ಬೆಂಗಳೂರಿನ 12 ಕಡೆಗಳಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಪ್ಲಾನ್; 18 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಗೆ ಪ್ರಸ್ತಾವನೆ ಸಲ್ಲಿಸಲು ತಯಾರಿ
ಬೆಂಗಳೂರಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮಿತಿಮೀರಿದ ವಾಹನಗಳಿಂದ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದ್ದು, ವಾಹನ ದಟ್ಟಣೆ ಸರಿದೂಗಿಸಲು ಫ್ಲೈ ಓವರ್ ನಿರ್ಮಾಣದ ತಂತ್ರ ಪ್ರಯೋಗಕ್ಕೆ ಜಿಬಿಎ ಸಜ್ಜಾಗಿದೆ. ಬೆಂಗಳೂರಿನ ಹಲವೆಡೆ 12 ಫ್ಲೈ ಓವರ್ಗಳನ್ನು ನಿರ್ಮಿಸುವ ಪ್ಲಾನ್ ನಡೆಸಿರುವ ಜಿಬಿಎ, BSMILE ಮೂಲಕ ಬರೋಬ್ಬರಿ 18 ಸಾವಿರ ಕೋಟಿ ರೂ.ಪ್ರಾಜೆಕ್ಟ್ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿದೆ.

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನ ಟ್ರಾಫಿಕ್ (Traffic) ಕಿರಿಕಿರಿಯಿಂದ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಟ್ರಾಫಿಕ್ ಸುಧಾರಿಸಲು ಯಾವೆಲ್ಲಾ ಸರ್ಕಸ್ ಮಾಡಿದರೂ ವಾಹನ ದಟ್ಟಣೆ ನಿಯಂತ್ರಿಸುವುದು ಬಹುದೊಡ್ಡ ತಲೆನೋವಾಗಿದೆ. ನಗರದ ವಾಹನಗಳ ದಟ್ಟಣೆ ನಿಯಂತ್ರಣ ಮಾಡುವುದಕ್ಕಾಗಿ ಬರೋಬ್ಬರಿ 12 ಫ್ಲೈ ಓವರ್ಗಳ ನಿರ್ಮಾಣಕ್ಕೆ ಜಿಬಿಎ ಚಿಂತನೆ ನಡೆಸಿದೆ. ಬೆಂಗಳೂರಿನಾದ್ಯಂತ 126 ಕಿಲೋಮೀಟರ್ ಉದ್ದದ ಫ್ಲೈ ಓವರ್, ಎಲಿವೇಟೇಡ್ ಕಾರಿಡಾರ್ ನಿರ್ಮಾಣದ ಯೋಚನೆ ಹೊಂದಿರುವ ಜಿಬಿಎ ಈಗಾಗಲೇ ಕನ್ಸಲ್ಟೆಂಟ್ ಗಳ ಮೂಲಕ ಮಾಹಿತಿ ಕಲೆಹಾಕಲು ಹೊರಟಿದೆ.
ಸರ್ಕಾರದ ಮುಂದೆ ಈ ಪ್ರಸ್ತಾವನೆ ಸಲ್ಲಿಕೆಗೆ ತೀರ್ಮಾನಿಸಿರುವ ಜಿಬಿಎ
ಈಗಾಗಲೇ 3 ಕನ್ಸಲ್ಟೆಂಟ್ ಮೂಲಕ ವಾಹನ ಸಂಚಾರ, ಟ್ರಾಫಿಕ್ ಬಗ್ಗೆ ಅಧ್ಯಯನ ನಡೆಸಲು ಯೋಚಿಸಿರುವ ಜಿಬಿಎ, ಆ ವರದಿ ಆಧರಿಸಿ ಎಲ್ಲೆಲ್ಲಿ ಫ್ಲೈ ಓವರ್ ಹಾಗೂ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬೇಕು ಎನ್ನುವ ಲೆಕ್ಕಾಚಾರ ಹಾಕಿದೆ.ಯೋಜನೆಯ ವಿಸ್ತೃತ ವರದಿ(DPR) ತಯಾರು ಮಾಡಲು ತಯಾರಿ ನಡೆಸಿದೆ. ಇತ್ತ UHPPFRC ಎನ್ನುವ ಹೊಸ ತಂತ್ರಜ್ಞಾನ ಬಳಕೆ ಮಾಡಿ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಾಣ ಮಾಡೋಕೆ ಬಿಸ್ಮೈಲ್ (BSMILE) ತಯಾರಿ ನಡೆಸಿದ್ದು, ಸದ್ಯ ಮಾಹಿತಿ ಕಲೆ ಹಾಕಿ, ವರದಿ ತಯಾರಾದ ಬಳಿಕ ಅದನ್ನ ತಾಂತ್ರಿಕ ತಜ್ಞರ ಮುಂದಿಟ್ಟು ನಂತರ ಸರ್ಕಾರದ ಮುಂದೆ 18 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಗೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆ ಮಾಡಲಾಗಿದೆ ಎಂದು BSMILE ನಿರ್ದೇಶಕ ಪ್ರಹ್ಲಾದ್ ಹೇಳಿದ್ದಾರೆ.
ಜಿಬಿಎ ಸದ್ಯ ಅತಿಹೆಚ್ಚು ವಾಹನ ದಟ್ಟಣೆಯ ರಸ್ತೆಗಳು ಹಾಗೂ ಎಲ್ಲೆಲ್ಲಿ ಸಂಚಾರದಟ್ಟಣೆ ಆಗುತ್ತಿದೆ ಎನ್ನುವುದನ್ನು ಪತ್ತೆಹಚ್ಚಲು ಮುಂದಾಗಿದೆ. ಬಳಿಕ ಸರ್ಕಾರದ ಮುಂದೆ ಈ ಪ್ರಸ್ತಾವನೆ ಸಲ್ಲಿಕೆಗೆ ತೀರ್ಮಾನಿಸಿದೆ. ಇತ್ತ ಸಣ್ಣ ಫ್ಲೈ ಓವರ್, ಮಧ್ಯಮಗಾತ್ರದ ಫ್ಲೈ ಓವರ್ ಹಾಗೂ ದೊಡ್ಡ ಫ್ಲೈ ಓವರ್ ಹೀಗೆ ಮೂರು ಮಾದರಿಗಳಲ್ಲಿ ಫ್ಲೈ ಓವರ್ಗಳನ್ನು ನಿರ್ಮಿಸುವ ಯೋಜನೆ ನಡೆದಿದೆ.
ಎಲ್ಲೆಲ್ಲಿ ಫ್ಲೈ ಓವರ್ ನಿರ್ಮಾಣದ ಪ್ಲಾನ್?
ಸಣ್ಣ ಗಾತ್ರದ ಫ್ಲೈ ಓವರ್
- MEI ಜಂಕ್ಷನ್ -0.5 ಕಿ.ಮೀ
- ಪೈಪ್ ಲೈನ್ ರೋಡ್ -1.98 ಕಿ.ಮೀ
- ದೊಡ್ಡಬಳ್ಳಾಪುರ ರೋಡ್-1.49 ಕಿ.ಮೀ
- ಕೋಣನಕುಂಟೆ ಕ್ರಾಸ್, ಕನಕಪುರ ರೋಡ್ -1.52 ಕಿ.ಮೀ
- ಆಡ್ಯರ್ ಭವನ್ ಕನಕಪುರ ರೋಡ್-0.93 ಕಿ.ಮೀ
ಮಧ್ಯಮಗಾತ್ರದ ಫ್ಲೈ ಓವರ್
- ಮಿನರ್ವ್ ಸರ್ಕಲ್ ನಿಂದ ಹಡ್ಸನ್ ಸರ್ಕಲ್ -6.97 ಕಿ.ಮೀ
- ಸಿರ್ಸಿ ಸರ್ಕಲ್ ನಿಂದ ನಾಯಂಡಹಳ್ಳಿ -5.22 ಕಿ.ಮೀ
- ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಹೊಸೂರು ರೋಡ್-5.3 ಕಿ.ಮೀ
ದೊಡ್ಡಗಾತ್ರದ ಫ್ಲೈ ಓವರ್ಗಳ
- ಮತ್ತಿಕೆರೆ ಕ್ರಾಸ್ ನಿಂದ ಟಿನ್ ಫ್ಯಾಕ್ಟರಿ ಜಂಕ್ಷನ್-29.8 ಕಿ.ಮೀ
- ನಾಗವಾರ ಜಂಕ್ಷನ್ ನಿಂದ ಬಾಗಲೂರು ರೋಡ್-17.34 ಕಿ.ಮೀ
- ಹಲಸೂರು ಲೇಕ್ ನಿಂದ ಬಾಗಲೂರು- 27.19 ಕಿ.ಮೀ
- ವಿವೇಕಾನಂದ ಮೆಟ್ರೋದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್-10.41 ಕಿ.ಮೀ
ಸದ್ಯ ರಾಜಧಾನಿಯಲ್ಲಿ ಈಗಾಗಲೇ ಕೈಗೊಂಡಿದ್ದ ಈಜೀಪುರ ಫ್ಲೈ ಓವರ್ ಕಾಮಗಾರಿ ಮುಗಿಯದ ಕಥೆಯಾಗಿದೆ. ಇನ್ನು ಹಲವೆಡೆ ಫ್ಲೈ ಓವರ್ ನಿರ್ಮಾಣ ಮಾಡಲು ಹೊರಟರೆ ಟ್ರಾಫಿಕ್ ದಟ್ಟಣೆ ಮಧ್ಯೆ ಕಾಮಗಾರಿ ನಡೆಸುವುದರಿಂದ ಹಲವು ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಇದೆಲ್ಲದರ ಮಧ್ಯೆ ಹೊಸದಾಗಿ ಬರೋಬ್ಬರಿ 12 ಫ್ಲೈ ಓವರ್ಗಳ ನಿರ್ಮಾಣಕ್ಕೆ ಜಿಬಿಎ ಚಿಂತನೆ ನಡೆಸಿದೆ.
Published On - 8:42 am, Wed, 15 October 25



