Karnataka Breaking News LIVE: ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ
Karnataka Bengaluru News LIVE: ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗುತ್ತಿದೆ.
LIVE NEWS & UPDATES
-
ನಾಳೆ ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಬೆಂಬಲಿಗರಿಂದ ಪ್ರತಿಭಟನೆ
ಹಿರಿಯೂರು ಶಾಸಕಿ ಪೂರ್ಣಿಮಾಗೆ ಮಂತ್ರಿಸ್ಥಾನ ಕೈತಪ್ಪಿದ ಹಿನ್ನೆಲೆ ನಾಳೆ ಹಿರಿಯೂರಿನಲ್ಲಿ ಪೂರ್ಣಿಮಾ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಲಕ್ಷ್ಮಮ್ಮ ಸಭಾಂಗಣದಲ್ಲಿ ಸಭೆ ಸೇರಿದ್ದ ಪೂರ್ಣಿಮಾ ಬೆಂಬಲಿಗರು ಪ್ರತಿಭಟನೆಗೆ ತೀರ್ಮಾನಿಸಿದ್ಧಾರೆ.
-
ನಾಳೆ ಧಾರವಾಡ ಬಂದ್ ಎಂದು ಸುಳ್ಳು ಸುದ್ದಿ ವೈರಲ್
ಶಾಸಕ ಅರವಿಂದ ಬೆಲ್ಲದ್‌ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ನಾಳೆ ಧಾರವಾಡ ಬಂದ್ ಎಂದು ಸುಳ್ಳು ಸುದ್ದಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದ್ ಪೋಸ್ಟರ್ ವೈರಲ್ ಆಗಿದೆ. ಕಿಡಿಗೇಡಿಗಳಿಂದ ಸುಳ್ಳು ಸುದ್ದಿ ಸೃಷ್ಟಿಯಾಗಿದೆ. ನಾಳೆ ಯಾವುದೇ ಬಂದ್ ಇರುವುದಿಲ್ಲ ಅಂತ ಬಿಜೆಪಿ ಮಾಧ್ಯಮ ವಕ್ತಾರ ದೇವರಾಜ್ ಶಹಾಪುರ ಸ್ಪಷ್ಟನೆ ನೀಡಿದ್ದಾರೆ.
-
ಸಚಿವ ಸ್ಥಾನ ಕೈತಪ್ಪಿದ ನಂತರ ಚನ್ನಪಟ್ಟಣ ನಿವಾಸಕ್ಕೆ ಬಂದು ಹೋದ ಸಿ.ಪಿ.ಯೋಗೇಶ್ವರ್
ಸಚಿವ ಸ್ಥಾನ ಕೈತಪ್ಪಿದ ನಂತರ ಸಿ.ಪಿ.ಯೋಗೇಶ್ವರ್ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಕ್ಕೆ ಬಂದು ಹೋದರು. ಕೆಲವೇ ನಿಮಿಷಗಳಲ್ಲಿ ಬಂದು ಬೆಂಬಲಿಗರನ್ನ ಮಾತನಾಡಿಸಿಕೊಂಡು ಹೋದರು. ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿ ಇದ್ದ ಯೋಗೇಶ್ವರ್ಗೆ ನಿನ್ನೆ ಮಂತ್ರಿಗಿರಿ ಕೈತಪ್ಪಿತ್ತು.
ನಾಳೆ ಖಾತೆ ಹಂಚಿಕೆ ಬಗೆಹರಿಯಲಿದೆ: ಬಸವರಾಜ ಬೊಮ್ಮಾಯಿ
ನಾಳೆ ಖಾತೆ ಹಂಚಿಕೆ ಬಗೆಹರಿಯಲಿದೆ ಎಂದು ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಈಗ ಕೊಟ್ಟಿರುವುದು ತಾತ್ಕಾಲಿಕವಷ್ಟೆ ಎಂದಿದ್ದಾರೆ.
‘ಬಿಜೆಪಿಯವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ’- ಡಾ.ಕೆ.ಸುಧಾಕರ್ ಪ್ರತಿಕ್ರಿಯೆ
‘ಬಿಜೆಪಿಯವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಕನಸು ನನಸಾಗುವುದಿಲ್ಲಎಂದು ಸುಧಾಕರ್ ಹೇಳಿದರು.
ಕೆಲವರು ಅವಕಾಶ ವಂಚಿತರಾಗಿದ್ದಾರೆ- ಸುಧಾಕರ್
ಅನಿವಾರ್ಯವಾಗಿ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಕೆಲವರು ಅವಕಾಶ ವಂಚಿತರಾಗಿದ್ದಾರೆ. ಈಗ ಅವಕಾಶ ವಂಚಿತರಿಗೆ ಮುಂದೆ ಅವಕಾಶ ಸಿಗುತ್ತದೆ. ಶಾಸಕರ ಅಸಮಾಧಾನವನ್ನು ಸಿಎಂ ನಿಭಾಯಿಸುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಬೆಂಬಲಿಗರಿಂದ ಪ್ರತಿಭಟನೆ
ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂತ್ರಿಸ್ಥಾನ ಕೊಡಲೇಬೇಕು ಅಂತ ಬೆಂಬಲಿಗರ ಆಗ್ರಹಿಸಿದ್ದಾರೆ.
ಸಿಎಂ ಬೊಮ್ಮಾಯಿಯನ್ನು ಹಾಡಿ ಹೊಗಳಿದ ಡಾ.ಕೆ.ಸುಧಾಕರ್
ಬೊಮ್ಮಾಯಿ ಸರಳ ಸಜ್ಜನ ಸಚ್ಚಾರಿತ್ರ್ಯ ದೂರದೃಷ್ಟಿಯ ನಾಯಕ. ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಮುಖ್ಯಮಂತ್ರಿಯನ್ನು ನೂತನ ಸಚಿವ ಡಾ.ಕೆ.ಸುಧಾಕರ್ ಹಾಡಿ ಹೊಗಳಿದ್ದಾರೆ
ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದ ತಿಪ್ಪಾರೆಡ್ಡಿ ಬೆಂಬಲಿಗರು
ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೆಂಬಲಿಗರ ಧರಣಿಗೆ ಕುಳಿತಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದ ಬಳಿ ಬೆಂಬಲಿಗರ ಧರಣಿ ನಡೆಸುತ್ತಿದ್ದಾರೆ. ತಿಪ್ಪಾರೆಡ್ಡಿ ಬೆಂಬಲಿಗರು ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಬೆಂಬಲಿಗರು ಕಣ್ಣೀರು ಹಾಕುತ್ತಿರುವುದನ್ನು ಕಂಡ ಜಿ.ಹೆಚ್.ತಿಪ್ಪಾರೆಡ್ಡಿ ಕೆಲ ಕ್ಷಣ ಭಾವುಕರಾಗಿದ್ದಾರೆ.
ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ- ಸಿಎಂ ಬೊಮ್ಮಾಯಿ
ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಈಗ ಕೊಟ್ಟಿರುವುದು ತಾತ್ಕಾಲಿಕವಷ್ಟೇ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಯಾರು ಅಕ್ರಮ ಮಾಡಿರುತ್ತಾರೋ ಅವರ ಮೇಲೆ ದಾಳಿ- ಜಮೀರ್ ಮನೆ ಮೇಲೆ ಇಡಿ ದಾಳಿಗೆ ಸಿಎಂ ಪ್ರತಿಕ್ರಿಯೆ
ಜಮೀರ್ ನಿವಾಸದ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಡಿ, ಐಟಿ ಆಫೀಸರ್ ಅಲ್ಲ. ನಾನು ಇದರ ಬಗ್ಗೆ ಉತ್ತರ ಕೊಡಲು ಆಗಲ್ಲ. ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ ದಾಳಿ ಆಗುತ್ತದೆ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳೋಕೆ ಆ ರೀತಿ ಆರೋಪ ಮಾಡ್ತಾರೆ. ಈ ಕುರಿತಂತೆ ಐಟಿ, ಇಡಿಯವರಿಗೆ ಗೊತ್ತಿರುತ್ತದೆ ಎಂದು ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕೈತಪ್ಪಿದ ಮಂತ್ರಿ ಸ್ಥಾನ; ಭಾವುಕರಾದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
6 ಬಾರಿ ಶಾಸಕನಾದ ನನಗೆ ಮಂತ್ರಿ ಸ್ಥಾನ ನೀಡದಿರುವುದು ಬೇಸರವಾಗಿದೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿದವನಲ್ಲ. 52 ವರ್ಷ ರಾಜಕಾರಣದಲ್ಲಿ ನಮ್ಮ ಜನರೇಷನ್ ಮುಗಿಯಿತು. ಕೆಲವೇ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ನೀಡಿದ್ದು ಬೇಸರವಾಗಿದೆ. ಬೊಮ್ಮಾಯಿ ಸಂಪುಟ ಸಾಮಾಜಿಕ ನ್ಯಾಯದಿಂದ ದೂರವಿದೆ. ಮೋದಿ ಸಂಪುಟ ವಿಸ್ತರಣೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಪಕ್ಷ ಮತ್ತು ನಾಯಕರ ಸೂಚನೆಯಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಭಾವುಕರಾಗಿ ಚಿತ್ರದುರ್ಗ ನಗರದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಬಿ.ಸಿ.ನಾಗೇಶ್ ಸಚಿವರಾಗಿದ್ದಕ್ಕೆ ತಿಪಟೂರು ನಗರಸಭೆ ಕಮೀಷನರ್ರಿಂದ ಉರುಳುಸೇವೆ
ತಿಪಟೂರು ಶಾಸಕ ಬಿ.ಸಿ.ನಾಗೇಶ್ ಸಚಿವರಾದ ಹಿನ್ನೆಲೆ ನಗರಸಭೆ ಕಮೀಷನರ್ ಉರುಳುಸೇವೆ ಮಾಡಿದ್ದಾರೆ. ತಿಪಟೂರು ನಗರದ ಕೆಂಪಮ್ಮ ದೇವಾಲಯ ಸುತ್ತಲೂ ಕಮಿಷನರ್ ಉರುಳುಸೇವೆ ಮಾಡಿದ್ದಾರೆ. ಬಿ.ಸಿ.ನಾಗೇಶ್ ಸಚಿವರಾದ ಕಾರಣ ದೇವಿಗೆ ಹರಕೆ ತೀರಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಸಚಿವ ಪ್ರಭು ಚೌಹಾಣ್ ಭೇಟಿ
ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಚಿವ ಪ್ರಭು ಚೌಹಾಣ್ ಭೇಟಿ ನೀಡಿದ್ದಾರೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ಸಚಿವ ಪ್ರಭು ಚೌಹಾಣ್ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಚರ್ಚೆ
ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಚರ್ಚೆ ನಡೆದಿದೆ. ಸಿಎಂ ಹೆಗಲ ಮೇಲೆ ಕೈ ಹಾಕಿ ಪಕ್ಕಕ್ಕೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಕಾರ್ಯಕ್ರಮದ ವೇದಿಕೆ ಮೇಲೆ ಪಕ್ಕಕ್ಕೆ ಕರೆದೊಯ್ದು ಚರ್ಚೆ ನಡೆಸಿದ್ದಾರೆ.
ಸುತ್ತೂರು ಶ್ರೀಗಳನ್ನು ಭೇಟಿಯಾದ ಸಚಿವ ಜೆ.ಸಿ.ಮಾಧುಸ್ವಾಮಿ
ಚಾಮುಂಡಿ ಬೆಟ್ಟ ತಪ್ಪಲಿನಲ್ಲಿರುವ ಶ್ರೀಗಳ ಶಾಖಾ ಮಠಕ್ಕೆ ಭೇಟಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ನಿನ್ನೆಯಷ್ಟೇ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಮಾಧುಸ್ವಾಮಿ, ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದು ಅಲ್ಲಿಂದ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು.
