ತ್ರಿಪುರಾ ಗಡಿ ಭಾಗದಲ್ಲಿ ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ
ದೇಶ ಸೇವೆ ಮಾಡಬೇಕು ಅನ್ನೋ ಬಾಲ್ಯದ ಕನಸು ಕಂಡು ಸೇನೆಗೆ ಸೇರಿದ್ದ ಕಲಬುರಗಿ ಯೋಧ, ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾಗಿದ್ದಾರೆ. ನಿವೃತ್ತಿ ಅಂಚಿನಲ್ಲಿದ್ದ ಯೋಧ ಹುತಾತ್ಮನಾಗಿರೋದ್ರಿಂದ ಮನೆಯವರಿಗೆ ಬರ ಸಿಡಿಲು ಬಡಿದಂತಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಹುತಾತ್ಮ ಯೋಧನ ಅಂತ್ಯ ಕ್ರಿಯೆ ನೆರವೇರಿದೆ.
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದ ಹೆಮ್ಮೆಯ ಯೋಧ, ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಚಿಂಚನಸೂರು ಗ್ರಾಮದ ರಾಜ್ಕುಮಾರ್ ಮಾಮನಿ, ಬಾಲ್ಯದಿಂದಲೇ ದೇಶಸೇವೆಯ ಕನಸು ಕಂಡಿದ್ರು. ಈ ಕನಸಿನಂತೆ ತಮ್ಮ 18ನೇ ವರ್ಷಕ್ಕೆ ಬಿಎಸ್ಎಫ್ ಸೇರಿದ್ರು. ಹೀಗೆ ಬಿಎಸ್ಎಫ್ ಸೇರಿದ್ದ ರಾಜ್ಕುಮಾರ್, ಆಗಸ್ಟ್ 3ರಂದು ತ್ರಿಪುರಾ ಗಡಿ ಭಾಗ ದಲಾಯಿ ಎಂಬಲ್ಲಿ ಗಸ್ತಿನಲ್ಲಿದ್ದ ವೇಳೆ ಉಗ್ರರು ನಡೆಸಿದ ಗುಂಡಿ ದಾಳಿಯಲ್ಲಿ ಉಸಿರು ಚೆಲ್ಲಿದ್ದಾರೆ. ತ್ರಿಪುರಾದಿಂದ ವೀರಯೋಧ ರಾಜಕುಮಾರ್ ಪಾರ್ಥಿವ ಶರ ಹೊರಟಿದ್ದು ಇಂದು ಮುಂಜಾನೆ ಮೂರು ಗಂಟೆಗೆ ಪಾರ್ಥಿವ ಶರೀರ ಗ್ರಾಮಕ್ಕೆ ತಗುಪಿದೆ. ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ, ಬೌದ್ದ ಧರ್ಮದ ವಿಧಿವಿಧಾನದಂತೆ ಹುತಾತ್ಮ ಯೋಧನ ಅಂತ್ಯ ಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಕಣ್ಣೀರ ವಿದಾಯ ಹೇಳಿದ್ದಾರೆ.
ನಾಲ್ಕೇ ನಾಲ್ಕು ತಿಂಗಳು ಕಳೆದಿದ್ರೆ ರಾಜ್ಕುಮಾರ್ ಮಾಮನಿ ನಿವೃತ್ತಿಯಾಗ್ತಿದ್ರು. ನಾಲ್ಕು ತಿಂಗಳು ನಂತರ ತಂದೆ ಮನೆಗೆ ಬರ್ತಾರೆ. ಇನ್ನಾದ್ರೂ ತಂದೆಯ ಜೊತೆ ಕಾಲ ಕಳೆಯಬಹುದು ಅಂತಾ ಮಕ್ಕಳು ಕನಸು ಕಾಣ್ತಿದ್ರು. ಪತಿಯ ಜೊತೆ ನೆಮ್ಮದಿಯ ಜೀವನ ನಡೆಸೋಣ ಅಂತಾ ಚಂದ್ರಕಲಾ ಅಂದುಕೊಂಡಿದ್ರು. ಆದ್ರೆ, ವಿಧಿಯಾಟದಿಂದ ಇವೆಲ್ಲವೂ ನುಚ್ಚುನೂರಾಗಿವೆ. ರಾಜ್ಕುಮಾರ್ ಕುಟುಂಬ ಬಡತನ ಅನ್ನೋದು ಶಾಪವಾಗಿ ಕಾಡ್ತಿದ್ದು, ಸರ್ಕಾರ ಹೆಚ್ಚಿನ ನೆರವು ನೀಡಲಿ ಅಂತಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ರಾಜಕುಮಾರ್ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾಡಳಿತ ಅಂತ್ಯಕ್ರಿಯೆ ನೆರವೇರಿಸಿದೆ. ಸರ್ಕಾರ ಆದಷ್ಟು ಬೇಗ ಕುಟುಂಬಸ್ಥರಿಗೆ ನೆರವು ನೀಡಲಿ. ದೇಶಸೇವೆಯಲ್ಲಿದ್ದಾಗಲೇ ಪ್ರಾಣ ಬಿಟ್ಟಿರುವ ಯೋಧನಿಗೆ ನಮ್ಮದೂ ಒಂದು ಸಲಾಂ.
ಇದನ್ನೂ ಓದಿ: ಉಗ್ರರಿಂದ ಗುಂಡಿನ ದಾಳಿ: ಬಾಂಗ್ಲಾ ಗಡಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ಹುತಾತ್ಮ