೆ ಭೇಟಿ ನೀಡಿ ರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಸಾಧ್ಯತೆ ಇದೆ.
ಕಲಘಟಗಿಯಿಂದ ಯಲ್ಲಾಪುರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ಯಲ್ಲಾಪುರದ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಿ ಬಳಿಕ ಮೂರು 108 ವಾಹನಗಳಿಗೆ ಚಾಲನೆ ನೀಡಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಪ್ರಯಾಣಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗಿಂದು ಸಿಎಂ ಬೊಮ್ಮಾಯಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಭೇಟಿಗೆ ಹೋಗಲ್ಲವೆಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕೊಡಸಣೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಬರಲಿ, ಪ್ರಧಾನಿ ಬರಲಿ ನಮ್ಮ ಪರಿಸ್ಥಿತಿ ಬದಲಾಗಲ್ಲ. ನೆರೆ ಬಂದಾಗ ಬರುತ್ತಾರೆ, ಭರವಸೆ ಕೊಟ್ಟು ಹೋಗುತ್ತಾರೆ.ಪರಿಹಾರ ಮಾತ್ರ ಸೂಕ್ತವಾಗಿ ಸಿಗೋದಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಕೊಡಸಣೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಅಭಿಮಾನಿಗಳನ್ನು ಮುಂದೆಬಿಟ್ಟು ಸಚಿವಸ್ಥಾನಕ್ಕೆ ಶಾಸಕರು ಆಗ್ರಹಿಸುತ್ತಿದ್ದಾರೆ. ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಬೆನಕಟ್ಟಿಯಲ್ಲಿ ರಸ್ತೆ ತಡೆದು ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸವದತ್ತಿ ಕ್ಷೇತ್ರದಿಂದ ಆನಂದ ಮಾಮನಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸವದತ್ತಿ ತಾಲೂಕಿಗೆ ಅನ್ಯಾಯ ಮಾಡದೇ ಸಚಿವ ಸ್ಥಾನ ನೀಡಿ. ಸಚಿವ ಸ್ಥಾನ ನೀಡದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ಸಚಿವ ಸ್ಥಾನ ನೀಡದಿದ್ರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಆನಂದ ಮಾಮನಿ ಬೆದರಿಕೆಯೊಡ್ಡಿದ್ದಾರೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉತ್ತರ ಕನ್ನಡ ಪ್ರವಾಹ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ಇನ್ನೂ ಬಂದಿಲ್ಲ. ಸಮಯಕ್ಕೆ ಸರಿಯಾಗಿ ಹಾಜರಾಗದೆ ಇತರೆ ಕಾರ್ಯಕ್ರಮಕ್ಕೆ ಹಾಜರ್ ಆಗುತ್ತಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಯ ಪ್ರವಾಸದಲ್ಲಿರುವ ಬೊಮ್ಮಾಯಿ ಬೆಳ್ಳಗ್ಗೆ 11.45ಕ್ಕೆ ಅಂಕೋಲದಲ್ಲಿರಬೇಕಿತ್ತು. ಆದ್ರೆ ಸಿಎಂ ಇನ್ನೂ ಬಂದಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ತೆರಳದೆ ಸ್ವಾಮೀಜಿಗಳನ್ನು ಭೇಟಿ ಮಾಡುತ್ತ ಇನ್ನೂ ಹುಬ್ಬಳ್ಳಿಯಲ್ಲೇ ಇದ್ದಾರೆ. ಮೊದಲ ದಿನವೇ ಪ್ಲಾಪ್ ಶೋ ಆಗಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ
ಜಗದೀಶ್ ಶೆಟ್ಟರ್ ನಮ್ಮ ಹಿರಿಯ ನಾಯಕರಿದ್ದಾರೆ. ಹಾಗಾಗಿ ಭೇಟಿ ಮಾಡಿ ಮಾತನಾಡಿಕೊಂಡು ಹೋಗಲು ಬಂದಿದ್ದೆ. ನಾನು ಕೂಡ ಈ ಬಾರಿಯ ಸಚಿವ ಸ್ಥಾನದ ಆಕಾಂಕ್ಷಿ ಎಂದು ಜಗದೀಶ್ ಶೆಟ್ಟರ್ ಭೇಟಿ ವೇಳೆ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಮ್ಮ ಆಸೆಯನ್ನ ಈಗಾಗಲೇ ನಾಯಕರ ಮುಂದೆ ವ್ಯಕ್ತಪಡಿಸಿದ್ದೇನೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೇಳಿದ್ದೇನೆ. ಅವರು ನೋಡೋಣ ಅಂತಾ ಹೇಳಿದ್ದಾರೆ ಎಂದು ಹೇಳಿದ್ರು.
ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಗುದ್ದಿದ ಘಟನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮುಂಬಾಗದಲ್ಲಿ ನಡೆದಿದೆ. ವಿಮಾನ ನಿಲ್ದಾಣದಿಂದ ಹೊರ ಹೋಗುವಾಗ ಸಿಎಂ ಕಾರನ್ನ ಹಿಂಬಾಲಿಸುವ ಭರದಲ್ಲಿ ಅಪಘಾತ ನಡೆದಿದೆ. ಮಾಜಿ ಸಚಿವ ಶಿವರಾಮ್ ಹೆಬ್ಬಾರ್, ಸಿಎಂ ಕಾರಿನಲ್ಲಿದ್ದರು. ಅಪಘಾತದಿಂದ ಕಾರಿನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಿನ್ನೆ(ಜುಲೈ 28) ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಗೈರಾಗಿದ್ದ ಬಿ.ಶ್ರೀರಾಮುಲು ನಿನ್ನೆಯಿಂದ ಮನೆಯಿಂದ ಹೊರಗೆ ಬಂದಿಲ್ಲ. ಸಮಾರಂಭಕ್ಕೆ ಬರದೆ ಬಳ್ಳಾರಿಯ ಮನೆಯಲ್ಲಿಯೇ ಇದ್ದಾರೆ. ಇಂದು ಮಾಧ್ಯಮಗಳಿಗೆ ಬಿ.ಶ್ರೀರಾಮುಲು ಹೇಳಿಕೆ ನೀಡುವ ಸಾಧ್ಯತೆ ಇದೆ.
ಕೆ.ಎಸ್.ಈಶ್ವರಪ್ಪರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಕೊಪ್ಪಳದಲ್ಲಿ ಈಶ್ವರಪ್ಪ ಅಭಿಮಾನಿಗಳಿಂದ ಸುದ್ದಿಗೋಷ್ಠಿ ನಡೆದಿದೆ. ಕೆ.ಎಸ್.ಈಶ್ವರಪ್ಪ ಹಿಂದುಳಿದ ನಾಯಕರಾಗಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷ ನಿಷ್ಠೆ ಹೊಂದಿದ್ದಾರೆ. ಈಶ್ವರಪ್ಪ ಯಡಿಯೂರಪ್ಪನವರ ಸಮಕಾಲೀನರು. ಹೀಗಾಗಿ ಈಶ್ವರಪ್ಪರನ್ನು ಉಪಮುಖ್ಯಮಂತ್ರಿ ಮಾಡಬೇಕು. ಆಡಳಿತದಲ್ಲಿ ಈಶ್ವರಪ್ಪನವರಿಗೆ ಸಾಕಷ್ಟು ಅನುಭವ ಇದೆ. ಬಿಎಸ್‌ವೈ ಬಿಟ್ಟರೆ, ಈಶ್ವರಪ್ಪ ಸಿಎಂ ಅಭ್ಯರ್ಥಿಯಾಗಿದ್ರು. ಆದ್ರೆ ಈಗಿನ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಹೀಗಾಗಿ ಈಶ್ವರಪ್ಪರನ್ನು ಉಪಮುಖ್ಯಮಂತ್ರಿ ಮಾಡಬೇಕು. ಡಿಸಿಎಂ ಮಾಡದಿದ್ದರೆ ಜಿ.ಪಂ., ತಾ.ಪಂ. ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಈಶ್ವರಪ್ಪ ಅಭಿಮಾನಿಗಳಿಂದ ಎಚ್ಚರಿಕೆ.