ಸಚಿವ ಸ್ಥಾನ ಹಂಚಿಕೆಯಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ- ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ
ಸಚಿವ ಸ್ಥಾನ ಹಂಚಿಕೆಯಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಳ್ಳಾರಿಯಲ್ಲಿ ಟಿವಿ9 ಗೆ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿಕೆ ನೀಡಿದ್ದಾರೆ. ಶ್ರೀರಾಮುಲು ಅವರನ್ನೂ ಡಿಸಿಎಂ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಗೆ ಎಂ.ಪಿ.ಪ್ರಕಾಶ್ ಬಳಿಕ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಎಸ್ಟಿ ಸಮುದಾಯಕ್ಕೆ ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕು. ವಾಲ್ಮೀಕಿ ಸಮುದಾಯ ಮುಂದಿನ ದಿನಗಳಲ್ಲಿ ಬಿಜೆಪಿಯನ್ನ ಕೈಬಿಡುತ್ತಾರೆ ಎಂದು ಬಿ.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಾಳೆ ಹಾಸನ ಜಿಲ್ಲೆಗೆ ಭೇಟಿ ನೀಡಲಿರುವ ಸಚಿವ ಗೋಪಾಲಯ್ಯ
ಪ್ರವಾಹ ಪರಿಶೀಲನೆ ಹಾಗು ಕೊರೊನಾ ತಡೆ ಸಂಬಂಧ ಸಭೆ ನಡೆಸಲು ಸಚಿವ ಗೋಪಾಲಯ್ಯ ನಾಳೆ ಹಾಸನಕ್ಕೆ ಭೇಟಿ ನೀಡಲಿದ್ದಾರೆ. ನಾಳೆ 11 ಗಂಟೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಾರೆ .2.30 ಕ್ಕೆ ಸಕಲೇಶಪುರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಸಚಿವ ಸ್ಥಾನ ಹಂಚಿಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ; ಟಿವಿ9 ಗೆ ಶಾಸಕ ಸೋಮಶೇಖರ್ ರೆಡ್ಡಿ
ಸಚಿವ ಸ್ಥಾನ ಹಂಚಿಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಟಿವಿ9 ಗೆ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು. ಹೆಚ್ಚು ಸ್ಥಾನ ಬಿಜೆಪಿ ಗೆದ್ದಿರುವ ಜಿಲ್ಲೆಗಳನ್ನ ಕಡೆಗಣಿಸಿದ್ದಾರೆ. ಕಡಿಮೆ ಕ್ಷೇತ್ರದಲ್ಲಿ ಗೆದ್ದಿರುವ ಜಿಲ್ಲೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. 2008 ರಲ್ಲಿ ಬಿಜೆಪಿ ಸರ್ಕಾರ ಬರಲು ನಮ್ಮ ಕುಟುಂಬ ಕಾರಣ. ಆದರೆ ಬಿಜೆಪಿ ವರಿಷ್ಠರು ಈಗ ನಮ್ಮ ಕುಟುಂಬವನ್ನ ಕಡೆಗಣಿಸಿದ್ದಾರೆ. ಶ್ರೀರಾಮುಲುಗೆ ಡಿಸಿಎಂ ಕೊಡುತ್ತಾರೆ ಅನ್ನೋ ನಿರೀಕ್ಷೆ ಇತ್ತು ಆದರೆ ಶ್ರೀರಾಮುಲುಗೂ ಕೂಡ ಡಿಸಿಎಂ ಸ್ಥಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
=
ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ; ಡಾ.ಕೆ.ಸುಧಾಕರ್
ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಆಗಬಹುದು.ನನಗೆ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಎರಡನೆ ಬಾರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿ ವರಿಷ್ಠರಿಗೆ ಧನ್ಯವಾದಗಳು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭೆಯಲ್ಲಿ ಸುಧಾಕರ್ ಹೇಳಿದ್ದಾರೆ.
