ಬೆಂಗಳೂರು: ಕರಾವಳಿ ಮಂಗಳೂರಿನ (Mangaluru) ಕಂಕನಾಡಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ (Cooker bomb explosion) ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದಾದ ನಂತರ ಈ ಪ್ರಕರಣ ರಾಜಕೀಯ ಕೆಸರೆಚಾಟಕ್ಕೂ ಕಾರಣವಾಯಿತು. ಪ್ರಕರಣದ ಕುರಿತಾಗಿ ಮೊನ್ನೆ (ಡಿ.15) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆ ಬಿಜೆಪಿ (BJP) , ಡಿಕೆ ಶಿವಕುಮಾರ್ ಮೇಲೆ ಮುರಿದುಕೊಂಡು ಬಿದ್ದಿದ್ದು, ಈಗ ಹೇಳಿಕೆ ಖಂಡಿಸಿ ಡಿಸೆಂಬರ್ 19, 20, 21ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಡಿ.ಕೆ ಶಿವಕುಮಾರ್ ಹೇಳಿಕೆ
ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು.
ಮತ ಮಾಹಿತಿ ಕಳವು, ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು. ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಉಗ್ರನ ಪರ ಮಾತನಾಡಿದ್ದಾರೆ, ಕೂಡಲೇ ಅವರನ್ನು ಕಾಂಗ್ರೆಸ್ನಿಂದ ವಜಾ ಮಾಡಬೇಕು: ಕೆ.ಎಸ್.ಈಶ್ವರಪ್ಪ ಆಗ್ರಹ
ಡಿಕೆ ಶಿವಕುಮಾರ್ ವಿರುದ್ಧ ತಿರುಗಿಬಿದ್ದ ಬಿಜೆಪಿ
ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲವಾಗಿದ್ದಾರೆ. ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ನಮ್ಮ ಬ್ರದರ್ಸ್ ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ ಎಂದು ವಾಗ್ದಾಳಿ ಮಾಡಿತ್ತು.
ಕಾಂಗ್ರೆಸ್ ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ್ದೆಲ್ಲವೂ ಇಂಥದ್ದೇ. ನಿಜವಾದ ಉಗ್ರರನ್ನು ಬಚ್ಚಿಟ್ಟು, ಹಿಂದೂಗಳ ಮೇಲೆಯೇ ಉಗ್ರರು ಎಂದು ಸುಳ್ಳು ಕೇಸ್ ಹಾಕುತ್ತಾ ಕುಳಿತಿದ್ದಕ್ಕೆ ಅಲ್ಲವೆ ಮುಂಬೈ ತಾಜ್ ಮೇಲೆ ಉಗ್ರರ ದಾಳಿಯಾಗಿದ್ದು? ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸವಿದ್ದಿದ್ದು? ಮಂಗಳೂರು ಕುಕ್ಕರ್ ಸ್ಪೋಟವನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮದು ಭಯೋತ್ಪಾದನಾ ಸಮರ್ಥಕರ ಪಕ್ಷ ಎಂದು ಘೋಷಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಶಾರಿಕ್ ಗುಣಮುಖ, ಬೆಂಗಳೂರಿಗೆ ಶಿಫ್ಟ್, ಲಾಡ್ಜ್ ಗೆ ಬರುತ್ತಿತ್ತು ಸ್ಪೋಟಕ ವಸ್ತುಗಳು
ಏನಿದು ಕುಕ್ಕರ್ ಬಾಂಬ್ ಸ್ಪೋಟ
ನವೆಂಬರ್ 19 ರಂದು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟ ಸಂಭವಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸಿದಾಗ ಸ್ಪೋಟದ ಹಿಂದಿನ ಕಾರಣಗಳು ಬಯಲಾದವು. ಸಂಚು ರೂಪಿಸಿ ಬಾಂಬ್ ಬ್ಲಾಸ್ಟ್ ಮಾಡಲು ನಿರ್ಧರಿಸಲಾಗಿತ್ತು. ಈ ಪ್ರಕರಣದ ಹಿಂದೆ ಉಗ್ರರ ಕೈವಾಡವಿರುವುದು ಕೂಡ ಸ್ಪಷ್ಟವಾಗಿದೆ. ಸದ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎಗೆ ಒಪ್ಪಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Sat, 17 December 22