ಶಂಕು ಸ್ಥಾಪನೆ ಆಗಿ ಒಂದು ವರ್ಷವಾದರೂ ಆರಂಭವಾಗಿಲ್ಲ ಅರೆಂಜ್ ಲೈನ್ ಮೆಟ್ರೋ ಕಾಮಗಾರಿ: ಪ್ರತಿದಿನ ಎರಡು ಕೋಟಿ ಹೆಚ್ಚುವರಿ ಹೊರೆ!
ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋ ಮಾರ್ಗಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷವಾಯಿತು. ಖುದ್ದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಶಂಕುಸ್ಥಾಪನೆಯನ್ನೂ ಮಾಡಿದ್ದರು. ಆದರೂ ಯಾಕೋ ಗೊತ್ತಿಲ್ಲ ಬಿಎಂಆರ್ಸಿಲ್ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಮುಂದಾಗಿಲ್ಲ. ಈ ವಿಳಂಬದಿಂದಾಗಿ ಪ್ರತಿದಿನ ಎರಡು ಕೋಟಿ ಹೆಚ್ಚುವರಿ ಹೊರೆಯಾಗಲಿದೆಯಂತೆ!

ಬೆಂಗಳೂರು, ಡಿಸೆಂಬರ್ 18: ಆರೆಂಜ್ ಲೈನ್ ಮೆಟ್ರೋ (Orange Line Metro) ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷ ಕಳೆದರೂ ಕಾಮಗಾರಿ ಮಾಡಲು ಟೆಂಡರ್ ಕರೆಯಲು ಬಿಎಂಆರ್ಸಿಎಲ್ (BMRCL) ಇನ್ನೂ ಮುಂದಾಗಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡಿ ಒಂದು ವರ್ಷ ಕಳೆದು 123 ದಿನಗಳು ಆಗಿವೆ. ಮೆಟ್ರೋ ಕಾಮಗಾರಿ ಮಾತ್ರ ಶುರುವಾಗಿಲ್ಲ. ಒಂದು ದಿನ ಕಾಮಗಾರಿ ಮಾಡಲು ವಿಳಂಬವಾದರೆ ಬಿಎಂಆರ್ಸಿಎಲ್ಗೆ ಸುಮಾರು 2 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಆಗಲಿದೆ ಎನ್ನಲಾಗಿದೆ. 487 ದಿನ ವಿಳಂಬವಾಗಿರುವುದಕ್ಕೆ ಬಿಎಂಆರ್ಸಿಎಲ್ 974 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ.
ಕಳೆದ ವರ್ಷ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ 3ನೇ ಹಂತದ ಮೆಟ್ರೋಗೆ ಶಂಕು ಸ್ಥಾಪನೆ ಮಾಡಿದ್ದರು. ಇದೀಗ ವರ್ಷ ಕಳೆದರೂ ಕಾಮಗಾರಿ ಆರಂಭವಾಗದ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024 ರ ಆಗಸ್ಟ್ 16 ರಂದು ಕೇಂದ್ರ ಸರ್ಕಾರ ಮೂರನೇ ಹಂತ ಆರೆಂಜ್ ಲೈನ್ಗೆ ಅನುಮತಿ ನೀಡಿತ್ತು. ಆದರೆ ಇಲ್ಲಿಯವರೆಗೆ ನಮ್ಮ ಮೆಟ್ರೋ ಅಧಿಕಾರಿಗಳು ಸಿವಿಲ್ ವರ್ಕ್ ಮಾಡಲು ಟೆಂಡರ್ ಕರೆಯಲು ಮುಂದಾಗಿಲ್ಲ. ಇದರಿಂದ ಮೆಟ್ರೋ ಕಾಮಗಾರಿಗೆ ಟೆಂಡರ್ ಕಾಸ್ಟ್ ಸಾವಿರಾರು ಕೋಟಿ ರುಪಾಯಿ ಹೆಚ್ಚಾಗಲಿದೆ.
ಎಲ್ಲಿಂದ ಎಲ್ಲಿವರೆಗಿದೆ ಆರೆಂಜ್ ಲೈನ್ ಮೆಟ್ರೋ?
ನಮ್ಮ ಮೆಟ್ರೋ ಮೂರನೇ ಹಂತದ ಆರೆಂಜ್ ಲೈನ್ ಕಾರಿಡಾರ್- 1 ಜೆಪಿ ನಗರ ದಿಂದ ಕೆಂಪಾಪುರ ವರೆಗೆ 32.15 ಕಿಮೀ. ಇದೆ. ಕಾರಿಡಾರ್- 2 ಹೊಸಹಳ್ಳಿ- ಕಡಬಗೆರೆ 12.50 ಕಿಮೀ ಇದೆ. ಕಿತ್ತಳೆ ಮಾರ್ಗ ಒಟ್ಟು 44.65 ಕಿಮೀ ವಿಸ್ತೀರ್ಣವಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ಹಳದಿ ಮಾರ್ಗದಲ್ಲಿನ ಮೆಟ್ರೋ ಸ್ಟೇಷನ್ಗಳ ಸಮೀಪ ಬಿಎಂಟಿಸಿ ಬಸ್ ನಿಲ್ದಾಣಗಳ ವ್ಯವಸ್ಥೆ
ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೂ ಬಿಎಂಆರ್ಸಿಎಲ್ ಅಧಿಕಾರಿಗಳು ಕಾಮಗಾರಿ ಆರಂಭಿಸದಿರುವುದು ದುರಂತವೇ ಸರಿ.



