ಬಸವ ಮೆಟ್ರೋ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾದ ಸಿಎಂ: ಕೆಂಪೇಗೌಡ ಮೆಟ್ರೋ ನಾಮಕರಣಕ್ಕೆ ವ್ಯಕ್ತವಾಯ್ತು ಆಗ್ರಹ
ಸಿಎಂ ಸಿದ್ದರಾಮಯ್ಯ ಈಗಾಗಲೇ ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ. ಆದರೆ, ಸಿಎಂ ಹೇಳಿಕೆಯನ್ನು ಖಂಡಿಸಿರುವ ವಿಶ್ವ ಒಕ್ಕಲಿಗರ ಮಹಾ ವೇದಿಕೆ, ಬೆಂಗಳೂರು ಕಟ್ಟಿದ್ದು ಕೆಂಪೇಗೌಡರು. ಹಾಗಾಗಿ ‘ಕೆಂಪೇಗೌಡ ಮೆಟ್ರೋ’ ಎಂದು ನಾಮಕರಣ ಮಾಡಲು ಶಿಫಾರಸು ಮಾಡಿ ಎಂದು ಸಿಎಂ, ಡಿಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 15: ಅಕ್ಟೋಬರ್ 4 ರಂದು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಷಣದ ವೇಳೆ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ವೀರಶೈವ-ಲಿಂಗಾಯತ ಸಮಾಜದವರು, ‘ನಮ್ಮ ಮೆಟ್ರೋಗೆ (Namma Metro)’ ಬಸವಣ್ಣ ಹೆಸರಿಡಿ ಎಂದು ಒತ್ತಾಯ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ‘ಬಸವ ಮೆಟ್ರೋ’ ಎಂದು ಘೋಷಿಸಿ ಬಿಡುತ್ತಿದ್ದೆ. ಮೆಟ್ರೋ ಕೇಂದ್ರ-ರಾಜ್ಯ ಸರ್ಕಾರದ ಯೋಜನೆ. ಕೇಂದ್ರದ ಅನುಮತಿ ಬೇಕು, ಇಲ್ಲವಾದಲ್ಲಿ ನಾವೇ ಹೆಸರಿಡುತ್ತಿದ್ದೆವು ಎಂದಿದ್ದರು. ನಂತರ ನಮ್ಮ ಮೆಟ್ರೋಗೆ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದರು. ಅದರೆ ಈಗ ಆ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಸಿಎಂ ಹೇಳಿಕೆಯನ್ನು ಖಂಡಿಸಿರುವ ವಿಶ್ವ ಒಕ್ಕಲಿಗ ಮಹಾ ವೇದಿಕೆ, ಹಳೆಯ ಘಟನೆಯೊಂದನ್ನು ನೆನಪಿಸಿದೆ. 2015 ರ ಡಿಸೆಂಬರ್ 2 ರಂದು ನಾಯಂಡಹಳ್ಳಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಅಪಾರ ಜನಸ್ತೋಮ ಸಮ್ಮುಖದಲ್ಲಿ ಹಾಲಿ ವಿಜಯನಗರ ಶಾಸಕರು, ಮಾಜಿ ಸಚಿವ ಎಂ. ಕೃಷ್ಣಪ್ಪ ನಮ್ಮ ಮೆಟ್ರೋಗೆ ನಾಡಪ್ರಭು ‘ಕೆಂಪೇಗೌಡ ಮೆಟ್ರೋ’ ಎಂದು ನಾಮಕರಣವಾಗಬೇಕು ಎಂದು ಕೋರಿದ್ದರು. ಆಗಲೂ ಸಿಎಂ ಸಿದ್ದರಾಮಯ್ಯ ಮುಕ್ತ ಮನಸ್ಸಿನಿಂದ ಪರಿಗಣಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ ಈಗ ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ ಎಂದು ವಿಶ್ವ ಒಕ್ಕಲಿಗ ಮಹಾ ವೇದಿಕೆ ನೆನಪಿಸಿದೆ.
ಸಿಎಂ, ಡಿಸಿಎಂಗೆ ಪತ್ರ ಬರೆದ ವಿಶ್ವ ಒಕ್ಕಲಿಗರ ಮಹಾ ವೇದಿಕೆ
ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು. ಹಾಗಾಗಿ ನಮ್ಮ ಮೆಟ್ರೋಗೆ ‘ಕೆಂಪೇಗೌಡ ಮೆಟ್ರೋ’ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಿಎಂ ಮತ್ತು ಡಿಸಿಎಂಗೆ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್ ಪತ್ರ ಬರೆದಿದ್ದಾರೆ. ಬೆಂಗಳೂರಿನ 28 ಶಾಸಕರು, ಕೇಂದ್ರ ಸಚಿವರು, ರಾಜ್ಯ ಸಚಿವರು ಸೇರಿದಂತೆ ನಾಲ್ಕು ಜನ ಸಂಸದರನ್ನು ಭೇಟಿ ಮಾಡಿ ನಮ್ಮ ಮೆಟ್ರೋಗೆ ‘ಕೆಂಪೇಗೌಡ ಮೆಟ್ರೋ’ ಎಂದು ಹೆಸರಿಡಲು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಲಿರುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಭೆ ಕರೆದ ವಿಶ್ವ ಒಕ್ಕಲಿಗರ ಮಹಾ ವೇದಿಕೆ
ಬೆಂಗಳೂರಿಗೆ ಬಸವಣ್ಣ ಅವರ ಕೊಡುಗೆ ಏನು ಇಲ್ಲ. ಅವರು ಉತ್ತರ ಕರ್ನಾಟಕಕ್ಕೆ ಮಾತ್ರ. ನಮ್ಮ ಮೆಟ್ರೋಗೆ ‘ನಮ್ಮ ಬಸವ ಮೆಟ್ರೋ’ ಎಂದು ಹೆಸರಿಡಲು ಮುಂದಾದರೆ ಕಾನೂನು ಮೂಲಕ ಹೋರಾಟ ಮಾಡಲಾಗುತ್ತದೆ. ಈಗಾಗಲೇ ಈ ವಿಚಾರದಲ್ಲಿ ಆದಿಚುಂಚನಗಿರಿಯ ನಿರ್ಮಲನಂದಶ್ರೀಗಳು ಕೂಡ ‘ಕೆಂಪೇಗೌಡ ಮೆಟ್ರೋ’ ಎಂದು ನಾಮಕರಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಶನಿವಾರ ಸಭೆ ಕರೆದಿದ್ದೇವೆ. ನಗರದ 28 ಶಾಸಕರು ಒಕ್ಕೊರಲಿನಿಂದ ನಮಗೆ ಬೆಂಬಲ ನೀಡಬೇಕು. ಬೆಂಗಳೂರಲ್ಲಿ ಬೆಳೆಯಲು ಬದುಕು ಕಟ್ಟಿಕೊಳ್ಳಲು ಕೆಂಪೇಗೌಡರು ಕಾರಣ ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ರವಿಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ: ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದ ಸಿಎಂ
ಒಟ್ಟಿನಲ್ಲಿ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸಿಎಂ ಹೇಳಿರುವುದು ಈಗ ವಿರೋಧಕ್ಕೆ ಗುರಿಯಾಗಿದೆ.



