ಬೆಂಗಳೂರು ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಿಸಿ, ಕೇಂದ್ರದಿಂದ ಒಪ್ಪಿಗೆ ನೀಡುವ ಜವಾಬ್ದಾರಿ ನನ್ನದು: ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮೆಟ್ರೋ ನೆಟ್‌ವರ್ಕ್ ವಿಸ್ತರಿಸುವಲ್ಲಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ಬೆಂಗಳೂರು ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಕ ಮಾಡಿಲ್ಲ, ಇದರಿಂದಾಗಿ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಜ.4: ಮೆಟ್ರೋ (Bengaluru Metro) ನೆಟ್‌ವರ್ಕ್ ವಿಸ್ತರಣೆ ಹಾಗೂ ಪೂರ್ಣಾವಧಿ ಎಂಡಿ ನೇಮಕ ಮಾಡುವಲ್ಲಿ ಬಿಎಂಆರ್‌ಸಿಎಲ್ (BMRCL) ಹಾಗೂ ಸರ್ಕಾರ ವಿಫಲವಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಆರೋಪಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋಗೆ ಪೂರ್ಣವಾಧಿ ಎಂಡಿ ನೇಮಕ ಮಾಡದ ಹಿನ್ನೆಲೆ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿದೆ ಎಂದರು.
ಸಂಚಾರ ದಟ್ಟನೆ ತಡೆಗಟ್ಟಲು ಮೆಟ್ರೋ ನೆಟವರ್ಕ್‌ನ ಹೆಚ್ಚಿಸಬೇಕೆಂಬುದು ಚಿಂತನೆ ಆಗಿತ್ತು. ಆದರೆ ಮೆಟ್ರೋ ನೆಟ್‌ವರ್ಕ್ ವಿಸ್ತರಿಸುವಲ್ಲಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರ ವಿಫಲವಾಗಿದೆ. ಸರ್ಕಾರ ಬಂದು 7 ತಿಂಗಳು ಆಗಿದೆ. ಇಲ್ಲಿವರೆಗೂ ಮೆಟ್ರೋಗೆ ಪೂರ್ಣಾವಧಿ ಎಂಡಿ ನೇಮಕವಾಗಿಲ್ಲ. ಹೀಗಾಗಿ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್, ಜನರ ಹಣ ಪೋಲು ಆಗುತ್ತಿದೆ ಎಂದರು.
ಮೆಟ್ರೋ ಯೋಜನೆ ಯಾವತ್ತು ಅವರು ನೀಡಿರುವ ಡೆಡ್‌ಲೈನ್‌ಗೆ ಮುಗಿದಿಲ್ಲ. ಪ್ರತಿ ಪ್ರಾಜೆಕ್ಟ್ ಮೇಲೆ 2-3 ವರ್ಷ ವಿಳಂಬ ಆಗುತ್ತಿದೆ. ಇದಕ್ಕೆ ಕಾರಣ BMRCLಗೆ ಬೇಕಾದ ಒಬ್ಬ ವ್ಯಕ್ತಿನ (ಎಂಡಿ) ನೇಮಿಸಿಲ್ಲ. ಈ ವಿಚಾರವಾಗಿ ನಾನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದರು.
ಸರಿಸುಮಾರು ಮೆಟ್ರೋದಲ್ಲಿ 8 ಲಕ್ಷ ಜನ ಓಡಾಡುತ್ತಾರೆ. BMRCL ಅವರಿಗೆ ಸರಿಯಾದ ಕಾರ್ಯ ನಿರ್ವಹಿಸಲು ಕಚೇರಿ ಕೂಡ ಇಲ್ಲ. ಇಷ್ಟು ವೆಚ್ಚದ ಕಾಮಗಾರಿ ನಡೆಸುವ ನಮ್ಮ ಮೆಟ್ರೋಗೆ ಒಂದು ಕಾರ್ಪೋರೇಟನ್ ಕಚೇರಿ ಇಲ್ಲ. ದೆಹಲಿಯ ರೀತಿಯಲ್ಲಿ ಮೆಟ್ರೋ ಕಾರ್ಯವಹಿಸಬೇಕು. ಆದರೆ, ಇಲ್ಲಿ ಪ್ರಧಾನ ವ್ಯವಸ್ಥಾಪಕರು, ಹೆಚ್ಆರ್ ನಿವೃತ್ತರಾಗಿ ಒಂದೂವರೆ ವರ್ಷವಾದರೂ ಆ ಎರಡು ಸ್ಥಾನಗಳನ್ನು ಭರ್ತಿ ಮಾಡಿಲ್ಲ. ಹೀಗಿರುವಾಗ ಮೆಟ್ರೋ ಕಾಮಗಾರಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಇದನ್ನೂ ಓದು: ಹರ್ದೀಪ್ ಸಿಂಗ್ ಪುರಿ ಭೇಟಿ ಮಾಡಿದ ತೇಜಸ್ವಿ ಸೂರ್ಯ: ನಮ್ಮ ಮೆಟ್ರೋಗೆ ಪೂರ್ಣಾವಧಿ ಎಂಡಿ ವಿಚಾರದಲ್ಲಿ ಮಧ್ಯಸ್ಥಿಕೆಗೆ ಮನವಿ
