AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವಿ ವಾಹನಗಳಿಗೆ ಬೇಡಿಕೆ ಬೆನ್ನಲ್ಲೇ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ: ಮಹತ್ವದ ಯೋಜನೆ ಕೈಬಿಟ್ಟ ಇಂಧನ ಇಲಾಖೆ

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ತೀವ್ರವಾಗಿದೆ. ಇದರ ಬೆನ್ನಲ್ಲೇ 2,500 ಹೊಸ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಾಗಿದ್ದ ಇಂಧನ ಇಲಾಖೆ, ಆ ಯೋಜನೆಯನ್ನು ಕೈಬಿಟ್ಟಿದೆ. ಇದರಿಂದಾಗಿ ಇವಿ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಇವಿ ವಾಹನಗಳಿಗೆ ಬೇಡಿಕೆ ಬೆನ್ನಲ್ಲೇ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ: ಮಹತ್ವದ ಯೋಜನೆ ಕೈಬಿಟ್ಟ ಇಂಧನ ಇಲಾಖೆ
ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ
ಗಂಗಾಧರ​ ಬ. ಸಾಬೋಜಿ
|

Updated on:Jul 09, 2025 | 8:23 AM

Share

ಬೆಂಗಳೂರು, ಜುಲೈ 09: ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ (Electric vehicles) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಇವಿ ಚಾರ್ಜಿಂಗ್ ಸ್ಟೇಷನ್​ಗಳ (EV Charging Stations) ಸಂಖ್ಯೆ ಮಾತ್ರ ಏರಿಕೆಯಾಗುತ್ತಿಲ್ಲ. ಇದರ ಮಧ್ಯೆ 2,500 ಹೊಸ ಇವಿ ಚಾರ್ಜಿಂಗ್ ಸ್ಟೇಷನ್​ಗಳ ಸ್ಥಾಪನೆಗೆ ಮುಂದಾಗಿದ್ದ ಇಂಧನ ಇಲಾಖೆ ಆ ಪ್ರಸ್ತಾವನೆಯನ್ನೇ ಕೈಬಿಟ್ಟಿದ್ದು, ಇದು ಇವಿ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ

ಉಳಿತಾಯದ ಜೊತೆಗೆ ಮಾಲಿನ್ಯ ರಹಿತ ಸವಾರಿ ಮಾಡುವ ಹಂಬಲದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಬೆಂಗಳೂರಿನಲ್ಲಿ 3.4 ಲಕ್ಷ ಎಲೆಕ್ಟ್ರಿಕ್ ವಾಹನಗಳು ಇದ್ದು, 2.98 ಲಕ್ಷ ದ್ವಿಚಕ್ರ ಹಾಗೂ 23,516 ನಾಲ್ಕು ಚಕ್ರ ಹಾಗೂ 18,246 ತ್ರಿ ಚಕ್ರ ವಾಹನಗಳು ಸಂಚಾರ ಮಾಡುತ್ತಿವೆ. ಆದರೆ ಈ ವಾಹನಗಳ ಬೇಡಿಕೆಗೆ ತಕ್ಕಂತೆ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ ಇದೆ. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಕೇವಲ 5,800 ಚಾರ್ಜಿಂಗ್ ಸ್ಟೇಷನ್​ಗಳು ಸಕ್ರಿಯವಾಗಿವೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಘೋಷಣೆ ಬೆನ್ನಲ್ಲೇ ಕ್ರಮ

ಇದರ ಬೆನ್ನಲ್ಲೇ ಇವಿ ವಾಹನ ಸವಾರರ ಆಗ್ರಹ ಹಿನ್ನೆಲೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಹೊಸದಾಗಿ 2,500 ಚಾರ್ಜಿಂಗ್ ಸ್ಟೇಷನ್​ಗಳ ನಿರ್ಮಾಣಕ್ಕೆ ಮುಂದಾಗಿದ್ದ ಇಂಧನ ಇಲಾಖೆ ನಾನಾ ನೆಪಗಳನ್ನು ಮುಂದಿಟ್ಟು ಈ ಯೋಜನೆಗೆ ಎಳ್ಳು ನೀರು ಬಿಟ್ಟಿದೆ.

ಯೋಜನೆ ಕೈಬಿಡಲು ಕಾರಣಗಳೇನು?

  • ಯೋಜನೆ ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಇತರೆ ಇಲಾಖೆಗಳು ಭೂ ಗುತ್ತಿಗೆ ಒಪ್ಪಂದ ಕಾರ್ಯಗತಗೊಳಿಸಲು ಸಹಕರಿಸುತ್ತಿಲ್ಲ.
  • ಬೆಸ್ಕಾಂ ಒದಗಿಸಿರುವ ಸ್ಥಳಗಳಲ್ಲಿ ಏಜೆನ್ಸಿ ಕಾರ್ಯ ಸಾಧ್ಯವಾದ ಸ್ಥಳ ಗುರುತಿಸುವುದು ಸಾಧ್ಯವಾಗಿಲ್ಲ.
  • ಚಾರ್ಜಿಂಗ್ ಕೇಂದ್ರಗಳು ಏಜೆನ್ಸಿಗಳಿಗೆ ಆರ್ಥಿಕ ಹೊರೆ.
  • 2023-24ರ ಸಾಲಿನಲ್ಲಿ 585 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕಾರ್ಯದೇಶ ನೀಡಲಾಗಿದ್ದರೂ ಈವರೆಗೆ ಒಂದೂ ಸ್ಥಾಪನೆಯಾಗಿಲ್ಲ.

ಇದನ್ನೂ ಓದಿ: Karnataka Rains: ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​, ಉಳಿದೆಡೆ ಸಾಧಾರಣ ಮಳೆ

ಪೆಟ್ರೋಲ್, ಡೀಸೆಲ್ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ಹೀಗಾಗಿ ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ. ವಿದ್ಯುತ್ ಚಾಲಿತ ವಾಹನಗಳು ಭವಿಷ್ಯ ಎಂದೆಲ್ಲ ಹೇಳಿ, ಅವುಗಳನ್ನು ಬಳಸಿ ಅಂತ ಹೇಳುವ ಸರ್ಕಾರ ಅದಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಮಾತ್ರ ನಿರಾಸಕ್ತಿ ತೋರುತ್ತಿದೆ. ಹೀಗಾಗಿ ಇವಿ ವಾಹನಗಳಲ್ಲಿ ಚಾರ್ಜ್ ಕಡಿಮೆಯಾದರೆ ಚಾರ್ಜಿಂಗ್ ಸ್ಟೇಷನ್ ಹುಡುಕುವುದು ಹಾಗೂ ಗಂಟೆಗಟ್ಟಲೆ ಕಾಯುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:22 am, Wed, 9 July 25