ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬಹಿರಂಗ ಪತ್ರ ಬರೆದಿದ್ದಾರೆ. ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ. ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಭಾರತದ ಶೈಕ್ಷಣಿಕ ಕೇಂದ್ರ ಸ್ಥಾನವಾಗಿದೆ. ಇದರ ಜತೆ ಹೆಚ್ಚು ಉದ್ಯೋಗ ಸೃಷ್ಟಿಸುವ ಅವಕಾಶ ಹೊಂದಿದೆ. ಕರ್ನಾಟಕ ಆರ್ಥಿಕ, ಸೇವಾ ಕೇಂದ್ರವಾಗಿ ಹೊರಹೊಮ್ಮಲಿದೆ. ಬಹುಭಾಷಾ, ಬಹು ಜನಾಂಗ, ಬಹು ಸಂಸ್ಕೃತಿ ಹೊಂದಿದೆ. ರಾಜ್ಯ, ಬೆಂಗಳೂರು ದೇಶದ ಅಭಿವೃದ್ಧಿ ಮಾರ್ಗಸೂಚಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಸರ್ಕಾರ, ಬಿಜೆಪಿ ತನ್ನ ರಾಜಕೀಯ ದುರುದ್ದೇಶಕ್ಕೆ ವಿಭಜಿಸಲು ಯತ್ನಿಸುತ್ತಿದೆ. ರಾಜ್ಯದ ಯುವಕರು, ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಏಕತೆ ಒಡೆಯಲು ರಾಜ್ಯ ಸರ್ಕಾರ, ಬಿಜೆಪಿ ಕೆಲಸ ಮಾಡುತ್ತಿದೆ. ಇದೆಲ್ಲವನ್ನೂ ಬದಿಗಿಟ್ಟು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ರಣದೀಪ್ ಸುರ್ಜೇವಾಲ ಪತ್ರದ ಮೂಲಕ ತಿಳಿಸಿದ್ದಾರೆ.
ರಣದೀಪ್ ಸುರ್ಜೇವಾಲ ಬರೆದಿರುವ ಪತ್ರದ ಪೂರ್ಣ ಪಠ್ಯ ಇಲ್ಲಿ ನೀಡಲಾಗಿದೆ:
ಪ್ರೀತಿಯ ವಿದ್ಯಾರ್ಥಿಗಳೇ,
ಬೆಂಗಳೂರು ಭಾರತದ ‘ಮಾಹಿತಿ ತಂತ್ರಜ್ಞಾನದ ರಾಜಧಾನಿ’. ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಇತರೆ ವೃತ್ತಿಪರ ಕಾಲೇಜುಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಭಾರತದ ‘ಶೈಕ್ಷಣಿಕ ಕೇಂದ್ರ ಸ್ಥಾನ’ವಾಗಿದೆ. ಜತೆಗೆ ಈ ಯುವಕರಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವ ಅವಕಾಶ ಹೊಂದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದೇಶದ ‘ಆರ್ಥಿಕ ಮತ್ತು ಸೇವಾ ಕೇಂದ್ರ’ವಾಗಿ ಹೊರಹೊಮ್ಮುತ್ತಿದೆ. ಬಹುಭಾಷಾ, ಬಹು ಜನಾಂಗ, ಬಹು ಸಂಸ್ಕೃತಿಯ ಗುರುತು ಹೊಂದಿರುವ ಬೆಂಗಳೂರು ಹಾಗೂ ಕರ್ನಾಟಕ ನಮ್ಮ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿದೆ.
ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ದುರುದ್ದೇಶಕ್ಕೆ ಕರ್ನಾಟಕ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಅವರ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದೆ.
ಕೊವಿಡ್ ಪಿಡುಗು ಹಾಗೂ ಈ ಸವಾಲು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರದ ಅಸಮರ್ಥತೆ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಜ್ಞಾನ ಸಂಪಾದನೆಗೆ ಧಕ್ಕೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಎದುರಾಗುತ್ತಿದ್ದು, ಅದರಲ್ಲೂ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ, ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ನಡುವೆ ವೈಷಮ್ಯ ಸೃಷ್ಟಿಸಿ ಅವರ ಕೈಗೆ ಚಾಕು, ಚೂರಿ, ಕಲ್ಲುಗಳನ್ನು ಕೊಟ್ಟು ರಾಜ್ಯದ ವಿದ್ಯಾರ್ಥಿ ಸಮುದಾಯದ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ. ದಯವಿಟ್ಟು ಇದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಜೀವನ ಆರಂಭವಾಗುವ ಮುನ್ನವೇ ಅದನ್ನು ಅಂತ್ಯಗೊಳಿಸಲಾಗುತ್ತಿದೆ. ಶೇ. 40 ರಷ್ಟು ಕಮಿಷನ್, ಕ್ರಿಪ್ಟೋಕರೆನ್ಸಿ ಹಗರಣ, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಬದಲಾವಣೆಗೆಗಾಗಿ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ದಾರಿ ಇಲ್ಲದೆ ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದೆ.
