Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಕರ್ನಾಟಕ ಸರ್ಕಾರ ಆದೇಶ; ತನಿಖಾಧಿಕಾರಿ ನೇಮಕ

Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಕರ್ನಾಟಕ ಸರ್ಕಾರ ಆದೇಶ; ತನಿಖಾಧಿಕಾರಿ ನೇಮಕ
ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ವಿರುದ್ಧ ನಾಲ್ಕು ಆರೋಪಗಳು ಕೇಳಬಂದಿದ್ದವು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 20, 2022 | 10:30 AM

ಬೆಂಗಳೂರು: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಮುಜರಾಯಿ ಇಲಾಖೆ ಆಯುಕ್ತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ತನಿಖೆಗೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ವಿರುದ್ಧ ನಾಲ್ಕು ಆರೋಪಗಳು ಕೇಳಬಂದಿದ್ದವು. ಈ ಪ್ರಕರಣಗಳ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ. ತನಿಖಾಧಿಕಾರಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಅವರನ್ನು ನೇಮಿಸಲಾಗಿದ್ದು, 30 ದಿನಗಳ ಒಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಹಣ ತೆತ್ತು ಪರಿಸರಸ್ನೇಹಿ ಬಟ್ಟೆ ಬ್ಯಾಗ್ ಖರೀದಿಸಿದ್ದು, ಜಿಲ್ಲಾಧಿಕಾರಿ ನಿವಾಸದಲ್ಲಿ ₹ 50 ಲಕ್ಷ ಖರ್ಚು ಮಾಡಿ ಅನಧಿಕೃತವಾಗಿ ಈಜುಕೊಳ ಮತ್ತು ಜಿಮ್ ನಿರ್ಮಿಸಿದ್ದು, ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿದ್ದು ಮತ್ತು ಚಾಮರಾಜನಗರದಲ್ಲಿ ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಸಂಭವಿಸಿದ ಸಾವುಗಳಿಗೆ ಕಾರಣವಾದ ಆರೋಪಗಳು ರೋಹಿಣಿ ಸಿಂಧೂರಿ ವಿರುದ್ಧ ಕೇಳಿಬಂದಿವೆ.

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಈ ಹಿಂದೆ ಹಲವು ಬಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದರು. ಹಲವು ಬಾರಿ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆಯಲು ಯತ್ನಿಸಿದ್ದರು. ಮೈಸೂರು ಮಹಾನಗರ ಪಾಲಿಕೆಯ ಮಾಜಿ ಡೆಪ್ಯುಟಿ ಮೇಯರ್ ಶೈಲೇಂದ್ರ ಭೀಮರಾವ್ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರಿಬ್ಬರ ಪತ್ರದ ಹಿನ್ನೆಲೆಯಲ್ಲಿ ಸರ್ಕಾರವು ಪ್ರಾಥಮಿಕ ತನಿಖೆಗೆ ಆದೇಶ ನೀಡಿದೆ. ರೋಹಿಣಿ ಸಿಂಧೂರಿ ಅವರು ಪ್ರಸ್ತುತ ಧಾರ್ಮಿಕ ಮತ್ತು ದತ್ತಿ‌ ಇಲಾಖೆ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಟ್ಟೆ ಬ್ಯಾಗ್ ಖರೀದಿ ಹಗರಣ

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ಕರ್ನಾಟಕ ಸರ್ಕಾರವು ಮಾರ್ಚ್ 23ರದು ಆದೇಶಿಸಿತ್ತು. ಶಾಸಕ ಸಾ.ರಾ.ಮಹೇಶ್ ಈ ಹಗರಣವನ್ನು ಬಯಲಿಗೆ ಎಳೆದಿದ್ದರು. ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್​ಗಳನ್ನು ಖರೀದಿಸಲಾಗಿತ್ತು ಎಂದು ಮಹೇಶ್ ದೂರಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 10ರಿಂದ ₹ 13ಕ್ಕೆ ಸಿಗುವ ಬ್ಯಾಗ್​ಗಳನ್ನು ಜಿಲ್ಲಾಧಿಕಾರಿ ₹ 52 ನೀಡಿ ಖರೀದಿಸಿದ್ದರು. ಸಾರ್ವಜನಿಕ ಹಣವನ್ನು ವೃಥಾ ವ್ಯರ್ಥ ಮಾಡಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಅರೋಪಿಸಿದ್ದರು.

ರೋಹಿಣಿ ಸಿಂಧೂರಿ ಅವರು 14.71 ಲಕ್ಷ ಬಟ್ಟೆ ಬ್ಯಾಗ್​ಗಳನ್ನು ₹ 14 ಕೋಟಿ ಮೊತ್ತಕ್ಕೆ ಖರೀದಿಸಿದ್ದರು. ಕೈಮಗ್ಗ ನಿಗಮದ ಬದಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡುವ ಮೂಲಕ ರೋಹಿಣಿ ಕಿಕ್​ಬ್ಯಾಕ್ ಪಡೆದಿದ್ದಾರೆ. ಈ ಹಗರಣದಲ್ಲಿ ₹ 6.18 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ಮೈಸೂರಿನಲ್ಲಿ ಕಳೆದ ಸೆಪ್ಟೆಂಬರ್ 3ರಂದು ಮಾಧ್ಯಮಗೋಷ್ಠಿ ನಡೆಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಾ.ರಾ.ಮಹೇಶ್, ‘ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದರೂ ಮುಖ್ಯಕಾರ್ಯದರ್ಶಿ ಏನು ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರೋಹಿಣಿ ಸಿಂಧೂರಿ ಎರಡು ತಿಂಗಳು ಮೈಸೂರಿನಲ್ಲೇ ಮುಂದುವರಿದಿದ್ದರೆ ಹಣವೂ ಮಂಜೂರಾಗಿರುತ್ತಿತ್ತು’ ಎಂದು ಹೇಳಿದ್ದರು.

‘ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿ, ಏಕಪಕ್ಷೀಯವಾಗಿ ಬ್ಯಾಗ್ ಖರೀದಿಗೆ ನಿರ್ಧರಿಸಿದ್ದು ನಿರಂಕುಶತೆಯ ಸಂಕೇತ. ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೂ ತರುವೆ. ಸಿಂಧೂರಿಯವರನ್ನು ಸೇವೆಯಿಂದ ವಜಾ ಮಾಡದಿದ್ದರೆ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಆಮರಣಾಂತ ಧರಣಿ ನಡೆಸುವೆ’ ಎಂದು ಸವಾಲು ಹಾಕಿದ್ದರು.

ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ರೋಹಿಣಿ ಸಿಂಧೂರಿ, ‘ಶಾಸಕರ ಆರೋಪಗಳು ಆಧಾರರಹಿತ. ಬ್ಯಾಗ್‌ ಪೂರೈಕೆಯ ಗುತ್ತಿಗೆಯನ್ನು ನಿಯಮಾನುಸಾರ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ನಿಗಮವೇ ದರ ನಿಗದಿ ಮಾಡಿದ್ದು, ನನ್ನ ಪಾತ್ರ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯ ಸಮಿತಿಯು ಬ್ಯಾಗ್‌ಗಳ ಗುಣಮಟ್ಟ ದೃಢೀಕರಿಸಿತ್ತು. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಪೈಸೆಯನ್ನೂ ನಿಗಮಕ್ಕೆ ನೀಡಿಲ್ಲ. ಈಗ ₹ 9.59 ಲಕ್ಷ ಮಾತ್ರ ನಿಗಮಕ್ಕೆ ಪಾವತಿಯಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada