Deepavali: ಬೆಂಗಳೂರಿನಿಂದ ವಿವಿಧ ಊರುಗಳಿಗೆ ಕೆಎಸ್ಆರ್ಟಿಸಿಯಿಂದ 2500 ಹೆಚ್ಚುವರಿ ಬಸ್
KSRTC Deepavali extra buses: ದೀಪಾವಳಿಗೆ ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸುತ್ತಿದ್ದು, ಅಕ್ಟೋಬರ್ 17 ರಿಂದ 20 ರವರೆಗೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ 2,500 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಲಿದೆ. ಅಕ್ಟೋಬರ್ 22 ರಿಂದ 26 ರವರೆಗೆ ರಿಟರ್ನ್ ಟ್ರಿಪ್‌ಗಳನ್ನು ಒದಗಿಸಲಿದೆ. ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಸುಗಳು ಬೆಂಗಳೂರಿನ ಯಾವೆಲ್ಲ ನಿಲ್ದಾಣಗಳಿಂದ ಎಲ್ಲಿಗೆಲ್ಲ ಹೊರಡಲಿವೆ? ಬುಕಿಂಗ್ ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 15: ದೀಪಾವಳಿ (Deepavali) ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ನಿರ್ವಹಣೆ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರಿನಿಂದ ವಿವಿಧ ಊರುಗಳಿಗೆ 2,500 ಹೆಚ್ಚುವರಿ ಬಸ್‌ಗಳನ್ನು ಘೋಷಿಸಿದೆ. ಈ ಹೆಚ್ಚುವರಿ ಬಸ್ ಟ್ರಿಪ್ಗಳು ಅಕ್ಟೋಬರ್ 17 ರಿಂದ 20 ರವರೆಗೆ ಇರಲಿದ್ದು, ಅಕ್ಟೋಬರ್ 22 ರಿಂದ 26 ರವರೆಗೆ ಹಿಂತಿರುಗುವ ಪ್ರಯಾಣವನ್ನು ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿ ರಿಸರ್ವೇಷನ್ ಕೌಂಟರ್‌ಗಳಲ್ಲಿ ಅಥವಾ www.ksrtc.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ ಎಂದು ನಿಗಮ ತಿಳಿಸಿದೆ.
ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ನಿಭಾಯಿಸಲು ನಗರದ ವಿವಿಧ ಬಸ್ ನಿಲ್ದಾಣಗಳಿಂದ ವಿವಿಧ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಎಲ್ಲಿಗೆಲ್ಲ ಸ್ಪೆಷಲ್ ಬಸ್?
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ಹೈದರಾಬಾದ್, ತಿರುಪತಿ ಮತ್ತು ವಿಜಯವಾಡದಂತಹ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳ ಸಂಚಾರ ಇರಲಿದೆ.
ಮೈಸೂರು ರೋಡ್ ಸ್ಯಾಟಲೈಟ್ ನಿಲ್ದಾಣದಿಂದ ಎಲ್ಲಿಗೆಲ್ಲ ಸ್ಪೆಷಲ್ ಬಸ್?
ಮೈಸೂರು ರೋಡ್ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ ಮತ್ತು ಕೊಡಗು ಪ್ರದೇಶದ ಇತರ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸುಗಳ ಸಂಚಾರ ಇರಲಿದೆ. ಏತನ್ಮಧ್ಯೆ, ಶಾಂತಿನಗರದಿಂದ ಟಿಟಿಎಂಸಿ ಚೆನ್ನೈ, ಕೊಯಮತ್ತೂರು, ಮಧುರೈ ಮತ್ತು ಎರ್ನಾಕುಲಂ ಸೇರಿದಂತೆ ತಮಿಳುನಾಡು ಮತ್ತು ಕೇರಳದ ಜನಪ್ರಿಯ ನಗರಗಳಿಗೆ ಬಸ್ಸುಗಳು ಸಂಚಾರ ಮಾಡಲಿವೆ.
ಇದನ್ನೂ ಓದಿ: ದೀಪಾವಳಿ ಹಬ್ಬ: ನೈಋತ್ಯ ರೈಲ್ವೆಯಿಂದ ಈ ಊರುಗಳಿಗೆ ವಿಶೇಷ ರೈಲು!
ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳು
ಹಬ್ಬದ ಪ್ರಯಾಣವನ್ನು ಸುಗಮಗೊಳಿಸಲು ಕೆಎಸ್‌ಆರ್‌ಟಿಸಿ ಜೊತೆಗೆ, ನೈಋತ್ಯ ರೈಲ್ವೆ ಕೂಡ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಹೆಚ್ಚುವರಿ ರೈಲುಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕೊಲ್ಲಂ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಸೇರಿವೆ.