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ತಮ್ಮ ಆಸೆಯನ್ನು ಹೊರ ಹಾಕಿದ್ದಾರೆ. ಸಚಿವ ಸ್ಥಾನ ನೀಡುವಂತೆ ಪಕ್ಷದ ಪ್ರಮುಖರಿಗೆ ಮನವಿ ಮಾಡಿದ್ದೇನೆ. ಬಳ್ಳಾರಿ ವಿಭಜನೆ ಬಳಿಕ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಪಕ್ಷ ನನಗೆ ಸಚಿವ ಸ್ಥಾನ ನೀಡಿದ್ರೆ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಯತ್ನಿಸುವೆ.ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ಉತ್ತರ ಕನ್ನಡ ಪ್ರವಾಹ ಪ್ರವಾಸ ಕೈಗೊಂಡಿರುವ ನೂತನ ಸಿಎಂ ಬಸವರಾಜ ಬೊಮ್ಮಾಯಿ ಮೊದಲು ಹುಬ್ಬಳ್ಳಿಯ ನವನಗರ ಬಳಿಯ ಅಮರಗೋಳದಲ್ಲಿರುವ ತಂದೆ S.R.ಬೊಮ್ಮಾಯಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಭೇಟಿ.
ಮಂತ್ರಿ ಸ್ಥಾನಕ್ಕಾಗಿ ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಶಾಸಕರಿಂದ ಪೈಪೋಟಿ ನಡೆಯುತ್ತಿದೆ. ಹೈಕಮಾಂಡ್‌ನಿಂದ ಹಳಬರಿಗೆ ಕೊಕ್ ನೀಡಿ ಹೊಸಬರಿಗೆ ಸ್ಥಾನ? ನೀಡುವ ನಿರೀಕ್ಷೆ ಇದೆ. ಕೆಲ ಪ್ರಮುಖ ನಾಯಕರು ಮತ್ತೆ ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಕ್ಷ್ಮಣ ಸವದಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್‌ರಿಂದ ಬಿಜೆಪಿ ವರಿಷ್ಠರ ಮೂಲಕ ಲಾಭಿ. ಆನಂದ ಮಾಮನಿ, ದುರ್ಯೋಧನ ಐಹೊಳೆ, ಶಾಸಕ ಮಹೇಳ್ ಕುಮಟಳ್ಳಿ, ಶಾಸಕ ಪಿ.ರಾಜೀವ್ ಅಭಿಮಾನಿಗಳಿಂದಲೂ ಸಚಿವ ಸ್ಥಾನಕ್ಕೆ ಆಗ್ರಹ. ದೆಹಲಿ ಮಟ್ಟದಲ್ಲಿ ವರಿಷ್ಠರ ಮೂಲಕ ಅಭಯ್ ಪಾಟೀಲ್ ಲಾಬಿ. ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ಗರಿಗೆದರಿರುವ ಚರ್ಚೆ.
ಸಿಎಂ ಬೊಮ್ಮಾಯಿ ಸಂಪುಟಕ್ಕೆ ಸೇರದಿರಲು ಮಾಜಿ ಸಚಿವ ಜಗದೀಶ್ ಶೆಟ್ಟ ನಿರ್ಧಾರ ಮಾಡಿದ್ದಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಿರಿಯರಿಗೆ ಕೊಕ್ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಮಾಜಿ ಸಿಎಂ ಆಗಿರುವುದರಿಂದ ಸಂಪುಟಕ್ಕೆ ಸೇರಲ್ಲ. ಸ್ವಾಭಿಮಾನ ಮತ್ತು ಗೌರವದಿಂದ ಈ ನಿರ್ಧಾರ ಮಾಡಿದ್ದೇನೆ. ಯಡಿಯೂರಪ್ಪ ಸಿಎಂ ಆಗಿದ್ದರಿಂದ ನಾನು ಮಂತ್ರಿಯಾಗಿದ್ದೆ. ಬೇರೆ ಯಾರೇ ಸಿಎಂ ಆಗಿದ್ದರೂ ನಾನು ಮಂತ್ರಿ ಆಗುತ್ತಿರಲಿಲ್ಲ ಎಂದಿದ್ದಾರೆ.
