AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗದಿತ ಗುರಿ ತಲುಪುವಲ್ಲಿ ವಿಫಲ: ರಾಜ್ಯದಲ್ಲಿ ಮತ್ತೆ ವಿಸ್ತರಣೆಯಾಗುತ್ತಾ ಜಾತಿಗಣತಿ ಅವಧಿ?

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯ ಅವಧಿ ಮತ್ತೆ ವಿಸ್ತರಣೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಅಕ್ಟೋಬರ್​ 18ರ ವರೆಗೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದ್ದರೂ ರಾಜಧಾನಿ ಬೆಂಗಳೂರಲ್ಲಿ ಈ ವರೆಗೆ ಶೇ.30ರಷ್ಟು ಮನೆಗಳ ಗಣತಿ ಮಾತ್ರ ನಡೆದಿದೆ. ಇನ್ನು ಉಳಿದ 4 ದಿನಗಳಲ್ಲಿ ಬಾಕಿ ಉಳಿದ ಶೇ. 70ರಷ್ಟು ಮನೆಗಳ ಗಣತಿ ಆಗಬೇಕಿದ್ದು, ಮೇಲ್ನೋಟಕ್ಕೆ ಇದು ಕಷ್ಟ ಸಾಧ್ಯ ಅನಿಸುತ್ತಿದೆ.

ನಿಗದಿತ ಗುರಿ ತಲುಪುವಲ್ಲಿ ವಿಫಲ: ರಾಜ್ಯದಲ್ಲಿ ಮತ್ತೆ ವಿಸ್ತರಣೆಯಾಗುತ್ತಾ ಜಾತಿಗಣತಿ ಅವಧಿ?
ಜಾತಿ ಗಣತಿ (ಸಾಂದರ್ಭಿಕ ಚಿತ್ರ)
ಪ್ರಸನ್ನ ಗಾಂವ್ಕರ್​
| Updated By: ಪ್ರಸನ್ನ ಹೆಗಡೆ|

Updated on:Oct 14, 2025 | 7:00 PM

Share

ಬೆಂಗಳೂರು, ಅಕ್ಟೋಬರ್​ 14: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಗೆ (Caste Census) ನೀಡಲಾದ ಗಡುವು ಮುಗಿಯುತ್ತ ಬಂದರೂ ಗಣತಿ ಕಾರ್ಯ ಮಾತ್ರ ಸದ್ಯ ಪೂರ್ಣವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಾಂತ್ರಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದಾಗಿ ನಿರೀಕ್ಷಿತ ಗುರಿ ತಲುಪುವಲ್ಲಿ ಗಣತಿದಾರರು ವಿಫಲರಾಗುತ್ತಿದ್ದಾರೆ. ಅಕ್ಟೋಬರ್​ 18ರ ವರೆಗೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದ್ದರೂ ರಾಜಧಾನಿ ಬೆಂಗಳೂರಲ್ಲಿ ಈ ವರೆಗೆ ಶೇ.30ರಷ್ಟು ಮನೆಗಳ ಗಣತಿ ಮಾತ್ರ ನಡೆದಿದೆ. ಈ ಹಿನ್ನಲೆ ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ ಬರೆದಿದ್ದು, ಮುಖ್ಯ ಆಯುಕ್ತರು ಮತ್ತು 5 ಪಾಲಿಕೆ ಆಯುಕ್ತರು ಈ ಬಗ್ಗೆ ಗಮನಹರಿಸುವಂತೆ ತಿಳಿಸಿದ್ದಾರೆ.

ಜಿಬಿಎ ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಏನಿದೆ?

ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಸಮೀಕ್ಷೆದಾರರಿಗೆ ದಿನಕ್ಕೆ 16 ಮನೆಗಳ ಗುರಿ ನೀಡಲಾಗಿತ್ತು. ಈ ವೇಗದಲ್ಲಿ ಕಾರ್ಯ ನಡೆದರೆ ಸಮೀಕ್ಷೆಯನ್ನು ಅಕ್ಟೋಬರ್ 18 ಅಥವಾ 19ರೊಳಗೆ ಪೂರ್ಣಗೊಳಿಸಲು ಸಾಧ್ಯ ಎಂಬ ಅಂದಾಜು ನೀಡಲಾಗಿತ್ತು. ಆದರೆ ಬೆಂಗಳೂರಲ್ಲಿ ದಿನಕ್ಕೆ ಕೇವಲ ಸರಾಸರಿ 7-8 ಮನೆಗಳ ಸಮೀಕ್ಷೆ ಆಗುತ್ತಿದೆ. ಪ್ರಸ್ತುತ ನಡೆದಿರುವುದು ಶೇಕಡಾ 30ರಷ್ಟು ಮನೆಗಳ ಗಣತಿ ಮಾತ್ರ. ಸಮೀಕ್ಷೆದಾರರು ಅಗತ್ಯಮಟ್ಟದ ಫಲಿತಾಂಶ ನೀಡದಿರಲು ಅವರ ಮೇಲ್ವಿಚಾರಕರ ಕಾರ್ಯಧಕ್ಷತೆಯಲ್ಲಿನ ಕೊರತೆ ಕಾರಣ. ಮತ್ತೆ ಸಮೀಕ್ಷಾ ಅವಧಿಯನ್ನು ವಿಸ್ತರಿಸುವುದು ತುಂಬಾ ಕಷ್ಟಕರ. ಸಮೀಕ್ಷೆ ವಿಸ್ತರಿಸುವ ಸ್ಥಿತಿ ಬಂದರೆ ಗಣತಿದಾರರು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳ ನಿಯಮಿತ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಮೀಕ್ಷಾ ಪ್ರಗತಿಗೆ ವೈಯಕ್ತಿಕ ಗಮನಹರಿಸಿ ಕ್ರಮಕೈಗೊಳ್ಳಿ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರಾದವರಿಗೆ ಜಿಬಿಎ ಶಾಕ್!

ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್​ 18ರ ವರೆಗೆ ಜಾತಿ ಸಮೀಕ್ಷೆ ಕಾರ್ಯ ವಿಸ್ತರಣೆಗೊಂಡಿತ್ತು. ಈ ಕೆಲಸದಲ್ಲಿ ಪಾಲ್ಗೊಂಡಿರುವ ಬಹುತೇಕರು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರಾದ ಕಾರಣ ಅ.18ರ ವರೆಗೆ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು. ಈಗ ವಿಸ್ತೃತ ಅವಧಿ ಮುಗಿಯುತ್ತ ಬಂದರೂ ಜಾತಿ ಸಮೀಕ್ಷೆ ಅಂತಿಮ ಹಂತ ತಲುಪದ ಕಾರಣ ಶಾಲೆಗಳ ಆರಂಭದ ಕತೆ ಏನು ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:55 pm, Tue, 14 October 25