
ಬೆಂಗಳೂರು, (ಡಿಸೆಂಬರ್ 17): ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಇನ್ಮುಂದೆ ಪಾರಿವಾಳಗಳಿಗೆ (Pigeon) ಸಾರ್ವಜನಿಕ ಸ್ಥಳಗಳಲ್ಲಿ ಊಟ ಹಾಕುವಂತಿಲ್ಲ.ಒಂದು ವೇಳೆ ಪಾರಿವಾಳ ಇಷ್ಟ ಅಂತ ಕಾಳು ಹಾಕಿದ್ರೆ ದಂಡಕ್ಕೆ ಗುರಿಯಾಗಬಹುದು. ಹೌದು..ಹೀಗೊಂದು ಕಠಿಣ ನಿಯಮ ಜಾರಿಗೆ ತರಲು ಕರ್ನಾಟಕ ಆರೋಗ್ಯ (Karnataka Health Department) ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದೆ. ಯಾಕಂದ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಕೊಡುತ್ತಿರುವುದರಿಂದ ಹಿಕ್ಕೆಗಳು ಹಾಗೂ ಅದರ ದುರ್ವಾಸನೆ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಕಟ್ಟುನಿಟ್ಟಿನ ರೂಲ್ಸ್ ಜಾರಿಗೆ ತರಲು ನಗರಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಫೀಡಿಂಗ್ ಮಾಡ್ತಿರೋದ್ರಿಂದ, ಪಾರಿವಾಳ ಹಿಕ್ಕೆಗಳು, ಹಾಗೂ ಅದರ ದುರ್ವಾಸನೆ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಎನ್ನಲಾಗಿದೆ. ಹಾಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆರೋಗ್ಯ ಇಲಾಖೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದೆ. ಜಿಬಿಎ ಪಾರಿವಾಳ ಫೀಡಿಂಗ್ ಗೆ ಒಂದು ಸ್ಥಳ ನಿಗಧಿ ಮಾಡಬೇಕು. ಸಿಕ್ಕ ಸಿಕ್ಕ ಕಡೆಯಲ್ಲಿ ಪಾರಿವಾಳ ಫೀಡಿಂಗ್ ಗೆ ಬ್ರೇಕ್ ಹಾಕಬೇಕು. ಈ ಸಂಬಂಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ನಿರ್ದೇಶನ ನೀಡಲು ಆರೋಗ್ಯ ಇಲಾಖೆ ಒತ್ತಾಯಿಸಿದೆ.
ಪಾರಿವಾಳಗಳ ಹಿಕ್ಕೆಗಳು ಮತ್ತು ರೆಕ್ಕೆಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಭೀತಿ ಹೆಚ್ಚಿದ್ದು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವ ದುರ್ಬಲ ವ್ಯಕ್ತಿಗಳಲ್ಲಿ ರೋಗ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಿ ನಿಯಮ ಉಲ್ಲಂಘನೆ ಮಾಡಿದ್ರೆ, ಅಂತವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 270, 271 ಮತ್ತು 272 ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ದಂಡದ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವಿದೆ ಎಂದು ತಿಳಿಸಲಾಗಿದೆ. ಅದರೆ,ಇದಕ್ಕೆ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಆದೇಶಕ್ಕೆ ಕಾಯುತ್ತಿದ್ದೇವೆ. ಮಾರ್ಗಸೂಚಿ ರಚನೆ ಮಾಡಿ, ನಿಗದಿತ ಸ್ಥಳಗಳನ್ನ ಗುರುತಿಸಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ಇನ್ಮುಂದೆ ಪಾರಿವಾಳ ಇಷ್ಟ ಅಂತ ಸಿಕ್ಕ ಸಿಕ್ಕಲ್ಲಿ ಕಾಳು ಹಾಕೋಕೆ ಹೋಗ್ಬೇಡಿ. ಒಂದು ವೇಳೆ ಕಾಳು ಹಾಕಿ ಕೇಸ್ ಹಾಕಿಸಿಕೊಳ್ಳಬೇಕಾಗುತ್ತೆ ಎಚ್ಚರ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 10:04 pm, Wed, 17 December 25