
ಬೆಂಗಳೂರು (ಅಕ್ಟೋಬರ್ 14): ಬೆಂಗಳೂರು ನಿವಾಸಿಗಳಿಗೆ ನಗರಾಭಿವೃದ್ಧಿ ಇಲಾಖೆ ದೀಪಾವಳಿ ಗಿಫ್ಟ್ ನೀಡಿದೆ. ಬೆಂಗಳೂರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಅನಧಿಕೃತವಾಗಿ ನಿರ್ಮಿಸಿರುವ ಸಣ್ಣ ವಿಸ್ತೀರ್ಣದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC- occupancy certificate) ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದೆ ಓಸಿ ಇಲ್ಲದ ಕಟ್ಟಡಗಳಿಗೆ ಜಲಮಂಡಳಿ, ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿರಲಿಲ್ಲ. ಆದ್ರೆ, ಇದೀಗ 30*40 ನಿವೇಶನಗಳಿಗೆ ಓಸಿ ಅಗತ್ಯವಿಲ್ಲ. ಸಚಿವ ಸಂಪುಟ ಒಪ್ಪಿಗೆಯಂತೆ ಇದೀಗ ಒಸಿಯಿಂದ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಇಂದು (ಅಕ್ಟೋಬರ್ 14) ಅಧಿಕೃತ ಅದೇಶ ಹೊರಡಿಸಿದೆ.
30*40 ಸೈಟ್ ನಲ್ಲಿ ನೆಲ +2 ಅಂತಸ್ತಿನ ಕಟ್ಟಡಗಳಿಗೆ, ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಬೆಂಗಳೂರಿನ ಲಕ್ಷಾಂತರ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಹಿಂದೆ ಓಸಿ ಇಲ್ಲದ ಕಟ್ಟಡಗಳಿಗೆ ಜಲಮಂಡಳಿ, ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿರಲಿಲ್ಲ. ಆದರೆ ಈ ಹೊಸ ಆದೇಶದಿಂದ ಬೆಂಗಳೂರಿನಲ್ಲಿ ನಿರ್ಮಾಣ ಆಗಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಲಕ್ಷಾಂತರ ಕಟ್ಟಡ ಮಾಲೀಕರಿಗೆ ಅನುಕೂಲವಾಗಲಿದೆ.
ಅಕ್ಟೋಬರ್ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ಅನ್ವಯ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ 1200 ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿರುವ ನೆಲ+2 ಅಂತಸ್ತು ಅಥವಾ ಸ್ಟಿಲ್ಟ್(ಬೇಸ್‌ಮೆಂಟ್ ಪಾರ್ಕಿಂಗ್)+3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಓಸಿ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಎಸ್ಕಾಂಗಳು ವಿದ್ಯುತ್ ಸಂಪರ್ಕ ಪಡೆಯಲು ಓಸಿ ಕಡ್ಡಾಯ ಮಾಡಿದ್ದವು. ಆದರೆ ನಕ್ಷೆ ಮಂಜೂರಾತಿ ಇಲ್ಲದೆ ಓಸಿ ನೀಡಲು ಅವಕಾಶವಿರಲಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 3.30 ಲಕ್ಷ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡರೂ ಓಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ ಈ ಹಿಂದೆಯೇ 1,200 ಚದರ ಅಡಿ ನಿವೇಶನಗಳಿಗೆ ರಾಜ್ಯ ಸರ್ಕಾರ ಓಸಿ ವಿನಾಯಿತಿ ನೀಡಿ ಆದೇಶ ಮಾಡಿತ್ತು. ಈಗ ಮತ್ತಷ್ಟು ಕಾನೂನು ಸಲಹೆ ಪಡೆದುಕೊಂಡು ಸಂಪೂರ್ಣ ಮಾಹಿತಿ ಆಧರಿಸಿ ಓಸಿ ವಿನಾಯಿತಿಗೆ ಸರ್ಕಾರ ಆದೇಶ ಮಾಡಿದೆ.
ನಗರ ಸಭೆ, ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಕ್ಕೆ ನೀಡಲಾಗುವ ಕಾನೂನುಬದ್ಧ ದಾಖಲೆಯೇ ಕಟ್ಟಡ ಸ್ವಾಧೀನಾನುಭವ ಪತ್ರ (ಒಸಿ). ಕಟ್ಟಡವು ಅನುಮತಿ ಪಡೆದ ನಕ್ಷೆಯಂತೆ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ಈ ಪತ್ರವು ದೃಢಪಡಿಸುತ್ತದೆ. ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಈ ಪತ್ರವನ್ನು ನೀಡುವುದಿಲ್ಲ. ಸ್ವಾಧೀನಾನುಭವ ಪತ್ರ ಇಲ್ಲ ಎಂದರೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನವಿರುತ್ತದೆ.
Published On - 11:08 pm, Tue, 14 October 25