ಮೈಸೂರಿಗೆ ಸಚಿವ ಮಾದುಸ್ವಾಮಿ ಆಗಮನ
ಸಚಿವರಾದ ಬಳಿಕ ಮೊದಲ ಬಾರಿಗೆ ಮಾದುಸ್ವಾಮಿ ಮೈಸೂರಿಗೆ ಆಗಮಿಸಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮುಖಂಡರ ಭೇಟಿ ಮಾಡಿದರು. ಮುಖಂಡರು ಸಚಿವ ಮಾಧುಸ್ವಾಮಿಗೆ ಸನ್ಮಾನಿಸಿದರು. ಇಂದು ಮಾಧುಸ್ವಾಮಿ ಅವರ ಜನ್ಮದಿನ ಹಿನ್ನೆಲೆ ಅಭಿಮಾನಿಗಳು ಕೇಕ್ ತಂದು ಕತ್ತರಿಸಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿಎಂ ವಿರುದ್ಧ ಶಾಸಕ ನೆಹರು ಓಲೇಕಾರ ಆಕ್ರೋಶ
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿಎಂ ವಿರುದ್ಧ ಶಾಸಕ ನೆಹರು ಓಲೇಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದೆ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅವಕಾಶ ಕೊಟ್ಟಿಲ್ಲ. ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಲು ನಾವು ಪ್ರಯತ್ನ ಮಾಡಿದ್ದೆವು. ನೆಹರು ಓಲೇಕಾರ ಬೆಳೆದರೆ ಹೇಗೆ ಅನ್ನೋ ನಿಟ್ಟಿನಲ್ಲಿ ಸಚಿವ ಸ್ಥಾನ ಕೈ ತಪ್ಪಿಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪಲು ಸಿಎಂ ಬಸವರಾಜ ಬೊಮ್ಮಾಯಿಯವರೆ ನೇರ ಕಾರಣ. ನನಗೆ ಸಚಿವ ಸ್ಥಾನ ಸಿಗೋ ಬಗ್ಗೆ ಮೇಲ್ಮಟ್ಟದ ನಾಯಕರು ಹೇಳಿದ್ದಾಗ್ಲೂ ಅದೊಂದು ಹೆಸರು ಬಿಟ್ಟು ಹೇಳಿ ಅಂದಿದ್ದಾರಂತೆ ಸಿಎಂ ಬೊಮ್ಮಾಯಿ. ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ತೇನೆ. ಪಕ್ಷ ಸಂಘಟನೆ ಮಾಡಿ ಪಕ್ಷ ಕಟ್ಟಿದ್ದೇವೆ. ಪಕ್ಷ ಬಿಡೋ ಪ್ರಶ್ನೆ ಇಲ್ಲ ಎಂದು ಶಾಸಕ ನೆಹರು ಓಲೇಕಾರ ಹೇಳಿಕೆ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಲ ಶಾಸಕರಿಗೆ ಮಂತ್ರಿ ಗಿರಿ ತಪ್ಪಿರುವುದು ಬೇಸರವಾಗಿದೆ. ಇನ್ನು ಕೆಲ ಶಾಸಕರು ಈ ಬಾರಿ ಮೊದಲು ಸಚಿವ ಸ್ಥಾನ ಪಡೆದ ಸಂತಸದಲ್ಲಿದ್ದಾರೆ. ಸಚಿವ ಸ್ಥಾನ ಪಡೆದ ಶಾಸಕರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಸಚಿವ ಸ್ಥಾನ ಸಿಗಲಿಲ್ಲ ಅಂತ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಇಂದು ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗುತ್ತಿದೆ. ಆರಗ ಜ್ಞಾನೇಂದ್ರ, ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ಮುನಿರತ್ನಗೆ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗುತ್ತಿದೆ. ನೂತನ ಸಚಿವರಾದ ಬಿ.ಸಿ.ನಾಗೇಶ್, ಸುನಿಲ್ ಕುಮಾರ್, ಹಾಲಪ್ಪ ಆಚಾರ್ಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗುತ್ತಿದೆ.
Published On - Aug 05,2021 12:20 PM