ಸರ್ಕಾರಿ ಕಚೇರಿಗಳಲ್ಲಿ ಕೊವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
ಮಾರ್ಗಸೂಚಿ ಪಾಲನೆಯನ್ನು ಖಾತ್ರಿಪಡಿಸಲು ಪ್ರತಿಕಚೇರಿಯಲ್ಲಿಯೂ ನೋಡೆಲ್ ಅಧಿಕಾರಿ ನೇಮಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ಬೆಂಗಳೂರು: ಕರ್ನಾಟಕದ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಕಚೇರಿ ಸಿಬ್ಬಂದಿ, ಸಂದರ್ಶಕರು ಕೊವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಾರ್ಗಸೂಚಿ ಪಾಲನೆಯನ್ನು ಖಾತ್ರಿಪಡಿಸಲು ಪ್ರತಿಕಚೇರಿಯಲ್ಲಿಯೂ ನೋಡೆಲ್ ಅಧಿಕಾರಿ ನೇಮಿಸಬೇಕು. ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ.
ವಿದೇಶಗಳಲ್ಲಿ ಕಂಡು ಬರುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ಎವೈ 4.2 ರೂಪಾಂತರಿ ಕರ್ನಾಟಕದಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಮೂವರು ಮತ್ತು ರಾಜ್ಯದ ಇತರೆಡೆಯ ನಾಲ್ವರಲ್ಲಿ ಈ ರೂಪಾಂತರಿ ಪತ್ತೆಯಾಗಿರುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ದೃಢಪಡಿಸಿದ್ದಾರೆ. ಹೊಸ ರೂಪಾಂತರಿಯಿಂದ ರಾಜ್ಯದಲ್ಲಿ ಈವರೆಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣದಲ್ಲಿವೆ. ವಿದೇಶಗಳಿಂದ ಬರುವ ಪ್ರವಾಸಿಗರು ಕನಿಷ್ಠ 72 ಗಂಟೆ ಮೊದಲು ಮಾಡಿಸಿಕೊಂಡಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರದಿಗಳನ್ನು ಏರ್ ಸುವಿಧಾ ಪೋರ್ಟಲ್ನಲ್ಲಿ ಈ ವರದಿಗಳನ್ನು ಅಪ್ಲೋಡ್ ಮಾಡಬೇಕು. ಇಷ್ಟು ಬಿಟ್ಟರೆ ರಾಜ್ಯದಲ್ಲಿ ಕ್ವಾರಂಟೈನ್ನಂಥ ಕ್ರಮಗಳನ್ನು ಜಾರಿಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ನಿನ್ನೆ (ಅ.25) ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಾಜ್ಯದ ಪರಿಸ್ಥಿತಿ ಕುರಿತು ಚರ್ಚಿಸಿದರು.
ಕರ್ನಾಟಕ ರಾಜ್ಯದಲ್ಲಿ ನಿನ್ನೆ (ಅಕ್ಟೋಬರ್ 26) ಹೊಸದಾಗಿ 277 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,86,553 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,39,990 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,024 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,510 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಮುಂಬೈ ರೈಲುಗಳಲ್ಲಿ ಪ್ರಯಾಣಿಸಲು ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯ ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು; ಏನೇನಿದೆ ನಿಯಮಗಳು?
Published On - 3:48 pm, Wed, 27 October 21