ಬೆಂಗಳೂರು: ಸುಮಾರು 40 ವರ್ಷಗಳಿಂದ ಅತಿಕ್ರಮಿಸಿಕೊಂಡು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ, ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಟ್ಟಡ ಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಇಂದು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದ್ದಾರೆ.
ಸರ್ಕಾದ ಆದೇಶದಂತೆ ತಮ್ಮ ನೇತೃತ್ವದಲ್ಲಿ ಜಾರಿದಳದ ವಿಶೇಷ ಜಿಲ್ಲಾಧಿಕಾರಿ ದುರ್ಗಾಶ್ರೀ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ತಹಸೀಲ್ದಾರ್ ರಮಲಕ್ಷ್ಮಯ್ಯ ಅವರ ತಂಡವು ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕಿನ, ಬೇಗೂರು ಹೋಬಳಿಯಲ್ಲಿರುವ ಹುಳಿಮಾವು ಗ್ರಾಮದ ಸರ್ವೆ ನಂ. 63 ರಲ್ಲಿದ್ದ ಸುಮಾರು 37.00 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲಾಗಿದೆ ಎಂದು ಡಿಸಿ ಜೆ, ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಯನ್ನು ನಡೆಸಿದ್ದಲ್ಲದೇ, ಸಂಸ್ಥೆಯು ಈ ಹಿಂದೆ ಜಮೀನನ್ನು ಗುತ್ತಿಗೆ ಅಥವಾ ಮಂಜೂರು ಮಾಡಿಕೊಡಲು ಕೋರಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದಿತ್ತು. ಸರ್ಕಾರವು ಈ ಮನವಿಗಳನ್ನು 2010 ರಲ್ಲೆ ತಿರಸ್ಕರಿಸಿದ್ದು, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಸೂಚಿಸಿತ್ತು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದ್ದಾರೆ.
ಅತಿಕ್ರಮಿಸಿದ ಕಟ್ಟಡ
ಸಂಸ್ಥೆಯು ವಿವಿಧ ನ್ಯಾಯಾಲಯಗಳಲ್ಲಿ ಈ ಕುರಿತು ಮೇಲ್ಮನವಿ ಸಲ್ಲಿಸಿದೆ, ಆದರೆ ಅವುಗಳನ್ನು ಮಾನ್ಯ ನ್ಯಾಯಾಲಯದಿಂದ ತಿರಸ್ಕರಿಸಲಾಗಿತ್ತು. ನಂತರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯನ್ನೂ ಕೂಡ ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ವಿವರಿಸಿದ್ದಾರೆ.
ಇದನ್ನೂ ಓದಿ:
ಯೋಧನ ಅಂತ್ಯಕ್ರಿಯೆ ವೇಳೆ ಜಿಲ್ಲಾಧಿಕಾರಿ, ಎಸ್ಪಿ ಕಣ್ಣಲ್ಲಿ ನೀರು; ಮಾತೃ ಹೃದಯಿ ಅಧಿಕಾರಿಗಳ ಕಂಡು ಭಾವೋದ್ವೇಗಗೊಂಡ ಜನರು
ಪ್ರವಾಸಿಗರಿಗೆ ಆರ್ಟಿಪಿಸಿಆರ್ ವರದಿ ಕಡ್ಡಾಯವಿಲ್ಲ; ಹೊಸ ಆದೇಶ ಹೊರಡಿಸಿದ ಕೊಡಗು ಡಿಸಿ ಚಾರುಲತಾ
Published On - 2:27 pm, Fri, 6 August 21