
ಬೆಂಗಳೂರು, ಡಿಸೆಂಬರ್ 05: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕಾದಾಟ ಕೊಂಚ ತಣ್ಣಗಾದಂತೆ ಕಂಡರೂ ಒಳಗೊಳಗೆ ಹೊಗೆಯಾಡುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ಅತಿ ಹಿಂದುಳಿದ ವರ್ಗಗಳ 11 ಸ್ವಾಮೀಜಿಗಳ ಒಕ್ಕೂಟ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ತಂಡ ಡಿಕೆಶಿ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಭೆಟಿ ನೀಡಿದ್ದು, ಅವರು ಸಿಎಂ ಆಗಬೇಕೆಂದು ಬೆಂಬಲ ಸೂಚಿಸಿದೆ. ಜೊತೆಗೆ ನಿಮ್ಮ ನೇತೃತ್ವದಲ್ಲಿ ಅತಿ ಹಿಂದುಳಿದ ವರ್ಗಗಳ ಸಮಾವೇಶ ಬೆಂಗಳೂರಲ್ಲಿ ನಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ರಾಜ್ಯದ ಮುಖ್ಯಮಂತ್ರಿ ಆಗಲು ಡಿಕೆಶಿ ಯೋಗ್ಯ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತಡಮಾಡಬಾರದು. ನಮ್ಮೆಲ್ಲರ ಸಂಪೂರ್ಣ ಬೆಂಬಲ ಅವರಿಗಿದೆ. ಡಿಕೆಶಿ ಸಿಎಂ ಆಗಬೇಕೆಂಬ ಬೇಡಿಕೆ ಇದ್ದು, ಅವರಿಗೆ ಯೋಗ್ಯತೆ ಮತ್ತು ಹಕ್ಕು ಎರಡೂ ಇದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರೋದೇ ಎರಡು ಮೂರು ರಾಜ್ಯಗಳಲ್ಲಿ. ಹೀಗಾಗಿ ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸುಳ್ಳು ಹೇಳಿದ್ರೆ ರಿಸೈನ್; ಡಿಕೆ ಶಿವಕುಮಾರ್ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಯಾವ ಮುಖ್ಯಮಂತ್ರಿಗಳೂ ನಮ್ಮ ಪರ ಕೆಲಸ ಮಾಡಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇವೆ. ಡಿಕೆ ಶಿವಕುಮಾರ್ ಕಷ್ಟ, ನೋವು ಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ ಜೈಲಿಗೂ ಹೋಗಿದ್ದಾರೆ. ಹಾಗಾಗಿ ಅವರು ಮಾಡಿದ ಕೆಲಸಕ್ಕೆ ಕೂಲಿ ಕೊಡಬೇಕು. ಸಿದ್ದರಾಮಯ್ಯನವರು ಕೂಡ ನಾಯಕ, ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಆದರೆ, ಇಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹುಟ್ಟುಹಾಕಿದ್ದು ನಾವಲ್ಲ. ಕರ್ನಾಟಕ ಭವನ, ಡೆಲ್ಲಿ ಎಂದು ಓಡಾಡಿದ್ದು ನೀವು. ಹೀಗಾಗಿ ಆ ಗೊಂದಲವನ್ನ ಬಗೆಹರಿಸಿ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಒಂದೊಮ್ಮೆ ಹಾಲಿ ಇರುವ ಸಿಎಂ ಸ್ಥಾನ ಕೈತಪ್ಪುವ ಸನ್ನಿವೇಶ ಉದ್ಭವಿಸಿದರೆ ಅಹಿಂದ ದಾಳ ಉರುಳಿಸುವ ಫ್ಲ್ಯಾನ್ ಸಿದ್ದರಾಮಯ್ಯರದ್ದು ಎನ್ನಲಾಗಿತ್ತು. ಅಹಿಂದರನ್ನು ಬಿಟ್ಟರೆ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಭವಿಷ್ಯ ಇಲ್ಲ ಎಂಬ ವಿಚಾರವನ್ನು ಹೈಕಮಾಂಡ್ ಮುಂದೆಯೂ ಪ್ರಸ್ತಾಪಿಸಲು ಸಿದ್ದರಾಮಯ್ಯರನ್ನ ಅವರ ಬೆಂಬಲಿಗ ನಾಯಕರೂ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ರಾಜ್ಯದ ಅತಿ ಹಿಂದುಳಿದ ವರ್ಗದ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್ ಅವರ ಪರ ನಿಂತಿದ್ದಾರೆ. ಡಿಕೆಶಿ ನೇತೃತ್ವದಲ್ಲಿ ಅತಿ ಹಿಂದುಳಿದ ವರ್ಗಗಳ ಸಮಾವೇಶಕ್ಕೂ ಒತ್ತಾಯ ಕೇಳಿಬಂದಿರೋದೀಗ ಭಾರಿ ಸಂಚಲನ ಮೂಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:34 pm, Fri, 5 December 25