ಯೋಧನ ಅಂತ್ಯಕ್ರಿಯೆ ವೇಳೆ ಜಿಲ್ಲಾಧಿಕಾರಿ, ಎಸ್ಪಿ ಕಣ್ಣಲ್ಲಿ ನೀರು; ಮಾತೃ ಹೃದಯಿ ಅಧಿಕಾರಿಗಳ ಕಂಡು ಭಾವೋದ್ವೇಗಗೊಂಡ ಜನರು
ತಾಯಿ ಹೃದಯದ ಇಬ್ಬರು ಅಧಿಕಾರಿಗಳನ್ನು ನೋಡಿ ನೆರೆದಿದ್ದವರ ಕಣ್ಣಾಲೆಗಳು ಕೂಡಾ ತೇವಗೊಂಡಿದ್ದವು.
ಕಲಬುರಗಿ: ಜಿಲ್ಲೆಯಲ್ಲಿ ಎರಡು ಮುಖ್ಯ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ. ಕಲಬುರಗಿ ಜಿಲ್ಲಾಧಿಕಾರಿಯಾಗಿ ಕಳೆದ ಕೆಲ ತಿಂಗಳಿಂದ ವಿ ವಿ ಜೋತ್ನ್ನಾ ಮತ್ತು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಡಾ. ಸಿಮಿ ಮರಿಯಮ್ ಜಾರ್ಜ್ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಎರಡು ಸ್ಥಾನಗಳನ್ನು ಮಹಿಳೆಯರೇ ಅಲಂಕರಿಸಿದ್ದು ವಿಶೇಷ. ಇಬ್ಬರು ಅಧಿಕಾರಿಗಳು ಕೂಡಾ ತಮ್ಮ ಉತ್ತಮ ಕೆಲಸದಿಂದ ಜಿಲ್ಲೆಯಲ್ಲಿ ಸುದ್ದಿಯಲ್ಲಿರುತ್ತಾರೆ. ಇಂದು ಈ ಇಬ್ಬರು ಅಧಿಕಾರಿಗಳು ಕೂಡಾ ವಿಭಿನ್ನವಾಗಿ ಕಂಡರು. ಇಬ್ಬರು ಭಾವೋದ್ವೇಗಕ್ಕೊಳಗಾಗಿದ್ದರು. ಇಬ್ಬರ ಕಣ್ಣಾಲಿಗಳು ಕೂಡಾ ತೇವಗೊಂಡಿದ್ದವು. ಇಂತಹದೊಂದು ಘಟನೆ ನಡೆದಿದ್ದು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ನಡೆದ ಹುತಾತ್ಮ ಯೋಧ ರಾಜಕುಮಾರ್ ಮಾಮನಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ.
ಭಾರತ -ಬಾಂಗ್ಲಾ ಗಡಿಯಲ್ಲಿ ಗಸ್ತಿನಲ್ಲಿದ್ದ ಯೋಧ ರಾಜಕುಮಾರ್ ಮಾಮನಿ, ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇಂದು ರಾಜಕುಮಾರ್ ಮಾಮನಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಚಿಂಚನಸೂರು ಗ್ರಾಮದಲ್ಲಿ ನಡೆಯಿತು. ಹುತಾತ್ಮ ಯೋಧನ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿದ್ದ ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ ಮತ್ತು ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಸ್ವತ ತಾವೇ ಗ್ರಾಮಕ್ಕೆ ಆಗಮಿಸಿ, ಹುತಾತ್ಮ ಯೋಧನ ಪ್ರಾರ್ಥಿವ ಶರೀರದ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕುಟುಂಬದವರು ಮತ್ತು ಹುತಾತ್ಮ ಯೋಧ ರಾಜಕುಮಾರ್ ಮಾಮನಿಯ ಪುಟ್ಟ ಮಕ್ಕಳು ಹಾಗೂ ಪತ್ನಿಯ ಕಣ್ಣೀರಿಗೆ, ಎಸ್ಪಿ ಮತ್ತು ಡಿಸಿ ಮನ ಕರಗಿತ್ತು. ಗೌರವ ಸಲ್ಲಿಸುವಾಗ ಇಬ್ಬರು ಕೂಡಾ ಭಾವೋದ್ವೇಗಕ್ಕೆ ಒಳಗಾದರು.
ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರ ಕಣ್ಣಲ್ಲಿ ನೀರು ಜಿನುಗಿತು. ಹೀಗಾಗಿ ತಕ್ಷಣವೇ ಹೊರಬಂದು ಕಣ್ಣೀರು ಒರೆಸಿಕೊಂಡು ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡು ಕರ್ತವ್ಯ ನಿರ್ವಹಿಸಿದರು. ಮತ್ತೊಂದೆಡೆ ಜಿಲ್ಲಾಧಿಕಾರಿ ವಿ ವಿ ಜೋತ್ನ್ಸಾ ರ ಕಣ್ಣಾಲಿಗಳು ಕೂಡಾ ತೇವಗೊಂಡಿದ್ದವು. ಇಬ್ಬರು ಅಧಿಕಾರಿಗಳು ಸಹ ಹುತಾತ್ಮ ಯೋಧನ ತಾಯಿಯನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. ಮಕ್ಕಳಿಗೆ ಮತ್ತು ಪತ್ನಿಗೂ ಧೈರ್ಯ ತುಂಬಿದರು. ಅಂತ್ಯಕ್ರಿಯೆ ಮುಗಿಯುವವರೆಗೂ ಕೂಡಾ ಸ್ಥಳದಲ್ಲಿಯೇ ಬೀಡುಬಿಟ್ಟು, ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಂಡರು. ತಾಯಿ ಹೃದಯದ ಇಬ್ಬರು ಅಧಿಕಾರಿಗಳನ್ನು ನೋಡಿ ನೆರೆದಿದ್ದವರ ಕಣ್ಣಾಲೆಗಳು ಕೂಡಾ ತೇವಗೊಂಡಿದ್ದವು.
ವಿಶೇಷ ವರದಿ: ಸಂಜಯ್ ಕಲಬುರಗಿ
ಇದನ್ನೂ ಓದಿ:
ತ್ರಿಪುರಾ ಗಡಿ ಭಾಗದಲ್ಲಿ ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ
(Kalaburagi soldier cremation DC and SP cried people appreciate Mother Heart officials)