BMRCLನಲ್ಲಿ ಶೇ.90 ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೆಟ್ರೋದಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಷ್ಟೋ ಜನ ಪೋಸ್ಟ್ ರಿಟೈರ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೊಂದು ಕೆಲಸದಲ್ಲಿ ರಿಟೈರ್‌ಮೆಂಟ್ ಆದವರು ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಹಳದಿ ಮಾರ್ಗ ಫೆಬ್ರವರಿ 23-24 ನೇ ತಾರೀಕಿನಂದು ಆಢರಂಭವಾಗಬೇಕಿತ್ತು. ಆದರೆ ಈ ಕಾಮಾಗಾರಿಯು ಕೂಡ ವಿಳಂಬವಾಗಲಿದೆ. ಈ ಬಗ್ಗೆ ಪ್ರಶ್ನಿಸಿದಾಗ ಫೆಬ್ರವರಿಯಲ್ಲಿ ಟೆಸ್ಟಿಂಗ್ ಮಾಡಿ ಆಮೇಲೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಫುಲ್ ಟೈಂ ಎಂಡಿ ಇಲ್ಲದಿರುವುದು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಆಗಿವೆ. ಆದರೆ ಇಲ್ಲಿಯವರೆಗೂ ಸಿಎಂ ಸಿದ್ದರಾಮಯ್ಯ ಆಗಲಿ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಆಗಲಿ ಒಂದೇ ಒಂದು ಬಾರಿಯು ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಆದಷ್ಟು ಬೇಗ ಮೆಟ್ರೋಗೆ ಒಬ್ಬ ಎಂಡಿನ ನೇಮಕ ಮಾಡಿದರೆ ಅದನ್ನ ಕೇಂದ್ರದಲ್ಲಿ ಒಪ್ಪಿಗೆ ನೀಡುವ ಜವಾಬ್ದಾರಿ ನನ್ನದು ಎಂದರು.
ದೇವಸ್ಥಾನದ ಒಳಗೆ ಬರದವರಿಂದ ಇಫ್ತಿಯಾರ್ ಕೂಟ ಆಯೋಜನೆ
ದೇವಸ್ಥಾನದ ಗರ್ಭಗುಡಿಯೊಳಗೆ ಸಿದ್ದರಾಮಯ್ಯ ಪ್ರವೇಶ ನಿರಾಕರಣೆ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಾರ್ಟಿಯವರಿಗೆ ಹಿಂದೂಗಳ ನಂಬಿಕೆಗಳನ್ನು ಅಪಮಾನ ಮಾಡುವುದು ರಕ್ತಗತವಾಗಿದೆ. ದೇವಸ್ಥಾನದ ಒಳಗೆ ಕರೆದರೂ ಬರದವರು ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದನ್ನು ನೋಡಿದ್ದೇವೆ ಎಂದರು.
ಮಂತ್ರಾಕ್ಷತೆಯನ್ನು ಜನ ಭಕ್ತಿಯಿಂದ ಮಾಡಿದರೆ ಅನ್ನಭಾಗ್ಯದ ಅಕ್ಕಿಯಿಂದ ಮಾಡಿದ್ದಾರೆ ಅಂತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ 10 ವರ್ಷಗಳ ವನವಾಸ ಆಗಿದೆ. ಇನ್ನೂ ಮೂವತ್ತು ನಲವತ್ತು ವರ್ಷ ವನವಾಸ ಬಾಕಿ ಇದೆ ಎಂದರು.
ಗೋದ್ರಾ ಹತ್ಯಾಕಾಂಡ ಕರ್ನಾಟಕದಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ಬಿ.ಕೆ ಹರಿಪ್ರಸಾದ್ ಈ ರೀತಿ ಬೇಜವ್ದಾರಿ ಹೇಳಿಕೆ ಕೊಡುವುದರಲ್ಲಿ ನಿಸ್ಸೀಮರು. ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ಇದೇ ಮೊದಲೇನಲ್ಲ. ಬಾಲಕೋಟ್ ದಾಳಿ ಆದಾಗಲೂ ಸಾಕ್ಷಿ ಕೇಳಿದ್ದರು. ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಬೆಂಗಳೂರು ದಕ್ಷಿಣದ ಜನರು ಮೂರುವರೆ ಲಕ್ಷ ಮತದಿಂದ ಸೋಲಿಸಿದ್ದಾರೆ. ಆದರೂ ಬುದ್ದಿ ಕಲಿತಿಲ್ಲ ಎಂದರು.
ನಮಗೆ ಗೊತ್ತಿಲ್ಲದ ಯಾವುದೋ ವಿಷಯ ಅವರಿಗೆ ಗೊತ್ತಿರಬಹುದು. ಯಾವುದೋ ಮಾಹಿತಿ ಅವರಿಗೆ ತಿಳಿದಿರಬಹುದು. ಪಿಎಫ್ಐ ನಂತಹ ಸಂಘಟನೆಗಳೊಂದಿಗೆ ಸಂಪರ್ಕವೊಂದಿರುವ ಬಿಕೆ ಹರಿಪ್ರಸಾದ್ ಈ ರೀತಿಯ ಮಾಹಿತಿ ಇರಬಹುದು. ಇದು ತುಂಬಾ ಗಂಭೀರ ವಿಚಾರ. ಬಿ.ಕೆ ಹರಿಪ್ರಸಾದ್ ಅವರನ್ನು ತನಿಖೆ ಮಾಡುವಂತೆ ಎನ್ಐಎ ಬಳಿ ನಾನು ಮನವಿ ಮಾಡುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Thu, 4 January 24