ಈ ದುರ್ಮಾರ್ಗಕ್ಕೆ ವಿದ್ಯಾರ್ಥಿಗಳು ಹಾಗೂ ನಮ್ಮ ಮಕ್ಕಳು ಸಿಲುಕಿದರೆ, ಬಿಜೆಪಿಯ ರಾಜಕೀಯ ಹಿತಾಸಕ್ತಿಗೆ ನಿಮ್ಮ ಭವಿಷ್ಯ ನಿರ್ನಾಮವಾಗಲಿದೆ. ಜತೆಗೆ ಸಂವಿಧಾನದಲ್ಲಿ ನೀಡಲಾಗಿರುವ ಸ್ವಾತಂತ್ರ್ಯ ಹಾಗೂ ಸಮಾನತೆ ಅರ್ಥಹೀನವಾಗಲಿದೆ.
ಬಿಜೆಪಿಯ ದ್ವೇಷದ ಅಜೆಂಡಾವನ್ನು ಧಿಕ್ಕರಿಸಿ ನಾವೆಲ್ಲರೂ ಒಬ್ಬರ ಕೈ ಒಬ್ಬರು ಹಿಡಿದು ಸ್ನೇಹಿತರಾಗಿ ಒಟ್ಟಿಗೆ ಸಾಗೋಣ. ನಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳೋಣ. ಶಂಕರಾಚಾರ್ಯ, ರಾಮಾನುಜಾಚಾರ್ಯ ಹಾಗೂ ಬಸವಣ್ಣನ ನಾಡಿನಲ್ಲಿ ಸಾವಿರಾರು ವರ್ಷಗಳಿಂದ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಪಾರ್ಸಿಗಳು ಒಟ್ಟಾಗಿ ಬಾಳುತ್ತಿದ್ದಾರೆ. ನಾವು ಒಬ್ಬರ ಆಚಾರ, ವಿಚಾರ, ಸಂಪ್ರದಾಯಗಳನ್ನು ಮತ್ತೊಬ್ಬರು ಹೆಮ್ಮೆಯಿಂದ ಗೌರವಿಸುತ್ತಾ ಬಂದಿದ್ದೇವೆ.
ಕೆಲವೇ ಕೆಲವು ದುಷ್ಟರ ಸ್ವಹಿತಾಸಕ್ತಿಗಾಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ನಮ್ಮ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಅವರ ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಈ ದುಷ್ಟರಿಗೆ ನಿಮ್ಮ ಭವಿಷ್ಯ, ಶಿಕ್ಷಣ, ಉಜ್ವಲ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲ. ಬದಲಿಗೆ ಅವರಿಗೆ ತಮ್ಮ ರಾಜಕೀಯ ಹಿತಾಸಕ್ತಿ ಮಾತ್ರ ಮುಖ್ಯವಾಗಿವೆ. ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಎತ್ತಿ ಹಿಡಿದು ನಾವೆಲ್ಲರೂ ಒಂದಾಗಿ ಶಿಕ್ಷಣದ ಬಗ್ಗೆ ಗಮನಹರಿಸಿ ನಮ್ಮ ರಾಜ್ಯ ಹಾಗೂ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸೋಣ.
ನಾನು ನಿಮ್ಮ ಹಿತೈಷಿಯಾಗಿ, ಮಾಜಿ ಯುವಕನಾಗಿ, ವಿದ್ಯಾರ್ಥಿ ಹೋರಾಟಗಾರನಾಗಿ, ಭಾರತದ ಪ್ರಾಚೀನ ವಿಶ್ವವಿದ್ಯಾಲಯವಾಗಿರುವ ಪಂಜಾಬ್ ವಿವಿಯ ಸೆನೆಟ್, ಸಿಂಡಿಕೇಟ್ ಸದಸ್ಯನಾಗಿ, ಆಡಳಿತಗಾರನಾಗಿ ನನಗಿರುವ ಸುದೀರ್ಘ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ.
ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತೇನೆ. – ಹೀಗೆಂದು ಸುರ್ಜೇವಾಲ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆ
ಇದನ್ನೂ ಓದಿ: ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