ನನಗೆ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ ಇದ್ದಾಗ ಸಂಪುಟದಲ್ಲಿ ಅವಕಾಶಕ್ಕಾಗಿ ಅಪೇಕ್ಷೆ ಪಟ್ಟಿದ್ದೆ ಎಂದು ಕಾವೇರಿ ನಿವಾಸದ ಬಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಬಿಎಸ್‌ವೈ, ಈಶ್ವರಪ್ಪ, ಶಂಕರಮೂರ್ತಿ ಸೇರಿ ಮೂವರಿದ್ರು. ಅವರು ಇದ್ದಿದ್ದಕ್ಕೆ ನಾನು ಯಾವುದೇ ಒತ್ತಡ ಹಾಕಿಲ್ಲ. ಈಶ್ವರಪ್ಪಗೆ ಸಚಿವ ಸ್ಥಾನ ಕೊಡ್ತಾರೆ, ಕೊಡಲ್ಲ ಅಂತ ಗೊತ್ತಿಲ್ಲ. ಈಶ್ವರಪ್ಪ ಸಂಪುಟದಲ್ಲಿ ಇರಲಿ ಅಂತ ಅಪೇಕ್ಷಿಸುತ್ತೇನೆ. ಯಡಿಯೂರಪ್ಪ ರಾಜೀನಾಮೆ ನೀಡಿದ್ದು ನೋವಿದೆ. ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಉತ್ತಮ ಆಯ್ಕೆ. ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಸಿಗುವ ನಂಬಿಕೆಯಿದೆ. ಅವಕಾಶ ಸಿಕ್ಕರೆ ಉತ್ತಮ ಕೆಲಸ ಮಾಡುವ ಉತ್ಸಾಹದಲ್ಲಿದ್ದೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ RSS ಕಚೇರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೂ ಮುನ್ನ ಹುಬ್ಬಳ್ಳಿಯ ಕೇಶವಕೃಪಾ ಕಚೇರಿಗೆ ಆಗಮಿಸಿ RSS ಪ್ರಮುಖ ಮಂಗೇಶ ಭೇಂಡೆ ಭೇಟಿಯಾಗಿದ್ದಾರೆ.
ಕೆ.ಎಸ್.ಈಶ್ವರಪ್ಪ ಪರ ಕುರುಬ ಸ್ವಾಮೀಜಿಗಳು ಬ್ಯಾಟಿಂಗ್ ಮಾಡಿದ್ದಾರೆ. ಯಡಿಯೂರಪ್ಪ ಜೊತೆಗೆ ಈಶ್ವರಪ್ಪ ಪಕ್ಷವನ್ನು ಕಟ್ಟಿದವರು. ಅಂತಹ ನಾಯಕನಿಗೆ ನಮ್ಮ ಎದುರೇ ಅನ್ಯಾಯವಾಗಬಾರದು. ಈಶ್ವರಪ್ಪ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ನಿಷ್ಠೆ ಹೊಂದಿರುವವರು. ಈಶ್ವರಪ್ಪಗೆ ಸೂಕ್ತ ಸ್ಥಾನ ಕೊಡಬೇಕು ಎಂದು ಅಥಣಿಯ ಕವಲುಗುಡ್ಡ ಗುರುಪೀಠದ ಅಮರೇಶ್ವರಶ್ರೀ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಬಿ.ಎಸ್. ಯಡಿಯೂರಪ್ಪ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ಪಡೆದುಕೊಳ್ಳಲು DCM ಸ್ಥಾನಕ್ಕೆ ಈಶ್ವರಪ್ಪ, ಸಚಿವ ಸ್ಥಾನಕ್ಕೆ ಜ್ಞಾನೇಂದ್ರ ಯತ್ನ ನಡೆಯುತ್ತಿದೆ. ಕೆ.ಎಸ್.ಈಶ್ವರಪ್ಪಗೆ ಸಚಿವ ಸ್ಥಾನ ಸಿಗದೇ ಹೋದರೂ ಯಾವುದೇ ಕಾರಣಕ್ಕೂ ತಮ್ಮನ್ನ ಕೈಬಿಡದಂತೆ ಸಚಿವ ಸ್ಥಾನಕ್ಕಾಗಿ ಬಿಎಸ್‌ವೈ ಬಳಿ ಆರಗ ಜ್ಞಾನೇಂದ್ರ ಮನವಿ ಮಾಡಿಕೊಂಡಿದ್ದಾರೆ.
ಕೆ.ಎಸ್.ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಸಿಎಂ ಸ್ಥಾನ ಬಸವರಾಜ ಬೊಮ್ಮಾಯಿಗೆ ಸಿಕ್ಕಿದೆ. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಗೊಂದಲ ಬಗೆಹರಿದಿದೆ. ಹೀಗಾಗಿ ಸಂಪುಟದಲ್ಲಿ ಈಶ್ವರಪ್ಪಗೆ ಸೂಕ್ತ ಸ್ಥಾನ ಕೊಡಬೇಕು ಎಂದು ಬೆಂಗಳೂರಿನಲ್ಲಿ ಸರೂರು ರೇವಣಸಿದ್ದೇಶ್ವರ ಗುರುಪೀಠದ ಸ್ವಾಮೀಜಿ ಶಾಂತಮಯ ಶಿವಾಚಾರ್ಯ ಹೇಳಿಕೆ ನೀಡಿದ್ದಾರೆ.
ನನ್ನನ್ನ ರಾಜ್ಯಪಾಲರಾಗಲು ಕೇಂದ್ರದ ನಾಯಕರು ಹೇಳಿದ್ದರು. ಮುಂದಿನ ಚುನಾವಣೆ ಬಳಿಕ ನೋಡೋಣ ಎಂದು ಹೇಳಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆಪ್ತರ ಜತೆ ಹೇಳಿಕೊಂಡಿದ್ದಾರೆ.
ನಿನ್ನೆ ಬೊಮ್ಮಾಯಿ ಪ್ರಮಾಣವಚನದ ಬಳಿಕ ಭೇಟಿ ಮಾಡಿದ ಹಲವು ಶಾಸಕರು, ಆಪ್ತರ ಬಳಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ನನ್ನನ್ನ ರಾಜ್ಯಪಾಲರಾಗಲು ಕೇಂದ್ರದ ನಾಯಕರು ಹೇಳಿದ್ದರು. ಆದರೆ ನಾನು ಬೇಡ ಅಂದಿದ್ದೇನೆ, ನಾನು ಇಲ್ಲೇ ಇರುತ್ತೇನೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಮೇಲೆ ನೋಡೋಣ ಎಂದು ಹೇಳಿದ್ದೇನೆ ಎಂದು ಬಿಎಸ್ವೈರನ್ನ ಭೇಟಿ ಮಾಡಿದ್ದ ಹಲವು ಬಿಜೆಪಿ ಶಾಸಕರಿಗೆ ಹೇಳಿದ್ದಾರೆ. ಸಚಿವ ಸ್ಥಾನ ಕೇಳೋಕೆ ಬಂದಿದ್ದೀರಾ ಎಂದು BSY ತಮಾಷೆ ಮಾಡಿದ್ದಾರಂತೆ.
ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟು 123 ಗ್ರಾಮಗಳಲ್ಲಿ ಹಾನಿಯಾಗಿದೆ. 19,421 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಹದಿಂದ 6 ಜನರ ಸಾವು, 15 ಜನರಿಗೆ ಗಾಯ, ಹಾಗೂ ಒಬ್ಬರು ಕಾಣೆಯಾಗಿದ್ದಾರೆ. 294 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಜಿಲ್ಲೆಯಲ್ಲಿ 705 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ 139 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರಗಳಿಗೆ 16,322 ಜನ ಸ್ಥಳಾಂತರವಾಗಿದ್ದರು. ಸದ್ಯ 40 ಕಾಳಜಿ ಕೇಂದ್ರಗಳಲ್ಲಿ 6,943 ಜನರು ಇದ್ದಾರೆ. 487.74 ಹೆಕ್ಟೇರ್‌ನಷ್ಟು ಕೃಷಿ ಭೂಮಿ ಹಾನಿಯಾಗಿದೆ. 406 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 264.93 ಕಿಲೋ ಮೀಟರ್ ರಸ್ತೆ ಹಾನಿಯಾಗಿದೆ, ಹಾಗೂ 52 ಸೇತುವೆ, 39 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.
ಕೆ.ಎಸ್.ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು. ಕೆ.ಎಸ್.ಈಶ್ವರಪ್ಪರನ್ನು ಎಂದೂ ಕಡೆಗಣಿಸಬಾರದು ಎಂದು ಮಖಣಾಪುರ ಗುರುಪೀಠದ ಸೋಮಲಿಂಗೇಶ್ವರಶ್ರೀ ಹೇಳಿಕೆ ನೀಡಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಬೇಕು. ಕೆ.ಎಸ್.ಈಶ್ವರಪ್ಪ ಬೇಡಿ ಈ ಸ್ಥಾನ ಪಡೆಯಬಾರದು. ಈಶ್ವರಪ್ಪ ಪಕ್ಷಕ್ಕಾಗಿ ದುಡಿದ ಫಲವಾಗಿ ಸೂಕ್ತ ಸ್ಥಾನ ಕೊಡಲಿ. ಕೇಂದ್ರದ ಬಿಜೆಪಿ ನಾಯಕರು ಇದನ್ನು ಗಮನಿಸಲಿ ಎಂದು ಹೇಳಿದರು.
ಕೆ.ಎಸ್.ಈಶ್ವರಪ್ಪ ಹಾಲುಮತದ ಸಮಾಜದ ಸ್ವಾಮೀಜಿಗಳಿಂದ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ
ರಾಜ್ಯದಲ್ಲಿ ನಾಯಕತ್ವ ಬದಲಾಣೆ ಬಡಿದಾಟದಲ್ಲಿ ಗೆದ್ದು ಸಿಎಂ ಸಿಂಹಾಸನಕ್ಕೇರಿದ ಬಸವರಾಜ್ ಬೊಮ್ಮಾಯಿ, ಜನರ ಸಂಕಷ್ಟ ಅರಿಯಲು ರಾಜ್ಯ ಪ್ರವಾಸದಲ್ಲಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದ ಮರುದಿನವೇ, ಭೀಕರ ಮಳೆಯಿಂದ ನೆರೆಗೆ ತುತ್ತಾಗಿರೋ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ ಇಂದು ಉತ್ತರಕನ್ನಡ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಅನ್ನೋ ಚರ್ಚೆ ಮುನ್ನೆಲೆಗೆ ಬಂದಿದೆ. ಇವತ್ತು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿರೋ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ಹೋಗಲಿದ್ದಾರೆ. ದೆಹಲಿಗೆ ಹೋಗಿ ಅಲ್ಲಿ ಬಿಜೆಪಿ ವರಿಷ್ಠರನ್ನ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚಿಸಲಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡ ಆದಷ್ಟು ಬೇಗ ಸಚಿವ ಸಂಪುಟ ಫೈನಲ್ ಮಾಡಿ ಕೈ ತೊಳೆದುಕೊಳ್ಳಲು ಸಿದ್ಧವಾಗಿದೆ. ಇದರ ನಡುವೆ ಸಚಿವ ಸ್ಥಾನ ಪಡೆಯಲು ಹಲವರು ಪ್ರಯತ್ನ ಮುಂದುವರಿಸಿದ್ದಾರೆ.
Published On - 11:36 am, Thu, 29 July 21